ಗೊರಖಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಏರಿಕೆ, ಈ ಅವಘಡಕ್ಕೆ ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದ ಗೊರಖಪುರದಲ್ಲಿರುವ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಅವಘಡದಿಂದ ಈವರೆಗೂ 60 ಮಕ್ಕಳು ಮೃತಪಟ್ಟಿದ್ದು, ಮಕ್ಕಳ ಸಾವಿನ ಸಂಖ್ಯೆ ಏರುತ್ತಲೇ ಇದೆ. ಆಸ್ಪತ್ರೆಗೆ ಆಮ್ಲಜನಕ ಪೂರೈಸುತ್ತಿದ್ದ ಕಂಪನಿ ತನ್ನ ಸೇವೆಯನ್ನು ನಿಲ್ಲಿಸಿದ್ದೇ ಈ ಅನಾಹುತಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಇಷ್ಟು ದಿನಗಳ ಕಾಲ ಪುಷ್ಪ ಸೇಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಈ ಆಸ್ಪತ್ರೆಗೆ ಆಮ್ಲಜನಕವನ್ನು ಪೂರೈಸುತ್ತಿತ್ತು. ಆದರೆ ಅನೇಕ ತಿಂಗಳಿನಿಂದ ಆಸ್ಪತ್ರೆಯು ಕಂಪನಿಗೆ ನೀಡಬೇಕಿದ್ದ ಹಣವನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಪರಿಣಾಮ ಕಂಪನಿಯು ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗಿವೆ. ಆಸ್ಪತ್ರೆಯು ನೀಡಬೇಕಿರುವ ಬಾಕಿ ಕುರಿತಂತೆ ಕಂಪನಿಯು ಕಳೆದ ಏಳು ತಿಂಗಳಲ್ಲಿ ಏಳು ಬಾರಿ ನೋಟೀಸ್ ನೀಡಿದ್ದು, ಬಾಕಿ ಪಾವತಿ ಮಾಡದಿದ್ದರೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ ಆಸ್ಪತ್ರೆಯ ಬೇಜವಾಬ್ದಾರಿತನ ಈಗ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.

ಕಂಪನಿಯು ಆಸ್ಪತ್ರೆಗೆ ಬರೆದಿದ್ದ ಕಳೆದ ಎರಡು ಪತ್ರಗಳಲ್ಲಿ ನೀಡಿದ್ದ ಎಚ್ಚರಿಕೆ ಹೀಗಿತ್ತು…

‘ಆಸ್ಪತ್ರೆಯು ಕಳೆದ ಆರು ತಿಂಗಳುಗಳಿಂದ ಕಂಪನಿಗೆ ಹಣ ಪಾವತಿಸುತ್ತಿಲ್ಲ. ಇದೇ ರೀತಿ ಮುಂದಿನ ದಿನಗಳಲ್ಲಿ ಬಾಕಿ ಉಳಿಸಿಕೊಳ್ಳುವುದು ಮುಂದುವರಿದರೆ ನಂತರ ಆಗಲಿರುವ ಅನಾಹುತಗಳಿಗೆ ಆಸ್ಪತ್ರೆಯೇ ಜವಾಬ್ದಾರಿಯಾಗಲಿದೆ.’

‘ನಿಮ್ಮ ಆಸ್ಪತ್ರೆಯು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಕಂಪನಿಯು ಆಮ್ಲಜನಕದ ಪೂರೈಕೆ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ.’

ಹೀಗೆ ಫೆಬ್ರವರಿ ತಿಂಗಳಿಂದ ಆಗಸ್ಟ್ ವರೆಗೂ ಕಂಪನಿಯು ಬಿಆರ್ ಡಿ ಆಸ್ಪತ್ರೆಗೆ ಕನಿಷ್ಠ ಏಳು ಎಚ್ಚರಿಕೆಯ ಪತ್ರವನ್ನು ರವಾನಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪುಷ್ಪ ಸೇಲ್ಸ್ ಕಂಪನಿಯ ನಿರ್ವಾಹಕ ದೀಪಾಂಕರ್ ಶರ್ಮಾ, ‘ಈ ವಿಷಯವಾಗಿ ಕಂಪನಿಯು ಬಿಆರ್ ಡಿ ಆಸ್ಪತ್ರೆಗೆ ಕಾನೂನು ನೋಟೀಸ್ ನೀಡಲಾಗಿದೆ. ಆದರೆ ಆಸ್ಪತ್ರೆಯಿಂದ ಅದಕ್ಕೆ ಯಾವುದೇ ಉತ್ತರ ಬಂದಿಲ್ಲ’ ಎಂದಿದ್ದಾರೆ.

‘ಆಸ್ಪತ್ರೆ ಹಾಗೂ ಕಂಪನಿ ಜತೆಗಿನ ಒಪ್ಪಂದದ ಪ್ರಕಾರ 15 ದಿನಗಳ ಒಳಗಾಗಿ ಹಣವನ್ನು ಪಾವತಿಸಬೇಕು. ಹಾಗೂ ಬಾಕಿ ಹಣದ ಮೊತ್ತ ₹ 10 ಲಕ್ಷಕ್ಕೂ ಮೀರುವಂತಿಲ್ಲ. ಆದರೆ ಕಳೆದ ವರ್ಷ ನವೆಂಬರ್ ತಿಂಗಳಿನಿಂದಲೂ ಆಸ್ಪತ್ರೆ ಬಾಕಿ ಉಳಿಸಿಕೊಂಡಿದೆ. ಕೇವಲ ಮೇ ಹಾಗೂ ಜೂನ್ ತಿಂಗಳಲ್ಲಿ ಅಲ್ಪ ಪ್ರಮಾಣದ ಮೊತ್ತ ಪಾವತಿಸಿದೆ. ಹೀಗಿದ್ದರೂ ನಮ್ಮ ಕಂಪನಿ ಮಾನವೀಯತೆಯ ದೃಷ್ಟಿಕೋನದ ಆಧಾರದ ಮೇಲೆ ಒಂಬಂತ್ತು ತಿಂಗಳ ಕಾಲ ಆಮ್ಲಜನಕ ಪೂರೈಸುತ್ತಲೇ ಇತ್ತು. ಆಗಸ್ಟ್ 4ನೇ ತಾರೀಖಿನವರೆಗೂ ಕಂಪನಿಯು ಆಮ್ಲಜನಕ ಪೂರೈಸಿತ್ತು. ಆದರೆ ಕಂಪನಿಗೆ ನೀರೀಕ್ಷಿತ ಮಟ್ಟದ ಆದಾಯ ಬಾರದ ಹಿನ್ನೆಲೆಯಲ್ಲಿ ಕಂಪನಿ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿತು.

ಆರಂಭದಲ್ಲಿ ನಾವು ಮೂರು ತಿಂಗಳ ಕಾಲ ಬಾಕಿ ಹಣಕ್ಕಾಗಿ ಕಾದೆವು. ಆಗ ಆಸ್ಪತ್ರೆ ನೀಡಬೇಕಿದ್ದ ಬಾಕಿ ಮೊತ್ತ ₹ 42 ಲಕ್ಷ. ಹೀಗಾಗಿ ಏಪ್ರಿಲ್, ಮೇ, ಜೂನ್ ಹಾಗೂ ಜುಲೈನಲ್ಲಿ ಎರಡು ಬಾರಿ ಬಾಕಿ ಪಾವತಿಸುವಂತೆ ಪತ್ರ ಬರೆದೆವು. ಆದರೆ ಕಂಪನಿ ಬಾಕಿ ಪಾವತಿಸಲಿಲ್ಲ. ಈಗ ಆಸ್ಪತ್ರೆ ನೀಡಬೇಕಿರುವ ಬಾರಿ ಮೊತ್ತ ₹ 60 ಲಕ್ಷವಾಗಿದೆ’ ಎಂದಿದ್ದಾರೆ ದೀಪಾಂಕರ್ ಶರ್ಮಾ.

Leave a Reply