ಭಾರತ ಮಿಲಿಟರಿ ತಯಾರಿ ನಡೆಸುತ್ತಿದೆ ಎಂದು ಚೀನಾ ದೂರು, ಶಾಂತಿಯ ಮಾತುಗಳನ್ನಾಡುತ್ತಲೇ ರಾಹುಲ್ ನಡೆ ಟೀಕಿಸಿದ ಸುಷ್ಮಾ ಸ್ವರಾಜ್

ಡಿಜಿಟಲ್ ಕನ್ನಡ ಟೀಮ್:

ಚೀನಾ ತನ್ನ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಭಾರತ ಆತಂಕ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಈಗ ಭಾರತ ತನ್ನ ಗಡಿಯಲ್ಲಿ ರಸ್ತೆ ಅಭಿವೃದ್ಧಿಯ ಮೂಲಕ ಸೇನೆಯನ್ನು ನಿಯೋಜಿಸಿಕೊಳ್ಳುತ್ತಿದೆ ಎಂದು ಚೀನಾ ಆತಂಕ ವ್ಯಕ್ತಪಡಿಸುತ್ತಿದೆ.

ಚೀನಾದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ‘ದೋಕಲಂ ಗಡಿ ಪ್ರದೇಶದಲ್ಲಿ ಭಾರತ ಸೈನಿಕರು ಕಾನೂನುಬಾಹೀರವಾಗಿ ಒಂದು ತಿಂಗಳಿನಿಂದ ಚೀನಾದ ಪ್ರದೇಶದಲ್ಲಿ ಅತಿಕ್ರಮಣ ಮಾಡಿದೆ. ಇದರ ಜತೆಗೆ ಗಡಿ ಪ್ರದೇಶಗಳಲ್ಲಿ ಸೇನೆಯ ಸಂಚಾರಕ್ಕೆ ಸುಗಮವಾಗುವಂತೆ ರಸ್ತೆಗಳ ಅಭಿವೃದ್ಧಿಯೂ ನಡೆಯುತ್ತಿದೆ. ಅದರೊಂದಿಗೆ ಸೇನೆಯ ನಿಯೋಜನೆ ಹಾಗೂ ಅಗತ್ಯ ಸರಕುಗಳ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದು, ಎಚ್ಚರಿಕೆಯ ಸಂದೇಶ ರವಾನಿಸುತ್ತಿದೆ. ಇದು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮವಲ್ಲ’ ಎಂದು ಆತಂಕ ವ್ಯಕ್ತಪಡಿಸಿದೆ.

ಚೀನಾದ ಈ ಹೇಳಿಕೆಯನ್ನು ನಿರಾಕರಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಸಂಸತ್ತಿನಲ್ಲಿ ಹೇಳಿದ್ದಿಷ್ಟು…

‘ಭಾರತ ಯಾವಾಗಲೂ ತನ್ನ ಗಡಿ ಶಾಂತಿಯುತವಾಗಿರಬೇಕೆಂದು ಬಯಸುತ್ತದೆ. ಅದೇ ರೀತಿ ಉಭಯ ದೇಶಗಳ ನಡುವಣ ಬಿಕ್ಕಟ್ಟನ್ನು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕೆ ಹೊರತು ಯುದ್ಧ ಉತ್ತಮ ಪರಿಹಾರವಲ್ಲ. ನಾವು ಪ್ರತಿಯೊಂದು ರಾಷ್ಟ್ರದ ಜತೆಗೂ ಸ್ನೇಹ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಮಾಲ್ಡೀವ್ಸ್ ನಲ್ಲಿ ಬರ ಪರಿಸ್ಥಿತಿ ನಿರ್ಮಾಣವಾದಾಗ ಭಾರತ ಒಂದು ಹಡಗಿನಲ್ಲಿ ಕುಡಿಯುವ ನೀರನ್ನು ಕಳುಹಿಸಿತ್ತು. ಅದೇರೀತಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸಹ ಸಮಸ್ಯೆಗೆ ಸಿಲುಕಿದ್ದಾಗಲೂ ಭಾರತ ಆ ರಾಷ್ಟ್ರಗಳ ನೆರವಿಗೆ ನಿಂತಿದೆ. ಕಳೆದ 17 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಭಾರತ ತನ್ನ ನೆರೆಯ ರಾಷ್ಟ್ರಗಳಿಗೆ ಮಾಡಿರುವಷ್ಟು ಸಹಾಯವನ್ನು ಬೇರೆ ಯಾವುದೇ ರಾಷ್ಟ್ರ ಮಾಡಿಲ್ಲ.

ಭಾರತ, ಪಾಕಿಸ್ತಾನದ ಜತೆಗೂ ಸ್ನೇಹ ಬೆಳೆಸುವ ಪ್ರಯತ್ನವನ್ನು ಮಾಡಿದೆ. ಮೋದಿ ಅವರು ಅಫ್ಘಾನ್ ಪ್ರವಾಸ ಮುಗಿಸಿ ವಾಪಸ್ಸಾಗುವ ವೇಳೆ ಲಾಹೋರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ಸ್ನೇಹ ಮುಖ್ಯವಾಗಿತ್ತೇ ಹೊರತು ಶಿಷ್ಟಾಚಾರದ ಬಗ್ಗೆ ಚಿಂತಿಸಿರಲಿಲ್ಲ. ಪಠಾಣ್ ಕೋಟ್ ದಾಳಿಯ ನಂತರವೂ ಭಾರತ ಪಾಕಿಸ್ತಾನದ ಜತೆ ಸ್ನೇಹಕ್ಕೆ ಭಾರತ ಬದ್ಧವಾಗಿತ್ತು. ಆದರೆ ಬುಹ್ರಾನ್ ವಾನಿ ಹತ್ಯೆಯ ನಂತರ ಪಾಕಿಸ್ತಾನದ ನಿಲುವುಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತ ವಿಶ್ವದ ಎಲ್ಲಾ ರಾಷ್ಟ್ರಗಳ ಜತೆಗೂ ಉತ್ತಮ ಬಾಂಧವ್ಯ ಹೊಂದಿದೆ. ರಷ್ಯಾದಿಂದ ಅಮೆರಿಕದವರೆಗೂ, ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ರಾಷ್ಟ್ರಗಳು, ಸೌದಿ ಅರೇಬಿಯಾ, ಯೆಮನ್, ಇಸ್ರೇಲ್, ಪ್ಯಾಲೆಸ್ತೀನ್ ಜತೆಗೂ ಉತ್ತಮ ಸ್ನೇಹ ಹೊಂದಿದ್ದೇವೆ. ಹೀಗೆ ನಾವು ಎಲ್ಲರೊಂದಿಗೂ ಸ್ನೇಹದಿಂದ ಇರುತ್ತೇವೆ. ಹಾಗೆಂದ ಮಾತ್ರಕ್ಕೆ ಯಾವುದೇ ರಾಷ್ಟ್ರ ತನ್ನ ವ್ಯಾಪ್ತಿಯನ್ನು ಮೀರಬಾರದು. ಮೀರಿದರೆ ಭಾರತ ಅದಕ್ಕೆ ತಕ್ಕ ರೀತಿಯಲ್ಲೇ ಉತ್ತರ ನೀಡುತ್ತದೆ. ಭಾರತ, ಚೀನಾ ಜತೆಗೂ ಉತ್ತಮ ಸಂಬಂಧವನ್ನೇ ಬಯಸುತ್ತದೆ. ಭಾರತ, ಚೀನಾ ಹಾಗೂ ಭೂತಾನ್ ಗಡಿ ಪ್ರದೇಶದ ವಿಚಾರದಲ್ಲಿ ಮೂರೂ ರಾಷ್ಟ್ರಗಳ ಅಭಿಪ್ರಾಯವನ್ನು ಪಡೆಯುವುದು ಮುಖ್ಯ. ಆದರೆ ಚೀನಾ ದೋಕಲಂ ಗಡಿಯ ವಿಚಾರವಾಗಿ ಭಾರತದ ಜತೆ ಯಾವುದೇ ಮಾತುಕತೆ ನಡೆಸಿಲ್ಲ.

ಭಾರತ ಹಾಗೂ ಚೀನಾ ನಡುವಣ ಸಂಬಂಧದ ಹಾಗೂ ಉಭಯ ದೇಶಗಳ ನಡುವಣ ಬಿಕ್ಕಟ್ಟಿನ ಬಗ್ಗೆ ಮಾಹಿತಿ ಪಡೆಯಲು ಕಾಂಗ್ರೆಸ್ ನಾಯಕರು ಭಾರತದ ಸರ್ಕಾರವನ್ನು ಸಂಪರ್ಕಿಸಬೇಕಿತ್ತು. ಆದರೆ ಅವರು ಚೀನಾದ ರಾಯಭಾರಿಯನ್ನು ಭೇಟಿ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.’

Leave a Reply