ರವಿಶಾಸ್ತ್ರಿಗೆ ಸೌರವ್ ಗಂಗೂಲಿ ಕೊಟ್ಟ ಟಾಂಗ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ನಡುವಣ ವಾಕ್ಸಮರ ಮುಂದುವರಿದಿದೆ.

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ 304 ರನ್ ಗಳ ಭರ್ಜರಿ ಜಯ ಸಾಧಿಸಿದ ನಂತರ ಮಾತನಾಡಿದ್ದ ರವಿಶಾಸ್ತ್ರಿ, ‘ಈ ತಂಡದಲ್ಲಿ ಅತ್ಯುತ್ತಮ ಹೊಂದಾಣಿಕೆ ಇದೆ. ಕಳೆದ ಎರಡು ವರ್ಷಗಳಿಂದ ತಂಡದ ಆಟಗಾರರು ಒಟ್ಟಿಗೆ ಆಡುತ್ತಿದ್ದಾರೆ. ಈ ಹಿಂದೆ ಭಾರತಕ್ಕೆ 20 ವರ್ಷಗಳ ಕಾಲ ಆಡಿದ್ದ ಆಟಗಾರರು ತಂಡದಲ್ಲಿದ್ದರು. ಆ ತಂಡ ಅನೇಕ ಬಾರಿ ಶ್ರೀಲಂಕಾ ಪ್ರವಾಸ ಮಾಡಿತ್ತಾದರೂ ಅವರು ಒಂದೇ ಒಂದು ಸರಣಿಯನ್ನು ಗೆದ್ದಿರಲಿಲ್ಲ. ಪ್ರಸ್ತುತ ಭಾರತ ತಂಡ ಈ ಹಿಂದೆ ಇದ್ದ ಭಾರತ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ಅತ್ಯುತ್ತಮ ತಂಡವಾಗಿದೆ.’

ಶಾಸ್ತ್ರಿ ಅವರ ಈ ಹೇಳಿಕೆ ಅನೇಕ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಪಂಡಿತರ ಅಸಮಾಧಾನಕ್ಕೆ ಕಾರಣವಾಗಿತ್ತು. ಶಾಸ್ತ್ರಿ ಅವರ ಮಾತು ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರನ್ನು ಪರೋಕ್ಷವಾಗಿ ಟೀಕೆ ಮಾಡಿದಂತಿತ್ತು. ಈಗ ಶಾಸ್ತ್ರಿ ಅವರ ಈ ಹೇಳಿಕೆಗೆ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ತಕ್ಕ ಉತ್ತರವನ್ನೇ ನೀಡಿದ್ದಾರೆ. ಶಾಸ್ತ್ರಿ ಅವರಿಗೆ ಸೌರವ್ ಗಂಗೂಲಿ ಟಾಂಗ್ ಕೊಟ್ಟಿದ್ದು ಹೀಗೆ…

‘ಪ್ರಾಮಾಣಿಕವಾಗಿ ಹೇಳುವುದಾದರೆ, ಈ ವಿಚಾರವಾಗಿ ಮಾತನಾಡಲು ಏನು ಇಲ್ಲ. ಅವರಿಗೆ ಶುಭಕೋರುತ್ತೇನೆ. 2019ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಈ ಅವಧಿಯಲ್ಲಿ ಅವರು ಉತ್ತಮ ಕೆಲಸ ಮಾಡಿ ಕಪ್ ತರುತ್ತಾರೆ ಎಂಬ ವಿಶ್ವಾಸವಿದೆ.

ಆದರೆ ಈ ಸಂದರ್ಭದಲ್ಲಿ 15 ವರ್ಷಗಳ ನಂತರ ಪಾಕಿಸ್ತಾನದ ನೆಲದಲ್ಲಿ ಪಾಕ್ ತಂಡವನ್ನು ಮಣಿಸಿದ್ದು, 2007ರಲ್ಲಿ ಇಂಗ್ಲೆಂಡ್ ನಲ್ಲಿ ಜಯ. ಹೀಗೆ ಅನೇಕ ಗೆಲುವುಗಳನ್ನು ಅವರು ಮರೆತಿದ್ದಾರೆ. ಈ ಪ್ರದರ್ಶನಗಳು ಈ ರೀತಿಯಾದ ಹೋಲಿಕೆಗಿಂತ ಮಿಗಿಲಾದವು.’

ಭಾರತ ಈ ಸರಣಿ ಗೆದ್ದರೆ ಕೊಹ್ಲಿ ನಾಯಕತ್ವದಲ್ಲಿ ಸತತ 8 ಸರಣಿಗಳನ್ನು ಗೆದ್ದಂತಾಗಲಿದೆ. ವಿರಾಟ್ ಕೊಹ್ಲಿ ನಾಯಕನಾಗಿ ಸಾಕಷ್ಟು ಪ್ರಬುದ್ಧನಾಗಿದ್ದಾನೆ. ಉತ್ತಮ ನಾಯಕನಿಗೆ ಬೇಕಾದ ಗುಣ ಆತನಲ್ಲಿದೆ. ನಾನು ಸೋಫಾ ಮೇಲೆ ಕೂತು ಆತನ ಆಟವನ್ನು ನೋಡಲು ಬಯಸುತ್ತೇನೆ. ಆತನ ಸಾಮರ್ಥ್ಯದ ಮೇಲೆ ಯಾವುದೇ ಅನುಮಾನವಿಲ್ಲ.’

Leave a Reply