ಭಾರತದಿಂದ ಗಡಿಯಲ್ಲಿ 45 ಸಾವಿರಕ್ಕೂ ಹೆಚ್ಚು ಸೈನಿಕರ ನಿಯೋಜನೆ, ಎಲ್ಲೆಲ್ಲಿ ಎಷ್ಟು ಪಡೆಗಳಿವೆ? ಹೇಗಿದೆ ಪರಿಸ್ಥಿತಿ?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ಗಡಿ ವಿಚಾರವನ್ನು ಮಾತುಕತೆಯಿಂದ ಬಗೆಹರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ. ಈ ನಡುವೆ ಗಡಿಯಲ್ಲಿನ ಪರಿಸ್ಥಿತಿ ಹದಗೆಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರತವು ಸಿಕ್ಕಿಂ ಹಾಗೂ ಗಡಿ ಪ್ರದೇಶದಲ್ಲಿ 45 ಸಾವಿರ ಸೈನಿಕರ ನಿಯೋಜನೆಗೆ ಮುಂದಾಗಿದೆ.

ನಿನ್ನೆ ಎರಡು ದೇಶಗಳ ಸೇನೆಯ ಮೇಜರ್ ಜೆನರಲ್ ಗಳ ನಡುವೆ ಮೊದಲ ಬಾರಿಗೆ ಮಾತುಕತೆಯಾಗಿತ್ತು. ಇದರ ಬೆನ್ನಲ್ಲೇ ಚೀನಾ ಗಡಿಯಲ್ಲಿ ತನ್ನ ಸೇನಾ ಪಡೆಗಳ ನಿಯೋಜನೆ ಪ್ರಮಾಣ ಹೆಚ್ಚಿಸಿತ್ತು. ಹೀಗಾಗಿ ಭಾರತ ಸಹ ಮುನ್ನೆಚ್ಚರಿಕೆಯಾಗಿ ಯಾವುದೇ ಸಮಯದಲ್ಲಿ ಚೀನಾ ಸೇನೆಯನ್ನು ಎದುರಿಸಲು ಅಗತ್ಯವಿರುವ ಸೈನಿಕರು ಹಾಗೂ ಶಸ್ತ್ರಾಸ್ತ್ರ ನಿಯೋಜನೆಯನ್ನು ನಿಯೋಜಿಸಿಕೊಂಡಿ. ಈ ವೇಳೆ ಅರುಣಾಚಲ ಪ್ರದೇಶದ ಸೇನಾ ಪಡೆಗಳನ್ನು ಜಾಗೃತವಾಗಿರುವಂತೆ ಹೈ ಅಲರ್ಟ್ ನೀಡಿದೆ. ಹೀಗಾಗಿ ಇಲ್ಲಿನ ಸೈನಿಕರು ತಮ್ಮ ಸಹಜ ಸ್ಥಾನಕ್ಕಿಂತ ಮುಂದೆ ಹೋಗಿ ಗಡಿಯಲ್ಲಿ ಸನ್ನದ್ಧರಾಗಿದ್ದಾರೆ. ಅರುಣಾಚಲ ಪ್ರದೇಶದ ಗಡಿಯಲ್ಲಿಯೇ ಕಳೆದ ಎರಡು ತಿಂಗಳಿನಿಂದ 25 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ.

ಪೂರ್ವಭಾಗದ ಗಡಿಯಲ್ಲೂ ಸೇನಾಪಡೆಗಳ ನಿಯೋಜನೆ ತೀವ್ರವಾಗಿದ್ದು, ಸುಕ್ನಾ ಪ್ರದೇಶದಲ್ಲಿ 33, ಗಂಗ್ಟೊಕ್ ನಲ್ಲಿ 17, ಕಲಿಂಪೊಂಗ್ ನಲ್ಲಿ 27, ದಿಮಾಪುರ್ ನಲ್ಲಿ 3 ಹಾಗೂ ತೆಜ್ಪುರದಲ್ಲಿ 4 ಹಾಗೂ ಹಿನ್ನಾಗುರಿಯಲ್ಲಿ 20 ದೊಡ್ಡ ಪ್ರಮಾಣದ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನು ಪರ್ವತ ಶ್ರೇಣಿಗಳ ಪ್ರತಿ ವಿಭಾಗದಲ್ಲೂ ಒಟ್ಟು 10 ರಿಂದ 15 ಸಾವಿರ ಯೋಧರನ್ನು ಇರಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮೂಲಗಳು, ‘ಚೀನಾ ಸೇನೆಯು ಹಲ್ಲು ಮಸಿಯುತ್ತಾ ಗಡಿ ಸುತ್ತುವರಿಯುತ್ತಿರುವ ಹಿನ್ನೆಲೆಯಲ್ಲಿ ನಾವು ಎಲ್ಲಾ ರೀತಿಯ ಸಿದ್ಧತೆಗಳಿಗೆ ಮುಂದಾಗಿದ್ದೇವೆ.’

ವಿವಾದದ ಕೇಂದ್ರ ಬಿಂದುವಾಗಿರುವ ದೋಕಲಂ ಪ್ರದೇಶ 11 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದು, ಇಲ್ಲಿ ಭಾರತ ಹಾಗೂ ಚೀನಾ ಸೈನಿಕರು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಕಳೆದ ಎರಡು ತಿಂಗಳಿನಿಂದ ಉಭಯ ದೇಶಗಳ 300-350 ಸೈನಿಕರು ಠಿಕಾಣಿ ಹೂಡಿದ್ದು, ಈಗ ಚೀನಾ ಹೆಚ್ಚುವರಿಯಾಗಿ 1500 ಯೋಧರನ್ನು ನೇಮಿಸುವ ಮೂಲಕ ಆಕ್ರಮಣಕಾರಿ ಮನೋಭಾವ ತೋರಿದೆ. ಹೀಗಾಗಿ ಭಾರತೀಯ ಸೇನೆ ಯಾವುದೇ ರೀತಿಯ ಪರಿಸ್ಥಿತಿ ಎದುರಾದರು ಅದನ್ನು ಮೆಟ್ಟಿ ನಿಲ್ಲಲು ಸನ್ನದ್ಧವಾಗಿದೆ.

1 COMMENT

Leave a Reply