ನಾಳೆ ಉಪರಾಷ್ಟ್ರಪತಿ ಚುನಾವಣೆ, ನೀವು ತಿಳಿಯಬೇಕಿರೋ ಪ್ರಮುಖ ಅಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ನಾಳೆ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಯಿಂದ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕಣದಲ್ಲಿ ಸ್ಪರ್ಧಿಸಿದ್ದಾರೆ.

ಉಪ ರಾಷ್ಟ್ರಪತಿಯಾಗಿರುವ ಹಮೀದ್ ಅನ್ಸಾರಿ ಅವರ ಅಧಿಕಾರ ಅವಧಿ ಆಗಸ್ಟ್ 10ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ನಡೆಯಲಿದ್ದು, ಸಂಸತ್ತಿನ ಎರಡು ಸದನಗಳ ಸಂಸದರು ಮತದಾನ ಮಾಡಲಿದ್ದಾರೆ. ಈಗಾಗಲೇ ಲೋಕಸಭೆಯ 545 ಸದಸ್ಯರ ಪೈಕಿ ಎನ್ಡಿಎ ಮೈತ್ರಿಕೂಟ 338ರ ಸಂಖ್ಯಾಬಲ ಹೊಂದಿದೆ. ಹೀಗಾಗಿ ವೆಂಕಯ್ಯ ನಾಯ್ಡು ಗೆಲವು ಸಾಧಿಸುವರು ಎಂದು ನಿರೀಕ್ಷಿಸಲಾಗಿದೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲಿರುವ ಅಭ್ಯರ್ಥಿ ರಾಜ್ಯಸಭೆಯ ಮುಖ್ಯಸ್ಥರಾಗಲಿದ್ದು, ಇದರಿಂದಾಗಿ ಬಿಜೆಪಿ ಪಾಲಿಗೆ ಈ ಚುನಾವಣೆ ಮಹತ್ವದ್ದಾಗಿದೆ.

ಲೋಕಸಭೆಯಲ್ಲಿ ಬಹುಮತ ಇದ್ದರೂ ರಾಜ್ಯಸಭೆಯಲ್ಲಿನ ಸಂಖ್ಯಾಬಲದ ಕೊರತೆ ಸಂಸತ್ತಿನ ಚಟುವಟಿಕೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟಾಗುವಂತೆ ಮಾಡಿದೆ. ಇದರಿಂದಾಗಿ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿ ರಾಜ್ಯಸಭೆ ಮುಖ್ಯಸ್ಥ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಬಿಜೆಪಿ ಪಾಲಿಗೆ ಮುಖ್ಯವಾಗಿದೆ. ಇನ್ನು ನಾಳಿನ ಚುನಾವಣೆಯ ಕುರಿತಾಗಿ ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು ಹೀಗಿವೆ…

– ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 5ರವರೆಗೂ ನಡೆಯಲಿದೆ. ನಂತರ ರಾತ್ರಿ 7ಕ್ಕೆ ಮತ ಏಣಿಕೆ ಆರಂಭವಾಗಲಿದ್ದು, ನಂತರ ಫಲಿತಾಂಶ ಪ್ರಕಟಿಸಲಾಗುವುದು.

– ರಾಷ್ಟ್ರಪತಿ ಚುನಾವಣೆಯಂತೆ ಉಪರಾಷ್ಟ್ರಪತಿ ಚುನಾವಣೆಯು ನಡೆಯಲಿದ್ದು, ಲೇಕಸಭೆ ಹಾಗೂ ರಾಜ್ಯಸಭೆಯ ಸಂಸದರು ಮತಪತ್ರಗಳ ಮೂಲಕ ತಮ್ಮ ಮತ ಚಲಾವಣೆ ಮಾಡಲಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಏನೆಂದರೆ, ಮತದಾನ ಮಾಡಲಿರುವ ಸಂಸದರು ಮತದಾನ ಮಾಡಲು ತಾವು ತರುವ ಪೆನ್ ನಲ್ಲಿ ಮತ ಹಾಕುವಂತಿಲ್ಲ ಬದಲಾಗಿ ಮತದಾನಕ್ಕೆಂದೇ ನೀಡಲಾಗಿರುವ ಪೆನ್ ಬಳಸಿಯೇ ಮತದಾನ ಮಾಡಬೇಕು. ಒಂದು ವೇಳೆ ಬೇರೆ ಪೆನ್ ಬಳಸಿದರೆ ಆ ಮತವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

– ಇನ್ನು ಯಾವ ಯಾವ ಅಭ್ಯರ್ಥಿಗಳು ಯಾವ ಪಕ್ಷಗಳಿಂದ ಬೆಂಬಲ ಹೊಂದಿದ್ದಾರೆ ಎಂಬುದನ್ನು ನೋಡುವುದಾದರೆ, ಇತ್ತೀಚೆಗೆ ಬಿಹಾರದಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಜೆಡಿಯು ಈ ಚುನಾವಣೆಯಲ್ಲಿ ಗೋಪಾಲಕೃಷ್ಣ ಗಾಂಧಿ ಅವರಿಗೆ ಬೆಂಬಲ ನೀಡಲು ಮುಂದಾಗಿದೆ. ಆ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತಾವು ಸಂಪೂರ್ಣವಾಗಿ ಎನ್ಡಿಎ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಿದೆ. ಉಳಿದಂತೆ ಗೋಪಾಲ ಕೃಷ್ಣ ಗಾಧಿ ಅವರಿಗೆ ಕಾಂಗ್ರೆಸ್ ಸೇರಿದಂತೆ ಸಿಪಿಎಂ, ಸಿಪಿಐ, ಎನ್ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಡಿಎಂಕೆ, ಬಿಜೆಡಿ, ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿವೆ. ಇನ್ನು ಎನ್ಡಿಎ ಪರ ಕಣಕ್ಕಿಳಿದಿರುವ ವೆಂಕಯ್ಯ ನಾಯ್ಡು ಅವರಿಗೆ ಎನ್ಡಿಎ ಮಿತ್ಪಪಕ್ಷಗಳ ಜತೆಗೆ ಟಿಆರ್ ಎಸ್, ಟಿಡಿಪಿ, ಎಐಎಡಿಎಂಕೆಯ ಎರಡೂ ಬಣಗಳು ಬೆಂಬಲ ನೀಡಲಿವೆ.

Leave a Reply