ಇಷ್ಟವಿಲ್ಲದಿದ್ದರೂ ರಷ್ಯಾ ಕುರಿತ ನೂತನ ಮಸೂದೆಗೆ ಸಹಿ ಹಾಕಿದ ಟ್ರಂಪ್, ಅಮೆರಿಕ ಸಂಸತ್ತು- ಶ್ವೇತಭವನ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳಾಗಿ ಗುರುತಿಸಿಕೊಂಡಿರುವ ಅಮೆರಿಕ ಹಾಗೂ ರಷ್ಯಾ ಸಾಂಪ್ರದಾಯಿಕ ಎದುರಾಳಿಗಳು ಎಂಬುದು ಗೊತ್ತಿರುವ ವಿಚಾರ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ, ಡೊನಾಲ್ಡ್ ಟ್ರಂಪ್ ಅವರ ಪರ ನಿಂತು ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಎರಡು ದೇಶಗಳ ನಡುವಣ ಸಂಬಂಧ ಸುಧಾರಣೆ ಕಾಣುತ್ತಿರುವ ಸೂಚನೆಗಳು ಹೊರಬರುತ್ತಿತ್ತು. ಆದರೆ ಈಗ ಟ್ರಂಪ್ ಅವಧಿಯಲ್ಲೇ ಉಭಯ ದೇಶಗಳ ನಡುವಣ ಸಂಬಂಧ ಮತ್ತೆ ಹದಗೆಡುವ ಸೂಚನೆಗಳು ಹೆಚ್ಚಾಗಿವೆ. ಅದಕ್ಕೆ ಕಾರಣ, ಅಮೆರಿಕ ಸಂಸತ್ತು ಬಹುಮತದಿಂದ ಅಂಗೀಕರಿಸಿರುವ ರಷ್ಯಾಕ್ಕೆ ಸಂಬಂಧಿಸಿದ ನೂತನ ಮಸೂದೆ.

ಹೌದು, ಅಮೆರಿಕ ವಿರುದ್ಧದ ಸಂಚು ರೂಪಿಸುವವರ ವಿರುದ್ಧ ಈ ಮಸೂದೆ ರಚಿಸಲಾಗಿದ್ದು, ಅದರಲ್ಲೂ ರಷ್ಯನ್ನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತ ಮಾಡಿದೆ ಈ ಮಸೂದೆ. ಸಂಸತ್ತಿನಲ್ಲಿ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ತಮಗೆ ಇಷ್ಟವಿಲ್ಲದಿದ್ದರೂ ಟ್ರಂಪ್ ಅವರು ಬುಧವಾರ ಈ ಮಸೂದೆಗೆ ಸಹಿ ಹಾಕಿದ್ದಾರೆ. ಅದರೊಂದಿಗೆ ರಷ್ಯಾದ ವಿಷಯವಾಗಿ ಅಮೆರಿಕ ಸಂಸತ್ತು ಹಾಗೂ ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ ಹುಟ್ಟುಕೊಂಡಿದೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಮೆರಿಕದ ವಿರುದ್ಧ ಸೈಬರ್ ದಾಳಿ, ರಾಜಕೀಯ ಪಿತೂರಿ ನಡೆಸುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ನಿಷೇಧಿಸಿದ್ದರು. ಈಗ ಅಮೆರಿಕ ಸರ್ಕಾರ ತನ್ನ ವಿರುದ್ಧ ಸಂಚು ನಡೆಸುವ ರಷ್ಯಾನ್ನರ ವಿರುದ್ಧ ತೆಗೆದುಕೊಳ್ಳುವ ಕ್ರಮಕ್ಕೆ ಸಂಬಂಧಿಸಿದಂತೆ ಮಸೂದೆಯೊಂದನ್ನು ರಚಿಸಲಾಗಿದೆ. ಈ ಮಸೂದೆಯಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಅಧ್ಯಕ್ಷಿಯ ಚುನಾವಣೆಯಲ್ಲಿ ಸೈಬರ್ ದಾಳಿ ನಡೆಸಿದ್ದ ಕಂಪನಿಗಳ ವಿರುದ್ಧದ ನಿಷೇಧದ ಕ್ರಮವೂ ಸೇರಿದೆ. ಇನ್ನು ಈ ಮಸೂದೆಯಲ್ಲಿ ಏನಿದೆ, ಅಮೆರಿಕ ಸಂಸತ್ತು ಹಾಗೂ ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿರುವ ಅಂಶಗಳೇನು? ನೋಡೋಣ ಬನ್ನಿ…

ಕುಗ್ಗಲಿದೆ ಟ್ರಂಪ್ ಅಧಿಕಾರ

ಈ ಕಾನೂನಿನ ಜಾರಿಯಾಗುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಷ್ಯನ್ನರ ವಿರುದ್ಧ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುವ ವಿಚಾರದಲ್ಲಿ ಟ್ರಂಪ್ ಅವರಿಗಿದ್ದ ಅಧಿಕಾರವನ್ನು ಕಡಿಮೆ ಮಾಡಲಾಗಿದೆ. ಅಂದರೆ, ಒಂದು ವೇಳೆ ಮುಂದಿನ ದಿನಗಳಲ್ಲಿ ರಷ್ಯಾ ಜತೆಗಿನ ಮಾತುಕತೆ ಯಶಸ್ವಿಯಾಗಿ, ಸಂಬಂಧ ಸುಧಾರಿಸಲು ರಷ್ಯನ್ನರು ಹಾಗೂ ರಷ್ಯಾ ಸಂಸ್ಥೆಗಳ ವಿರುದ್ಧ ಈಗಾಗಲೇ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕಾದ ಸಂದರ್ಭ ಎದುರಾದರೆ, ಆಗ ಟ್ರಂಪ್ ಅಮೆರಿಕ ಸಂಸತ್ತಿನ ಅಭಿಪ್ರಾಯವನ್ನು ಪಡೆದು ನಂತರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಸಹಜವಾಗಿಯೇ ಟ್ರಂಪ್ ಅವರ ಅಧಿಕಾರವನ್ನು ಕಸಿದುಕೊಂಡಂತಾಗಿದ್ದು, ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಕಠಿಣ ಕ್ರಮಕ್ಕೆ ನಿರ್ಧಾರ

ಅಮೆರಿಕ ಸಂಸತ್ತು ತಮ್ಮ ವಿರುದ್ಧ ಪಿತೂರಿ ನಡೆಸುವ ರಷ್ಯನ್ನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದು, ಅದಕ್ಕಾಗಿಯೇ ಕೆಲವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಹೀಗಾಗಿ ಅಮೆರಿಕದ ಅಧಿಕಾರಿಗಳು ರಷ್ಯಾ ರಾಜಕೀಯ ನಾಯಕರು, ಅವರು ರಷ್ಯಾ ಒಕ್ಕೂಟದಲ್ಲಿ ಹೊಂದಿರುವ ಸ್ಥಾನಮಾನ ಹಾಗೂ ಅವರ ಆಸ್ತಿ ಹಾಗೂ ಇತರೆ ಮಾಹಿತಿಯನ್ನೊಳಗೊಂಡ ವರದಿಯನ್ನು 180 ದಿನಗಳ ಒಳಗಾಗಿ ನೀಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧ ಯಾರೇ ಪಿತೂರಿ ನಡೆಸಿದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸುಲಭವಾಗಲಿದೆ.

ಇರಾನ್ ಮತ್ತು ಉತ್ತರ ಕೊರಿಯಾ ವಿರುದ್ಧ ಬಿಗಿ ನಿಲುವು

ಈ ಮಸೂದೆಯು ಇರಾನ್ ಹಾಗೂ ಉತ್ತರ ಕೊರಿಯಾದ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಯನ್ನು ವಿರೋಧಿಸಿದ್ದು, ಈ ಬೆಳವಣಿಗೆಯನ್ನು ವಿರೋಧಿಸಿ ಅಧ್ಯಕ್ಷ ಟ್ರಂಪ್ ಈ ಎರಡೂ ದೇಶಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ನಿರ್ದೇಶನ ನೀಡಿದೆ. ಉತ್ತರ ಕೋರಿಯಾಗೆ ನೆರವು ನೀಡಲು ಅಮೆರಿಕದಲ್ಲಿ ವಿದೇಶಿ ಬ್ಯಾಂಕುಗಳ ಖಾತೆ ತೆರೆಯುವುದನ್ನು ತಡೆಯಲು ಈ ಮಸೂದೆಯಲ್ಲಿ ಸೂಚಿಸಲಾಗಿದೆ.

ಈ ಅಂಶಗಳು ಈ ಮಸೂದೆಯ ಪ್ರಮುಖ ಭಾಗವಾಗಿದ್ದು, ರಷ್ಯಾ ವಿಚಾರದಲ್ಲಿ ಸಂಸತ್ತು ಅಧ್ಯಕ್ಷ ಟ್ರಂಪ್ ಅವರ ಅಧಿಕಾರವನ್ನು ಕಡಿಮೆ ಮಾಡಿರುವುದು ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸಹಜವಾಗಿಯೇ ಸಂಸತ್ತು ಹಾಗೂ ಶ್ವೇತಭವನದ ನಡುವೆ ರಷ್ಯಾ ವಿಷಯವಾಗಿ ಭಿನ್ನಾಭಿಪ್ರಾಯ ಮೂಡಿದೆ.

1 COMMENT

Leave a Reply