‘ಆರು ತಿಂಗಳಲ್ಲಿ ಕನ್ನಡ ಕಲಿಯಿರಿ ಇಲ್ಲ ಕೆಲಸ ಕಳೆದುಕೊಳ್ಳಿ…’ ಬ್ಯಾಂಕು ನೌಕರರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ

ಡಿಜಿಟಲ್ ಕನ್ನಡ ಟೀಮ್:

‘ಮುಂದಿನ ಆರು ತಿಂಗಳಲ್ಲಿ ಕನ್ನಡವನ್ನು ಕಲಿಯಿರಿ, ಇಲ್ಲವಾದರೆ ನಿಮ್ಮ ಕೆಲಸ ಕಳೆದುಕೊಳ್ಳಲು ಸಿದ್ಧರಾಗಿ…’ ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದ ಎಲ್ಲಾ ಬ್ಯಾಂಕಿನ ನೌಕರರಿಗೆ ನೀಡಿರುವ ಎಚ್ಚರಿಕೆ.

ಸದ್ಯ ರಾಜ್ಯದಲ್ಲಿ ಹಿಂದಿ ಹೇರಿಕೆಯ ವಿರುದ್ಧ ‘ಹಿಂದಿ ಬೇಡ’ ಎಂಬ ಪ್ರತಿಭಟನೆಯ ಮೂಲಕ ಸಂಘಟಿತ ಹೋರಾಟ ವ್ಯಕ್ತವಾಗುತ್ತಿದೆ. ಕಳೆದ ತಿಂಗಳಷ್ಟೇ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳ ವಿರುದ್ಧದ ಪ್ರತಿಭಟನೆ ನಡೆಸಿದ್ದ ಕನ್ನಡಪರ ಸಂಘಟನೆಗಳು ಈಗ ಬ್ಯಾಂಕುಗಳಲ್ಲಿ ಬಲವಂತವಾಗಿ ಹಿಂದಿ ಹೇರಿಕೆಯ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಇಂದು ಮೈಸೂರು ಬ್ಯಾಂಕ್ ವೃತ್ತದ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಬ್ಯಾಂಕು ನೌಕರರು ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ಹೆಚ್ಚಾಗಿ ಬಳಸುತ್ತಿರುವುದು ಹಾಗೂ ಇದರಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕುರಿತಾದ ದೂರನ್ನು ಪರಿಗಣಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭಾಷೆ ಕಲಿಯುವ ಬಗ್ಗೆ ಎಲ್ಲಾ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ ಹಲವು ಬಾರಿ ನೋಟೀಸ್ ರವಾನಿಸಿದೆ ಎಂದು ದ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್.ಜಿ ಸಿದ್ದರಾಮಯ್ಯ ಹೇಳಿರುವುದಿಷ್ಟು… ‘ಎಲ್ಲಾ ಬ್ಯಾಂಕಿನ ನೌಕರರಿಗೆ ಕನ್ನಡ ಕಲಿಯಲು ಆರು ತಿಂಗಳ ಕಾಲಾವಕಾಶ ನೀಡಿದ್ದೇವೆ. ಈ ಬಗ್ಗೆ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ ನೋಟೀಸ್ ರವಾನಿಸಲಾಗಿದ್ದು, ತಮ್ಮ ನೌಕರರಿಗೆ ಕನ್ನಡ ಕಲಿಯುವಂತೆ ಸೂಚನೆ ನೀಡಲು ತಿಳಿಸಿದ್ದೇವೆ.

ಪ್ರಾಧಿಕಾರ ಪದೇ ಪದೇ ಈ ವಿಷಯವಾಗಿ ನೋಟೀಸ್ ನೀಡಿದ್ದರೂ ಯಾವುದೇ ಬ್ಯಾಂಕುಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯದಲ್ಲಿನ ಬಹುತೇಕರಿಗೆ ಕನ್ನಡ ಭಾಷೆ ಮಾತ್ರ ಗೊತ್ತಿದೆ. ಅಂತಹವರ ಬಗ್ಗೆ ನಾವು ಯೋಚಿಸಬೇಕಿದೆ. ಬ್ಯಾಂಕುಗಳು ಸ್ಥಳೀಯ ಭಾಷೆಗೆ ಸೂಕ್ತ ಗೌರವ ನೀಡುತ್ತಿಲ್ಲ. ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಪ್ರತಿ ಬ್ಯಾಂಕುಗಳು ತಮ್ಮ ಸಿಬ್ಬಂದಿ ತಕ್ಷಣವೇ ಕನ್ನಡ ಕಲಿಯುವಂತೆ ಮಾಡಬೇಕು  ಹಾಗೂ ತಮ್ಮ ಬ್ಯಾಂಕಿನಲ್ಲೇ ಅವರಿಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡಬೇಕು.

ಸದ್ಯ ಕೆಲವು ಬ್ಯಾಂಕುಗಳು ತಮ್ಮ ಚಲನ್ ಅನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಮುದ್ರಿಸುತ್ತಿವೆ. ಗ್ರಾಹಕರು ತಮ್ಮ ಚಲನ್ ಅನ್ನು ಕನ್ನಡದಲ್ಲಿ ಪಡೆಯುವ ಸೌಲಭ್ಯವನ್ನು ಬ್ಯಾಂಕುಗಳು ಕಲ್ಪಿಸಬೇಕು. ಜತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದ ಪ್ರಕಾರ ಎಲ್ಲಾ ಬ್ಯಾಂಕುಗಳು ತ್ರಿಭಾಷಾ ಸೂತ್ರ ಪಾಲಿಸಲೇಬೇಕು. ಆ ಮೂಲಕ ಎಲ್ಲ ಬ್ಯಾಂಕುಗಳು ತಮ್ಮ ಜಾಹೀರಾತಿನಿಂದ ಹಿಡಿದು, ವಾರ್ಷಿಕ ವರದಿಯವರೆಗೂ ಎಲ್ಲದರಲ್ಲೂ ಕನ್ನಡ ಬಳಕೆ ಮಾಡಲೇಬೇಕು. ಅದರಲ್ಲೂ ಗ್ರಾಮೀಣ ಬ್ಯಾಂಕುಗಳು ಹಳ್ಳಿಗರಿಗೆ ಸೇವೆ ನೀಡುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಈ ನಿಯಮವನ್ನು ಪಾಲಿಸಲೇಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿನ ಶಾಖೆಗಳಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಅವರಿಗೆ ಕನ್ನಡ ತಿಳಿದಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಕನ್ನಡ ಗೊತ್ತಿಲ್ಲದಿದ್ದರೆ, ಈ ಭಾಷೆಯನ್ನು ಕಲಿಯುವಂತೆ ಮಾಡಬೇಕು. ಒಂದು ವೇಳೆ ಕಲಿಯದಿದ್ದರೆ, ಅವರನ್ನು ಆ ಕೆಲಸದಿಂದ ಕೈಬಿಡಬೇಕು. ಈ ನಿಯಮವನ್ನು ಎಲ್ಲ ಬ್ಯಾಂಕುಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.’

Leave a Reply