ಗಡಿಯಲ್ಲಿ ಮುಂದುವರಿಯುತ್ತಿದೆ ಭಾರತ- ಚೀನಾ ಸೇನೆ ನಿಯೋಜನೆ, ಚೀನಾ ನೀಡುತ್ತಿರುವ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವಣ ದೋಕಲಂ ಗಡಿ ವಿಚಾರ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕಷ್ಣಗಳು ಕಾಣುತ್ತಿಲ್ಲ. ಎರಡು ದೇಶಗಳ ಗಡಿಯಲ್ಲಿ ಭಾರತ ಹಾಗೂ ಚೀನಾ ತನ್ನ ಸೇನೆಯ ನಿಯೋಜನೆ ಮುಂದುವರಿಸುತ್ತಿದ್ದು, ಗಡಿ ಸಮಸ್ಯೆ ಕ್ರಮೇಣ ಉಲ್ಬಣಿಸುತ್ತಿರುವಂತೆ ಕಾಣುತ್ತಿದೆ.

ಗಡಿಯಲ್ಲಿ ಉಭಯ ದೇಶಗಳು ತಮ್ಮ ಸೇನೆಯ ನಿಯೋಜನೆಗಳನ್ನು ಮುಂದುವರಿಸುತ್ತಿದ್ದರೂ ಸಿಕ್ಕಿಂ, ಭೂತಾನ್ ಹಾಗೂ ಟಿಬೆಟ್ ಗಡಿಯಲ್ಲಿನ ಕೆಲವು ಹಳ್ಳಿಗಳನ್ನು ಸ್ಥಳಾಂತರ ಮಾಡಿರುವ ವರದಿಯನ್ನು ಸೇನೆ ನಿರಾಕರಿಸಿದೆ. ಚೀನಾ ಸರ್ಕಾರದ ಮೂಲಗಳ ಪ್ರಕಾರ, ಚೀನಾ ಸೇನೆ ಟಿಬೆಟ್ ನ ಗಡಿ ಪ್ರದೇಶದಲ್ಲಿ ತನ್ನ ಪಡೆಗಳನ್ನು ನಿಯೋಜಿಸುತ್ತಿದ್ದು, ಈ ಬಗ್ಗೆ ಚೀನಾ ಅಧಿಕಾರಿಗಳು ಹೇಳುರುವುದಿಷ್ಟು…

‘ಟಿಬೆಟ್ ಗಡಿ ಪ್ರದೇಶದಲ್ಲಿ ಚೀನಾ ಸೇನಾ ಪಡೆಗಳ ನಿಯೋಜನೆಯಾಗುತ್ತಿದೆ. ಆದರೆ ತೀವ್ರಮಟ್ಟದಲ್ಲಿ ಸೇನೆಯ ನಿಯೋಜನೆ ಇನ್ನು ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಿಯೋಜನೆಯೊಂದಿಗೆ ಭಾರತೀಯ ಸೇನೆಗೆ ಎಚ್ಚರಿಕೆ ರವಾನಿಸಲಾಗುತ್ತದೆ. ಮುಂದಿನ ಒಂದು ವಾರದ ಒಳಗಾಗಿ ಗಡಿಯಲ್ಲಿ ಸೇನೆಯ ನಿಯೋಜನೆಯಾಗಲಿದೆ. ಸದ್ಯ ದೊಡ್ಡ ಫಿರಂಗಿಗಳು, ರಾಕೆಟ್ ಗಳು, ಕ್ಷಿಪಣಿಗಳು ಹಾಗೂ ಯುದ್ಧ ಸಾಧನಗಳನ್ನು ಯುದ್ಧವೂ ಅಲ್ಲ, ಶಾಂತಿಯೂ ಅಲ್ಲ ಎಂಬ ಸ್ಥಿತಿಯಲ್ಲಿ ಇರಿಸಲಾಗಿದೆ. ಯಾವುದೇ ಸಮಯದಲ್ಲಾದರು ಅಗತ್ಯ ಬಿದ್ದರೆ ಇವುಗಳು ಬಳಕೆಗೆ ಸಿದ್ಧವಾಗಿವೆ.’

ಹೀಗೆ ಸೇನೆಯ ತಯಾರಿಗಳು ಒಂದೆಡೆಯಾದರೆ, ಮತ್ತೊಂದೆಡೆ ರಾಜತಾಂತ್ರಿಕತೆಯ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಶುಕ್ರವಾರ ನಾತು ಲಾ ಪ್ರದೇಶದಲ್ಲಿ ಗಡಿ ಅಧಿಕಾರಿಗಳ ಸಭೆ ನಡೆಯಲಿದ್ದು, ಇಲ್ಲಿ ಉಭಯ ದೇಶಗಳು ಈ ವಿಚಾರವಾಗಿ ಚರ್ಚಿಸಲಿವೆ.

ಗಡಿ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಕ್ಕಿಂ ಗಡಿ ಭಾಗದ ಕುಪ್ಪುಪ್, ನತಾಂಗ್ ಮತ್ತು ಜುಲುಕ್ ಎಂಬ ಹಳ್ಳಿಗಳನ್ನು ಸ್ಥಳಾಂತರಿಸಲಾಗಿದೆ ಎಂಬ ವರದಿಗಳನ್ನು ಸೇನೆ ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮೂಲಗಳು, ‘ಯಾವುದೇ ಹಳ್ಳಿಯನ್ನು ಸ್ಥಳಾಂತರಿಸಲಾಗಿಲ್ಲ. ಸ್ಥಳಾಂತರ ಮಾಡುವ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ. ಅನಾವಶ್ಯಕವಾಗಿ ಈ ಕುರಿತಾಗಿ ಆತಂಕವನ್ನು ಸೃಷ್ಟಿಸುವುದು ಬೇಡ’ ಎಂದಿದೆ.

ಇನ್ನು ಚೀನಾ ಸೇನೆ ಪ್ರತಿ ವರ್ಷ ನಡೆಸುವ ಆಪರೇಷನ್ ಅಲರ್ಟ್ ಅನ್ನು ಈ ಬಾರಿ ನಿಗದಿತ ಅವಧಿ ಸೆಪ್ಟೆಂಬರ್ ಹಾಗೂ ಅಕ್ಟೊಬರ್ ಗೂ ಮುನ್ನವೇ ನಡೆಸಲು ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಚೀನಾ ಸೇನೆ ಲಡಾಕ್ ನಿಂದ ಹಿಡಿದು, ಅರುಣಾಚಲ ಪ್ರದೇಶದವರೆಗೂ 4.057 ಕಿ.ಮೀ ಉದ್ದದ ಗಡಿಯಲ್ಲಿ ತಯಾರಿ ನಡೆಸುತ್ತಿದೆ.

ಒಟ್ಟಿನಲ್ಲಿ ಒಂದೆಡೆ ಮಾತುಕತೆಯ ಪ್ರಯತ್ನಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಉಭಯ ದೇಶಗಳ ಸೇನೆ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.

Leave a Reply