ರಾಜ್ಯಸಭೆ ಚುನಾವಣೆಯಲ್ಲಿ ಅಮಿತ್ ಶಾಗೆ ಮುಖಭಂಗ, ಪ್ರತಿಷ್ಠೆಯ ಸಮರದಲ್ಲಿ ಗೆದ್ದ ಅಹ್ಮದ್ ಪಟೇಲ್

ಡಿಜಿಟಲ್ ಕನ್ನಡ ಟೀಮ್:

ಕಳೆದ ಹದಿನೈದು ದಿನಗಳಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಎಲ್ಲ ರೀತಿಯ ನಾಟಕೀಯ ಬೆಳವಣಿಗೆಯೊಂದಿಗೆ ಅಂತ್ಯಕಂಡಿದೆ.  ಬಿಜೆಪಿ ಅಧ್ಯಕ್ಷ ಅಮಿತ್  ಶಾ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾದರೂ ಅಹ್ಮದ್ ಪಟೇಲ್ ಹಾಗೂ ಸೋನಿಯಾ ಗಾಂಧಿ ವಿರುದ್ಧದ ಪ್ರತಿಷ್ಠೆಯ ಸಮರದಲ್ಲಿ ಸೋಲನುಭವಿಸಿದ್ದಾರೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಸ್ಮೃತಿ ಇರಾನಿ ಹಾಗೂ ಅಮಿತ್ ಶಾ ನಿರೀಕ್ಷೆಯಂತೆ ರಾಜ್ಯಸಭೆಗೆ ಆಯ್ಕೆಯಾದರು. ಆದರೆ ಪ್ರತಿಷ್ಠೆಯ ಸಮರಕ್ಕೆ ವೇದಿಕೆಯಾದ ಮೂರನೇ ಸ್ಥಾನಕ್ಕೆ ಆಯ್ಕೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್. ಗುಜರಾತ್ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇರುವಾಗ ಈ ಸೋಲು ಬಿಜೆಪಿಗೆ ಭಾರಿ ಮುಖಭಂಗ ಉಂಟು ಮಾಡಿದೆ. ಕಾರಣ, ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಪ್ರಧಾನಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇದೇ ರಾಜ್ಯದವರಾಗಿದ್ದರೂ ರಾಜಕೀಯವಾಗಿ ಪ್ರಯೋಗಿಸಬಹುದಾದ ಎಲ್ಲ ಅಸ್ತ್ರಗಳನ್ನು ಬಳಸಿದ ನಂತರವೂ ಸೋಲನುಭವಿಸಿರುವುದು ಬಿಜೆಪಿಗೆ ಹಿನ್ನಡೆಯುಂಟಾಗಿರುವುದು ಪಕ್ಷದ ಘನತೆಗೆ ಪೆಟ್ಟುಬಿದ್ದಂತಾಗಿದೆ. ಇನ್ನು ಕಾಂಗ್ರೆಸ್ ಪಕ್ಷದ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿದೆ.

ಈ ರಾಜ್ಯಸಭಾ ಸ್ಥಾನದ ಚುನಾವಣೆ  ಹಿಂದೆಂದೂ ಕಾಣದಂತಹ ಕೆಲವು ರಾಜಕೀಯ ತಂತ್ರ ಪ್ರತಿತಂತ್ರಕ್ಕೆ ಸಾಕ್ಷಿಯಾಯಿತು. ತಮ್ಮ ಶಾಸಕರ ಅಡ್ಡಮತದಾನದಿಂದ ಕಂಗೆಟ್ಟ ಕಾಂಗ್ರೆಸ್ ಸೋಲಿನ ಭೀತಿಯಿಂದ ಮತದಾನ ಏಣಿಕೆ ಆರಂಭವಾಗುವ ಒಂದು ಗಂಟೆ ಮುಂಚೆ ಚುನಾವಣೆ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು.  ಕಾಂಗ್ರೆಸ್ ಬಂಡಾಯ ಶಾಸಕ ರಾಘವ್ ಜಿ ಪಟೇಲ್ ಹಾಗೂ ಭಾಲೋಬಾಯ್ ಬೋಗಿಲ್ ಅವರು ತಮ್ಮ ಮತವನ್ನು ಅಮಿತ್ ಶಾ ಅವರಿಗೆ ತೋರಿಸುವ ಮೂಲಕ ಚುನಾವಣ ನೀತಿಯ 39ನೇ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ದೂರಿತು. ಆಮೂಲಕ ಕಾಂಗ್ರೆಸ್ ಸೋಲಿನಿಂದ ಪಾರಾಗಲು ತನ್ನ ಮುಂದಿದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡಿತ್ತು.

ಆರಂಭದಲ್ಲಿ ಮತದಾನದ ವೇಳೆ ಎನ್ಸಿಪಿ ಹಾಗೂ ಜೆಡಿಯುನ ಓರ್ವ ಶಾಸಕ ಅಡ್ಡಮತದಾನದ ಮೂಲಕ ಬಿಜೆಪಿಗೆ ಮತ ಚಲಾಯಿಸಿದರು ಎಂಬ ಸುದ್ದಿ ಹೊರಬಿದ್ದಿತ್ತು. ಇದು ಸಹಜವಾಗಿಯೇ ಕಾಂಗ್ರೆಸ್ ಪಾಳೆಯದಲ್ಲಿ ಆತಂಕ ಮೂಡಿಸಿತ್ತು. ಆದರೆ ಕಹಾನಿ ಮೆ ಟ್ವಿಸ್ಟ್ ಎಂಬಂತೆ ಬಿಜೆಪಿ ಶಾಸಕ ನಳಿನ್ ಕೊಟದಿಯಾ ತಾವು ಸಹ ಅಡ್ಡಮತದಾನ ಮಾಡಿದ್ದು ಅಹ್ಮದ್ ಪಟೇಲರಿಗೆ ಮತ ಚಲಾಯಿಸಿರುವುದಾಗಿ ಘೋಷಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು.

ಮತದಾನ ಮುಗಿದು ಏಣಿಕೆ ಆರಂಭವಾಗುವ ಸ್ವಲ್ಪ ಸಮಯಕ್ಕೆ ಮುಂಚೆ ಅಂದರೆ, ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಈ ರಾಜಕೀಯ ನಾಟಕ ಹಲವು ತಿರುವುಗಳನ್ನು ಪಡೆದು ಬೆಳಗಿನ ಜಾವದವರೆಗೂ ಮುಂದುವರಿಯಿತು. ಒಮ್ಮೆ ಕಾಂಗ್ರೆಸ್ ನಾಯಕರ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರ ನಿಯೋಗ ಚುನಾವಣೆ ಆಯೋಗಕ್ಕೆ ದೂರು ನೀಡಿತು. ಹೀಗೆ ಎರಡೂ ಬಣಗಳು ಮೂರು ಬಾರಿ ಆಯೋಗದ ಪೆರೇಡ್ ನಡೆಸಿದ ನಂತರ ಎರಡೂ ಪಕ್ಷಗಳ ನಾಯಕರು ಫಲಿತಾಂಶ ಬರುವವರೆಗೂ ಚುನಾವಣಾ ಆಯೋಗ ಕಚೇರಿಯಲ್ಲೇ ಠಿಕಾಣಿ ಹೂಡಿದ್ದರು.

ನಿಯಮಗಳನ್ನು ಕೂಲಂಕುಶವಾಗಿ ಪರಾಮರ್ಶಿಸಿದ ಚುನಾವಣ ಆಯೋಗ ಅಂತಿಮವಾಗಿ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ಅಸಿಂಧುಗೊಳಿಸಿತು. ಇದರಿಂದ ಅಹ್ಮದ್ ಪಟೇಲರ ಗೆಲವು ಸುಲಭವಾಯಿತು. ಕಾಂಗ್ರೆಸ್ ಪ್ರತಿಷ್ಠಿತ ಸಮರದಲ್ಲಿ ಜಯಿಸಿತು.

ಈ ಚುನಾವಣೆಯಲ್ಲಿ ಮೊದಲ ಎರಡು ಸ್ಥಾನಗಳಿಗೆ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿರೀಕ್ಷೆಯಂತೆ ಆಯ್ಕೆಯಾದರು. ಆದರೆ ಮೂರನೇ ಸ್ಥಾನದ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಬಿಜೆಪಿ ಅಭ್ಯರ್ಥಿ ಬಲ್ವಂತ್ ಸಿಂಗ್ ರಜಪೂತ್ ಹಾಗೂ ಅಹ್ಮದ್ ಪಟೇಲ್ ನಡುವೆ ಸ್ಪರ್ಧೆ ಏರ್ಪಟ್ಟಿತು. ಅಂತಿಮವಾಗಿ ಜಯದ ಮಾಲೆ ಅಹ್ಮದ್ ಪಟೇಲ್ ಅವರ ಕೊರಳಿಗೆ ಬೀಳುವ ಮೂಲಕ ಅಮಿತ್ ಶಾ ತಲೆತಗ್ಗಿಸುವಂತಾಯಿತು.

ಪಕ್ಷದ ಮುಖಭಂಗಕ್ಕೆ ಕಾರಣರಾದ್ರಾ ಅಮಿತ್ ಶಾ?

ತಮ್ಮ ಪಕ್ಷದ ಸಂಖ್ಯಾಬಲದಿಂದ ಮೂರು ಸ್ಥಾನಗಳ ಪೈಕಿ ಬಿಜೆಪಿಗೆ ಎರಡರಲ್ಲಿ ಗೆಲವು ಸಾಧಿಸುವುದು ಸಾಧ್ಯವಿತ್ತು. ಆದರೆ ಮೂರನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಮಿತ್ ಶಾ ಈ ಚುನಾವಣೆಯನ್ನು ಪ್ರತಿಷ್ಠೆಯ ಸಮರವನ್ನಾಗಿ ಪರಿವರ್ತಿಸಿದ್ದರು. ಒಂದೇ ಏಟಿಗೆ ಕಾಂಗ್ರೆಸ್ ನ ಇಬ್ಬರು ಘಟಾನುಘಟಿ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಸೋನಿಯಾ ಗಾಂಧಿ ಅವರನ್ನು ಮಣಿಸುವುದು ಶಾ ತಂತ್ರವಾಗಿತ್ತು. ಅಂತಿಮವಾಗಿ ಗೆಲುವು ಕಾಂಗ್ರೆಸ್ ಪಾಲಾಗಿದ್ದು, ಈ ಸೋಲು ಅಮಿತ್ ಶಾ ಅವರಿಗೆ ದುಬಾರಿಯಾಗಿದೆ.

ಈ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠದಲ್ಲಿ ಅಮಿತ್ ಶಾ ಬಳಸಿದ ಅಸ್ತ್ರಗಳು ಒಂದೆರಡಲ್ಲ. ಆಪರೇಷನ್ ಕಮಲದ ಮೂಲಕ ಗುಜರಾತ್ ವಿಧಾನಸಭೆಯ ಸಂಖ್ಯಾಬಲ ಕುಸಿಯುವಂತೆ ಮಾಡಿದ್ದರು. ಜತೆಗೆ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ ಕರ್ನಾಟಕ ಇಂಧನ ಸಚಿವರಾದ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿದ್ದು (ರಾಜಕೀಯ ವಲಯದಲ್ಲಿನ ಮಾತುಗಳು), ನಂತರ ಕಾಂಗ್ರೆಸ್ ಶಾಸಕರ ಜತೆಗೆ ಎನ್ ಸಿಪಿ ಹಾಗೂ ಜೆಡಿಯು ನಾಯಕರಿಂದ ಅಡ್ಡಮತದಾನ ಮಾಡಿಸಿದ್ದು, ಅಮಿತ್ ಶಾ ತಂತ್ರಗಳಲ್ಲಿ ಸೇರಿದ್ದವು.

ಒಂದು ರಾಜ್ಯಸಭಾ ಸ್ಥಾನಕ್ಕೆ ಇಷ್ಟು ಜಿದ್ದಾಜಿದ್ದಿ ಯಾಕೆ?

ರಾಜ್ಯ ಸಭೆಯ ಒಂದು ಸ್ಥಾನಕ್ಕೆ ಇಷ್ಟೇಲ್ಲಾ ರಾಜಕೀಯ ತಂತ್ರ ಪ್ರತಿತಂತ್ರಗಳ ಅಗತ್ಯವಿತ್ತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಇದು ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಕೇವಲ ಒಂದು ಸ್ಥಾನ ಮಾತ್ರವಾಗಿರಲಿಲ್ಲ. ಬದಲಿಗೆ ಇದು ಅಮಿತ್ ಶಾ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮತ್ತು ಸೋನಿಯಾ ಗಾಂಧಿ ನಡುವಣ ಪ್ರತಿಷ್ಠೆಯ ಕಣವಾಗಿತ್ತು. ಹಾಗಾದರೆ ಒಂದು ರಾಜ್ಯಸಭಾ ಸ್ಥಾನವನ್ನು ಅಮಿತ್ ಶಾ ಪ್ರತಿಷ್ಠೆಯ ಸಮರದ ವೇದಿಕೆಯನ್ನಾಗಿ ಮಾಡಿದ್ದಾದರೂ ಏಕೆ? ಎಂಬ ಪ್ರಶ್ನೆ ಕಾಡುವುದು ಸಹಜ. ಈ ಸಮರದ ಹಿಂದೆ ಅಮಿತ್ ಶಾ ಅವರಲ್ಲಿ ಹಲವು ರಾಜಕೀಯ ಲೆಕ್ಕಾಚಾರಗಳಿದ್ದವು.

ಈ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಸೋತರೆ ಅದು ಸೋನಿಯಾ ಗಾಂಧಿ ಅವರ ಪರಾಭವ ಎಂದೇ ಪರಿಗಣಿಸಲಾಗಿತ್ತು. ಅಹ್ಮದ್ ಪಟೇಲ್ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿಯೂ ಉನ್ನತ ಸ್ಥಾನದಲ್ಲಿರುವ ನಾಯಕ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಉಪಾಧ್ಯಕ್ಷರಾಗಿದ್ದರೂ ಸೋನಿಯಾ ಗಾಂಧಿ ನಂತರದ ಸ್ಥಾನದಲ್ಲಿ ಅವರು ಗುರುತಿಸಿಕೊಂಡಿದ್ದರು. 2001 ರಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಅವರ ಎಲ್ಲ ರಾಜಕೀಯ ವ್ಯವಹಾರಗಳ ಜವಾಬ್ದಾರಿ ಹೊತ್ತಿದ್ದರು. ಒಂದು ರೀತಿಯಲ್ಲಿ ಸೋನಿಯಾ ಗಾಂಧಿ ಅವರಿಗೆ ಬಲಗೈ ಆಗಿದ್ದರು.

ಕೇವಲ ಸೋನಿಯಾ ಗಾಂಧಿ ಅವರಿಗೆ ಮಾತ್ರವಲ್ಲದೇ, ಇಡೀ ಪಕ್ಷಕ್ಕೆ ಅಹ್ಮದ್ ಪಟೇಲ್ ಸೇವೆ ಗುರುತರವಾಗಿತ್ತು. 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಅವರ ಕೈಚಳಕ ಪ್ರಮುಖವಾಗಿತ್ತು. ಚುನಾವಣೆ ಹಾಗೂ ರಾಜಕೀಯ ತಂತ್ರಗಾರಿಗೆ ಎಣೆಯುವಲ್ಲಿ ಅಹ್ಮದ್ ಪಟೇಲರು ಸೋನಿಯಾ ಗಾಂಧಿ ಅವರಿಗೆ ಶಕ್ತಿಯಾಗಿದ್ದರು. ಸೋನಿಯಾ ಗಾಂಧಿ ಅವರ ರಾಜಕೀಯದಲ್ಲಿ ಅಹ್ಮದ್ ಪಟೇಲ್ ಅವರ ಪಾತ್ರ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿಯ ನಡುವೆ ಸಂಪರ್ಕ ಸೇತುವೆಯಾಗಿ ಅವರು ಕೆಲಸ ಮಾಡಿದ್ದರು.

ಇಷ್ಟರ ಮಟ್ಟಿಗೆ ಪ್ರಭಾವಿಯಾಗಿರುವ ಅಹ್ಮದ್ ಪಟೇಲ್ ರಾಜ್ಯ ಸಭೆ ಚುನಾವಣೆಯಲ್ಲಿ ಸೋತರೆ ಅದು ಕಾಂಗ್ರೆಸ್ ಪಕ್ಷದ ಜತೆಗೆ ಸೋನಿಯಾ ಗಾಂಧಿ ಅವರ ಪ್ರತಿಷ್ಠೆ ಮಣ್ಣಾಗುತ್ತಾದೆ ಎಂಬುದು ಅಮಿತ್ ಶಾ ಲೆಕ್ಕಾಚಾರವಾಗಿತ್ತು. ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಈ ಸಂದರ್ಭದಲ್ಲಿ ಇಬ್ಬರಿಗೂ ಪೆಟ್ಟು ನೀಡಿದರೆ, ದೇಶದಲ್ಲಿ ಕಾಂಗ್ರೆಸ್ ಬುಡ ಮತ್ತಷ್ಟು ಸಡಿಲವಾಗಲಿದೆ ಎಂಬುದು ಅಮಿತ್ ಶಾರ ಲೆಕ್ಕಾಚಾರವಾಗಿತ್ತು. ಆದರೆ ಅಂತಿಮವಾಗಿ ಅವರ ತಂತ್ರವೇ ಅವರಿಗೆ ತಿರುಮಂತ್ರವಾಗಿದೆ.

1 COMMENT

Leave a Reply