ಶಾಂತಿ ಮಾತುಕತೆಯ ಪ್ರಸ್ತಾಪದ ಜತೆಗೆ ಮಿಲಿಟರಿ ದಾಳಿಯ ಎಚ್ಚರಿಕೆ, ಚೀನಾವನ್ನು ನಂಬುವುದಾದರೂ ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಸುಮಾರು ಒಂದೂವರೆ ತಿಂಗಳಿನಿಂದ ದೋಕಲಂ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ತಿಕ್ಕಾಟ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಂತದಲ್ಲಿ ಶಾಂತಿಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಚೀನಾ ರಾಯಭಾರಿ ಅಧಿಕಾರಿ ಅಭಿಪ್ರಾಯಪಡುತ್ತಿರುವ ಬೆನ್ನಲ್ಲೇ ಚೀನಾ ಮಾಧ್ಯಮಗಳು ಮಿಲಿಟರಿ ದಾಳಿಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತ, ಚೀನಾವನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮೊನ್ನೆಯಷ್ಟೇ ಚೀನಾದ ಭಾರತ ರಾಯಭಾರಿ, ‘ಭಾರತ ಮತ್ತು ಚೀನಾ ಪರಸ್ಪರ ಶಾಂತಿಯುತ ಮಾತುಕತೆಯಿಂದ ಯಾವುದೇ ಸಮಸ್ಯೆಬೇಕಾದರೂ ಬಗೆಹರಿಸಿಕೊಳ್ಳಬಹುದು. ಹೀಗಾಗಿ ಶಾಂತಿಯುತವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂಬ ಮೃದು ಧೋರಣೆಯ ಮಾತುಗಳನ್ನಾಡಿದರು. ಇದೇ ವೇಳೆ ಅತ್ತ ಚೀನಾ ಮಾಧ್ಯಮಗಳು ಮಾತ್ರ ಚೀನಾ ಸೇನೆ ಮುಂದಿನ ಎರಡು ವಾರಗಳಲ್ಲಿ ಭಾರತದ ಮೇಲೆ ಸಣ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಚೀನಾದ ಪ್ರಮುಖ ದಿನಪತ್ರಿಕೆಯಲ್ಲಿ ಒಂದಾದ ಕಮ್ಯುನಿಷ್ಟ್ ಪಾರ್ಟಿ ಆಫ್ ಚೀನಾ ಪ್ರಕಟಿಸಿರುವ ಲೇಖನದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಚೀನಾದ ತಜ್ಞರು ಹಾಗೂ 6 ಸಚಿವರುಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ. ದೋಕಲಂ ಗಡಿ ವಿಚಾರವಾಗಿ ಭಾರತದ ಜತೆಗಿನ ತಿಕ್ಕಾಟವನ್ನು ಚೀನಾ ಹೆಚ್ಚಿನ ದಿನಗಳ ಕಾಲ ಮುಂದುವರಿಸಲು ಚಾನಾ ಸಿದ್ಧವಿಲ್ಲ. ಚೀನಾ ಪ್ರದೇಶದ ಮೇಲೆ ಅತಿಕ್ರಮಣ ಮಾಡಿರುವ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಮುಂದಿನ ಎರಡು ವಾರಗಳಲ್ಲಿ ಸಣ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.

ಈ ಕುರಿತಾಗಿ ಅಂತಾರಾಷ್ಟ್ರೀಯ ಸಂಬಂಧದ ತಜ್ಞ ಹು ಝಿಯಾಂಗ್ ಗ್ಲೋಬಲ್ ಟೈಮ್ಸ್ ಪತ್ರಿಕೆಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಹೀಗೆ… ‘ಕಳೆದ 24 ಗಂಟೆಗಳಲ್ಲಿ ಚೀನಾ ಅಧಿಕಾರಿಗಳು ನೀಡುತ್ತಿರುವ ಹೇಳಿಕೆಗಳಿಂದ ಭಾರತ ಸೇನೆಯ ಅತಿಕ್ರಮಣವನ್ನು ಚೀನಾ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೆ ತನ್ನ ಪ್ರದೇಶದಲ್ಲಿ ಭಾರತೀಯ ಸೇನೆ ಪ್ರವೇಶವನ್ನು ತುಂಬಾ ದಿನಗಳ ಕಾಲ ಸಹಿಸಿಕೊಳ್ಳಲು ಚೀನಾ ಸಿದ್ಧವಿಲ್ಲ. ಒಂದು ವೇಳೆ ಚೀನಾ ಸೇನೆ ಭಾರತ ಸೇನೆಯ ವಿರುದ್ಧ ಸಣ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಮಾಡುವುದೇ ಆದರೆ, ಭಾರತ ಸರ್ಕಾರಕ್ಕೆ ಆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಭಾರತ ಈ ಕಾರ್ಯಾಚರಣೆಯಿಂದಾಗುವ ಎಲ್ಲ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಈ ಕಾರ್ಯಾಚರಣೆಯಿಂದ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹದಗೆಡಲಿದೆ.’

ಇನ್ನು ಇದೇ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕೀಯ ಲೇಖನದಲ್ಲಿ ಭಾರತಕ್ಕೆ ರವಾನಿಸಿರುವ ಎಚ್ಚರಿಕೆ ಹೀಗಿದೆ… ‘ಚೀನಾ ಸೇನೆ ಮಿಲಿಟರಿ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ತಯಾರಿ ಮಾಡಿಕೊಂಡಿದೆ. ದಾಳಿಯ ಹೊರತಾಗಿ ಬೇರೆ ದಾರಿ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾ ಸೇನೆಯ ಸಾಮರ್ಥ್ಯ ಏನು ಎಂಬುದನ್ನು ಅರಿಯಬೇಕಿದೆ. ಚೀನಾ ಸೇನೆಯನ್ನು ಎದುರಿಸಿ ನಿಲ್ಲಲು ಭಾರತೀಯ ಸೇನೆಗೆ ಸಾಧ್ಯವಿಲ್ಲ. ಒಂದು ವೇಳೆ ಯುದ್ಧ ನಡೆದದ್ದೇ ಆದರೆ ಚೀನಾ ಸೇನೆ ಭಾರತದ ಗಡಿಯುದ್ಧಕ್ಕೂ ಭಾರತದ ಸೇನೆಯನ್ನು ಮೆಟ್ಟಿ ನಿಲ್ಲಬಹುದು.’

ಹೀಗೆ ಚೀನಾ ರಾಯಭಾರಿ ಅಧಿಕಾರಿ ಮಾತುಕತೆಯ ಮಾತುಗಳನ್ನಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಚೀನಾ ಮಾಧ್ಯಮಗಳು ಯುದ್ಧದ ಸಂದೇಶ ರವಾನಿಸುತ್ತಿವೆ. ಹೀಗೆ ಎರಡು ನಿಲುವುಗಳನ್ನು ಪ್ರದರ್ಶಿಸುತ್ತಿರುವ ಚೀನಾವನ್ನು ಯಾವುದೇ ಕಾರಣಕ್ಕೂ ಭಾರತ ನಂಬಲು ಸಾಧ್ಯವಿಲ್ಲ.

Leave a Reply