ಕಾನೂನಿನ ಹೋರಾಟದಲ್ಲಿ ಬಿಸಿಸಿಐ ಮಣಿಸಿದ ಶ್ರೀಶಾಂತ್, ನಿಷೇಧದ ಬಗ್ಗೆ ಕೇರಳ ಹೈಕೋರ್ಟ್ ಕೊಟ್ಟ ತೀರ್ಪು ಏನು?

ಡಿಜಿಟಲ್ ಕನ್ನಡ ಟೀಮ್:

‘ಶ್ರೀಶಾಂತ್ ಅವರ ಮೇಲೆ ಹೇರಲಾಗಿರುವ ಜೀವಮಾನ ನಿಷೇಧದ ಶಿಕ್ಷೆಯನ್ನು ಹಿಂಪಡೆಯಿರಿ’ ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೇರಳ ಹೈಕೋರ್ಟ್ ನೀಡಿರುವ ಸೂಚನೆ. ಇದರೊಂದಿಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಜೀವಮಾನ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದ ಟೀಂ ಇಂಡಿಯಾ ಮಾಜಿ ವೇಗಿ ಶ್ರೀಶಾಂತ್, ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಮೇಲುಗೈ ಸಾಧಿಸಿದ್ದಾರೆ.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಶ್ರೀಶಾಂತ್ ಸೇರಿದಂತೆ ಇತರರ ಮೇಲೆ ಜೀವಮಾನ ನಿಷೇಧದ ಶಿಕ್ಷೆ ವಿಧಿಸಿತ್ತು. ಆದರೆ 2015ರ ಜುಲೈನಲ್ಲಿ ಪಟಿಯಾಲಾ ಹೌಸ್ ನ್ಯಾಯಾಲಯವು ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಂಡಿಲಾ ಸೇರಿದಂತೆ 36 ಆರೋಪಿಗಳನ್ನು ಈ ಪ್ರಕರಣದಿಂದ ಮುಕ್ತಗೊಳಿಸಿತ್ತು. ಆದರೂ ಸಹ ಬಿಸಿಸಿಐ ಶ್ರೀಶಾಂತ್ ಹಾಗೂ ಇತರೆ ಆಟಗಾರರ ಮೇಲಿನ ಜೀವಮಾನ ನಿಷೇಧದ ಶಿಕ್ಷೆಯನ್ನು ಮುಂದುವರಿಸಿತ್ತು. ಬಿಸಿಸಿಐನ ಈ ನಡೆಯನ್ನು ಪ್ರಶ್ನಿಸಿ ನಂತರ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶ್ರೀಶಾಂತ್ ಪರ ತೀರ್ಪು ಕೊಟ್ಟಿದೆ.

ಶ್ರೀಶಾಂತ್ ಅವರ ಅರ್ಜಿಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದ ಬಿಸಿಸಿಐ, ‘ಜಿಲ್ಲಾ ನ್ಯಾಯಾಲಯವು ಅರ್ಜಿದಾರನನ್ನು ಆರೋಪ ಮುಕ್ತ ಎಂದು ತೀರ್ಪು ನೀಡಿರಬಹುದು ಆದರೆ, ಆ ತೀರ್ಪು ಬಿಸಿಸಿಐನ ಆಂತರಿಕ ಶಿಸ್ತು ಸಮಿತಿಯ ನಿರ್ಧಾರದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ಹೀಗಾಗಿ ಬಿಸಿಸಿಐ ಅರ್ಜಿದಾರನ ಮೇಲಿನ ನಿಷೇಧದ ಶಿಕ್ಷೆ ಮುಂದುವರಿಸಲಿದೆ’ ಎಂದು ಉತ್ತರಿಸಿತ್ತು.

Leave a Reply