ಅಮಿತ್ ಶಾಗೆ ಅಪಮಾನ ತಂದ ಅಪನಂಬಿಕೆ!

ಡಿಜಿಟಲ್ ಕನ್ನಡ ವಿಶೇಷ:

ಅನುಮಾನ, ರಾಜಕೀಯ ತಂತ್ರಗಾರಿಕೆ ಕುರಿತ ಅತಿಯಾದ ಆತ್ಮವಿಶ್ವಾಸ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಚುನಾವಣೆ ಪ್ರಕ್ರಿಯೆ ಪರಿಜ್ಞಾನದ ಕೊರತೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಪರಾಭವಕ್ಕೆ ಕಾರಣವಾಗುವುದರ ಜತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಣಾಕ್ಷ್ಯತನವನ್ನು ಹರಾಜು ಹಾಕಿದೆ.

ಅಡ್ಡಮತದಾನ ಮಾಡಿದ ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದ ಏಜೆಂಟರಿಗೆ ಮತಪತ್ರ ತೋರಿಸುವ ಬದಲು ಬಿಜೆಪಿ ನಾಯಕ ಅಮಿತ್ ಶಾ ಅವರಿಗೆ ತೋರಿಸಿದ್ದು ಬಿಜೆಪಿ ಗೆಲುವಿಗೆ ಮುಳುವಾಯಿತು. ಚುನಾವಣೆ ಆಯೋಗ ಆ ಮತಗಳನ್ನು ರದ್ದು ಪಡಿಸಲು ಕಾರಣವಾಯಿತು.

ಒಂದೊಮ್ಮೆ ಆ ಇಬ್ಬರು ಶಾಸಕರು ಕಾಂಗ್ರೆಸ್ ಏಜೆಂಟರಿಗೆ ತೋರಿಸಿ ಅಡ್ಡಮತದಾನ ಮಾಡಿದ್ದರೆ ಹೆಚ್ಚೆಂದರೆ ಅವರನ್ನು ಪಕ್ಷದಿಂದ ಅಮಾನತ್ತು ಅಥವಾ ಉಚ್ಛಾಟನೆ ಮಾಡಬಹುದಿತ್ತು. ಚುನಾವಣೆ ಆಯೋಗ ಮೂಗು ತೂರಿಸಲು ಆಸ್ಪದವಾಗುತ್ತಿರಲಿಲ್ಲ, ಆಯೋಗ ಮಧ್ಯಪ್ರವೇಶಕ್ಕೆ ಆಸ್ಪದವಾಗದಿದ್ದರೆ ಆ ಎರಡು ಮತಗಳು ಅಸಿಂಧುವೂ ಆಗುತ್ತಿರಲಿಲ್ಲ. ಆಗ ಬಿಜೆಪಿ ಮೂರನೇ ಅಭ್ಯರ್ಥಿ ಆರಾಮವಾಗಿ ಗೆಲ್ಲುತ್ತಿದ್ದರು. ಕಾಂಗ್ರೆಸ್ಸಿನ ಅಹ್ಮದ್ ಪಟೇಲ್ ಸೋಲುತ್ತಿದ್ದರು. ಅಮಿತ್ ಶಾ ಗೌರವ, ಘನತೆಯೂ ಉಳಿಯುತ್ತಿತ್ತು. ಆದರೆ ಬಿಜೆಪಿಯ ಅತಿಯಾದ ಆತ್ಮವಿಶ್ವಾಸ ಸೋಲನ್ನು ಅವರ ಮನೆಬಾಗಿಲಿಗೆ ಎಳೆತಂದು ಮರ್ಯಾದೆ ಮಣ್ಣುಪಾಲು ಮಾಡಿದೆ.

ಆದರೆ ಈ ಇಬ್ಬರು ಶಾಸಕರು ಕಾಂಗ್ರೆಸ್ ಏಜೆಂಟರ ಬದಲು ಬಿಜೆಪಿ ಏಜೆಂಟರಿಗೆ ತೋರಿಸಿದ್ದು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಆಗಲು ಕಾರಣವಾಯಿತು. ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಚುನಾವಣೆ ಆಯೋಗ ಇವರ ಮತಗಳನ್ನು ರದ್ದು ಮಾಡಲು ಅವಕಾಶವಾಯಿತು.

ಕರ್ನಾಟಕದಲ್ಲಿ ಈ ಹಿಂದೆ ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಏಳು ಮಂದಿ ಶಾಸಕರು ಅಡ್ಡಮತದಾನ ಮಾಡಿದ್ದರು. ಆದರೆ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೂ ಮತಪತ್ರವನ್ನು ಜೆಡಿಎಸ್ ಚುನಾವಣೆ ಏಜೆಂಟರಾಗಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ತೋರಿಸಿದ್ದರು. ಹೀಗಾಗಿ ಅವರು ಯಾರಿಗೆ ಮತ ಚಲಾಯಿಸಿದರು ಎಂಬುದು ಸ್ಪಷ್ಟವಾಗಿತ್ತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಪಕ್ಷದ ನಾಯಕರಿಗಷ್ಟೇ ಸೀಮಿತವಾಗಿತ್ತು. ಇಲ್ಲಿ ಚುನಾವಣೆ ಆಯೋಗ ಮೂಗು ತೂರಿಸಲು ಅವಕಾಶವಾಗಲಿಲ್ಲ. ಆದರೆ ಗುಜರಾತ್ ನಲ್ಲಿ ಚುನಾವಣೆ ಪ್ರಕ್ರಿಯೆ ನಿಯಮಗಳನ್ನು ಅರಿಯದೇ ಹೋದದ್ದು ಅದರ ಗೆಲುವಿಗೆ ಮುಳುವಾಯಿತು.

ಇಲ್ಲಿ ಮುಗ್ಗರಿಸಿ ಬಿದ್ದಿರುವುದು ಚುನಾವಣೆ ತಂತ್ರಗಾರಿಕೆಗಿಂತ ಮಿಗಿಲಾಗಿ ಬಿಜೆಪಿ ನಾಯಕರಿಗೆ ಅಡ್ಡಮತದಾನ ಮಾಡಲು ಒಪ್ಪಿಕೊಂಡಿದ್ದ ಕಾಂಗ್ರೆಸ್  ಶಾಸಕರ ಬಗ್ಗೆ ಅಪನಂಬಿಕೆಯಿಂದ. ತಮ್ಮೊಡನೆ ಒಡಂಬಡಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಶಾಸಕರು ಬಿಜೆಪಿ ಮೂರನೇ ಅಭ್ಯರ್ಥಿಗೆ ಮತ ಹಾಕುತ್ತಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಬಿಜೆಪಿ ಏಜೆಂಟರಿಗೆ ಮತಪತ್ರ ತೋರಿಸುವಂತೆ ಕೊಟ್ಟಿದ್ದ ಸೂಚನೆ ಆಯೋಗ ಮಧ್ಯಪ್ರವೇಶಿಸಿ ಆ ಮತಗಳನ್ನು ಅಸಿಂಧುಗೊಳಿಸಲು ಕಾರಣವಾಯಿತು. ಅಪನಂಬಿಕೆ ಬಿಜೆಪಿ ಗೆಲುವನ್ನು ಆಪೋಶನ ತೆಗೆದುಕೊಂಡು, ಪ್ರತಿಷ್ಠೆ ಸಮರದಲ್ಲಿ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಗೆಲುವಿನ ನಗೆ ಬೀರಲು ಕಾರಣವಾಯಿತು.

1 COMMENT

Leave a Reply