ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾನನ್ನು ಬೇಟೆಯಾಡಿದ ಸೇನೆ, ಈ ವರ್ಷ ಎನ್ ಕೌಂಟರ್ ಗೆ ಬಲಿಯಾದ ಉಗ್ರರ ಸಂಖ್ಯೆ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಸ್ಥಳೀಯರ ನೆರವಿನಿಂದ ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾ ಅಲಿಯಾಸ್ ಹಫೀಜ್ ನನ್ನು ಭಾರತೀಯ ಸೇನೆ ಇಂದು ಬೆಳಗ್ಗೆ ಹೊಡೆದು ಹಾಕಿದೆ.

ಈತ ಉತ್ತರ ಪಾಕಿಸ್ತಾನ ಮೂಲದವನಾಗಿದ್ದು, ಲಷ್ಕರ್ ಉಗ್ರ ಸಂಘಟನೆಯ ಕಾಶ್ಮೀರ ವಿಭಾಗದ ಕಮಾಂಡರ್ ಆಗಿದ್ದ. ಮಂಗಳವಾರ ಬೆಳಗಿನ ಜಾವ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಸತ್ತವರನ್ನು ಅಬು ದುಜನಾ ಹಾಗೂ ಆರಿಫ್ ಲಿಲ್ಹಾರಿ ಎಂದು ಗುರುತಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಇನ್ನು ಒಬ್ಬ ಅಥವಾ ಇಬ್ಬರು ಉಗ್ರರು ಸಹ ಇದ್ದು ಅವರ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಕಣಿವೆ ರಾಜ್ಯದ ಪುಲ್ವಾಮಾ ಜಿಲ್ಲೆಯ ಹಕ್ರಿಪೊರಾ ಹಳ್ಳಿಯಲ್ಲಿ ಉಗ್ರರು ನುಸುಳಿರುವ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿದ್ದವು. ಈ ಕಾರ್ಯಾಚರಣೆ ವೇಳೆ ಮೊದಲು ಉಗ್ರರ ಕಡೆಯಿಂದ ಗುಂಡಿನ ದಾಳಿ ಆರಂಭವಾಯಿತು. ಇದಕ್ಕೆ ಪ್ರತಿಯಾಗಿ ಭಾರತೀಯ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದವು. ಆಗ ಈ ಉಗ್ರರು ಸೇನೆಯ ಗುಂಡಿ ಪ್ರಾಣಬಿಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಕೊಟ್ಟಿದ್ದಾರೆ.

ಈ ಉಗ್ರರ ಹತ್ಯೆಯಾಗುತ್ತಿದ್ದಂತೆ ಈ ಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಪ್ರತಿಭಟನೆ ಹಾಗೂ ಗಲಭೆ ಹೆಚ್ಚಾಗಿದ್ದು, ಈ ವೇಳೆ 15 ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ, ಈ ಅಬು ದುಜನಾ ಕಳೆದ ಮೇ ತಿಂಗಳಿನಲ್ಲೇ ಭಾರತೀಯ ಸೇನೆಯ ಕೈವಶವಾಗಬೇಕಿತ್ತು. ಇದೇ ಹಳ್ಳಿಯಲ್ಲಿ ದುಜನಾ ಅವಿತಿದ್ದಾಗ ಸೇನೆ ಕಾರ್ಯಾಚರಣೆ ನಡೆಸಿತ್ತು. ಆಗ ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಪರಿಣಾಮ ಅಬು ಪರಾರಿಯಾಗಿದ್ದ. ಹೀಗೆ ಆತ ಐದು ಬಾರಿ ಭಾರತೀಯ ಸೇನೆಯ ಕೈನಿಂದ ತಪ್ಪಿಸಿಕೊಂಡಿದ್ದ. ಅಂತಿಮವಾಗಿ ಈಗ ಭಾರತೀಯ ಸೇನೆ ಆತನಿಗೆ ಇಹಲೋಕದಿಂದ ಮುಕ್ತಿ ಕಾಣಿಸಿದೆ.

ಇನ್ನು ಭಾರತೀಯ ಸೇನಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಮ್ಮ ಬಳಿ ಇರುವ ಉಗ್ರರ ಪಟ್ಟಿಯಲ್ಲಿರುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಈ ವರ್ಷ ಜುಲೈ ತಿಂಗಳವರೆಗೂ ಒಟ್ಟು 102 ಉಗ್ರರನ್ನು ಹತ್ಯೆ ಮಾಡಲಾಗಿದೆ. ಆ ಮೂಲಕ ಕಳೆದ 7 ವರ್ಷಗಳಲ್ಲಿ ಜನವರಿಯಿಂದ ಜುಲೈವರೆಗೆ ಅತಿ ಹೆಚ್ಚು ಉಗ್ರರನ್ನು ಬೇಟೆಯಾಡಿದಂತಾಗಿದೆ.

1 COMMENT

Leave a Reply