ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿರೋ ಕಿಮ್ ಜೊಂಗ್ ಮುಂದಿನ ನಡೆ ಏನು?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಲೇ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಅವರ ಮುಂದಿನ ನಡೆ ಏನು ಎಂಬುದು ಸದ್ಯ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಉತ್ತರ ಕೊರಿಯಾದ ಉದ್ಧಟತನಕ್ಕೆ ಅಮೆರಿಕ ಹಾಗೂ ಚೀನಾದ ಎಚ್ಚರಿಕೆ ನೀಡಿದ್ದು, ಹೀಗಾಗಿ ಮುಂದಿನ ನಡೆಗಳಲ್ಲಿ ಕಿಮ್ ಜೊಂಗ್ ಅವರ ನಿರ್ಧಾರ ಏನು ಎಂಬುದು ಸ್ವತಃ ಉತ್ತರ ಕೊರಿಯಾದ ಕ್ಷಿಪಣಿ ಕಾರ್ಯಕ್ರಮದ ಅಧಿಕಾರಿಗಳಿಗೂ ತಿಳಿದಿಲ್ಲ.

ಈವರೆಗೂ ಪರೀಕ್ಷೆ ಮಾಡಲಾಗಿರುವ ಖಂಡಾಂತರ ಕ್ಷಿಪಣಿಗಳನ್ನು ಅಮೆರಿಕಕ್ಕೆ ಗುರಿಯಾಗಿಸುವುದಾಗಿ ಉತ್ತರ ಕೊರಿಯಾ ಎಚ್ಚರಿಕೆ ರವಾನಿಸಿದೆ. ಒಂದು ವೇಳೆ ಉತ್ತರ ಕೊರಿಯಾ, ಅಮೆರಿಕದ ಗುಹಾಮ್ ಪ್ರದೇಶದ ಮೇಲೆ ಈ ದಾಳಿ ನಡೆಸುವುದೇ ಆದರೆ ಈ ಕುರಿತು ಅಧ್ಯಕ್ಷ ಕಿಮ್ ಜೊಂಗ್ ಅಂತಿಮ ಆದೇಶ ನೀಡಲಿದ್ದಾರೆ. ಉತ್ತರ ಕೊರಿಯಾದ ಕ್ಷಿಪಣಿ ಪ್ರಯೋಗ ಕಾರ್ಯಕ್ರಮದ ಅಧಿಕಾರಿಗಳ ಪ್ರಕಾರ ಮುಂದಿನ ವಾರದೊಳಗೆ ಕ್ಷಿಪಣಿ ಕಾರ್ಯಕ್ರಮದ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ. ಆದರೆ, ಈ ಕಾರ್ಯಕ್ರಮ ಮುಗಿದ ನಂತರ ಏನು ಎಂಬ ಪ್ರಶ್ನೆಗೆ ಸ್ವತಃ ಈ ಕಾರ್ಯಕ್ರಮದ ಅಧಿಕಾರಿಗಳಿಗೂ ಗೊತ್ತಿಲ್ಲ.

ಸದ್ಯ ಕ್ಷಿಪಣೆ ತಂತ್ರಜ್ಞಾನದಲ್ಲಿ ಉತ್ತರ ಕೊರಿಯಾ ಮಹತ್ತರ ಮುನ್ನಡೆ ಸಾಧಿಸಿದ್ದು, ಅದನ್ನು ಜಾಗತೀಕವಾಗಿ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಉತ್ತರ ಕೊರಿಯಾ ತನ್ನ ಕ್ಷಿಪಣಿಯು ಅಮೆರಿಕ ನೆಲವನ್ನು ಉಡಾಯಿಸುವ ತಾಕತ್ತು ಹೊಂದಿದೆ ಎಂದು ಎಚ್ಚರಿಕೆ ರವಾನಿಸುತ್ತಿದೆ. ಹೀಗಾಗಿ ಉತ್ತರ ಕೊರಿಯಾದ ನಿರ್ಧಾರದಲ್ಲಿ ತಾಂತ್ರಿಕ ಆಯಾಮಕ್ಕಿಂತ ತಂತ್ರಗಾರಿಕೆಯ ಆಯಾಮ ಎದ್ದು ಕಾಣಲಿದೆ.

ಒಂದು ವೇಳೆ ಕಿಮ್ ಕ್ಷಿಪಣಿ ದಾಳಿ ನಡೆಸಲು ಮುಂದಾಗಿದ್ದೇ ಆದರೆ, ಈಗಾಗಲೇ ಶಸ್ತ್ರ ಸನ್ನದ್ಧವಾಗಿರುವ ಅಮೆರಿಕವನ್ನು ಮೈಮೇಲೆ ಎಳೆದುಕೊಂಡಂತಾಗಲಿದೆ. ಕಿಮ್ ಜೊಂಗ್ ಅವರು ಈವರೆಗೂ ಯುದ್ಧಕಾಂಕ್ಷಿ ಅಂತಲೇ ಹೆಚ್ಚು ಬಿಂಬಿತರಾಗಿದ್ದು ಅವರ ಮುಂದೆ ಇರುವ ಪ್ರಮುಖ ಆಯ್ಕೆಗಳೆಂದರೆ, ಮೊದಲನೆಯದಾಗಿ ಅಮೆರಿಕ್ಕೆ ತೊಡೆ ತಟ್ಟಿ ನಿಲ್ಲುವುದು. ಇಲ್ಲವಾದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕವನ್ನು ಎದುರು ಹಾಕಿಕೊಳ್ಳದೇ ತಾಳ್ಮೆಯ ನಿರ್ಧಾರ ತೆಗೆದುಕೊಳ್ಳುವುದು.

ಉತ್ತರ ಕೊರಿಯಾ ಈ ಕುರಿತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಿದ್ದು, ಆಗಸ್ಟ್ 15 ಅಥವಾ ಆಗಸ್ಟ್ 21ರಂದು ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ಇನ್ನು ಆಗಸ್ಟ್ 21ರಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಜಂಟಿ ಮಿಲಿಟರಿ ಅಭ್ಯಾಸ ನಡೆಸಲಿವೆ. ಹೀಗಾಗಿ ಈ ಎರಡು ದಿನಗಳಲ್ಲಿ ಕಿಮ್ ಜೊಂಗ್ ತನ್ನ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

Leave a Reply