ಹಫೀಜ್ ಸೈಯದ್ ನಿಂದ ಹೊಸ ಪಕ್ಷ ಸ್ಥಾಪನೆ, ಭವಿಷ್ಯದಲ್ಲಿ ‘ಇಸ್ಲಾಮಿಕ್ ಸ್ಟೇಟ್’ ಆಗಲಿದೆಯಾ ಪಾಕಿಸ್ತಾನ?

ಡಿಜಿಟಲ್ ಕನ್ನಡ ಟೀಮ್:

ಮುಂಬೈ ದಾಳಿಯ ರೂವಾರಿ ಹಾಗೂ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸೈಯದ್ ಗೃಹ ಬಂಧನದಲ್ಲಿದ್ದರೂ ಅವರ ಹೊಸ ರಾಜಕೀಯ ಪಕ್ಷ ‘ಮಿಲ್ಲಿ ಮುಸ್ಲಿಂ ಲೀಗ್’ ಘೋಷಣೆಯಾಗಿದೆ. ಪಾಕಿಸ್ತಾನವನ್ನು ಪೂರ್ಣ ಪ್ರಮಾಣದ ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಹಫೀಜ್ ಸೈಯದ್ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಒಂದು ರೀತಿಯಲ್ಲಿ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಗೆ ರಾಜಕೀಯ ರೂಪ ನೀಡುವ ಪ್ರಯತ್ನ ಎಂದೂ ಸಹ ಪರಿಗಣಿಸಲಾಗುತ್ತಿದೆ.

ಸದ್ಯ ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಹಫೀಜ್ ಸೈಯದ್ ನನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಮೊನ್ನೆಯಷ್ಟೇ ಈತನ ಗೃಹ ಬಂಧನದ ಅವಧಿ ವಿಸ್ತರಿಸಲಾಗಿತ್ತು. ಇದರ ಬೆನ್ನಲ್ಲೇ ಹಫೀಜ್ ಆಪ್ತ ಸೈಫುಲ್ಲಾ ಖಲೀದ್ ಇಸ್ಲಾಮಾಬಾದಿನಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಈ ಪಕ್ಷ ಅಧಿಕೃತವಾಗಿ ಉದ್ಘಾಟನೆಯಾಗಲಿದ್ದು, 2018ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಫೀಜ್ ಈ ಪಕ್ಷ ಸ್ಥಾಪನೆ ಮಾಡುತ್ತಿದ್ದಾರೆ.

ಪಕ್ಷದ ಘೋಷಣೆ ಮಾಡುತ್ತಾ ಮಾತನಾಡಿರುವ ಖಲೀದ್, ‘ಸದ್ಯದಲ್ಲೇ ನಾವು ಚುನಾವಣಾ ಆಯೋಗಕ್ಕೆ ನೋಂದಣಿ ಅರ್ಜಿ ಸಲ್ಲಿಸಲಿದ್ದು, ಪಾಕಿಸ್ತಾನವನ್ನು ನಿಜವಾದ ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಶ್ರಮಿಸಲಿದೆ’ ಎಂದಿದ್ದಾರೆ. ಅಲ್ಲದೆ ಕಳೆದ ಎಂಟು ತಿಂಗಳಿನಿಂದ ಗೃಹ ಬಂಧನದಲ್ಲಿರುವ ಹಫೀಜ್ ಸೈಯದ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಫೀಜ್ ಸೈಯದ್ ಪಕ್ಷ ಸ್ಥಾಪನೆ ವಿಷಯವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಪ್ರತಿಕ್ರಿಯೆ ನೀಡಿರುವುದು ಹೀಗೆ… ‘ನೂರಾರು ಮುಗ್ಧ ಜನರ ರಕ್ತದ ಕಲೆಯನ್ನು ಕೈಗೆ ಮೆತ್ತಿಕೊಂಡಿರುವ ವ್ಯಕ್ತಿ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣೆ ಶಾಹಿಯಿಂದ ಆ ರಕ್ತದ ಕಲೆ ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾನೆ. ಜನರ ಪ್ರಾಣ ತೆಗೆಯಲು ಮದ್ದುಗುಂಡುಗಳ ವ್ಯಾಪಾರ ನಡೆಸುವ ವ್ಯಕ್ತಿ ತನ್ನ ಅಕ್ರಮಗಳನ್ನು ಮರೆಮಾಚಲು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.’

Leave a Reply