‘ದೋಕಲಂ ನಿಮಗೆ ಮಾತ್ರ ಸೇರಿದ್ದಲ್ಲ’ ಎನ್ನುತ್ತಲೇ ಚೀನಾಗೆ ಭೂತಾನ್ ರವಾನಿಸಿರುವ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಕಳೆದ ಒಂದೂವರೆ ತಿಂಗಳಿನಿಂದ ತಿಕ್ಕಾಟ ನಡೆಯುತ್ತಿದೆ. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ನೆರೆಯ ಭೂತಾನ್ ಸಹ ಚೀನಾದ ನಿಲುವನ್ನು ಪ್ರಶ್ನಿಸಿದೆ.

ಕಳೆದ 45 ದಿನಗಳಿಂದಲೂ ದೋಕಲಂ ಗಡಿ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಭಾರತ, ಭೂತಾನ್ ಹಾಗೂ ಚೀನಾ ದೇಶಗಳ ಗಡಿ ಕೂಡುವ ಈ ಪ್ರದೇಶ ಯಾರಿಗೆ ಸೇರಿದ್ದು, ಯಾರಿಗೆ ಈ ಪ್ರದೇಶದ ಮೇಲೆ ಅಧಿಕಾರ ಇದೆ ಎಂಬ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಚೀನಾ ವಿದೇಶಾಂಗ ಸಚಿವಾಲಯ ‘ದೋಕಲಂ ಪ್ರದೇಶ ಭೂತಾನ್ ಗೆ ಸೇರಿದ್ದಲ್ಲ. ಅದು ಚೀನಾದ ಪ್ರದೇಶ’ ಎಂಬ ಹೇಳಿಕೆಯನ್ನು ನೀಡಿತ್ತು. ಚೀನಾದ ಈ ಹೇಳಿಕೆಯನ್ನು ಭೂತಾನ್ ಟೀಕಿಸಿದ್ದು, ‘ದೋಕಲಂ ಪ್ರದೇಶ ಕೇವಲ ಚೀನಾಗೆ ಮಾತ್ರ ಸೇರಿದ್ದಲ್ಲ. ಈ ಪ್ರದೇಶದ ಮೇಲೆ ಭೂತಾನಿಗೂ ಅಧಿಕಾರವಿದೆ’ ಎಂದು ಪ್ರತಿ ದಾಳಿ ಮಾಡಿದೆ.

ದೋಕಲಂ ಗಡಿಯಲ್ಲಿ ನಮಗೆ ಸೇರಿದ್ದು ಎಂದು ಹೇಳುತ್ತಿರುವ ಚೀನಾ, ಈ ಪ್ರದೇಶದಿಂದ ಭಾರತ ತನ್ನ ಸೇನೆಯನ್ನು ಹಿಂಪಡೆಯಬೇಕು ಎಂದು ಹೇಳುತ್ತಿದೆ. ಚೀನಾ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುತ್ತಿರುವುದಕ್ಕೆ ಭೂತಾನ್ ಸಹ ಚೀನಾ ವಿರುದ್ಧ ತಿರುಗಿ ಬಿದ್ದಿದೆ. ಚೀನಾದ ಈ ಧೋರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭೂತಾನ್ ಸರ್ಕಾರದ ಅಧಿಕಾರಿ ಹೇಳಿರುವುದಿಷ್ಟು…

‘ದೋಕಲಂ ಗಡಿ ವಿವಾದದ ವಿಚಾರವಾಗಿ ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಈ ಹಿಂದೆ ಜೂನ್ 29ರಂದು ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ ಚೀನಾ ದೋಕಲಂ ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಚೀನಾವು ಭೂತಾನ್ ಗಡಿ ಪ್ರದೇಶದೊಳಗೆ ಈ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಇದು ಉಭಯ ದೇಶಗಳ ನಡುವೆ ಈ ಹಿಂದೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಉಲ್ಲಂಘನೆಯಾಗಿದೆ. ಭಾರತ ಹಾಗೂ ಚೀನಾ ಗಡಿಯಲ್ಲಿ ಶಾಂತಿ ನೆಲಸುವ ದೃಷ್ಠಿಯಿಂದ 1988 ಹಾಗೂ 1998ರಲ್ಲಿ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ದೋಕಲಂ ಪ್ರದೇಶದಲ್ಲಿ ಚೀನಾದ ಏಕಪಕ್ಷೀಯ ನಿರ್ಧಾರಗಳು ಈ ಒಪ್ಪಂದಗಳ ಉಲ್ಲಂಘನೆಯಾಗಿವೆ. ಅಷ್ಟೇ ಅಲ್ಲದೆ ಎರಡೂ ದೇಶಗಳು ಗಡಿಯಲ್ಲಿ ಯತಾಸ್ಥಿತಿ ಕಾಪಾಡಿಕೊಳ್ಳುವುದಾಗಿ 1959ರಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೀಗಾಗಿ ಈ ಗಡಿ ಪ್ರದೇಶದಲ್ಲಿ ಚೀನಾದ ತನ್ನ ಇಚ್ಛೆಗೆ ಬಂದಂತೆ ಅಧಿಕಾರ ಸಾಧಿಸುವುದು ಸರಿಯಲ್ಲ. ಹೀಗಾಗಿ ಚೀನಾ ಜೂನ್ 16, 2017 ಕ್ಕೂ ಮುನ್ನ ಹೇಗೆ ಗಡಿಯಲ್ಲಿ ಯತಾಸ್ಥಿತಿಯನ್ನು ಪಾಲಿಸಿತ್ತೋ ಅದೇ ರೀತಿ ಮುಂದಿನ ದಿನಗಳಲ್ಲೂ ನಡೆದುಕೊಳ್ಳಬೇಕು.’

Leave a Reply