ರಾಜಕೀಯ ಚಕ್ರವ್ಯೂಹಕ್ಕೆ ಸಿಕ್ಕ ಡಿಕೆಶಿ!

ಇಡೀ ರಾಜ್ಯದ ತುಂಬ ರಾಷ್ಟ್ರಮಟ್ಟದ ಸುದ್ದಿ. ಯಾವ ಮೂಲೆಯಲ್ಲೇ ನೋಡಿದರೂ ಅದೇ ಸುದ್ದಿ. ಪ್ರತಿ ಮನೆ, ಮಠ, ಪಾರ್ಕು, ಬಸ್‌ಸ್ಟಾಂಡು, ಆಟೋ ಸ್ಟಾಂಡು, ಹೊಟೇಲು, ಟೀ ಅಂಗಡಿ, ಬೀಡಿ ಅಂಗಡಿ, ಸಿಗ್ನಲ್ಲು, ಸಿನಿಮಾ ಮಂದಿರ ಇವೇ ಮೊದಲಾಗಿ ಎಲ್ಲ ಜಾಗಗಳಲ್ಲೂ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಆಪ್ತರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯದೇ ಚರ್ಚೆ, ಮಾತುಕತೆ.

ಅಲ್ಲಿ ಅಷ್ಟು ಸಿಕ್ತಂತೆ, ಇಲ್ಲಿ ಅಷ್ಟು ಸಿಕ್ತಂತೆ. ಬರೀ ಕರ್ನಾಟಕ ಅಷ್ಟೇ ಅಲ್ಲ ಬೇರೆ, ಬೇರೆ ರಾಜ್ಯ, ವಿದೇಶಗಳಲ್ಲೂ ಅಷ್ಟು ಇಟ್ಟವ್ರಂತೆ, ಇಷ್ಟು ಇಟ್ಟವ್ರಂತೆ. ಎಲ್ಲ ಪಕ್ಷದವರ ಜತೆಯೂ ವ್ಯವಹಾರವಂತೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಲೀಡರ್‌ಗಳ ಜತೆಯೂ ಬಿಜಿನೆಸ್ ಇದೆಯಂತೆ. ಸಿಂಗಪೂರ್, ದುಬೈ, ಲಂಡನ್, ಬಹ್ರೇನ್ ಎಲ್ಲ ಕಡೆ ಬೇಜಾನ್ ಆಸ್ತಿ ಮಾಡವ್ರಂತೆ. ದೇಶ ಬಿಟ್ಟು ಲಂಡನ್‌ಗೆ ಓಡಿ ಹೋಗಿರೋ ವಿಜಯ ಮಲ್ಯ ಜತೆಗೂ ಡೀಲ್ ಮಾಡಿದ್ದಾರಂತೆ. ಅವರ ಎಸ್ಟೇಟ್ ಪಕ್ಕದಲ್ಲೇ ಇವರದೂ ಎಸ್ಟೇಟ್ ಅಂತೇ- ಮಾತುಕತೆ, ಚರ್ಚೆ ಇಲ್ಲಿಗೇ ನಿಲ್ಲೋದಿಲ್ಲ.

ಡಿಕೆಶಿ ಕತೆ ಮುಗಿದೇ ಹೋದಂತೆ. ಸಿಎಂ ಆಗ್ಬೇಕು ಅಂತ ಬೇಜಾನ್ ಕನಸಿತ್ತು. ಅದಕ್ಕೆಲ್ಲ ಏನೆಲ್ಲ ಸ್ಕೆಚ್ ಹಾಕ್ತಿದ್ರು. ಆದರೆ ಸೆಂಟ್ರಲ್ ಗವರ್ನಮೆಂಟ್‌ನವರು ಮುಗಿಸಿಬಿಟ್ರು. ಸ್ಟೇಟ್ ಗವರ್ನಮೆಂಟ್‌ನವರಿಗೂ ಅದೇ ಬೇಕಾಗಿತ್ತು. ಅವರಿಗಂತೂ ಹಾಲು ಕುಡಿದಷ್ಟು ಖುಷಿ. ಪಾರಂಪರಿಕ ಶತ್ರುಗಳಾದ ದೇವೇಗೌಡರು ಮತ್ತು ಕುಮಾರಸ್ವಾಮಿ ದಿಲ್‌ಖುಷ್ ಅಂತೇ. ಈ ಡಿ.ಕೆ. ಶಿವಕುಮಾರ್ ಅವರಿಗೆ ಬುದ್ಧಿ ಬೇಡವಾ? ಹೋಗಿ, ಹೋಗಿ ಗುಜರಾತ್ ಶಾಸಕರಿಗೆ ಯಾಕಪ್ಪಾ ಆಶ್ರಯ ಕೊಡಬೇಕಿತ್ತು. ರಾಜ್ಯಸಭೆನೋ ಎಂಥದ್ದೋ ಅವರ ಎಲೆಕ್ಷನ್ ಅವರು ಮಾಡ್ಕೊತ್ತಿದ್ರು. ಬೇರೆಯವರ ಥರಾ ಸುಮ್ಮನೆ ಇವರ ಪಾಡಿಗೆ ಇವರು ಇದ್ದಿದ್ರೆ ಆಗ್ತಿರಲಿಲ್ವಾ? ಹೋಗಿ, ಹೋಗಿ ಗುಜರಾತ್‌ನಲ್ಲಿ ಎಲೆಕ್ಷನ್‌ಗೆ ನಿಂತಿರೋ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನ ಎದಿರು ಹಾಕಿಕೊಳ್ಳೋದಾ? ಮೋದಿ ಮತ್ತು ಅಮಿತ್ ಶಾ ಇಬ್ಬರೂ ಸೇರಿ ಹೆಂಗಿಟ್ಟವ್ರೆ ಗೂಟಾ? ಮುಟ್ಟಿ ನೋಡ್ಕೋಬೇಕು! ಈ ಐಟಿ ಡಿಪಾರ್ಟ್‌ಮೆಂಟ್‌ನವರು ಆರೇಳು ತಿಂಗಳಿಂದಲೂ ಡಿಕೆಶಿ ಮೇಲೆ ಕಣ್ಣಿಟ್ಟಿದ್ರು. ಅವರೊಬ್ಬರೇ ಅಲ್ಲ, ಅವರಂತೆ ಸುಮಾರು ಮಂದಿ ಸ್ಟೇಟ್ ಕಾಂಗ್ರೆಸ್ ಲೀಡರ್ಸ್ ಮೇಲೆ ನಿಗಾ ಇಟ್ಟವ್ರೆ. ಈಗ ಡಿಕೆಶಿ ಗುಜರಾತ್ ಕಾಂಗ್ರೆಸ್ ಎಂಎಲ್‌ಎಗಳಿಗೆ ಆಶ್ರಯ ಕೊಟ್ಟು, ತೊಂದ್ರೆನಾ ಮೈಮೇಲೆ ಎಳ್ಕೊಂಡ್ರು. ಅಮಿತ್ ಶಾ ಟೈಮ್ ನೋಡಿ ಡಿಕೆಶಿನಾ ಉಡಾಯಿಸಿಬಿಟ್ರು. ಅಲ್ಲಿಗೆ ಅವರ ಕತೆ ಖಲಾಸ್. ಇವರ ಥರಾ ಇನ್ನೂ ಬಹಳ ಮಂದಿಗೆ ಐತೆ ಮಾರಿಹಬ್ಬ, ಹಂಗೆ ನೋಡ್ತಾ ಇರಿ… ಚರ್ಚೆ ಮುಂದುವರಿಯುತ್ತಾ ಹೋಗುತ್ತದೆ.

ಹೇ, ಅದೆಲ್ಲ ಸುಳ್ಳು ಕಣ್ರೀ. ಮೋದಿ, ಅಮಿತ್ ಶಾ ಅವರಿಗೆ ಮಾಡೋಕೆ ಬೇರೆ ಕೆಲ್ಸ ಇಲ್ಲವಾ? ಅವರು ಯಾಕೆ ಪ್ಲಾನ್ ಮಾಡಿ, ಈ ರೈಡ್ ಮಾಡಿಸ್ತಾರೆ. ಅವರ ರಾಜಕೀಯ ವಿರೋಧಿಗಳು ಬಾಯಿಗೆ ಬಂದಂತೆ ಸುಳ್ಳು ಹೇಳ್ತಾವ್ರೆ ಅಷ್ಟೇ. ಇನ್ನೇನು ಕಾರಣ ಸಿಕ್ಕಿಲ್ಲಾ ನೋಡಿ, ಹಿಂಗಾಗಿ ಮೋದಿ, ಶಾ ಪುಕ್ಸಟ್ಟೆ ಸಿಕ್ಕವ್ರೆ ಅಂತಾ ಅವರ ಮೇಲೆ ಗೂಬೆ ಕೂರಿಸ್ತಾ ಇದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದವರಿಗೆ ಅವರದೇ ಆದ ಕರ್ತವ್ಯಗಳಿವೆ, ಜವಾಬ್ದಾರಿಗಳಿವೆ. ಅವರ ಕೆಲಸ ಅವರು ಮಾಡಿದ್ದಾರೆ. ಅಷ್ಟೇ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೂ ರೈಡ್‌ಗಳು ಆಗಿವೆ. ಜನತಾ ಪಕ್ಷದ ಸರಕಾರ ಇದ್ದಾಗಲೂ ಆಗಿದೆ. ಈಗ ಬಿಜೆಪಿ ಅವಧಿಯಲ್ಲೂ ನಡೆಯುತ್ತಿದೆ. ಹಂಗೆ ನೋಡಿದ್ರೆ ಈ ಕಾಂಗ್ರೆಸ್‌ನವರೇನು ಸಾಚಾನಾ? ಇಂದಿರಾ ಗಾಂಧಿ ಕಾಲದಿಂದ ಹಿಡಿದು ನಿನ್ನೆ ಮೊನ್ನೆ ಮನಮೋಹನ್ ಸಿಂಗ್ ಕಾಲದವರೆಗೂ ವಿರೋಧ ಪಕ್ಷದ ಅದೆಷ್ಟು ಮಂದಿ ಮನೆ, ಕಚೇರಿ ಮೇಲೆ ಐಡಿ ರೈಡ್ ಮಾಡಿಸಿಲ್ಲಾ? ಸಿಬಿಐ ದಾಳಿ ಮಾಡಿಸಿಲ್ಲ. ಸಿಬಿಐ ಅಂದ್ರೆ ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಅಂತಾನೆ ಜನ ಕರೆತಿರಲಿಲ್ವಾ? ಆ ರೀತಿ ಅದೆಷ್ಟು ಮಂದಿ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡಿಲ್ಲ? ಜನಾರ್ಧನರೆಡ್ಡಿ ಮನೆ ಮೇಲೆ ದಾಳಿ ಆಗಲಿಲ್ಲವಾ? ಅವರನ್ನ ಅರೆಸ್ಟ್‌ ಮಾಡಿ ಜೈಲಲ್ಲಿ ಇಡಲಿಲ್ಲವಾ? ಕಾಂಗ್ರೆಸ್‌ನವರು ಮಾಡಿದ್ರೆ ಪುಣ್ಯದ ಕೆಲಸ. ಬಿಜೆಪಿಯವರು ಮಾಡಿದ್ರೆ ಪಾಪದ ಕೆಲ್ಸನಾ? ಇಷ್ಟಕ್ಕೂ ಐಟಿ, ಇಡಿ ಇರೋದೇ  ಅಕ್ರಮ ಆಸ್ತಿಪಾಸ್ತಿ ಸಂಪಾದನೆ ಮಾಡಿರೋರನ್ನ ಪತ್ತೆ ಹಚ್ಚೋಕೆ. ಇದರಲ್ಲೇನಿದೆ ತಪ್ಪು? – ಹೀಗೆ ವಾದ, ಪ್ರತಿವಾದ, ವ್ಯತಿರಿಕ್ತ ಹೇಳಿಕೆಗಳೂ ಉದುರುತ್ತಾ ಹೋಗುತ್ತವೆ!

ಹಾಗಾದರೆ ಯಾವುದು ಸರಿ? ಯಾವುದು ತಪ್ಪು?

ಜನ ಬುದ್ಧಿವಂತರಿದ್ದಾರೆ. ಬೇರೆಯವರು ಅವರ ಮೇಲೆ ಅಭಿಪ್ರಾಯ ಹೇರುವ ಕಾಲ ಹೋಗಿ ಬಹಳ ದಿನವಾಯ್ತು. ಸಂದರ್ಭ, ಸನ್ನಿವೇಶ, ಕಾರಣ, ಪ್ರತಿಯೊಂದು ಬೆಳವಣಿಗೆಗಳನ್ನು ವಿಮರ್ಶೆ ಕಣ್ಣಿಂದ ನೋಡುವ, ಅಳೆದು-ತೂಗಿ ನೋಡಿ ತೀರ್ಮಾನಕ್ಕೆ ಬರುವ ಪ್ರಬುದ್ಧತೆಯನ್ನು ಅವರು ಬೆಳೆಸಿಕೊಂಡಿದ್ದಾರೆ. ಎಲ್ಲರ ಅಭಿಪ್ರಾಯವೂ ಒಂದೇ ಇರಲು ಸಾಧ್ಯವಿಲ್ಲ. ವಾದ ಇದ್ದ ಕಡೆ ಪ್ರತಿವಾದವೂ ಇರುತ್ತದೆ. ಆದರೆ ಅಕ್ರಮ ಆಸ್ತಿ ಸಂಪಾದನೆ ಮಾಡಿರುವವರು, ಅವರ ಮೇಲೆ ನಡೆದ ದಾಳಿಗಳನ್ನು ಈ ವಾದ ಮತ್ತು ಪ್ರತಿವಾದಗಳಿಂದ ತುಲನೆ ಮಾಡಿ ನೋಡಿದಾಗ ಸತ್ಯದ ಜತೆಗೆ ಸಂದರ್ಭವೂ ತಳುಕು ಹಾಕಿಕೊಳ್ಳುತ್ತದೆ. ಮೇಲಾಗಿ ಲಾಗಾಯ್ತಿನಿಂದಲೂ ರಾಜಕೀಯ ರಣತಂತ್ರ, ರಣನೀತಿ ಎಲ್ಲವನ್ನೂ ಒಳಗೊಳ್ಳುತ್ತಾ ಬಂದಿರುವಾಗ ಈ ಸನ್ನಿವೇಶ ನೋಡಿದಾಗ ಎರಡೂ ವಾದಗಳಲ್ಲೂ ಸತ್ಯದ ಅನ್ವೇಷಣೆ ಆಗುತ್ತದೆ!

ನಿಜ, ಸತತ ಮೂರು ದಿನಗಳ ಐಟಿ ದಾಳಿಗೆ ಒಳಗಾಗಿ ಹೊರಬಂದನಂತರ ಡಿ.ಕೆ. ಶಿವಕುಮಾರ್ ಒಂದು ಮಾತು ಹೇಳಿದ್ದಾರೆ. ನಾನು ಹಳ್ಳಿಯಿಂದ ಇಲ್ಲಿಗೆ ಬಂದಿರೋದು ರಾಜಕೀಯ ಮಾಡೋಕೆ ಹೊರತು ಕಿವಿ ಮೇಲೆ ಹೂವಿಟ್ಟುಕೊಳ್ಳಲು ಅಲ್ಲ ಅಂತಾ. ಅದರರ್ಥ ತಮ್ಮ ಮೇಲೆ ನಡೆದಿರುವ ದಾಳಿ ರಾಜಕೀಯ ಉದ್ದೇಶದಿಂದ ಕೂಡಿದೆ. ತಾನದನ್ನು ರಾಜಕೀಯ ಉದ್ದೇಶದಿಂದಲೇ ಸ್ವೀಕಾರ ಮಾಡುತ್ತೇನೆ ಎಂಬುದಾಗಿ. ಅವರು ಈ ಹೇಳಿಕೆ ನೀಡುವುದಕ್ಕೂ ಜಾರಿ ನಿರ್ದೇಶನಾಲಯದವರು ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದು ಕಾಕತಾಳೀಯ ಇರಬಹುದು. ಒಂದು ದಾಳಿ ನಂತರದ ಸಹಜ ಪ್ರಕ್ರಿಯೆಯೂ ಇದಾಗಿರಬಹುದು. ಆದರೆ ಸನ್ನಿವೇಶ ಮತ್ತು ಸಂದರ್ಭ ಮಾತ್ರ ಅದನ್ನು ರಾಜಕೀಯದ ಸುತ್ತಲೇ ಗಿರಕಿ ಹೊಡೆಸುತ್ತದೆ. ಇದೇನು ಹೊಸದಲ್ಲ. ಹಿಂದೆ ಇಂಥ ಹಲವು ಪ್ರಕರಣಗಳು ನಡೆದಿವೆ. ಎಲ್ಲ ಸರಕಾರಗಳೂ ಇದಕ್ಕೆ ಸಾಕ್ಷಿಯಾಗಿವೆ. ಅದಕ್ಕೆ ಶಿವಕುಮಾರ್ ಪ್ರಕರಣ ಹೊಸ ಸೇರ್ಪಡೆ ಅಷ್ಟೇ.

ಶಿವಕುಮಾರ್ ಪ್ರಕರಣ ಒಂದೇ ಸಲಕ್ಕೆ ಮುಗಿದು ಹೋಗುವ ಅಧ್ಯಾಯವಲ್ಲ. ಇದಕ್ಕೆ ಹಲವು ಆಯಾಮಗಳಿವೆ. ಹೀಗಾಗಿ ಈ ರಾಜಕೀಯ ನಾಟಕ ಮುಂದುವರಿಯುತ್ತದೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಒಂದು ಮಾತು ಹೇಳಿದ್ದಾರೆ. ಯಾವುದೇ ಆದಾಯ ತೆರಿಗೆ ಇಲಾಖೆ ದಾಳಿ ಆಗಲಿ, ಇಡಿ ವಿಚಾರಣೆ ಆಗಲಿ ಅದು ರಾಜಕೀಯ ದುರುದ್ದೇಶದಿಂದ ಕೂಡಿರಬಾರದು. ಅಕ್ರಮವಾಗಿ ಯಾರೇ ಸಂಪಾದನೆ ಮಾಡಿದ್ದರೂ ಅದನ್ನು ಪತ್ತೆ ಮಾಡುವುದು ಸಂಬಂಧಪಟ್ಟ ಇಲಾಖೆ ಜವಾಬ್ದಾರಿ. ಆದರೆ ಈ ಜವಾಬ್ದಾರಿ ನಿರ್ವಹಣೆಯಲ್ಲಿ ರಾಜಕೀಯ ಬೆರಕೆ ಆಗಬಾರದು ಅಷ್ಟೇ ಎಂಬ ಸಂತೋಷ್ ಹೆಗ್ಡೆ ಅವರ ಮಾತಲ್ಲಿ ಇಡೀ ಪ್ರಕರಣ ಯಾವುದರ ಸುತ್ತ ಸುತ್ತಿದೆ ಎಂಬುದರ ಸ್ಪಷ್ಟ ಚಿತ್ರಣವಿದೆ.

ಹೌದು, ದೇಶದ ರಾಜಕೀಯ ವ್ಯವಸ್ಥೆ ಅದೆಷ್ಟು ಹದಗೆಟ್ಟು ಹೋಗಿದೆ ಎಂದರೆ ಯಾವುದೇ ಒಂದು ಘಟನೆಯನ್ನು ಸತ್ಯದ ಪರಿಧಿಯಿಂದಾಚೆಗಿಟ್ಟು ನೋಡದೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಯಾರೊಬ್ಬರೂ ಇಲ್ಲ. ಇದಕ್ಕೆ ಯಾವುದೇ ರಾಜಕೀಯ ವ್ಯಕ್ತಿಯಾಗಲಿ, ಪಕ್ಷವಾಗಲಿ ಹೊರತಾಗಿಲ್ಲ. ಶಿವಕುಮಾರ್ ಮತ್ತವರ ಆಪ್ತರ ಅರವತ್ತಕ್ಕೂ ಹೆಚ್ಚು ಮನೆ, ಕಚೇರಿಗಳ ಮೇಲೆ ನಡೆದಿರುವ ದಾಳಿ ನೋಡಿದರೆ ಇದು ನಿನ್ನೆಮೊನ್ನೆ ತಯಾರಾಗಿರುವ ಗಾಳವಂತೂ ಅಲ್ಲವೇ ಅಲ್ಲ. ಈ ದಾಳಿ ಹಿಂದೆ ಸಾಕಷ್ಟು ತಯಾರಿ ಇದೆ. ಕನಿಷ್ಟ ಪಕ್ಷ ಆರೇಳು ತಿಂಗಳ ಕೂಲಂಕಷ ಅಧ್ಯಯನವಿದೆ. ಶಿವಕುಮಾರ್ ಸಂಬಂಧಿಗಳ ಎಲ್ಲ ಎಳೆಗಳನ್ನು ಬಿಡದೇ ಜಾಲಾಡಿರುವುದನ್ನು ನೋಡಿದರೆ ಅವರ ಸುತ್ತಮುತ್ತ ಇರುವವರಿಂದಲೇ, ಇನ್ನು ನಿಖರವಾಗಿ ಹೇಳಬೇಕೆಂದರೆ ಅವರ ಪಕ್ಷದ ಮೂಲಗಳಿಂದಲೇ ಖಚಿತ ಮಾಹಿತಿ ಕಲೆ ಹಾಕಿದ್ದಾರೆ. ಈ ಮಾಹಿತಿ ಕಲೆ ಹಾಕುವ ಕಾರ್ಯ ಕೂಡ ಸಾಕಷ್ಟು ಸಮಯ ಬೇಡುತ್ತದೆ. ಗುಜರಾತ್ ಶಾಸಕರು ಬೆಂಗಳೂರಿಗೆ ಬಂದು ಡಿಕೆಶಿ ಸಹೋದರರ ಆಶ್ರಯ ಪಡೆದ ಐದಾರು ದಿನಗಳಲ್ಲಿ ಇಷ್ಟೆಲ್ಲ ಮಾಹಿತಿ ಕಲೆ ಹಾಕಲು ಐಟಿ ಅಧಿಕಾರಿಗಳಿಗೆ ಸಾಧ್ಯವೇ ಇಲ್ಲ. ಅಂದರೆ ಅವರ ಬಳಿ ಸಾಕಷ್ಟು ಮೊದಲೇ ಮಾಹಿತಿ ಇತ್ತು ಎಂಬುದು ಇದರ ಅರ್ಥ. ಇಷ್ಟೆಲ್ಲ ಮಾಹಿತಿ ಅಷ್ಟೆಲ್ಲ ಮೊದಲು ಇದ್ದರೂ ಐಟಿ ಅಧಿಕಾರಿಗಳು ದಾಳಿ ಮಾಡದೆ ಇದ್ದುದರ ಹಿಂದಿನ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಈ ದಾಳಿಯನ್ನು ಮೊದಲೇ ಮಾಡಬಹುದಿತ್ತು. ಅವರು ಇಷ್ಟು ದಿನ ಸುಮ್ಮನೆ ಇದ್ದರು ಅಂದರೆ ಯಾವುದೋ ಅಣತಿಗೆ ಕಾಯುತ್ತಿದ್ದರು ಎಂಬ ಶಂಕೆಗೆ ಆಸ್ಪದ ಕೊಡುತ್ತದೆ ಅಲ್ಲವೇ? ಹೀಗಾಗಿ ಗುಜರಾತ್ ಶಾಸಕರಿಗೆ ಶಿವಕುಮಾರ್ ಸಹೋದರರು ನೀಡಿದ ಆಶ್ರಯಕ್ಕೂ ಈ ದಾಳಿಗೂ ಸಂಬಂಧ ಕಲ್ಪಿಸಲು ಸಾಂದರ್ಭಿಕ ಸಾಕ್ಷ್ಯಗಳು ವಿಪುಲವಾಗಿ ಸಿಗುತ್ತವೆ. ಅಮಿತ್ ಶಾ ಅವರ ಪ್ರತಿಷ್ಠೆ ಪಣವಾಗಿರುವ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ದಾಳ ಆಗಬಹುದಾಗಿರುವ ಕಾಂಗ್ರೆಸ್ ಶಾಸಕರನ್ನು ಮಿಸುಕಾಡದಂತೆ ಹಿಡಿದಿಟ್ಟಿರುವ ಶಿವಕುಮಾರ್ ಧಾರ್ಷ್ಟ್ಯ ಐಟಿ ದಾಳಿ ಹಿಂದಿನ ಶಕ್ತಿಗಳಿಗೆ ಪರೋಕ್ಷ ಸವಾಲಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಎಲ್ಲ ಪಕ್ಷಗಳು ಚುನಾವಣೆ ಯುದ್ಧ ಸನ್ನದ್ಧವಾಗಿವೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ರಣತಂತ್ರಗಳೂ ಬಳಕೆ ಆಗುತ್ತವೆ. ಈವೆರೆಗಿನ ಕಾಂಗ್ರೆಸ್ ಮತ್ತು ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಜತೆಗೆ ಕಾಂಗ್ರೆಸ್ ಅಧಿಕಾರದಲ್ಲಿರುವುದು ಮತ್ತೊಂದು ಸಕಾರಾತ್ಮಕ ಅಂಶ. ಚುನಾವಣೆ ಸಂಪನ್ಮೂಲ ಕ್ರೋಡೀಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗಿಂತಲೂ ಮುಂದೆ ಇದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಸಂದರ್ಭದಲ್ಲಿ ನೀರಿನಂತೆ ಹಣ ಖರ್ಚು ಮಾಡಿದ್ದು ಇದನ್ನು ಸಾಬೀತು ಮಾಡಿದೆ. ಹಾಗೆ ನೋಡಿದರೆ ಚುನಾವಣೆ ಎತ್ತಿಕೊಂಡು ಹೋಗುವ ಶಕ್ತಿ ಇರುವ ಕರ್ನಾಟಕ ಮಂತ್ರಿ ಮಂಡಲದ ಕೆಲವೇ ಮಂದಿಯ ಪೈಕಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ ಪ್ರಮುಖರು. ಅಂದರೆ ಆರ್ಥಿಕವಾಗಿ ಇವರೆಲ್ಲ ಅಷ್ಟು ಪ್ರಬಲರು. ಇದು ಆಡಳಿತರೂಢರಿಗೂ ಗೊತ್ತಿದೆ. ಪ್ರತಿಪಕ್ಷದವರಿಗೂ ಗೊತ್ತಿದೆ. ಇಡೀ ಭಾರತದಲ್ಲಿ ಕಾಂಗ್ರೆಸ್ಸನ್ನು ಗುಡಿಸಿ, ಗುಂಡಾಂತರ ಮಾಡಿಕೊಂಡು ಬಂದಿರುವ ಬಿಜೆಪಿಗೆ ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿದೊಡ್ಡ ರಾಜ್ಯ ಕರ್ನಾಟಕದಲ್ಲೂ ಪಾರಮ್ಯ ಮೆರೆಯಬೇಕಾದರೆ ಅದರ ಬೆನ್ನೆಲುಬು, ಪಕ್ಕೆಲುಬುಗಳನ್ನು ಮುರಿಯಲೇಬೇಕು. ಇದು ಚುನಾವಣೆ ತಂತ್ರಗಾರಿಕೆಯ ಒಂದು ಭಾಗ. ಹೀಗಾಗಿ ಈ ಪಂಚನಾಯಕರ ಹೆಡೆಮುರಿ ಕಟ್ಟಲು ಸಿದ್ಧತೆಗಳು ನಡೆದಿವೆ. ಇದನ್ನು ಅರಿತೇ ಶಿವಕುಮಾರ್ ಹೊರತುಪಡಿಸಿ ಮಿಕ್ಕೆಲ್ಲ ನಾಯಕರು ಗುಜರಾತ್ ಶಾಸಕರ ಆತಿಥ್ಯ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಒಂದೊಮ್ಮೆ ಈ ಜವಾಬ್ದಾರಿ ಹೊತ್ತರೆ ತಮ್ಮ ಮನೆಗಳ ಮೇಲೂ ದಾಳಿ ನಡೆಯಬಹುದೆಂಬ ಭೀತಿ ಅವರಿಗಿತ್ತು. ಆದರೆ ಹುಂಬತನಕ್ಕೆ ಹೆಸರಾದ ಶಿವಕುಮಾರ್ ಆತಿಥ್ಯದ ಜತೆಗೆ ತೊಂದರೆಯನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಹಾಗೆಂದು ಅವರ ಮನೆ ಮೇಲೆ ದಾಳಿಯೇ ನಡೆಯುತ್ತಿರಲಿಲ್ಲ ಎಂದೇನೂ ಅಲ್ಲ. ಈ ಹಿಂದೆಯೇ ಸಿದ್ಧತೆ ಆಗಿದ್ದರಿಂದ ಯಾವಾಗ ಬೇಕಾದರೂ ಈ ದಾಳಿ ನಡೆಯಬಹುದಿತ್ತು. ಅದೀಗ ನಡೆದಿದೆ ಅಷ್ಟೇ. ಅವರು ಸಂದರ್ಭ ತಪ್ಪಿಸಿಕೊಳ್ಳಬಹುದಿತ್ತು. ಆದರೆ ದಾಳಿ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇರಲಿಲ್ಲ.

ಮುಂದೊಂದು ದಿನ ಮುಖ್ಯಮಂತ್ರಿ ಆಗಬೇಕೆಂಬ ಮಹದಾಸೆಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದಂತೆ ಪ್ರಯತ್ನ ಪಟ್ಟು ವಿಫಲರಾಗಿದ್ದ ಶಿವಕುಮಾರ್ ಚುನಾವಣೆ ವೇಳೆಗೆ ಹೇಗಾದರೂ ಮಾಡಿ ಎದ್ದು ಬರಬೇಕೆಂಬ ಲೆಕ್ಕಾಚಾರದಲ್ಲಿದ್ದರು. ಕೇರಳ, ಛತ್ತೀಸಗಡ, ಒರಿಸ್ಸಾ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ನಿರೀಕ್ಷೆ ಮಾಡಿದ್ದೆಲ್ಲವನ್ನೂ ಪೂರೈಸಿದ್ದ ಶಿವಕುಮಾರ್ ಅವರನ್ನು ಸಿಎಂ ಸ್ಥಾನದ ಪೈಪೋಟಿಯಿಂದ ದೂರ ಇಡಬೇಕೆಂಬ ವಾಂಛೆ ಅವರದೇ ಪಕ್ಷದಲ್ಲಿ ಹಲವರಿಗಿತ್ತು. ಈಗ ಶಿವಕುಮಾರ್ ಮೇಲೆ ನಡೆದಿರುವ ದಾಳಿಯಂದ ಅತಿಹೆಚ್ಚು ಖುಷಿಪಟ್ಟಿರುವವರೆಂದರೆ ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಅದೇ ರೀತಿ ದೇವೇಗೌಡರ ಕುಟುಂಬ ಮತ್ತು ಡಿಕೆಶಿಗೂ ಎರಡು ದಶಕಗಳಿಗೂ ಮಿಗಿಲಾದ ರಾಜಕೀಯ ವೈರತ್ವವಿತ್ತು. ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಪ್ರಾಬಲ್ಯವನ್ನು ಮುರಿಯುವಲ್ಲಿ ಶಿವಕುಮಾರ್ ತಕ್ಕಮಟ್ಟಿಗೆ ಯಶಸ್ವಿಯೂ ಅಗಿದ್ದರು. ಅದೇ ಕಾಲಕ್ಕೆ ಸಿಎಂ ಆಗುವ ತಮ್ಮ ಬಯಕೆಗೆ ದೇವೇಗೌಡರ ನೆರವು ಬೇಕೇಬೇಕು ಎನ್ನುವುದನ್ನು ಅರಿತಿದ್ದ ಶಿವಕುಮಾರ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಗೌಡರ ಕಾಲಿಗೆ ಬಿದ್ದು ಸಮನ್ವಯ ಸಾಧಿಸಲು ನೋಡಿದ್ದರು. ಅದೇನು ಗೌಡರ ಮೇಲೆ ಪ್ರಭಾವ ಬೀರಿತ್ತೆಂದು ಹೇಳಲು ಬರುವುದಿಲ್ಲ. ಆದರೆ ಈಗ ನಡೆದಿರುವ ಐಟಿ ದಾಳಿ ಗೌಡರ ಕುಟುಂಬದವರಿಗೂ ಖುಷಿ ತಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಒಂದೇ ಒಂದು ದಾಳಿ ಕಾಂಗ್ರೆಸ್ ಒಳಗಿನ ಮತ್ತು ಹೊರಗಿನ ಶತ್ರುಗಳ ರಾಜಕೀಯ ಅಭೀಪ್ಸೆಯನ್ನು ತಣಿಸಿದೆ. ಶಿವಕುಮಾರ್ ಅವರನ್ನು ಒಂದಷ್ಟು ಹಿಂದಕ್ಕೆ ತಳ್ಳಿದೆ ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ.

ಲಗೋರಿ: ಕಾಲಚಕ್ರದ ಮುಂದೆ ಹುಂಬತನವೂ ಮಂಡಿಯೂರಬೇಕು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply