ಐಟಿ ದಾಳಿ ಮುಕ್ತಾಯದ ನಂತರ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ನಾನು ಎಂದಿಗೂ ಕಾನೂನಿ ಬಾಹೀರವಾಗಿ, ಸಂವಿಧಾನ ಬಾಹೀರವಾಗಿ ನಾನು ನಡೆದುಕೊಂಡಿಲ್ಲ. ಸತ್ಯ ಏನೆಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಿ…’ ಇದು ಸತತ ಮೂರು ದಿನಗಳ ಕಾಲ ನಡೆದ ಐಟಿ ದಾಳಿಯ ಬಳಿಕ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ ಮಾತು.

ಬುಧವಾರ ಬೆಳಗ್ಗೆ ಆರಂಭವಾದ ಐಟಿ ಅಧಿಕಾರಿಗಳ ಶೋಧ ಕಾರ್ಯ ಶನಿವಾರ ಬೆಳಗ್ಗೆವರೆಗೂ ಮುಂದುವರಿಯಿತು. ಡಿ.ಕೆ ಶಿವಕುಮಾರ್ ಅವರ ಮನೆಗಳು ಹಾಗೂ ಕಚೇರಿ ಸೇರಿದಂತೆ ಅವರ ಸಂಬಂಧಿಕರು, ಆಪ್ತರು ಹಾಗೂ ಸ್ನೇಹಿತರ ಮನೆ ಒಳಗೊಂಡಂತೆ ಸುಮಾರು 70 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಐಟಿ ಅಧಿಕಾರಿಗಳು. ಈ ವೇಳೆ ಕೋಟ್ಯಂತರ ನಗದು, ಚಿನ್ನಾಭರಣ ಹಾಗೂ ಅನೇಕ ದಾಖಲೆಗಳು ಸಿಕ್ಕಿದ್ದು ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿದ್ದಾರೆ.

ಈ ಐಟಿ ದಾಳಿ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮದವರ ಮುಂದೆ ಬಂದು ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದಿಷ್ಟು…

‘ಕಳೆದ ಮೂರು ದಿನಗಳಿಂದ ನನ್ನ ಸ್ನೇಹಿತರು, ಸಂಬಂಧಿಕರ ಮನೆ ಮುಂದೆ ನಿಂತು ಈ ದಾಳಿಯ ಕುರಿತಾಗಿ ತಮ್ಮದೇ ಆದಂತ ವಿಚಾರಗಳನ್ನು ಮಾಧ್ಯಮಗಳಲ್ಲಿ ತಿಳಿಸಿದ್ದೀರಿ. ದಾಳಿಯ ಕುರಿತಾಗಿ ಸದ್ಯಕ್ಕೆ ನಾನು ಏನನ್ನು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ಆದರೆ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ನನಗೆ ಯಾರೆಲ್ಲಾ ಪ್ರೋತ್ಸಾಹ ಬೆಂಬಲ ನೀಡಿದ್ದಾರೋ, ಅದರಲ್ಲೂ ಪಕ್ಷದ ನಾಯಕರು, ಕಾರ್ಯಕರ್ತರು, ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ಸೇರಿದಂತೆ ಅನೇಕರು ಕಷ್ಟಕಾಲದಲ್ಲಿ ನನ್ನ ಬೆನ್ನಿಗೆ ನಿಂತಿದ್ದಾರೆ. ನಾನು ಎಂದಿಗೂ ಕಾನೂನು ಹಾಗೂ ಸಂವಿಧಾನದ ಚೌಕಟ್ಟನ್ನು ಬಿಟ್ಟು ನಡೆದ ವ್ಯಕ್ತಿಯಲ್ಲ. ನನ್ನ ಮನೆಯಲ್ಲಿ ಏನೇನು ಸಿಕ್ಕಿದೆ ಎಂಬುದನ್ನು ಪಂಚನಾಮ ಪ್ರತಿ ಬಂದಮೇಲೆ ಅದರ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಮುಂದೆ ಬಂದು ಮಾತನಾಡುತ್ತೇನೆ. ಎಲ್ಲ ಮಾಧ್ಯಮದವರನ್ನು ಖಂಡಿತವಾಗಿಯು ಕರೆದು, ನಿಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ಸದ್ಯಕ್ಕೆ ನಾನು ನಂಬುವ ದೇವರ ಬಳಿ ಹೋಗಬೇಕಿದೆ.’

ಹೀಗೆ ಮಾಧ್ಯಮದವರ ಜತೆ ಮಾತನಾಡಿದ ನಂತರ ಡಿ.ಕೆ ಶಿವಕುಮಾರ್ ಅವರು ತಮ್ಮ ಮಗಳ ಜತೆಗೆ ತಾವು ನಂಬುವ ಗುರು ಅಜ್ಜಯ್ಯ ಅವರನ್ನು ಬೇಟಿ ಮಾಡಿ ಆಶಿರ್ವಾದ ಪಡೆದರು. ನಂತರ ರಾಜಭವನಕ್ಕೆ ತೆರಳಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು.

Leave a Reply