ರಾಜ್ಯದಲ್ಲೂ ಆರಂಭವಾಯ್ತು ವಿದ್ಯಾ ವೀರತ್ವ ಅಭಿಯಾನ

ಡಿಜಿಟಲ್ ಕನ್ನಡ ಟೀಮ್:

ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ನಮಿಸುವುದು ಹಾಗೂ ಮುಂದಿನ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬಿತ್ತುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ವಿದ್ಯಾ ವೀರತ್ವ ಅಭಿಯಾನವನ್ನು ಬುಧವಾರ ರಾಜ್ಯಪಾಲರಾದ ವಜುಭಾಯ್ ವಾಲ್ ಉದ್ಘಾಟಿಸಿದರು.

ರಾಜ್ಯದ ವಿವಿಧ ವಿಶ್ವ ವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ಉಪಕುಲಪತಿಗಳು ಹಾಗೂ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಆಗಮಸಿದ್ದು, ಇವರಿಗೆ ರಾಜ್ಯಪಾಲರು ಪರಮ ವೀರ ಚಕ್ರ ಪ್ರಶಸ್ತಿ ಪಡೆದ ದೇಶದ ಹೆಮ್ಮೆಯ ಪುತ್ರರ ಭಾವಚಿತ್ರವನ್ನು ನೀಡಿದರು. ಆ ಮೂಲಕ ರಾಜ್ಯದ ವಿಶ್ವವಿದ್ಯಾಲಯ, ಶಾಲಾ ಕಾಲೇಜುಗಳಲ್ಲಿ ಈ ವಿರ ಯೋಧರ ಭಾವಚಿತ್ರ ಹಾಕುವುದು ಹಾಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಪ್ರೋತ್ಸಾಹಿಸಲಾಯಿತು.

ಈ ಅಭಿಯಾನದ ಜವಾಬ್ದಾರಿ ಹೊತ್ತಿರುವ ಖ್ಯಾತ ಲೇಖಕ ಹಾಗೂ ಪತ್ರಕರ್ತ ತರುಣ್ ವಿಜಯ್ ಈ ಕಾರ್ಯಕ್ರಮದ ಬಗ್ಗೆ ಹೇಳಿದಿಷ್ಟು… ‘ಪ್ರತಿಯೊಬ್ಬ ಮನುಷ್ಯನಲ್ಲಿ ಜ್ಞಾನ ಎಂಬುದು ಶೌರ್ಯವನ್ನು ಹುಟ್ಟುಹಾಕದಿದ್ದರೆ, ಅಂತಹ ಜ್ಞಾನ ವ್ಯರ್ಥವಾಗುತ್ತದೆ. ನಮ್ಮ ವಿಶ್ವವಿದ್ಯಾಲಯಗಳು, ಲ್ಯಾಬ್ ಗಳು, ತರಗತಿಗಳು, ಕಲಿಕಾ ಪ್ರಕ್ರಿಯೆ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನು ನಾವು ಸಂಪೂರ್ಣವಾಗಿ ಅನುಭವಿಸುತ್ತಿರಲು ಪ್ರಮುಖ ಕಾರಣ ನಮ್ಮ ಯೋಧರು. ಅವರು ಸಿಯಾಚಿನ್, ಸಿಕ್ಕಿಂನಂತಹ ಗಡಿ ಪ್ರದೇಶಗಳಲ್ಲಿ ರಕ್ಷಣೆಗೆ ನಿಲ್ಲದಿದ್ದರೆ, ಇದ್ಯಾವುದೂ ಸಾಧ್ಯವಾಗುವುದಿಲ್ಲ. ಹೀಗಾಗಿ ನಿಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಈ ನಿಜವಾದ ಹೀರೋಗಳ ಭಾವಚಿತ್ರವನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಬೇಕು ಎಂದು ಕೇಳಿಕೊಳ್ಳುತ್ತೇನೆ.’

ಈಗಾಗಲೇ ದೇಶದ ವಿವಿಧ ಭಾಗಗಳನ್ನು ಈ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದು, ದೆಹಲಿಯ ಜೆಎನ್ ಯು, ಜಮಿಯಾ ಮಿಲಿಯಾ ಇಸ್ಲಾಮಿಯಾ, ದೆಹಲಿ ವಿಶ್ವವಿದ್ಯಾಲಯ, ಅಸ್ಸಾಂನ ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜು, ಉತ್ತರಾಖಂಡ, ಕೇರಳದ ವಿವಿ ಹಾಗೂ ಶಾಲಾ ಕಾಲೇಜುಗಳಲ್ಲಿ ಈ ಅಬಿಯಾನ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆಸಲಾಗುವುದು. ಈ ಅಭಿಯಾನವನ್ನು ಒಂದು ಸಾವಿರ ವಿವಿ, ಶಾಲಾ ಕಾಲೇಜುಗಳಿಗೆ ತಲುಪಿಸುವ ಗುರಿ ಹೊಂದಲಾಗಿದೆ.

ಈ ಕಾರ್ಯಕ್ರಮಕ್ಕೆ ಪರಮ ವೀರ ಚಕ್ರ ಪುರಸ್ಕೃತ ವೀರ ಯೋಧ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಭೂ, ವಾಯು ಹಾಗೂ ನೈಕಾ ಸೇನೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಅಭಿಯಾನ ಉದ್ಘಾಟನೆಯ ಕಾರ್ಯಕ್ರಮದ ಚಿತ್ರಗಳು ಹೀಗಿವೆ…

 

Leave a Reply