ವಿಶ್ವಸಂಸ್ಥೆ ಉಗ್ರರ ಪಟ್ಟಿಗೆ ಮಸೂದ್ ಅಜರ್ ಹೆಸರು ಸೇರ್ಪಡೆ: ಭಾರತದ ಪ್ರಯತ್ನಕ್ಕೆ ಮತ್ತೆ ಅಡ್ಡಗಾಲು ಹಾಕಿದ ಚೀನಾ

ಡಿಜಿಟಲ್ ಕನ್ನಡ ಟೀಮ್:

ಭಾರತದ ಮನವಿಗೆ ಸ್ಪಂದಿಸಿ ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕ ಪ್ರಸ್ತಾವಕ್ಕೆ ಚೀನಾ ತಾಂತ್ರಿಕ ತಡೆಯನ್ನು ವಿಸ್ತರಿಸುವ ಮೂಲಕ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

ಕಳೆದ ಫೆಬ್ರವರಿಯಿಂದ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಉಗ್ರರ ಪಟ್ಟಿಗೆ ಸೇರಿಸಲು ಅಮೆರಿಕ ಪ್ರಯತ್ನಿಸುತ್ತಿದ್ದು, ಇದಕ್ಕೆ ಚೀನಾ ಆಕ್ಷೇಪ ಮುಂದುವರಿದಿದೆ. ಕಳೆದ ವರ್ಷ ಮಾರ್ಚ್ ನಿಂದಲೇ ಭಾರತ ಈ ಕುರಿತು ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಮನವಿ ಸಲ್ಲಿಸಿದ್ದು, ಚೀನಾ ಇದಕ್ಕೆ ತಡೆ ನೀಡುತ್ತಲೇ ಇತ್ತು. ನಂತರ ಜನವರಿಯಲ್ಲಿ ಪಠಾಣ್ ಕೋಟ್ ವಾಯು ನೆಲೆಯ ಮೇಲೆ ಭಯೋತ್ಪಾದಕರ ದಾಳಿಯ ನಂತರ ಭಾರತ, ಅಮೆರಿಕದ ಮೂಲಕ ಮಸೂದ್ ಅಜರ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳೂ ಒಪ್ಪಿವೆ. ಆದರೆ ಚೀನಾ ಮಾತ್ರ ಪದೇ ಪದೇ ತಾಂತ್ರಿಕ ಅಂಶದ ಕಾರಣ ನೀಡುತ್ತಾ ತಡೆ ನೀಡುತ್ತಿದ್ದು, ಮತ್ತೆ 3 ತಿಂಗಳ ಅವಧಿಗೆ ತಾಂತ್ರಿಕ ತಡೆ ವಿಸ್ತರಿಸಿದೆ.

ಚೀನಾ ಈ ಹಿಂದೆ ಹಾಕಿದ್ದ ತಾಂತ್ರಿಕ ತಡೆಯ ಅವಧಿ ಆಗಸ್ಟ್ 2ಕ್ಕೆ ಅಂತ್ಯವಾಗಿತ್ತು. ಈಗ ಚೀನಾ ಮತ್ತೆ ಮೂರು ತಿಂಗಳ ಅವಧಿಗೆ ಚೀನಾ ತನ್ನ ತಡೆಯನ್ನು ಮುಂದಿಟ್ಟಿದೆ. ಒಂದು ವೇಳೆ ಚೀನಾ ಈ ತಾಂತ್ರಿಕ ತಡೆಯನ್ನು ನೀಡದಿದ್ದರೆ, ಸಹಜವಾಗಿಯೇ ಮಸೂದ್ ಅಜರ್ ವಿಶ್ವಸಂಸ್ಥೆ ಉಗ್ರರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಆಗಸ್ಟ್ 2ರಂದು ತನ್ನ ತಾಂತ್ರಿಕ ತಡೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಚೀನಾ ಹೊಸದಾಗಿ ತಾಂತ್ರಿಕ ತಡೆ ನೀಡಿದೆ. ಆ ಮೂಲಕ ಮಸೂದ್ ಅಜರ್ ನನ್ನು ನವೆಂಬರ್ 2ರ ವರೆಗೂ ವಿಶ್ವಸಂಸ್ಥೆ ಉಗ್ರರ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಅದರೊಂದಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಶಾಶ್ವತ ಸದಸ್ಯತ್ವ ಪಡೆದಿರುವ ಚೀನಾ ತನ್ನ ವೆಟೊ ಅಧಿಕಾರವನ್ನು ಬಳಸುತ್ತಾ ಭಾರತದ ಪ್ರಯತ್ನಕ್ಕೆ ಕಲ್ಲು ಹಾಕುವುದನ್ನು ಮುಂದುವರಿಸಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಭಾರತವು ವಿಶ್ವಸಂಸ್ಥೆ ಭದ್ರತಾ ಸಂಸ್ಥೆಗೆ ಮನವಿ ಸಲ್ಲಿಸಿ, ಮಸೂದ್ ಅಜರ್ ವಿರುದ್ಧ ಸೆಕ್ಷನ್ 1267 ಜಾರಿಗೊಳಿಸಿ ಆತನನ್ನು ವಿಶ್ವಸಂಸ್ಥೆ ಉಗ್ರರಪಟ್ಟಿಗೆ ಸೇರಿಸಿ ಆತ ವಿದೇಶ ಪ್ರವಾಸ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿತ್ತು. ಆಗ ವಿಶ್ವಸಂಸ್ಥೆಯ 15 ಶಾಶ್ವತ ಸದಸ್ಯರಲ್ಲಿ 14 ಸದಸ್ಯ ರಾಷ್ಟ್ರಗಳು ಭಾರತದ ಮನವಿಗೆ ಒಪ್ಪಿಗೆ ನೀಡಿದ್ದವು. ಆದರೆ ಚೀನಾ ಮಾತ್ರ ಒಪ್ಪಿಗೆ ನೀಡದೇ 6 ತಿಂಗಳ ಕಾಲ ತಡೆ ನೀಡಿತ್ತು. ನಂತರ ಸೆಪ್ಟೆಂಬರ್ ನಲ್ಲೂ 3 ತಿಂಗಳ ಕಾಲ ತಡೆಯನ್ನು ವಿಸ್ತರಿಸಿತ್ತು. ನಂತರ ಡಿಸೆಂಬರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚೀನಾ, ‘ವಿಶ್ವ ಭಯೋತ್ಪಾದಕ ಪಟ್ಟಿಗೆ ಉಗ್ರರ ಹೆಸರನ್ನು ಸೇರಿಸುವುದು ಒಂದೇ ಹೊಡೆತದಲ್ಲಿ ಆಗುವ ಪ್ರಕ್ರಿಯೆಯಲ್ಲ. ಭಾರತ ತನಗೆ ಲಭ್ಯವಿರುವ ಮಾರ್ಗಗಳಲ್ಲಿ ತನ್ನ ಪ್ರಯತ್ನ ಮುಂದುವರಿಸಲಿ’ ಎಂದು ಪರೋಕ್ಷವಾಗಿ ಸೆಡ್ಡು ಹೊಡೆದಿತ್ತು. ಹೀಗಾಗಿ ಫೆಬ್ರವರಿಯಲ್ಲಿ ಮಸೂದ್ ಅಜರ್ ನನ್ನು ಉಗ್ರರ ಪಟ್ಟಿಗೆ ಸೇರಿಸಲು ಅಮೆರಿಕ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಸ್ತಾವ ಸಲ್ಲಿಸಿತ್ತು.

ಇತ್ತ ಪಾಕಿಸ್ತಾನ ಚೀನಾದ ಬಳಿ ಪದೇ ಪದೇ ಸಹಕಾರ ಬೇಡುತ್ತಾ ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ಗೆ ರಕ್ಷಣೆ ನೀಡುವಂತೆ ಗೋಗರೆಯುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುತ್ತಿರುವ ಚೀನಾ, ಭಾರತಕ್ಕೆ ಸತತವಾಗಿ ಹಿನ್ನಡೆಯಾಗುವಂತೆ ಮಾಡುತ್ತಿದೆ.

Leave a Reply