ಇಷ್ಟಕ್ಕೂ ಅಮಿತ್ ಶಾ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡುತ್ತಿರುವುದೇತಕ್ಕೇ..?

ಡಿಜಿಟಲ್ ಕನ್ನಡ ವಿಶೇಷ:

ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಟ್ಟಿದ್ದ ಸಂದರ್ಭದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಆಪ್ತರ ಮನೆ, ಕಚೇರಿಗಳ ಮೇಲೆ ನಡೆದಿರುವ ತೆರಿಗೆ ಇಲಾಖೆ ದಾಳಿಗೂ ಶಿವಕುಮಾರ್ ಪ್ರತಿನಿಧಿಸುವ ಒಕ್ಕಲಿಗ ಸಮುದಾಯ ಪ್ರಾತಿನಿಧ್ಯದ ಆದಿಚುಂಚನಗಿರಿ ಮಠಕ್ಕೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವುದಕ್ಕೂ ಏನಾದರೂ ಸಂಬಂಧ ಇದೆಯೇ..?

ಖಂಡಿತಾ ಇದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಟ್ಟ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ, ಕಚೇರಿಗಳ ಮೇಲೆ ನಡೆದ ಐಟಿ ದಾಳಿಗೆ ಅಮಿತ್ ಶಾ ತಂತ್ರವೇ ಕಾರಣ ಎಂಬ ರಾಜಕೀಯ ಪಡಸಾಲೆ ಮಾತಿನ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯ ಓಲೈಕೆ ಉದ್ದೇಶದಿಂದ ಅಮಿತ್ ಶಾ ಅದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅರ್ಥೈಸಲಾಗುತ್ತಿದೆ.

ಪ್ರಸ್ತುತ ಕರ್ನಾಟಕ ರಾಜಕಾರಣದಲ್ಲಿ ದೇವೇಗೌಡ, ಎಸ್.ಎಂ. ಕೃಷ್ಣ, ಕುಮಾರಸ್ವಾಮಿ ನಂತರ ಡಿ.ಕೆ. ಶಿವಕುಮಾರ್ ಕೂಡ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದಲ್ಲೂ ಅವರ ಹಿಡಿತವಿದೆ. ಭವಿಷ್ಯದ ಸಿಎಂ ಅಭ್ಯರ್ಥಿ ಎಂದೂ ಬಿಂಬಿತರಾಗಿದ್ದವರು. ಹೀಗಿರುವಾಗ ಶಿವಕುಮಾರ್ ಮೇಲೆ ನಡೆದಿರುವ ಐಟಿ ದಾಳಿ ಜತೆಗೆ ಅಮಿತ್ ಶಾ ತಂತ್ರಗಾರಿಕೆ ಥಳಕು ಹಾಕಿಕೊಂಡಿರುವುದು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿಗೆ ಪರೋಕ್ಷ ಮುಜುಗರ ತಂದಿದೆ. ಡಿಕೆಶಿ ಮನೆ ಮೇಲೆ ನಡೆದ ದಾಳಿಯನ್ನು ರಾಜ್ಯ ಬಿಜೆಪಿ ಮುಖಂಡರು ಪ್ರಬಲವಾಗಿ ಸಮರ್ಥಿಸಿಕೊಂಡಿಯೂ ಇಲ್ಲ, ಶಿವಕುಮಾರ್ ಅವರನ್ನು ಕಟುವಾಗಿ ಟೀಕೆ ಮಾಡುವ ಗೋಜಿಗೂ ಹೋಗಿಲ್ಲ. ಚುನಾವಣೆಯಲ್ಲಿ ಒಕ್ಕಲಿಗ ಮತಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕ ಅವರನ್ನು ಮೌನವಾಗಿರಿಸಿದೆ.

ಡಿಕೆಶಿ ಮೇಲೆ ನಡೆದಿರುವ ಐಟಿ ದಾಳಿ ಹಿನ್ನೆಲೆಯಲ್ಲಿ ಅನಾಹುತ ನಿಯಂತ್ರಣ ತಂತ್ರದ ಅಂಗವಾಗಿ ಇದೇ 12 ರಿಂದ 14 ಕ್ಕೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಅಮಿತ್ ಶಾ ಅವರು 13 ರಂದು ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡುತ್ತಿದ್ದಾರೆ.

ಈ ಮೊದಲಿನ ಕಾರ್ಯಕ್ರಮ ಪಟ್ಟಿ ಪ್ರಕಾರ ಅಮಿತ್ ಶಾ ಅವರು ರಾಜ್ಯದ ಪ್ರಮುಖ ಮಠಗಳಿಗೆ ಭೇಟಿ ನೀಡುವುದಿತ್ತು. ಇದರಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಎರಡು ಲಿಂಗಾಯತ ಮಠಗಳು ಸೇರಿದ್ದವು. ಆದರೆ ವೀರಶೈವ ಪ್ರತ್ಯೇಕ ಧರ್ಮ ಮಾಡಲು ಸಿದ್ದರಾಮಯ್ಯ ಸರಕಾರ ಹೊರಟಿರುವ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಸಮುದಾಯ ವಿಂಗಡಣೆ ಆಗಿದೆ. ಕೆಲವು ಮಠಗಳು ಪರವಾಗಿದ್ದರೆ, ಇನ್ನೂ ಕೆಲವು ಮಠಗಳು ವಿರುದ್ಧವಾಗಿವೆ. ಹೀಗಾಗಿ ಯಾವ ಮಠಕ್ಕೆ ಭೇಟಿ ಕೊಟ್ಟರೆ ಯಾರು ಮುನಿಯುತ್ತಾರೋ ಎಂಬ ಭೀತಿಗೆ ಬಿದ್ದು ಲಿಂಗಾಯತ ಮಠಗಳ ಭೇಟಿ ಕಾರ್ಯಕ್ರಮವನ್ನು ಶಾ ರದ್ದು ಮಾಡಿದ್ದಾರೆ. ಆದಿಚುಂಚನಗಿರಿ ಮಠ ಹಾಗೂ ಬೆಂಗಳೂರು ಹೊರವಲಯದ ರವಿಶಂಕರ್ ಗುರೂಜಿ ಆಶ್ರಮಕ್ಕೆ ಮಾತ್ರ ಭೇಟಿ ಕೊಡುತ್ತಿದ್ದಾರೆ. ಒಂದು ಮಠಕ್ಕೆ ಹೋಗುವುದು ಮತ್ತೊಂದು ಮಠ ಬಿಡುವುದು ತಾರತಮ್ಯಕ್ಕೆ ಆಸ್ಪದ ಆಗುತ್ತದೆ ಎಂಬ ಚಿಂತನೆಯೂ ಸುಳಿದಿತ್ತು. ಆದರೆ ಡಿಕೆಶಿ ಮೇಲೆ ನಡೆದಿರುವ ದಾಳಿ ಒಕ್ಕಲಿಗಕ ಸಮುದಾಯದಲ್ಲಿ ಮೂಡಿಸಿರಬಹುದಾದ ಮುನಿಸು ಶಮನದ ಹಿನ್ನೆಲೆಯಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಸಮೀಕರಣ ಮಾಡಿ ಆದಿ ಚುಂಚನಗಿರಿ ಮಠದ ಭೇಟಿಯನ್ನು ಶಾ ಹಾಗೆ ಉಳಿಸಿಕೊಂಡಿದ್ದಾರೆ.

Leave a Reply