ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ಆಶ್ರಯಕ್ಕೆ ಪ್ರತಿಯಾಗಿ ಡಿಕೆ ಸಹೋದರರ ಮನೆ ಮೇಲೆ ಐಟಿ ದಾಳಿ

ಡಿಜಿಟಲ್ ಕನ್ನಡ ಟೀಮ್:

ಆಗಸ್ಟ್ 8ರಂದು ನಡೆಯಲಿರುವ ಗುಜರಾತ್ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಅವರನ್ನು ಮಣಿಸಿ ತಮ್ಮ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶತಾಯಗತಾಯ ಎಲ್ಲ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಈಗ ದ್ವೇಷ ರಾಜಕಾರಣ ಮಾಡಲು ಹಿಂಜರಿದಿಲ್ಲ. ಪರಿಣಾಮ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕರ್ನಾಟಕದ ಸಚಿವ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಹಾಗೂ ಎಂಎಲ್ಸಿ ರವಿ ಅವರ ಮನೆ ಮೇಲೆ ಐಟಿ ದಾಳಿ ನಡೆಸಿದೆ.

ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ದೊಡ್ಡಹಾಲಹಳ್ಳಿ, ಕನಕಪುರ, ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ಅವರ ಮನೆಗಳು ಹಾಗೂ ಕಚೇರಿ, ಇವರ ಸಹೇದರ ಡಿ.ಕೆ ಸುರೇಶ್ ಅವರ ನಿವಾಸ ಹಾಗೂ ಆಪ್ತ ರವಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಗುಜರಾತ್ ಕೈ ಶಾಸಕರು ತಂಗಿರುವ ಈಗಲ್ಟನ್ ರೆಸಾರ್ಟ್ ಮೇಲೂ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಗುಜರಾತ್ ರಾಜ್ಯಸಭೆ ಚುನಾವಣೆಗೂ ಡಿ.ಕೆ ಸಹೇದರರ ಮನೆ ಮೇಲೆ ಐಟಿ ದಾಳಿಗೂ ಎಲ್ಲಿಯ ಸಂಬಂಧ ಎಂಬುದನ್ನು ನೋಡುವುದಾದರೆ…

ರಾಜ್ಯ ಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಅವರನ್ನು ಸೋಲಿಸಲೇ ಬೇಕು ಎಂದು ಟೊಂಕಕಟ್ಟಿ ನಿಂತಿರುವ ಬಿಜೆಪಿ ಗುಜರಾತಿನಲ್ಲಿ ‘ಆಪರೇಷನ್ ಕಮಲ’ಕ್ಕೆ ಕೈ ಹಾಕಿದ್ದ ಬಿಜೆಪಿ ಕಾಂಗ್ರೆಸ್ ನ 6 ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಇದರಿಂದಾಗಿ ತಕ್ಷಣವೇ ಎಚ್ಚೆತ್ತ ಕಾಂಗ್ರೆಸ್, ತನ್ನದೇ ಸರ್ಕಾರದಲ್ಲಿರುವ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿನಲ್ಲಿರುವ ಈಗಲ್ಟನ್ ರೆಸಾರ್ಟಿಗೆ ತನ್ನ 44 ಶಾಸಕರನ್ನು ಕರೆತಂದಿತ್ತು. ಆ ಮೂಲಕ ಬಿಜೆಪಿ ಹಾಗೂ ಪಕ್ಷ ತೊರೆದ ನಾಯಕರ ಸಂಪರ್ಕದಿಂದ ತನ್ನ ಶಾಸಕರನ್ನು ದೂರವಿರಿಸಿದೆ.

ಹತ್ತು ದಿನಗಳ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಹ್ಮದ್ ಪಟೇಲ್ ಸಿಎಂ ಸಿದ್ದರಾಮಯ್ಯನವರಿಗೆ ಕರೆ ಮಾಡಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕುರಿತು ಚರ್ಚಿಸಿದ್ದರು. ಸಿಎಂ ಸಿದ್ದರಾಮಯ್ಯ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಕುರಿತಾಗಿ ಮೊದಲು ಕೆ.ಜೆ ಜಾರ್ಜ್ ಹಾಗೂ ಎಚ್.ಸಿ ಮಹದೇವಪ್ಪ ಅವರ ಜತೆ ಮಾತುಕತೆ ನಡೆಸಿದರು. ಆದರೆ ಐಟಿ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರು ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲ. ನಂತರ ಸಿಎಂ ಈ ವಿಚಾರವನ್ನು ಡಿ.ಕೆ ಶಿವಕುಮಾರ್ ಹಾಗೂ ದೇಶಪಾಂಡೆ ಅವರ ಜತೆ ಪ್ರಸ್ತಾಪಿಸಿದರು. ಈ ವೇಳೆ ಡಿಕೆಶಿ ಈ ಜವಾಬ್ದಾರಿ ಹೊತ್ತುಕೊಳ್ಳಲು ಮುಂದಾದರು.

ಈ ಗುಜರಾತ್ ಕಾಂಗ್ರೆಸ್ ಶಾಸಕರ ಆತಿಥ್ಯದ ಸಂಪೂರ್ಣ ಜವಾಬ್ದಾರಿ ಹೊತ್ತಿರೋದು ಇದೇ ಡಿಕೆ ಸಹೋದರರು. ಹೀಗಾಗಿ ಗುಜರಾತ್ ಕೈ ಶಾಸಕರನನ್ನು ತಮ್ಮ ಸಂಪರ್ಕದಿಂದ ದೂರವಿಟ್ಟಿರುವ ಡಿಕೆ ಸಹೋದರರ ಮೇಲೆ ಬಿಜೆಪಿ ಐಟಿ ಎಂಬ ಅಸ್ತ್ರ ಪ್ರಯೋಗಿಸಿ ತನ್ನ ಅಧಿಕಾರದ ಬಲಪ್ರಯೋಗಕ್ಕೆ ಮುಂದಾಗಿದೆ.

ಅಂದಹಾಗೆ ಅಹ್ಮದ್ ಪಟೇಲ್ ಅವರನ್ನು ಹಣಿಯಲು ಅಮಿತ್ ಶಾ ಅವರು ಈ ದ್ವೇಷದ ರಾಕಾರಣಕ್ಕೆ ಇಳಿದಿರುವುದೇಕೆ? ಅದರ ಹಿಂದಿರುವ ಸೇಡಿನ ಕತೆ ಏನು ಎಂಬುದರ ಬಗ್ಗೆ ಡಿಜಿಟಲ್ ಕನ್ನಡ ಈ ಹಿಂದೆ ವರದಿಯನ್ನು ಪ್ರಕಟಿಸಿತ್ತು.

ಕೇವಲ ಅಹ್ಮದ್ ಪಟೇಲ್ ಅವರನ್ನು ಮಣಿಸುವ ಗುರಿಯೊಂದೇ ಈ ಐಟಿ ದಾಳಿಯ ಹಿಂದೆ ಕೆಲಸ ಮಾಡಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆಯೂ ಇದರಲ್ಲಿ ಕೆಲಸ ಮಾಡಿದೆ. ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಬಲವಾಗಿರುವ ಪ್ರಮುಖ ನಾಯಕರ ಮೇಲೆ ಐಟಿ ಅಸ್ತ್ರ ಬಳಸಲು ಬಿಜೆಪಿಯ ಮುಂದಾಗಿದೆ. ಮುಂದಿನ ಚುನಾವಣೆಯಲ್ಲಿನ ಜನಬಲ ಹಾಗೂ ಹಣಬಲದ ವಿಚಾರದಲ್ಲಿ ಕಾಂಗ್ರೆಸ್ ನಂಬಿಕೊಂಡಿರುವುದು ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ, ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್ ಹಾಗೂ ಹೆಚ್.ಸಿ ಮಹದೇವಪ್ಪ ಅವರನ್ನು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸಿಬಿಐ ಮೂಲಕ ರೆಡ್ಡಿ ಸಹೋದರರನ್ನು ಹಣಿದ ರೀತಿಯಲ್ಲೇ ಈಗ ಕಾಂಗ್ರೆಸ್ ನ ಈ ಐವರು ಪ್ರಬಲ ನಾಯಕರನ್ನು ಐಟಿ ಅಸ್ತ್ರದ ಮೂಲಕ ಮಟ್ಟಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ಕುಗ್ಗಿಸುವುದು ಬಿಜೆಪಿಯ ತಂತ್ರವಾಗಿದೆ. ಅದರ ಆರಂಭವೇ ಈ ಐಟಿ ದಾಳಿ.

Leave a Reply