ಕ್ವಿಟ್ ಇಂಡಿಯಾ ಚಳುವಳಿ 75ನೇ ವಾರ್ಷಿಕೋತ್ಸವ: ಸಂಸತ್ತಿನಲ್ಲಿ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿ ಆರಂಭವಾಗಿ ಇಂದಿಗೆ 75 ವರ್ಷಗಳು ತುಂಬಿವೆ. ಈ ವಿಶೇಷ ದಿನದ ಅಂಗವಾಗಿ ಸಂಸತ್ತಿನಲ್ಲಿ ಈ ಚಳುವಳಿಯ ಮಹತ್ವ ಹಾಗೂ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಸ್ಮರಿಸಲಾಯಿತು.

ಬುಧವಾರ ಸಂಸತ್ತಿನಲ್ಲಿ ಈ ವಿಷಯವಾಗಿ ಅನೇಕ ನಾಯಕರು ತಮ್ಮ ಭಾಷಣ ಮಂಡಿಸಿದ್ದು, ಆ ಪೈಕಿ ಪ್ರಮುಖವಾಗಿ ಗಮನ ಸೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸೋನಿಯಾ ಗಾಂಧಿ ಅವರ ಭಾಷಣ. ಸ್ವಾತಂತ್ರಕ್ಕಾಗಿ ಇಡೀ ದೇಶದ ಜನರು ಹೇಗೆ ಒಗ್ಗಟ್ಟಾಗಿ ಶ್ರಮಿಸಿದರೋ ಅದೇ ರೀತಿ ಈಗ ದೇಶದ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಆದರೆ ಸೋನಿಯಾ ಗಾಂಧಿ ಅವರು ಕಾಂಗ್ರೆಸಿಗರ ಕೊಡುಗೆಯನ್ನು ವಿವರಿಸುತ್ತಲೇ ಹೆಸರು ಪ್ರಸ್ತಾಪಿಸದೇ ಬಿಜೆಪಿಯ ವಿರುದ್ಧ ಟೀಕೆ ಮಾಡಿದರು. ಈ ವೇಳೆ ಉಭಯ ನಾಯಕರ ಮಾತುಗಳ ಪ್ರಮುಖ ಅಂಶಗಳು ಹೀಗಿದ್ದವು…

ನರೇಂದ್ರ ಮೋದಿ: ‘ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿ 75 ವರ್ಷ ತುಂಬಿರುವ ಹೊತ್ತಿನಲ್ಲಿ ಈ ಚಳುವಳಿಯಲ್ಲಿ ಭಾಗವಹಿಸಿದ ದೇಶದ ಮಹಾನ್ ಪುರುಷ ಹಾಗೂ ಮಹಿಳೆಯರಿಗೆ ನಾವೆಲ್ಲರೂ ನಮಿಸೋಣ. ಮಹಾತ್ಮ ಗಾಂಧಿ ಅವರ ನಾಯಕತ್ವದಲ್ಲಿ ಇಡೀ ದೇಶವೇ ಒಂದಾಗಿತ್ತು. 1942ರಲ್ಲಿ ನಮ್ಮ ದೇಶ ಬ್ರಿಟೀಷರ ನಿಯಂತ್ರಣದಿಂದ ಸ್ವಾತಂತ್ರ್ಯ ಪಡೆಯಬೇಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ನಾವು ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿಯತೆ, ಕೋಮುಗಲಭೆಗಳಿಂದ ಮುಕ್ತಿ ಪಡೆಯಬೇಕಿದೆ. ಆ ಮೂಲಕ 2022ರ ವೇಳೆಗೆ ನವಭಾರತದ ನಮ್ಮ ಕನಸನ್ನು ನನಸಾಗಿಸಬೇಕಿದೆ.

1942 ರಿಂದ 1947ರವರೆಗೂ ಹೇಗೆ ಇಡೀ ದೇಶವೇ ಒಗ್ಗಟ್ಟಾಗಿ ದೇಶಕ್ಕಾಗಿ ಶ್ರಮಿಸಿತ್ತೋ ಅದೇ ರೀತಿ 2017ರಿಂದ 2022ರವರೆಗೂ ನಾವು ಒಟ್ಟಾಗಿ ದೇಶಕ್ಕಾಗಿ ದುಡಿಯಬೇಕಿದೆ. ಆಗ ‘ಮಾಡು ಇಲ್ಲವೇ ಮಡಿ…’ ಎಂಬ ಧ್ಯೇಯವನ್ನು ಅಳವಡಿಸಿಕೊಳ್ಳಲಾಗಿತ್ತು. ಈಗ ‘ಮಾಡುತ್ತೇವೆ ಹಾಗೂ ಮಾಡುತ್ತಲೇ ಇರುತ್ತೇವೆ…’ ಎಂಬ ಗುರಿಯನ್ನು ಹೊಂದಬೇಕು.’

ಸೋನಿಯಾ ಗಾಂಧಿ: ‘ಸ್ವಾತಂತ್ರ್ಯ ಸಂಗ್ರಾಮದ ವೇಳೆ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಅನೇಕ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈ ಚಳುವಳಿಯಲ್ಲಿ ಭಾಗವಹಿಸಿದ್ದ ಅನೇಕ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಿದ್ದವು. ಆದರೆ ಯಾರೊಬ್ಬರು ಈ ಹೋರಾಟದಿಂದ ತಮ್ಮ ಹೆಜ್ಜೆಯನ್ನು ಹಿಂಪಡೆಯಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಪಾತ್ರ ಅಪಾರ.

ಆದರೆ ಈ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಕೆಲವು ಸಂಘ ಸಂಸ್ಥೆಗಳು ವಿರೋಧಿಸಿದ್ದವು ಎಂಬುದನ್ನು ನಾವು ಮರೆಯಬಾರದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆ ಸಂಘ ಸಂಸ್ಥೆಗಳ ಪಾತ್ರ ಶೂನ್ಯ.’ ಹೀಗೆ 1942ರಲ್ಲಿ ಮಹಾತ್ಮ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದ್ದಾಗ ಇದನ್ನು ವಿರೋಧಿಸಿದ್ದ ಸಾರ್ವಕರ್ ಅವರ ಉದಾಹರಣೆಯನ್ನು ತಮ್ಮ ಮಾತುಗಳಲ್ಲಿ ಸೇರಿಸುತ್ತಲೇ ಸೋನಿಯಾ ಗಾಂಧಿಯವರು ಬಿಜೆಪಿ ವಿರುದ್ಧ ಹರಿಹಾಯ್ದರು.

2 COMMENTS

Leave a Reply