ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಭಾರತಕ್ಕೆ ಜಪಾನ್ ಸಾಥ್, ಇದು ಚೀನಾದ ಪ್ರಾದೇಶಿಕ ಪ್ರಾಬಲ್ಯಕ್ಕೆ ಬ್ರೇಕ್ ಹಾಕುವ ತಂತ್ರವೇ?

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ಚೀನಾ ನಡುವಣನ ಗಡಿ ಸಮಸ್ಯೆ ಉಲ್ಬಣಿಸಿರುವ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ರಾಜ್ಯಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೇ. ಈಗ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಭಾರತದ ಜತೆ ಜಪಾನ್ ಕೈ ಜೋಡಿಸಲು ಮುಂದಾಗಿದೆ. ಆಮೂಲಕ ಭಾರತ ಹಾಗೂ ಜಪಾನ್, ಚೀನಾದ ಪಾರುಪತ್ಯಕ್ಕೆ ಲಗಾಮು ಹಾಕಲು ಬದ್ಧರಿರುವುದಾಗಿ ಸಂದೇಶ ರವಾನಿಸಿವೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಭಾರತ ಹಾಗೂ ಜಪಾನ್ ಸಹಯೋಗದಲ್ಲಿ ‘ಇಂಡಿಯಾ- ಜಪಾನ್ ಕೊಆರ್ಡಿನೇಷನ್ ಫಾರ್ ಡೆವಲಪ್ಮೆಂಟ್ ಫಾರ್ ನಾರ್ಥ್ಈಸ್ಟ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ಉಭಯ ದೇಶಗಳ ನಡುವೆ ಮೊದಲ ಸಭೆ ನಡೆಯಲಿದೆ. ಈ ಸಭೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿತೇಂದ್ರ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಪಾನಿನ ಭಾರತದ ರಾಯಭಾರಿ ಕೆಂಜಿ ಹಿರಾಮಟ್ಸು ಸಹ ಭಾಗವಹಿಸಲಿದ್ದಾರೆ. ಈ ಫೊರಂನಲ್ಲಿ ಭಾರತ ವಿದೇಶಾಂಗ ಸಚಿವಾಲಯ, ರಸ್ತೆ ಮತ್ತು ಹೆದ್ದಾರಿ, ಇಂಧನ, ಆರ್ಥಿಕ ಅಭಿವೃದ್ಧಿ ಸಚಿವಾಲಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಸಭೆಯ ಬಗ್ಗೆ ಮಾಹಿತಿ ನೀಡಿದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯದ ವಕ್ತಾರರು, ‘ಇಂದು ನಡೆಯಲಿರುವ ಸಭೆ ಸಾಮಾನ್ಯವಾದುದಲ್ಲ. ಇದು ಈಶಾನ್ಯ ರಾಜ್ಯಗಳಲ್ಲಿ ಅಗತ್ಯವಿರುವ ಅಭಿವೃದ್ಧಿ ಪ್ರದೇಶಗಳನ್ನು ಗುರುತಿಸಲಾಗುವುದು. ಮೂಲಭೂತ ಸೌಕರ್ಯ, ವಿಪತ್ತು ನಿರ್ವಹಣ, ಕೈಮಗ್ಗ ಕ್ಷೇತ್ರದ ಅಭಿವೃದ್ಧಿ, ಪ್ರವಾಸೋದ್ಯಮ, ಜಲ ಸಂಪನ್ಮೂಲ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಲಿದೆ’ ಎಂದು ಹೇಳಿದ್ದಾರೆ.

ಭಾರತ ಮತ್ತು ಜಪಾನ್ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗೆ ಕೈ ಹಾಕಿದರೆ ಚೀನಾ ಮೇಲೆ ಹೇಗೆ ಪ್ರಭಾವ ಬೀಳಲಿದೆ ಎಂಬುದನ್ನು ನೋಡುವುದಾದರೆ…

ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳ ಮೂಲಕ ಈ ಗಡಿ ಪ್ರದೇಶಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಭಾರತದ ರಾಜತಾಂತ್ರಿಕತೆಯ ಒಂದು ಭಾಗ. ಇನ್ನು ಚೀನಾ ಸೇನೆ ಆಗಾಗ್ಗೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೆಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುರ ಗಡಿ ಪ್ರದೇಶಗಳಲ್ಲಿ ಭಾರತದ ಗಡಿಯನ್ನು ಅತಿಕ್ರಮಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಈಗ ವಿವಿಧ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಈ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.

ಚೀನಾ, ಭಾರತ ಮಾತ್ರವಲ್ಲದೇ ಜಪಾನ್ ಜತೆಗೂ ಸಂಬಂಧ ಹದಗೆಡಿಸಿಕೊಂಡಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ ಚೀನಾದ ಜತೆ ತಿಕ್ಕಾಟ ಹೊಂದಿರುವ ಭಾರತ ಮತ್ತು ಜಪಾನ್ ಈಗ ಪರಸ್ಪರ ಕೈ ಕುಲುಕುತ್ತಿವೆ. ಜಪಾನ್ ಜತೆಗಿನ ಸ್ನೇಹ ವೃದ್ಧಿಸಿಕೊಳ್ಳುವ ಅಂಗವಾಗಿಯೇ ಭಾರತ ಇತ್ತೀಚೆಗೆ ಮುಂಬೈ- ಅಹ್ಮದಬಾದ್ ನಡುವಣ ಹೈಸ್ಪೀಡ್ ರೈಲ್ವೇ ಕಾರಿಡಾರ್ ಹಾಗೂ ಬುಲೆಟ್ ರೈಲಿನ ಯೋಜನೆಗಳನ್ನು ಜಪಾನಿಗೆ ನೀಡಿದೆ. ಈ ಮಹತ್ವಾಕಾಂಕ್ಷಿ ಯೋಜನೆ ತಮಗೆ ಸಿಗುವ ನಿರೀಕ್ಷೆಯಲ್ಲಿದ್ದ ಚೀನಾಕ್ಕೆ ಭಾರತ ಶಾಕ್ ನೀಡಿತ್ತು. ಈಗ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಭಾರತದ ಜತೆ ಜಪಾನ್ ಕೈ ಜೋಡಿಸುತ್ತಿರುವುದು ಚೀನಾ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿದೆ.

ಮುಂಬರುವ ಸೆಪ್ಟೆಂಬರ್ ನಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಭಾರತಕ್ಕೆ ಆಗಮಿಸಲಿದ್ದು, ಆಗ ಹೈಸ್ಪೀಡ್ ರೈಲ್ವೇ ಕಾರಿಡಾರ್ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಒಟ್ಟಿನಲ್ಲಿ ಏಷ್ಯಾದಲ್ಲಿ ಪ್ರಾದೇಶಕವಾಗಿ ಪ್ರಬಲ ರಾಷ್ಟ್ರ ಎನಿಸಿಕೊಂಡಿರುವ ಚೀನಾದ ಪಾರುಪತ್ಯಕ್ಕೆ ಲಗಾಮು ಹಾಕಲು ಭಾರತದ ಜತೆ ಜಪಾನ್ ಕೈಜೋಡಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

Leave a Reply