ಎಐಎಡಿಎಂಕೆ ಬಣಗಳು ಒಂದಾಗುತ್ತಿರುವ ಹೊತ್ತಲ್ಲಿ ಪನ್ನೀರ್ ಸೆಲ್ವಂ ಪಾಳಯದ ಬೇಡಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡು ರಾಜಕೀಯ ಮತ್ತೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಎಐಎಡಿಎಂಕೆ ಪಕ್ಷದ ಒಡಕು ಸರಿಹೋಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು, ಉಭಯ ಬಣಗಳು ಈಗ ಒಂದಾಗುವತ್ತ ಗಮನ ಹರಿಸುತ್ತಿವೆ. ರಾಜಿಯ ಹೊತ್ತಲ್ಲಿ ಪನ್ನೀರ್ ಸೆಲ್ವಂ ಬಣ ಒಂದು ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದೆ. ಅದೇನೆಂದರೆ, ಪಕ್ಷದಿಂದ ದಿನಕರನ್ ಹಾಗೂ ಶಶಿಕಲಾ ಅವರನ್ನು ಉಚ್ಛಾಟಿಸಬೇಕು ಎಂದು.

ಶಶಿಕಲಾ ಅವರು ಟಿಟಿವಿ ದಿನಕರನ್ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದನ್ನು ಈ ಬಣ ತೀವ್ರವಾಗಿ ವಿರೋಧಿಸುತ್ತಿದೆ. ಪಕ್ಷದ 27 ಪ್ರಮುಖ ನಾಯಕರು ದಿನಕರನ್ ನೇಮಕವನ್ನು ವಿರೋಧಿಸುವ ನಿರ್ಣಯಕ್ಕೆ ಸಹಿ ಹಾಕಿದ್ದು, ‘ಪಕ್ಷದ ಆಂತರಿಕ ನಿಯಮವನ್ನು ಉಲ್ಲಂಘಿಸಿ ದಿನಕರನ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಜಯಲಲಿತಾ ಅವರು ಸತ್ತ ನಂತರ ಪಕ್ಷದಲ್ಲಿನ ರಾಜಕೀಯ ಬೆಳವಣಿಗೆಗಳು ತಿಂಗಳುಗಳ ಕಾಲ ರಾಷ್ಟ್ರಮಟ್ಟದ ಗಮನ ಸೆಳೆದಿದ್ದವು. ಈಗ ಎರಡು ಬಣಗಳು ಮತ್ತೆ ಒಂದಾಗುವ ಕುರಿತು ಚರ್ಚಿಸಲು ಗುರುವಾರ ಸಭೆ ಸೇರಿದ್ದು, ಪಕ್ಷದಲ್ಲಿನ ಒಡಕನ್ನು ಸರಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಪಕ್ಷದ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಎಡಪಡ್ಡಿ ಪಳನಿಸಾಮಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಬಗ್ಗೆ ಚರ್ಚೆಯಾಗುತ್ತಿವೆ. ಮತ್ತೊಂದೆಡೆಯಿಂದ ಪನ್ನೀರ್ ಸೆಲ್ವಂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಪನ್ನೀರ್ ಸೆಲ್ವಂ ಪಾಳಯದಿಂದ ಇಬ್ಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.

ಎಐಎಡಿಎಂಕೆ ಬಣಗಳು ಮತ್ತೆ ಒಂದಾಗುತ್ತಿರುವ ಹೊತ್ತಿನಲ್ಲಿ ಶಶಿಕಲಾ ಹಾಗೂ ದಿನಕರನ್ ಕಥೆ ಏನಾಗಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply