ಪಡಿತರದ ಬದಲು ಹಣವೆಂಬ ಮೋದಿ ಯೋಚನೆ ಎದುರಿಗಿರುವ ಸವಾಲು ಏನು?

ಡಿಜಿಟಲ್ ಕನ್ನಡ ಟೀಮ್:

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.

ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಈ ರಾಜ್ಯಗಳಲ್ಲಿ ‘ಸಾರ್ವಜನಿಕ ವಿತರಣ ವ್ಯವಸ್ಥೆ’ಯ ಮೂಲಕ ಪಡಿತರ ಆಹಾರ ಪದಾರ್ಥ ನೀಡುವ ಬದಲಿಗೆ, ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ನೀಡುವ ಕುರಿತಾದ ಚಿಂತನೆ ನಡೆಸಿದ್ದಾರೆ. ಈ ಹೊಸ ಯೋಚನೆಯಲ್ಲಿ ಫಲಾನುಭವಿಗಳು ಪಡಿತರ ವ್ಯವಸ್ಥೆಯಲ್ಲಿ ಪಡೆಯುವ ಸಬ್ಸಿಡಿ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗುದು, ನಂತರ ಫಲಾನುಭವಿಗಳು ಆ ಹಣದಲ್ಲಿ ತಮ್ಮ ಸಮೀಪದಲ್ಲಿರುವ ಅಂಗಡಿಗಳಲ್ಲಿ ಅದೇ ಸಾಮಾಗ್ರಿ ಕೊಳ್ಳುವುದಾಗಿದೆ.

ಈ ಯೋಜನೆಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಉದಾಹರಣೆಯೊಂದನ್ನು ನೀಡುವುದು ಉತ್ತಮ. ಪಡಿತರ ಚೀಟಿಯ ಮೂಲಕ ಫಲಾನುಭವಿಯೊಬ್ಬ ₹ 30 ಬೆಲೆಯ ಒಂದು ಕೆ.ಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ₹ 5ಕ್ಕೆ ಪಡೆಯುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆಗ ಸರ್ಕಾರ ಆ ಅಕ್ಕಿಗೆ ₹ 25 ನಷ್ಟು ಸಬ್ಸಿಡಿಯನ್ನು ನೀಡಿರುತ್ತದೆ. ಈ ಹೊಸ ಚಿಂತನೆಯಲ್ಲಿ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮೂಲಕ ಅಕ್ಕಿಯನ್ನು ನೀಡದೇ ಅದರ ಸಬ್ಸಿಡಿಯ ಮೊತ್ತ ₹ 25 ಅನ್ನು ಆತನ ಖಾತೆಗೆ ಹಾಕುವುದು. ನಂತರ ಆ ಫಲಾನುಭವಿ ತಾನು ನೀಡುವ ₹5 ಅನ್ನು ಸೇರಿಸಿ ₹ 30 ಬೆಲೆಯ ಅಕ್ಕಿಯನ್ನು ತಮ್ಮ ಸಮೀಪದ ಅಂಗಡಿಗಳಲ್ಲೇ ಕೊಳ್ಳುವುದು. ಆಹಾರ ಸಾಮಾಗ್ರಿಯನ್ನು ನೀಡುವ ಬದಲಾಗಿ ಅದಕ್ಕೆ ವೆಚ್ಚವಾಗುವ ಮೊತ್ತವನ್ನು ಫಲಾನುಭವಿಗೆ ನೀಡುವುದು ಈ ಹೊಸ ಯೋಚನೆಯ ಒಟ್ಟಾರೆ ಸಾರಾಂಶ. ಇದರಿಂದ ಮಧ್ಯವರ್ತಿಗಳ ಮಟ್ಟದಲ್ಲಿ ನಡೆಯುವ ಕಾಳಸಂತೆ ವ್ಯಾಪಾರ ಹಾಗೂ ಭ್ರಷ್ಟಾಚಾರವನ್ನು ತಡೆಯುದು ಈ ಯೋಜನೆಯ ಉದ್ದೇಶ.

ಮೋದಿ ಅವರ ಈ ಹೊಸ ಚಿಂತನೆ ತಕ್ಷಣವೇ ಜಾರಿಯಾಗುತ್ತದೆಯೇ ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಇಲ್ಲ. ಈ ಯೋಜನೆ ಸದ್ಯಕ್ಕೆ ಚರ್ಚೆ ಹಂತದಲ್ಲಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರ ಮುಂದೆ ಅನೇಕ ಪ್ರಮುಖ ಸವಾಲುಗಳಿವೆ. ಅವುಗಳೆಂದರೆ,

  • ಈ ಯೋಜನೆ ಜಾರಿಗೆ ಮೊದಲ ಸವಾಲಾಗಿರೋದು ಹಣ ವರ್ಗಾವಣೆಯ ವಿಷಯ. ಸದ್ಯಕ್ಕೆ ಶೇ.50ಕ್ಕಿಂತ ಹೆಚ್ಚಿನ ಮಂದಿ ಸರಿಯಾದ ಪ್ರಮಾಣದ ಹಣವನ್ನು ಪಡೆಯಲು ಸಾಧ್ಯವಿಲ್ಲ. ಕಾರಣ ಇವರು ತಮ್ಮ ಬ್ಯಾಂಕಿನ ಖಾತೆ ಹಾಗೂ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನೇ ಜೋಡಿಸಿಲ್ಲ.
  • ಇನ್ನು ದೇಶದ ಅನೇಕ ಭಾಗಗಳಲ್ಲಿ ಬ್ಯಾಂಕಿನ ಮೂಲಭೂತ ಸೌಕರ್ಯಗಳು ತಲುಪಿಯೇ ಇಲ್ಲ. ಹೀಗಾಗಿ ಸಬ್ಸಿಡಿ ಹಣ ಫಲಾನುಭವಿಗಳಿಗೆ ತಲುಪುವ ಪ್ರಮಾಣ ಕಡಿಮೆ ಇದೆ. ಈ ಪ್ರದೇಶಗಳಲ್ಲಿ ಬಡ ಜನರು ಈ ಸಬ್ಸಿಡಿ ಹಣ ಬಂದಿರುವ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ತಿರುಗಿ, ಅದನ್ನು ಪಡೆಯುವ ಸಲುವಾಗಿಯೇ ತಮ್ಮ ಎರಡು ದಿನದ ಸಂಪಾದನೆಯನ್ನು ಖರ್ಚು ಮಾಡುವಂತಹ ಪರಿಸ್ಥಿತಿ ಇದೆ.
  • ಇದೆಲ್ಲಕ್ಕಿಂತ ಮುಖ್ಯವಾಗಿ ಗೃಹಿಣಿಯರು ತಮ್ಮ ಸಮೀಪದ ಅಂಗಡಿಗಳಲ್ಲಿ ಅಗತ್ಯವಿರುವ ದವಸ ದಾನ್ಯ ಖರೀದಿ ವೇಳೆ ₹ 100-200 ಹಣವನ್ನು ಖರ್ಚಾಗುತ್ತಿದೆ. ಹಣದುಬ್ಬರದ ಸಮಯದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ.

ಒಟ್ಟಾರೆಯಾಗಿ ಪಡಿತರ ಬದಲಿಗೆ ಹಣ ವಿತರಣೆಯು ಸಾರ್ವಜನಿಕ ವಿತರಣೆ ವ್ಯವಸ್ಥೆಯಂತೆ ಜನಸಾಮಾನ್ಯರಿಗೆ ಆಹಾರ ಭದ್ರತೆಯನ್ನು ನೀಡುವಲ್ಲಿ ಯಶಸ್ವಿಯಾಗುವುದು ಬಹುತೇಕ ಅನುಮಾನವಾಗಿದೆ.

Leave a Reply