ಎರಡು ರೀತಿಯ ₹ 500 ನೋಟಿನ ಹಿಂದಿದೆಯೇ ಹಗರಣ? ಸಂಸತ್ತಿನಲ್ಲಿ ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

ನೋಟು ಅಮಾನ್ಯ ನಿರ್ಧಾರ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಸಾಕಷ್ಟು ಬಾರಿ ಆರೋಪ ಮಾಡುತ್ತಲೇ ಬಂದಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ವಾದ ಮಂಡಿಸಿದೆ. ಅದೇನೆಂದರೆ, ‘ನೋಟು ಅಮಾನ್ಯ ನಿರ್ಧಾರದ ನಂತರ ಆರ್ ಬಿಐ ಎರಡು ರೀತಿಯ ₹ 500 ಮತ್ತು 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಿದ್ದು, ಒಂದು ಮಾದರಿಯ ನೋಟು ತಮ್ಮ ಪಕ್ಷಕ್ಕಾಗಿ ಮತ್ತೊಂದು ಮಾದರಿ ಸಾರ್ವಜನಿಕರಿಗಾಗಿ ಮುದ್ರಿಸಲಾಗಿದೆ’ ಎಂಬ ಗಂಭೀರ ಆರೋಪ ಮಾಡಿದೆ.

ಮಂಗಳವಾರ ಈ ವಿಚಾರವಾಗಿ ಆರಂಭವಾದ ಗದ್ದಲ ರಾಜ್ಯಸಭೆಯ ಕಲಾಪವನ್ನು ನಾಳೆಗೆ ಮುಂದೂಡುವಂತೆ ಮಾಡಿತು. ಈ ಕುರಿತು ವಾದ ಮಂಡಿಸಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದಿಷ್ಟು…

‘ಕೇಂದ್ರ ಸರ್ಕಾರ ನೋಟು ಅಮಾನ್ಯ ನಿರ್ಧಾರವನ್ನು ಏಕೆ ತೆಗೆದುಕೊಂಡಿದು ಎಂಬ ಕಾರಣವನ್ನು ಈಗ ಪತ್ತೆ ಹಚ್ಚಿದ್ದೇವೆ. ನೋಟು ಅಮಾನ್ಯದ ನಂತರ ಆರ್ ಬಿಐ ಎರಡು ಮಾದರಿಯ ನೋಟುಗಳನ್ನು ಮುದ್ರಿಸಿದ್ದು, ಎರಡು ಮಾದರಿಯೂ ಬೇರೆ ಬೇರೆ ಗಾತ್ರದಲ್ಲಿವೆ. ಇದು ಹೇಗೆ ಸಾಧ್ಯ? ದೇಶದ ಇತಿಹಾಸದಲ್ಲಿ ಈವರೆಗೂ ತಮ್ಮ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಬೇರೆ ಬೇರೆ ನೋಟುಗಳನ್ನು ಮುದ್ರಿಸಿಕೊಂಡಿಲ್ಲ. ನೋಟು ಅಮಾನ್ಯದ ನಂತರ ₹ 500 ಮತ್ತು ₹ 2000 ಮುಖಬೆಲೆಯ ನೋಟುಗಳನ್ನು ಎರಡು ಮಾದರಿಯಲ್ಲಿ ಮುದ್ರಿಸಲಾಗಿದೆ. ಇದರ ಹಿಂದೆ ದೊಡ್ಡ ಹಗರಣವೇ ನಡೆದಿದೆ.’

ಕಾಂಗ್ರೆಸ್ ಪಕ್ಷದ ಈ ಆರೋಪವನ್ನು ನಿರಾಕರಿಸಿದ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ‘ಇದೊಂದು ಬೇಜವಾಬ್ದಾರಿಯ ಹೇಳಿಕೆ’ ಎಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ ಇಂತಹ ಬೇಜವಾಬ್ದಾರಿ ಹೇಳಿಕೆಯ ನೀಡಬಾರದು. ಸಂಸತ್ತಿನ ಶೂನ್ಯ ವೇಳೆಯ ಸಮಯವನ್ನು ವಿನಾಕಾರಣ ವ್ಯರ್ಥ ಮಾಡಲಾಗುತ್ತಿದೆ’ ಎಂದರು.

ಈ ವೇಳೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್, ‘ಈ ನೋಟುಗಳನ್ನು ನೋಡಿದರೆ ಅನುಮಾನ ಬರುತ್ತಿದೆ. ಸಿಬಲ್ ಅವರು ಪ್ರಸ್ತಾಪಿಸಿರುವ ವಿಷಯ ಗಂಭೀರವಾದುದ್ದು’ ಎಂದು ಹೇಳಿದರು. ಜೆಡಿಯು ನಾಯಕ ಶರದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಸಹ ಕಾಂಗ್ರೆಸ್ ಪಕ್ಷಕ್ಕೆ ಧ್ವನಿಗೂಡಿಸಿದರು.

ನಂತರ ಮತ್ತೆ ಮಾತನಾಡಿದ ಜೇಟ್ಲಿ, ‘ಈ ನೋಟುಗಳ ನಿಖರತೆಯನ್ನು ಪರೀಕ್ಷಿಸಲಾಗುವುದು, ದೊಡ್ಡ ಪ್ರಮಾಣದಲ್ಲಿ ಮುದ್ರಣ ಮಾಡುವ ಸಂದರ್ಭದಲ್ಲಿ ನೋಟುಗಳ ಗಾತ್ರದಲ್ಲಿ ವ್ಯತ್ಯಾಸವಾಗಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂಬ ಭರವಸೆ ನೀಡಿದರು.

ಇನ್ನು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ‘ಸರ್ಕಾರವು ಎರಡು ಮಾದರಿಯ ನೋಟುಗಳ ಮುದ್ರಣಕ್ಕೆ ಸೂಚನೆ ನೀಡಿರಲಿಲ್ಲ ಹಾಗೂ ಮುದ್ರಣದ ವೇಳೆ ನೋಟಿನ ಗಾತ್ರ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಕಾರಣ ಈ ನೋಟುಗಳನ್ನು ವಿಭಿನ್ನ ಮುದ್ರಣ ಕೇಂದ್ರಗಳಲ್ಲಿ ಮುದ್ರಿಸುವುದರಿಂದ ಈ ವ್ಯತ್ಯಾಸವಾಗಿರಬಹುದು. ಹಾಗೆಂದ ಮಾತ್ರಕ್ಕೆ ಎರಡು ಮಾದರಿಯ ನೋಟುಗಳಿವೆ ಎಂದು ಹೇಳಲು ಸಾಧ್ಯವಿಲ್ಲ.’

2 COMMENTS

  1. SARKARA DAKSHATE VAHISABEKITTALLAVE! RBI GOVERNER YENU TILISUTTARO YARIGE GOTU! Yastadahu intha nade sarakaravannu samshaya dristiyinda noduvantaguttadallave! TACHU TAPPADANTE CHANAKSHATANA TORABEKITTENISUTTADE!!

Leave a Reply