ರಾಜಕೀಯಕ್ಕೆ ಬರ್ತಾರ ಉಪೇಂದ್ರ? ಅವರ ತಲೆಯಲ್ಲಿರೋ ‘ಸೂಪರ್’ ಐಡಿಯಾ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಉಪೇಂದ್ರ ರಾಜಕೀಯಕ್ಕೆ ಬರುವ ಕುರಿತು ಸುದ್ದಿ ಹರಿದಾಡುತ್ತಿದೆ. ಆದರೆ ಅವರ ಐಡಿಯಾ ಏನು ಅನ್ನುವುದು ಯಾರಿಗೂ ಗೊತ್ತಿಲ್ಲ. ಯಾವುದಾದರೂ ಪಕ್ಷಕ್ಕೆ ಸೇರುತ್ತಾರಾ ಅಥವಾ ಹೊಸ ಪಕ್ಷ ಕಟ್ಟುತ್ತಾರಾ ಅನ್ನುವ ಕುತೂಹಲ ಬಹುತೇಕರಲ್ಲಿದೆ. ಈಗ ಉಪೇಂದ್ರ ಅವರು ರಾಜಕೀಯ ಹೇಗಿರಬೇಕು ಹಾಗೂ ನಾವು ಮತ ಹಾಕಿ ಆಯ್ಕೆ ಮಾಡುವ ವ್ಯಕ್ತಿ ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತಾಗಿ ತಮಗಿರುವ ಕಲ್ಪನೆಯನ್ನು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. ಅವರ ಮಾತಿನ ಪ್ರಮುಖ ಸಾರಾಂಶ ಹೀಗಿದೆ…

‘ನಾವೆಲ್ಲರೂ ಒಂದೊಂದು ಕೆಲಸ ಮಾಡುತ್ತಿದ್ದೇವೆ. ನಿಮಗೊಂದು ಕೆಲಸ ಇದೆ. ನಮಗೊಂದು ಕೆಲಸ ಇದೆ. ಹಾಗಾಗಿ ನಮ್ಮ ಏರಿಯಾದ ಪಬ್ಲಿಕ್ ಕೆಲ್ಸಗಳನ್ನು ಮಾಡುವುದಕ್ಕೆ ನಮಗೆ ಟೈಮಿಲ್ಲ. ಕಸದ ಸಮಸ್ಯೆ, ನೀರಿನ ಸಮಸ್ಯೆ ಹೀಗೆ ಯಾವುದೇ ಕೆಲಸ ಮಾಡೋಕೆ ಸಮಯವಿಲ್ಲ. ಹಾಗಾಗಿ ಈ ಕೆಲ್ಸಗಳನ್ನು ಮಾಡೋಕೆ ನಾವು ಯಾರೋ ಒಬ್ಬರನ್ನು ಅಪಾಯಿಂಟ್ ಮಾಡ್ಕೋತೀವಿ. ನಮ್ಮ ಕೆಲ್ಸಗಳನ್ನು ನೀನು ಮಾಡಪ್ಪಾ. ನಿನಗೆ ಸಂಬಳ ಕೊಡ್ತೀವಿ ನಾವು ಅಂತ.

ಇಷ್ಟೇ… ಸಿಂಪಲ್ಲು. ಅವರು ಎಂಎಂಲ್‌ಎ ಇರಬಹುದು. ಕಾರ್ಪೋರೇಟರ್ ಇರಬಹುದು. ಅಂದ್ರೆ ನಮಗೆ ಬೇಕಿರೋದು ವರ್ಕರ್ಸು. ಜನನಾಯಕರೂ ಬೇಡ. ಜನ ಸೇವಕರೂ ಬೇಡ. ಅಲ್ವೇ?

ಸೇವೆ ಮಾಡುವುದು ಅನ್ನುವುದೇ ರಾಂಗ್ ಕಾನ್ಪೆಪ್ಟ್. ನಾನ್ಯಾಕೆ ಯಾರದೋ ಸೇವೆ ಮಾಡಬೇಕು? ಅಥವಾ ಯಾರೋ ಯಾಕೆ ನನ್ನ ಸೇವೆ ಮಾಡಬೇಕು? ಸೇವೆ ಅನ್ನುವುದೇ ಬೇಡ. ಕೆಲ್ಸ ಮಾಡು. ಸಂಬಳ ತಗೋ. ಯಾರಾದರೂ ಮನೆಯಿಂದ ದುಡ್ಡು ತಂದು ಜನರಿಗೆ ಸಹಾಯ ಮಾಡಿದ್ರೆ ಆಗ ಅವನು ನಾಯಕ. ಆದರೆ ಇಲ್ಲಿ ಯಾರೂ ಹಾಗೇನೂ ಮಾಡ್ತಿಲ್ಲವಲ್ಲ. ನಮ್ಮ ದುಡ್ಡಲ್ಲೇ ಕೆಲಸ ಮಾಡೋದು. ಅಲ್ವೇ? ಹಾಗಾಗಿ ನೀನು ಸೇವೆ ಮಾಡೋವಷ್ಟು ಗ್ರೇಟೂ ಆಗ್ಬೇಡ. ನಾಯಕನಾಗುವುದೂ ಬೇಡ. ಒಬ್ಬ ವರ್ಕರ್ ಅಷ್ಟೇ.

ನಮಗೆ ಯೋಗ್ಯ ಕೆಲಸಗಾರರು. ಯೋಗ್ಯ ಕೆಲಸಗಾರರು ಅಂದ್ರೆ ಯಾರು? ಅದಕ್ಕೊಂದು ಐಡಿಯಾ ಇದೆ. ಈಗ ನಾನೊಂದು ಕಂಪನಿ ಮಾಡ್ತೀನಿ. ಪೊಲಿಟಿಕಲ್ ಪಾರ್ಟಿ ಥರ ಅಥವಾ ಕಾರ್ಪೋರೇಟ್ ಕಂಪನಿ ಥರ. ಮೊದಲು ನಾನು ಒಂದೊಂದು ಏರಿಯಾದ ಆಸಕ್ತರಿಗೆ ಒಂದು ಐಡಿಯಾ ಹೇಳ್ತೀನಿ. ಉದಾಹರಣೆಗೆ ವಿದ್ಯಾಪೀಠ, ವಿಜಯನಗರ, ಜೆಪಿ ನಗರ ಹೀಗೆ ಕರ್ನಾಟಕದ ಎಲ್ಲಾ ಏರಿಯಾಗಳಲ್ಲಿ ಯಾರಿಗೆ ಆಸಕ್ತಿ ಇದೆಯೋ ಅವರು ಮುಂದೆ ಬರಬೇಕು.

ಅವರು ಮಾಡಬೇಕಾದ್ದು ಏನಂದ್ರೆ…

ಅವರವರ ಏರಿಯಾದ ಸಂಪೂರ್ಣ ಮಾಹಿತಿ ಕೊಡಬೇಕು. ಆ ಏರಿಯಾದ ಸಮಸ್ಯೆಗಳೇನು? ಉದಾಹರಣೆಗೆ ಕಸದ ಸಮಸ್ಯೆ, ನೀರಿನ ಸಮಸ್ಯೆ, ಸ್ಕೂಲಿನ ಸಮಸ್ಯೆ ಹೀಗೆ. ಈ ಸಮಸ್ಯೆಗಳನ್ನು ಹೇಗ್ ಪರಿಹರಿಸ್ತೀಯಾ ಅಂತ ಬರೆಯಬೇಕು. ಎಷ್ಟು ದಿನಗಳಲ್ಲಿ ಸಾಲ್ವ್ ಮಾಡಕಾಗತ್ತೆ? ಅದಕ್ಕಾಗಿ ಎಷ್ಟು ಬಜೆಟ್ ಬೇಕು ನಿಂಗೆ.. ಈ ಎಲ್ಲವನ್ನೂ ವಿವರವಾಗಿ ಬರೆದು ಕಳಿಸಬೇಕು.

ಸಿಂಪಲ್.. ಅದೇನು ಬ್ರಹ್ಮ ವಿದ್ಯೆ ಅಲ್ಲ. ಯುನಿವರ್ಸಿಟಿ ಡಿಗ್ರಿ ಪಾಸ್ ಮಾಡಬೇಕಾಗಿಲ್ಲ. ನಾನು ಈ ರೋಡಲ್ಲಿ ಓಡಾಡ್ತಿದ್ದೇನೆ ಅಂದ್ರೆ ನಂಗೆ ಈ ರೋಡಲ್ಲಿ ಟ್ರಾಫಿಕ್ ಜಾಮ್ ಆಗತ್ತಾ ಇಲ್ವಾ ಅಂತ ಗೊತ್ತಿರತ್ತೆ. ಬೇರೇನೆಲ್ಲಾ ಸಮಸ್ಯೆ ಇದೆ ಅನ್ನೋದು ಗೊತ್ತಾಗತ್ತೆ. ಅಲ್ಲೆಲ್ಲಾ ಲೆಕ್ಕಾಚಾರ ಹಾಕ್ತೀನಿ. ಈ ರೋಡ್ ಸರಿ ಇಲ್ಲ. ಇಲ್ಲೆಲ್ಲೋ ವಾಟರ್ ಪ್ರಾಬ್ಲಮ್ ಇದೆ. ಎಲೆಕ್ಟ್ರಿಸಿಟಿ ಸಮಸ್ಯೆ ಇದೆ. ಹೀಗೆ ಬರೆದಾದ ಮೇಲೆ ಪರಿಹಾರವನ್ನೂ ಬರೆಯಬೇಕು.

ಪಾಯಿಂಟ್ ನಂಬರ್ ಒನ್. ನಾನು ರಸ್ತೆಯನ್ನು ಸ್ವಚ್ಛವಾಗಿಡ್ತೀನಿ. ಸರಿ, ಅದನ್ನು ಮಾಡಲು ಏನೇನ್ ಬೇಕು. ಒಂದು ಗಾಡಿ ಬೇಕು. ಇಂತಿಷ್ಟು ಜನ ಬೇಕು. ಕಸವನ್ನು ಡಂಪ್ ಮಾಡ್ಬೇಕು. ರೀಸೈಕ್ಲಿಂಗ್ ಪ್ಲಾಂಟ್ ಬೇಕು. ಇಷ್ಟ್ ದುಡ್ಡು ಬೇಕು. ಹೀಗೆ ಪರಿಹಾರ ಮತ್ತು ಏನೇನ್ ಬೇಕು ಅನ್ನೋದನ್ನೆಲ್ಲಾ ಬರೀಬೇಕು. ಯಾರಿಗೆ ಇಂಟರೆಸ್ಟ್ ಇದೆಯೋ ಅವರು. ಈಗ ನಮಗೆ ಇಂಟರೆಸ್ಟ್ ಇದೆ. ದೇಶಕ್ಕೆ ಒಳ್ಳೇದು ಮಾಡ್ಬೇಕು ಅಂತ ಮನಸ್ಸಿದೆ ಅಂತ ಬರೆದು ಕಳಿಸಬೇಕು. ಈಥರ ಒಂದು ಏರಿಯಾದಲ್ಲಿ ಹತ್ತತ್ತು ಜನಾನೋ ಮೂರ್‌ಮೂರು ಜನಾನೋ ಬರೆದು ಕಳಿಸ್ತಾರೆ. ಅದರಲ್ಲಿ ನಾನು ಬೆಸ್ಟ್ ಅಂತನ್ನಿಸಿದವರನ್ನು ಆರಿಸ್ತೀನಿ. ಕೊನೆಗೆ ಪರ್ಸನಲ್ಲಾಗಿ ಇಂಟರ್ವ್ಯೂ ಮಾಡ್ತೀನಿ. ಅದರಲ್ಲಿ ಬೆಸ್ಟ್ ಅನ್ನಿಸಿದವರಿಗೆ ಸೀಟ್ ಕೊಡ್ತೀವಿ.

ಟಿಕೆಟ್ ಕೊಡ್ತೀವಿ. ಇದೇ ಮ್ಯಾನಿಫೆಸ್ಟೋ...

ಅವನು ಬರೆದಿರ್ತಾನೆ ಈ ಏರಿಯಾದ ಸಮಸ್ಯೆ ಪರಿಹಾರಕ್ಕೆ ನನಗೆ ಐದು ಕೋಟಿ ಬೇಕು. ಸುಮ್ನೆ ಬಾಯಿಗ್ ಬಂದಂತೆ ಬರೆಯೋದಲ್ಲ. ಅವನು ಅದನ್ನು ವಿಶ್ಲೇಷಣೆ ಮಾಡಿರಬೇಕು. ಅವರು ಅಲ್ಲೆಲ್ಲಾ ಓಡಾಡಿ, ಜನರ ಹತ್ತಿರ ಮಾತಾಡಿ, ಅಧ್ಯಯನ ಮಾಡಿ, ಸಂಶೋಧನೆ ಮಾಡಿ, ಪರಿಣತರ ಸಲಹೆ ಪಡ್ಕೊಂಡು ಎಷ್ಟ್ ಬಜೆಟ್ ಬೇಕು ಅಂತ ಬರೀಬೇಕು.

ಈವಾಗ ಪೂರ್ತಿ ಕರ್ನಾಟಕದ ಬಜೆಟ್ ಎಷ್ಟು? ವರ್ಷಕ್ಕೆ ಒಂದು ಲಕ್ಷ ಕೋಟಿ ಅಂತಾರೆ. ಒಂದು ಲಕ್ಷ ಕೋಟಿಯನ್ನು ಆ ಎಲ್ಲಾ ಏರಿಯಾಗೂ ಹಂಚೋದು. ಹಾಗೆ ಹಂಚಿದಾಗ ಒಂದು ಏರಿಯಾಗೆ ಎಷ್ಟು ದುಡ್ಡು ಬರತ್ತೆ? ಐದೋ ಹತ್ತೋ ಕೋಟಿ ಬರಬಹುದು.

ಈಗ ನಮಗೆ ಸಮಸ್ಯೆ ಗೊತ್ತಿದೆ. ಪರಿಹಾರವೂ ಗೊತ್ತಿದೆ. ಐದು ಕೋಟಿ ದುಡ್ಡು ಬರತ್ತೆ. ಆ ಪ್ರದೇಶದಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡೋಕೆ 25 ಕೋಟಿ ಬೇಕು ಅಂತಿಟ್ಟುಕೊಳ್ಳಿ. ವರ್ಷಕ್ಕೆ ಐದು ಕೋಟಿ ಸಿಕ್ಕರೆ. ಐದು ವರ್ಷದಲ್ಲಿ 25 ಕೋಟಿ. ಆ ಪ್ರದೇಶದ ಸಮಸ್ಯೆಗೆ ಪೂರ್ತಿ ಪರಿಹಾರ ಸಿಕ್ಕಂತಾಯಿತಲ್ಲ.

ಆಮೇಲೆ ಅವನು ಹೇಗ್ ವರ್ಕ್ ಮಾಡಬೇಕು ಅನ್ನೋದು...

ನಮ್ಮ ನಿಮ್ಮೆಲ್ಲರ ಥರ ಒಂಬತ್ತರಿಂದ ಐದು ಗಂಟೆವರೆಗೆ ಮಾಡಿದ್ರೆ ಸಾಕು. ಅವನೇನು ಅವನ ಜೀವನ ಕಳ್ಕೊಂಡ್ ಕೆಲಸ ಮಾಡೋದೇನೂ ಬೇಡ. ಸಮಾಜ ಸೇವೆಗೆ ಜೀವನ ಹಾಳ್ ಮಾಡ್ಕೊಳೋದೂ ಬೇಡ. 9 ಟು 5 ಅಷ್ಟೇ. ಅವನು ರೋಡಲ್ಲಿರಬೇಕು. ಅವನಿಗೊಂದು ಗಾಡಿ. ಅದರಲ್ಲಿ ಏರಿಯಾದಲ್ಲೆಲ್ಲಾ ಸುತ್ತಾಡಿ ಎಲ್ಲಾದರೂ ಕಸದ ರಾಶಿ ಇದ್ದರೆ ಫೋಟೋ ತೆಗೆದು ಅವನ ಫೇಸ್‌ಬುಕ್ಕಲ್ಲಿ, ವೆಬ್‌ಸೈಟಲ್ಲಿ ಅವನ ಟ್ವಿಟ್ಟರಲ್ಲಿ ಮತ್ತು ಟೀವಿಲಿ ಕೂತು ಮಾತಾಡಿ ಇಲ್ಲಿ ಹೀಗಿತ್ತು ಅಂತ ಹೇಳಿ ಅದನ್ನು ಹೇಗೆ ಸರಿ ಮಾಡಿದೆ ಅನ್ನೋ ವಿವರವನ್ನೂ ಕೊಡಬೇಕು. ಇಲ್ಲಿ ಇಷ್ಟೆಲ್ಲಾ ಸಮಸ್ಯೆ ಇತ್ತು, ಅದೆಲ್ಲಾ ಸರಿಯಾಗಿದೆ, ಅದಕ್ಕೆ ಇಷ್ಟ್ ಖರ್ಚಾಗಿದೆ ಅನ್ನೋದನ್ನೆಲ್ಲಾ ವಿವರವಾಗಿ ಹೇಳಬೇಕು.

ಇಲ್ಲಿ ನಾನೇನ್ ಮಾಡ್ತೀನಿ ಅಂದ್ರೆ…

ಜನರಿಗೆ ಹೇಳ್ತೀನಿ. ಇದಕ್ಕೆ ನಾನ್ ದುಡ್ಡು ಖರ್ಚು ಮಾಡಲ್ಲ. ಪಾಂಪ್ಲೆಟ್ ಹಂಚಲ್ಲ. ಸಮಾರಂಭ ಮಾಡಲ್ಲ. ಊಟ ಅದು ಇದು ಅರೇಂಜ್ ಮಾಡೋದು ಅದು ಏನೂ ನಾನು ಮಾಡಲ್ಲ. ನಾನ್ ಒಂದ್ ರೂಪಾಯಿ ಹಾಕಲ್ಲ. ಒಂದು ರೂಪಾಯಿ ತಗೊಂಡು ಹೋಗಲ್ಲ. ನಾನು ಖರ್ಚು ಮಾಡಲ್ಲ ಯಾಕೆ ಅಂದ್ರೆ ಖರ್ಚು ಮಾಡಿದಾಗ ವಾಪಸ್ ತಗೋಬೋಕು ಅನ್ನೋದು ಬರತ್ತೆ. ಉದಾಹರಣೆಗೆ ನಿಮ್ ಏರಿಯಾಗೆ ಐದು ಕೋಟಿ ಬರತ್ತೆ. ನಾನು ನಾಲ್ಕು ಕೋಟಿ, ಐದು ಕೋಟಿ ಖರ್ಚು ಮಾಡಿ ಗೆದ್ರೆ ಅರ್ಥ ಮಾಡ್ಕೊಳಿ. ಅಲ್ವಾ?

ಹಾಗಾಗೋದು ಬೇಡ. ನಾನೇ ಜನರ ಹತ್ರ ಬರ್ತೀನಿ. ಟೀವಿ ಮೂಲಕ, ಸೋಷಿಯಲ್ ಮೀಡಿಯಾ ಮೂಲಕ, ಮುದ್ರಣ ಮಾಧ್ಯಮದ ಮೂಲಕ ಎಲ್ಲಾ ಕಡೆ ಜನರಿಗೆ ಹೇಳ್ತೀನಿ. ಇಲ್ಲಿ ನಾನು ವಾಚ್‌ಡಾಗ್ ಕೆಲ್ಸ ಮಾಡ್ತೀನಿ ಅಷ್ಟೇ. ಅವನೇನಾದ್ರು ಕರಪ್ಟ್ ಆದ್ನಾ.. ಅವನನ್ನು ಆ ಪಾರ್ಟಿಯಿಂದ ಅಥವಾ ಕಂಪನಿಯಿಂದ ಕಿತ್ತು ಬಿಸಾಕ್ತೀವಿ.

ಇದು ನನ್ ಪ್ಯಾಷನ್‌ಗಾಗಿ ಮಾಡ್ತೀನಿ. ಗವರ್ನ್‌ಮೆಂಟ್ ವರ್ಕ್ ಆಗ್ತಿರೋದು ನಿಮಗೆ ಫೀಲ್ ಆಗಬೇಕು. ಜನರಿಂದ ಆಯ್ಕೆಯಾದವ ಮನೆ ಹತ್ರ ಬರ್ತಾನೆ, ಗಾಡಿ ತಗೊಂಡು. ನೀವು ಅಲ್ಲೇ ಅವನನ್ನು ಕರ್ದು ಮಾತಾಡಿಸಬಹುದು. ಇದನ್ನೇ ಮಾಡ್ತೀನಿ ನಾನು. ಇದನ್ನೇ ಮಾಡೋದು…

ಜಾಸ್ತಿ ಬೇಡ. ಎರಡು ಏರಿಯಾ ಕೊಡಿ. ಪೂರ್ತಿ ಕರ್ನಾಟಕ ಬೇಡ ನಂಗೆ. ಮೊದಲು ನಾನದನ್ನು ಮಾಡಿ ತೋರಿಸ್ತೀನಿ. ಆಮೇಲೆ ನಾಲ್ಕು ಏರಿಯಾ ಕೊಡಿ. ಇದನ್ನು ಹೇಳಬೇಕು ಜನಕ್ಕೆ.. ಇದು ನನ್ನ ಮೈಂಡಲ್ಲಿರೋದು.. ಸ್ವಲ್ಪ ಸ್ಟಡಿ ಮಾಡ್ತಾ ಇದ್ದೀನಿ. ಡೀಟೇಲ್ ಒಟ್ಟು ಗೂಡಿಸ್ತಾ ಇದೀನಿ. ಆಮೇಲೆ ಜನಕ್ಕೆ ಹೇಳಬೇಕು.’

Leave a Reply