ಅಮೆರಿಕವನ್ನು ಎದುರು ಹಾಕಿಕೊಳ್ಳುತ್ತಿರೋ ಉತ್ತರ ಕೊರಿಯಾಗೆ ಚೀನಾದ ಖಡಕ್ ಎಚ್ಚರಿಕೆ !

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ತೊಡೆ ತಟ್ಟುತ್ತಲೇ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವ ಉತ್ತರ ಕೊರಿಯಾಗೆ ಈಗ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ. ‘ಒಂದು ವೇಳೆ ನೀವು ಅಮೆರಿಕ ವಿರುದ್ಧ ನಿಂತರೆ ಮುಂದಿನ ಪರಿಣಾಮಗಳಿಗೆ ನೀವು ಮಾತ್ರವೇ ಜವಾಬ್ದಾರರು. ನಿಮ್ಮ ಜತೆ ನಾವು ನಿಲ್ಲುವುದಿಲ್ಲ’ ಎಂದು ಚೀನಾ ಎಚ್ಚರಿಸಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಚೀನಾ ಅಣ್ವಸ್ತ್ರ ಪರೀಕ್ಷೆ ವಿಷಯವಾಗಿ ಉತ್ತರ ಕೊರಿಯಾ ವಿರುದ್ಧ ಮಾತನಾಡಿದೆ.

ಅಮೆರಿಕದ ತೀವ್ರ ಆಕ್ಷೇಪದ ನಡುವೆಯೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸುತ್ತಲೇ ಬಂದಿತ್ತು. ಈ ಬಗ್ಗೆ ಚೀನಾ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿತ್ತು. ಚೀನಾದ ಈ ನಿಲುವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದು, ಈ ಕುರಿತ ವರದಿಯನ್ನು ಡಿಜಿಟಲ್ ಕನ್ನಡ ಪ್ರಕಟಿಸಿತ್ತು.

ವಿಶ್ವ ಸಂಸ್ಥೆಯ ನಿರ್ಧಾರಕ್ಕೆ ವಿರುದ್ಧವಾಗಿ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದ್ದರೂ ಈ ಕುರಿತು ಚೀನಾ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಉತ್ತರ ಕೊರಿಯಾ ಜತೆಗೆ ಕೋಟ್ಯಂತರ ಮೊತ್ತದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಟ್ರಂಪ್ ಕಿಡಿಕಾರಿದ್ದರು. ಟ್ರಂಪ್ ಅವರ ಈ ಮಾತಿನ ಏಟಿಗೆ ಚೀನಾ ತಲೆ ಬಾಗಿದ್ದು, ಉತ್ತರ ಕೊರಿಯಾಗೆ ಬಹಿರಂಗವಾಗಿ ಎಚ್ಚರಿಕೆ ಕೊಟ್ಟಿದೆ.

ಚೀನಾ ಸರ್ಕಾರದ ನಿಯಂತ್ರಣದಲ್ಲಿರುವ ದ ಗ್ಲೋಬಲ್ ಟೈಮ್ಸ್ ಪತ್ರಿಕೆ ಈ ಕುರಿತು ವರದಿಯನ್ನು ಪ್ರಕಟಿಸಿದ್ದು, ಅದು ಹೀಗಿದೆ…

‘ಉತ್ತರ ಕೊರಿಯಾ ತನ್ನ ಕ್ಷಿಪಣಿಗಳ ಮೂಲಕ ಅಮೆರಿಕದ ಮೇಲೆ ದಾಳಿ ಮಾಡಿದರೆ, ನಂತರ ಎದುರಾಗುವ ಪರಿಣಾಮದ ಜವಾಬ್ದಾರಿಯನ್ನು ಚೀನಾ ಹೊರುವುದಿಲ್ಲ. ಅಷ್ಟೇ ಅಲ್ಲದೆ ಉತ್ತರ ಕೊರಿಯಾದ ನೆರವಿಗೆ ಧಾವಿಸುವುದಿಲ್ಲ. ಚೀನಾದ ಹಿತಾಸಕ್ತಿಗೆ ಧಕ್ಕೆ ಬರುವ ವಿಚಾರದಲ್ಲಿ ನಾವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ ಒಂದು ವೇಳೆ ಉತ್ತರ ಕೊರಿಯಾದ ಈ ಬೆದರಿಕೆಯಿಂದ ಅಮೆರಿಕ ತಿರುಗಿ ಬಿದ್ದರೆ ಆ ಸಂದರ್ಭದಲ್ಲಿ ಚೀನಾ ತಟಸ್ಥವಾಗಲಿದೆಯೇ ಹೊರತು ಉತ್ತರ ಕೊರಿಯಾದ ನೆರವಿಗೆ ಬರುವುದಿಲ್ಲ ಎಂಬ ಅಂಶವನ್ನು ಚೀನಾ, ಉತ್ತರ ಕೊರಿಯಾಗೆ ಸ್ಪಷ್ಟಪಡಿಸಲು ಇಚ್ಚಿಸುತ್ತದೆ.

ಸದ್ಯ ಅಮೆರಿಕ ಹಾಗೂ ಉತ್ತರ ಕೊರಿಯಾ ಎರಡೂ ದೇಶಗಳು ಅನಗತ್ಯವಾಗಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿದ್ದು, ಇಬ್ಬರೂ ಅಜಾಗರೂಕ ಆಟಕ್ಕೆ ಮುಂದಾಗುತ್ತಿವೆ. ಇದು ಮತ್ತೊಂದು ಯುದ್ಧಕ್ಕೆ ನಾಂದಿಯಾಗುವ ಸಾಧ್ಯತೆಗಳಿವೆ. ಈ ಎರಡು ದೇಶಗಳು ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡರೆ ತಮ್ಮ ಜನರ ನಾಶಕ್ಕೆ ದಾರಿ ಮಾಡಿಕೊಟ್ಟಂತಾಗಲಿದೆ. ಹೀಗಾಗಿ ಎರಡೂ ದೇಶಗಳು ಈ ವಿಷಯವನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕು.’

Leave a Reply