ನಾಳೆ ಗುಜರಾತ್ ರಾಜ್ಯಸಭಾ ಚುನಾವಣೆ, ಅಮಿತ್ ಶಾ- ಅಹ್ಮದ್ ಪಟೇಲ್ ನಡುವಣ ಪ್ರತಿಷ್ಠೆಯ ಸಮರದ ಪ್ರಮುಖ ಬೆಳವಣಿಗೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ವಾರಗಳಿಂದ ಗುಜರಾತಿನ ಮೂರು ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದು, ಮೊದಲ ಬಾರಿಗೆ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್ ರಾಜ್ಯಸಭೆಗೆ ಮರು ಪ್ರವೇಶ ಪಡೆಯಲು ಬಯಸಿದ್ದಾರೆ.

ಈ ಚುನಾವಣೆಯಲ್ಲಿ ಅಮಿತ್ ಶಾ ತಾವು ಗೆಲ್ಲುವುದರ ಜತೆಗೆ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರನ್ನು ಮಣಿಸಲು ಪಣತೊಟ್ಟಿ ನಿಂತಿದ್ದಾರೆ. ಗುಜರಾತಿನ ವಿಧಾನಸಭೆಯ ಒಟ್ಟು ಬಲ 182. ಇತ್ತೀಚೆಗೆ ಬಿಜೆಪಿ ಸೇರಿದ 6 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಬಲ 176ಕ್ಕೆ ಕುಸಿದಿದೆ. ಈ ಪೈಕಿ ಬಿಜೆಪಿ 121 ಹಾಗೂ ಕಾಂಗ್ರೆಸ್ 51 ಶಾಸಕರ ಸಂಖ್ಯಾಬಲ ಹೊಂದಿವೆ.

ಒಬ್ಬ ಅಭ್ಯರ್ಥಿ ರಾಜ್ಯಸಭೆಗೆ ಆಯ್ಕೆಯಾಗಲು 45 ಶಾಸಕರ ಮತಬೇಕಿದ್ದು, ಬಹುಮತವನ್ನು ಹೊಂದಿರುವ ಬಿಜೆಪಿಯಿಂದ ಕಣಕ್ಕಿಳಿದಿರುವ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆಲುವು ಖಚಿತವಾಗಿದೆ. ಇನ್ನು ಕಾಂಗ್ರೆಸ್ 51 ಸ್ಥಾನ ಹೊಂದಿದ್ದರೂ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಸಾಕಷ್ಟು ಪರಿಶ್ರಮ ಪಡುವಂತಾಗಿದೆ. ಅದಕ್ಕೆ ಕಾರಣ ಕಳೆದ ಎರಡು ವಾರಗಳಿಂದ ಬಿಜೆಪಿ ಮಾಡುತ್ತಿರುವ ರಾಜಕೀಯ ತಂತ್ರಗಳ ಪ್ರಯೋಗ. ಈ ತಂತ್ರಗಾರಿಕೆಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಚುನಾವಣೆಯತ್ತ ಜನರ ಗಮನವನ್ನು ಸೆಳೆಯುವಂತೆ ಮಾಡಿದೆ. ತನ್ನ ಇಬ್ಬರು ಅಭ್ಯರ್ಥಿಗಳು ಗೆಲವು ಖಚಿತವಾಗಿದ್ದರೂ ಅಹ್ಮದ್ ಪಟೇಲ್ ಅವರನ್ನು ಮಣಿಸಲೇಬೇಕೆಂದು ಬಿಜೆಪಿ ಬಲ್ವಂತ್ ಸಿಂಗ್ ರಜಪೂತ್ ಅವರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಮೂರನೇ ಅಭ್ಯರ್ಥಿಗೆ ಈಗಾಗಲೇ 31 ಶಾಸಕರ ಬೆಂಬಲವಿದ್ದು, ಅಹ್ಮದ್ ಪಟೇಲ್ ರನ್ನು ಮಣಿಸಲು ಇನ್ನು 14 ಶಾಸಕರ ಬೆಂಬಲ ಅಗತ್ಯವಿದೆ. ಇದೇ ಕಾರಣಕ್ಕೆ ಅಪರೇಷನ್ ಕಮಲ ಗುಜರಾತ್ ನಲ್ಲಿ ಆರಂಭವಾಗಿತ್ತು. ಇದರಿಂದ ಎಚ್ಚೆತ್ತ ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸಿ, ಅಪರೇಷನ್ ಕಮಲಕ್ಕೆ ಬ್ರೇಕ್ ಹಾಕಿತು. ಹೀಗಾಗಿ ಸದ್ಯ ಅಹ್ಮದ್ ಪಟೇಲರನ್ನು ಮಣಿಸಲು ಬಿಜೆಪಿಯ ಮುಂದೆ ಇರುವ ಏಕೈಕ ದಾರಿ ಎಂದರೆ ಅದು ಕಾಂಗ್ರೆಸ್ ಶಾಸಕರ ಅಡ್ಡ ಮತದಾನ. ಹೀಗಾಗಿ ನಾಳಿನ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚುನಾವಣೆ ಬೆನ್ನಲ್ಲೇ ನಡೆದಿರುವ ಪ್ರಮುಖ ಬೆಳವಣಿಗೆಗಳು ಹೀಗಿವೆ…

  • ಈ ಚುನಾವಣೆಗೂ ಮುನ್ನ ಇಂದು ಮಧ್ಯಾಹ್ನ ಎರಡೂ ಪಕ್ಷಗಳ ನಾಯಕರು ತಮ್ಮ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಹ್ಮದಾಬಾದ್ ನಲ್ಲಿ ಹಾಗೂ ಅಹ್ಮದ್ ಪಟೇಲ್ ಆನಂದ ರೆಸಾರ್ಟ್ ನಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಚರ್ಚಿಸಲಿದ್ದಾರೆ.
  • ಇಂದು ಬೆಳಗ್ಗೆ 4.30ರ ಸುಮಾರಿಗೆ ಗುಜರಾತಿನ 43 ಕಾಂಗ್ರೆಸ್ ಶಾಸಕರು ಬೆಂಗಳೂರಿನಿಂದ ಅಹ್ಮದಾಬಾದಿಗೆ ಮರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಈ ಶಾಸಕರನ್ನು ಸ್ವಾಗತಿಸಿದ್ದು, ‘ನಮ್ಮ ಪಕ್ಷದ ಎಲ್ಲಾ ಶಾಸಕರು ನನ್ನ ಪರವಾಗಿ ನಿಲ್ಲುವ ವಿಶ್ವಾಸವಿದೆ’ ಎಂದಿದ್ದಾರೆ.
  • ಬಿಜೆಪಿಯ ಮೂಲಗಳ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಅಹ್ಮದ್ ಪಟೇಲ್ ಅವರ ವಿರುದ್ಧ ಅಡ್ಡ ಮತದಾನ ಮಾಡಲಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ 11 ಶಾಸಕರು ಯುಪಿಎ ಅಭ್ಯರ್ಥಿ ಮಿರಾ ಕುಮಾರ್ ಅವರ ವಿರುದ್ಧ ಅಡ್ಡಮತದಾನ ಮಾಡಿದ್ದರು, ಆ ಶಾಸಕರುಗಳು ರಾಜ್ಯಸಭೆಯಲ್ಲೂ ಅಡ್ಡ ಮತದಾನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದು ಸಹಜವಾಗಿಯೇ ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಹಾದಿಗೆ ಅಡ್ಡಿಯಾಗಲಿದೆ.
  • ಅಡ್ಡ ಮತದಾನದ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷ ತಮ್ಮ ಶಾಸಕರಿಗೆ ಎಚ್ಚರಿಕೆ ರವಾನಿಸಿದ್ದು, ಯಾವುದೇ ಶಾಸಕ ಅಹ್ಮದ್ ಪಟೇಲ್ ವಿರುದ್ಧ ಅಡ್ಡಮತದಾನ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಡ್ಡಮತದಾನ ಮಾಡುವ ನಾಯಕರ ವಿರುದ್ಧ ಕಾನೂನು ಸಮರ ಸಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುವ ಸಂದೇಶವೂ ರವಾನೆಯಾಗಿದೆ.
  • ನಾಳಿನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡುವ ಸಾಧ್ಯತೆ ಇದ್ದು, ವಿಪ್ ಜಾರಿ ಮಾಡಿದರೆ ಅದು ವಾಘೆಲಾ ಅವರಿಗೂ ಅನ್ವಯಿಸಲಿದೆ. ಜತೆಗೆ ಮುಂಜಾಗ್ರತೆಯ ದೃಷ್ಟಿಯಿಂದ ಕಾಂಗ್ರೆಸ್ ಎನ್ ಸಿಪಿ ಸೇರಿದಂತೆ ಇತರೆ ಪಕ್ಷಗಳ ಬೆಂಬಲವನ್ನು ಕೋರಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್, ನಾವು ಈ ಕುರಿತಾಗಿ ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.
  • ರಾಜ್ಯಸಭೆಯ ಮೂರು ಸ್ಥಾನಗಳ ಪೈಕಿ ಬಿಜೆಪಿ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದ್ದು, ಮೂರನೇ ಅಭ್ಯರ್ಥಿಯಾಗಿ ಬಲ್ವಂತ್ ಸಿಂಗ್ ರಜಪೂತ್ ಅವರನ್ನು ಕಣಕ್ಕಿಳಿಸಿದೆ. ಈ ಬಲ್ವಂತ್ ಸಿಂಗ್ ರಜಪೂತ್, ಇತ್ತೀಚೆಗೆ ಕಾಂಗ್ರೆಸ್ ತೊರೆದ 6 ನಾಯಕರ ಪೈಕಿ ಒಬ್ಬರು. ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ ಬಂಡಾಯದ ಬಾವುಟ ಹಾರಿಸಿದ ಶಂಕರಸಿಂನ್ಹ್ ವಾಘೆಲಾ ಅವರ ಆಪ್ತ. ವಾಘೆಲಾ ಅವರು ಇನ್ನು ಶಾಸಕರಾಗಿಯೇ ಉಳಿದಿದ್ದು, ಇವರು ಯಾರ ಪರ ಮತಹಾಕುವರು ಎಂಬ ಕುತೂಹಲ ಮೂಡಿದೆ.

Leave a Reply