ಸಿಎಂ ಪಟ್ಟದಂಕಣದ ಜಟ್ಟಿಗಳು ಬಿಎಸ್‌ವೈ, ಸಿದ್ರಾಮಯ್ಯ!

ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಒಳರಾಜಕೀಯದಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದವು. ಚುನಾವಣೆ ಬಾಗಿಲಿಗೆ ಬಂದು ನಿಂತಿದ್ದರೂ, ಅದರ ಗಾಳಿ ರಾಜ್ಯಾದ್ಯಂತ ರಭಸವಾಗಿ ಬೀಸಲು ಆರಂಭಿಸಿದ್ದರೂ ನಾಯಕರು ಮುಕ್ತ ಮನಸ್ಸಿನಿಂದ ಅದಕ್ಕೆ ತೆರೆದುಕೊಳ್ಳಲು ಅದ್ಯಾವುದೋ ಒಳಗುದಿ ತಡೆದು, ತಡೆದು ಮುಂದಕ್ಕೆ ಬಿಡುತ್ತಿತ್ತು. ಆರಾಮವಾಗಿ ಮುಂದಕ್ಕೆ ಹೋಗುವಂತಿಲ್ಲ. ಹಾಗೆಂದು ಇದ್ದಲ್ಲಿಯೇ ನಿಲ್ಲುವಂತಿಲ್ಲ. ತೈಲವಿಲ್ಲದೆ ತುಕ್ಕು ಹಿಡಿದ ಚೈನು ಸೈಕಲ್ ಸರಾಗವಾಗಿ ಓಡಲು ಬಿಡುವುದಿಲ್ಲವಲ್ಲ ಹಾಗೆ. ಕೊಯಕ್, ಪಿಯಕ್ ಎನ್ನುವ ಕೀರಲು ಸದ್ದಿನೊಂದಿಗೆ ಏದುಸಿರು ಬಿಟ್ಟುಕೊಂಡು ಸಾಗುತ್ತಿತ್ತು. ಇಂಥ ಸನ್ನಿವೇಶದಲ್ಲಿ ಆಯಾ ಪಕ್ಷಗಳ ರಾಷ್ಟ್ರೀಯ ಮುಖಂಡರು ಒಟ್ಟೊಟ್ಟಿಗೆ ಕೊಟ್ಟಿರುವ ಸ್ಪಷ್ಟ ಹಾಗೂ ಖಡಕ್ ಸಂದೇಶ ನಾಯಕರು ಉಸಿರೆತ್ತದೆ ಬಾಲಮುದುರಿಕೊಂಡು ತಮ್ಮ ಪಾಡಿಗೆ ತಾವು ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿಸಿದೆ. ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆ ದಾರಿ ನೋಡಿಕೊಳ್ಳಬೇಕು ಎಂಬ ಖಡಕ್ ಎಚ್ಚರಿಕೆಯನ್ನೂ ನೀಡಿದೆ.

ನಿಜ, ಬಿ.ಎಸ್. ಯಡಿಯೂರಪ್ಪ ಅವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ಅವರೇ ಮುಂದಿನ ಬಾರಿಯೂ ಆ ಪಟ್ಟದರಸರು ಎಂದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಖಚಿತವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಎಲ್ಲ ಗೊಂದಲಗಳಿಗೆ ಇದೊಂದು ರೀತಿಯ ತೆರೆಯೂ ಹೌದು. ಅದೇ ಕಾಲಕ್ಕೆ ಈ ಸ್ಥಾನದ ಮೇಲೆ ಕಣ್ಣಿಟ್ಟು ಒಳತಂತ್ರ ನಿರತರಾಗಿದ್ದ ನಾಯಕರ ‘ಅನಗತ್ಯ ಶ್ರಮದಾನ’ಕ್ಕೆ ಕಡಿವಾಣವೂ ಹೌದು. ಉಳಿದಂತೆ ರಾಜ್ಯದಲ್ಲಿ ಸಕ್ರಿಯವಾಗಿರುವ ಜಾತ್ಯತೀತ ಜನತಾ ದಳದಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬ ಬಗ್ಗೆ ಪ್ರಶ್ನೆಯೇ ಇಲ್ಲ. ‘ಏಕೋಪಾಧ್ಯಯ ಶಾಲೆಯ ಮುಖ್ಯೋಪಾಧ್ಯಾಯ’ ಎಂಬಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅನವರತ ಮುಖ್ಯಮಂತ್ರಿ ಅಭ್ಯರ್ಥಿ. ಅಲ್ಲಿಗೆ ರಾಜ್ಯಾಧಿಕಾರದ ಉತ್ತುಂಗ ಸ್ಥಾನಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳು ಯಾರೆಂಬುದು ಇತ್ಯರ್ಥವಾಗಿದ್ದು, ಪಕ್ಷ-ಪಕ್ಷಗಳ ನಡುವಣ ನೈಜ ಚುನಾವಣೆ ಸಮರ ಇಲ್ಲಿಂದ ಆರಂಭವಾಗಲಿದೆ. ಅದೇ ರೀತಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಆಯಾ ಪಕ್ಷಗಳ ಒಳಗಣ ನಾಯಕತ್ವ ಕೇಂದ್ರೀಕೃತ ಪಿತೂರಿಗಳೂ ಸ್ಥಗಿತವಾಗಲಿವೆ, ಇಲ್ಲವೇ ಅನುಕೂಲಸಿಂಧು ತಿರುವುಗಳನ್ನು ಪಡೆದುಕೊಳ್ಳಲಿವೆ.

ರಾಜ್ಯ ಬಿಜೆಪಿ ವಿಚಾರಕ್ಕೆ ಬರುವುದಾದರೆ ಅಮಿತ್ ಶಾ ಅವರು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಯಡಿಯೂರಪ್ಪನವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ನಿಖರವಾಗಿ ಹೇಳಿದ್ದಾರೆ. ಅಲ್ಲದೇ ಮರುದಿನ ನಡೆದ ಬಿಜೆಪಿ ರಾಜಕೀಯ ವ್ಯವಹಾರಗಳ ಸಭೆಯಲ್ಲಿ ಪ್ರತಿಷ್ಠೆ, ಭಿನ್ನಮತ, ಗೊಂದಲ ಸೃಷ್ಟಿ ಬದಿಗಿಟ್ಟು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಎದುರಿಸಲು ಸಜ್ಜಾಗಿ ಎಂದೂ ಕಡ್ಡಿ ತುಂಡು ಮಾಡಿದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ)ಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿ, ರಾಜ್ಯಾಧ್ಯಕ್ಷರಾದ ನಂತರ ಯಡಿಯೂರಪ್ಪನವರ ವಿರುದ್ಧ ಪಕ್ಷದ ಒಳಗೆ ನಡೆಯುತ್ತಿದ್ದ ಬಹಿರಂಗ ಹಾಗೂ ತೆರೆಮರೆ ಸಮರಕ್ಕೆ ತೆರೆ ಎಳೆವ ಪ್ರಯತ್ನವನ್ನು ಶಾ ಮಾಡಿದ್ದಾರೆ. ರಾಯಣ್ಣ ಬ್ರಿಗೇಡ್ ಮಾಡಿಕೊಂಡು ಯಡಿಯೂರಪ್ಪ ವಿರುದ್ಧ ಬಯಲಲ್ಲಿ ತೊಡೆ ತಟ್ಟುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರಿಂದ ಹಿಡಿದು ಅವರ ಮಿದುಳಿನ ನರಗಳ ಚುಂಗು ಹಿಡಿದು ಮರ್ಕಟದಂತೆ ಕುಣಿಸುತ್ತಿದ್ದ ‘ಎಲೆಮರೆ ವೀರ’ರಿಗೂ ಶಸ್ತ್ರತ್ಯಾಗ ಮಾಡುವಂತೆ ಸಂದೇಶ ಕೊಟ್ಟಿದ್ದಾರೆ. ಆ ಮೂಲಕ, ಯಡಿಯೂರಪ್ಪನವರನ್ನು ಕಂಡಾಗ ನಕ್ಕು, ಅವರು ಸರಿದು ಹೋದ ನಂತರ ಒಳಗೊಳಗೆ ಮಸಲತ್ತು ನಡೆಸುತ್ತಿದ್ದ ‘ಅಸಹಕಾರ ಚಳವಳಿ’ ನೇತಾರರೆಲ್ಲ ‘ನವರಂಗಿ ಆಟ’ಗಳನ್ನು ಪಕ್ಕಕ್ಕೆ ಕಟ್ಟಿಕ್ಕಿ, ಚುನಾವಣೆ ಹೋರಾಟಕ್ಕೆ ತಮ್ಮನ್ನು ಸಜ್ಜು ಗೊಳಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತ ಮತ್ತು ವೀರಶೈವ ನಡುವಣ ಹೋರಾಟವನ್ನು ಚುನಾವಣೆ ತಂತ್ರದ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದರಿಂದ ಬಿಜೆಪಿ ಬಲವಂತವಾಗಿ ಉಸಿರು ಬಿಗಿ ಹಿಡಿಯುವಂತೆ ಮಾಡಿತ್ತು. ಈ ವಿಚಾರದಲ್ಲಿ ಬಾಯಿ ಬಿಟ್ಟರೆ ಕಷ್ಟ, ಬಿಡದಿದ್ದರೂ ಕಷ್ಟ ಎಂಬಂಥ ಸ್ಥಿತಿ ಅದು. ಇಂಥ ಸೂಕ್ಷ್ಮ ವಿಚಾರದಲ್ಲಿ ಮೌನದ ಮೊರೆ ಹೋಗುವಂತೆ ಹೈಕಮಾಂಡ್ ಕೂಡ ಮುಖಂಡರಿಗೆ ಸೂಚನೆ ಕೊಟ್ಟಿತ್ತು. ರಾಜ್ಯ ಲಿಂಗಾಯತ ಮಹಾಸಂಘಟನೆ ಕರೆದಿದ್ದ ಸಭೆಯನ್ನು ಬಿಜೆಪಿ ಮುಖಂಡರು ಬಹಿಷ್ಕರಿಸಿದ್ದು ಇದೇ ಕಾರಣಕ್ಕಾಗಿ. ಬಿಜೆಪಿ ಜತೆ ಗುರುತಿಸಿಕೊಂಡಿರುವ ಲಿಂಗಾಯತ ಸಮುದಾಯದ ಪ್ರತ್ಯೇಕ ಧರ್ಮ ಸ್ಥಾಪನೆ ಹೋರಾಟಕ್ಕೆ ಬೆಂಬಲ ಕೊಟ್ಟರೆ ಆ ಸಮುದಾಯದ ಒಂದಷ್ಟು ಮತಗಳನ್ನು ತನ್ನತ್ತ ಸೆಳೆದುಕೊಳ್ಳಬಹುದು, ಸಮುದಾಯವನ್ನು ವಿಂಗಡಿಸಬಹುದು ಎಂಬುದು ಕಾಂಗ್ರೆಸ್ ಚಿಂತನೆ. ಹಳೇ ಹೋರಾಟಕ್ಕೆ ಹೊಸ ತಿರುವು ಕೊಟ್ಟು, ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಲೆಕ್ಕಾಚಾರ. ಆದರೆ ಈ ವಿಚಾರದಲ್ಲಿ ತಟಸ್ಥ ನಿಲುವು ತಳೆದ ಬಿಜೆಪಿ ಮುಖಂಡರ ಬಗ್ಗೆ ಲಿಂಗಾಯತ ಸಮುದಾಯಕ್ಕೆ ಅವ್ಯಕ್ತ ಅನುಮಾನವಿತ್ತು. ಆದರೆ ಈಗ ಅಮಿತ್ ಶಾ ಅದೇ ಸಮುದಾಯದ ಯಡಿಯೂರಪ್ಪನವರನ್ನು ಮುಂದಿನ ಸಿಎಂ ಮಾಡುವುದಾಗಿ ಹೇಳುವ ಮೂಲಕ ಆ ಸಮುದಾಯದ ಭಾವನೆಗಳನ್ನು ಪಲ್ಲಟಗೊಳಿಸಲು ಯತ್ನಿಸಿದ್ದ ಕಾಂಗ್ರೆಸ್ ಪ್ರಯತ್ನಕ್ಕೆ ಬ್ರೇಕ್ ಹಾಕಿದ್ದಾರೆ. ತಮ್ಮ ಸಮುದಾಯದವರೇ ಸಿಎಂ ಆಗುವುದಾದರೆ ಲಿಂಗಾಯತರು ಬಿಜೆಪಿ ಜತೆ ಬಂಡೆಗಲ್ಲಿನಂತೆ ನಿಲ್ಲುತ್ತಾರೆಂಬ ಶಾ ನಂಬಿಕೆ ಅನುಮಾನಗಳ ಆಚಿನದ್ದು.

ಈ ಮಧ್ಯೆ, ಬಿಜೆಪಿ ಸೇರಿದಂತೆ ರಾಜಕೀಯ ಪಡಸಾಲೆಯಲ್ಲಿ ನಾನಾ ಗಾಳಿಪಟಗಳು ಹಾರಾಡಿದ್ದವು. ಮುಂದಿನ ವಿಧಾನಸಭೆ ಚುನಾವಣೆ ಮುಗಿಯುವ ಮುನ್ನ ಯಡಿಯೂರಪ್ಪನವರು 75 ವಸಂತಗಳನ್ನು ಪೂರೈಸಲಿದ್ದಾರೆ. ಬಿಜೆಪಿ ನೂತನ ನಿಯಮದ ಪ್ರಕಾರ 75 ವರ್ಷ ದಾಟಿದವರಿಗೆ ಅಧಿಕಾರ ನೀಡುವಂತಿಲ್ಲ. ಹೀಗಾಗಿ ಯಡಿಯೂರಪ್ಪ ಸಿಎಂ ಹುದ್ದೆಗೆ ಅನರ್ಹರಾಗುವರು. ಮೊದಲೇ ಅವರ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಒಮ್ಮತ ಇಲ್ಲ, ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಅವರಿಗೆ ಸಿಎಂ ಪಟ್ಟ ಕೊಡುವುದಿಲ್ಲ. ಕೊಟ್ಟರೂ ಮುಂದಿನ ಲೋಕಸಭೆ ಚುನಾವಣೆವರೆಗೆ ಮಾತ್ರ. ಅವರಿಗೆ ಸಿಎಂ ಪಟ್ಟ ಕೊಡದೇ ಹೋದರೆ ಲಿಂಗಾಯತ ಸಮುದಾಯ ಮುನಿಸಿಕೊಳ್ಳುತ್ತದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಲೋಕಸಭೆ ಚುನಾವಣೆವರೆಗೆ ಯಡಿಯೂರಪ್ಪನವರನ್ನು ಸಿಎಂ ಮಾಡಲಾಗುತ್ತದೆ. ನಂತರ ಅವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಬೇರೆಯವರನ್ನು ಸಿಎಂ ಪಟ್ಟಕ್ಕೆ ತರುತ್ತಾರೆ. ಪಕ್ಷದಲ್ಲಿ ಸಿಎಂ ಪಟ್ಟಕ್ಕೆ ಅದೇ ಸಮುದಾಯದ ಹೊಸ ನಾಯಕರು ಇಲ್ಲ. ಈಗಾಗಲೇ ಸಿಎಂ ಆಗಿರುವವರಿಗೆ ಯಡಿಯೂರಪ್ಪನವರಿಗಿಷ್ಟು ಪ್ರಭಾವ, ವರ್ಚಸ್ಸು ಇಲ್ಲ. ಬೇರೆಯವರನ್ನು ಮಾಡಿದರೆ ಪಕ್ಷದಲ್ಲಿ ಒಳಜಗಳ ಶುರುವಾಗಬಹುದು. ಹೀಗಾಗಿ ರಾಷ್ಟ್ರೀಯ ನಾಯಕರು ಬೇರೊಂದು ತಂತ್ರ ಹುಡುಕಿದ್ದಾರೆ. ಎಲ್ಲರ ನಿರೀಕ್ಷೆ ತಲೆಕೆಳಗು ಮಾಡಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರನ್ನು ಸಿಎಂ ಮಾಡಿದಂತೆ ಕರ್ನಾಟಕದಲ್ಲಿ ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಆ ಸ್ಥಾನಕ್ಕೆ ತರುವ ಚಿಂತನೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಅಮಿತ್ ಶಾ ಅವರು ಶ್ರೀಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದೆಲ್ಲ ಹಬ್ಬಿಸಲಾಗಿತ್ತು. ಈ ಊಹಾಪೋಹಾ ಕೂಡ ಬಿಜೆಪಿ ವಲಯದ ಯಡಿಯೂರಪ್ಪ ವಿರೋಧಿ ಪಾಳೆಯದಲ್ಲಿ ಟಿಸಿಲೊಡೆದಿತ್ತು. ಇದಕ್ಕೆ ಕಾಂಗ್ರೆಸ್, ಜೆಡಿಎಸ್ ನಾಯಕರೂ ತಾಳ-ತಂಬೂರಿ ಮೀಟಿದ್ದರು. ಆದರೆ ಅಮಿತ್ ಶಾ ಅವರು ಇದೀಗ ಯಡಿಯೂರಪ್ಪನವರೇ ಸಿಎಂ ಅಭ್ಯರ್ಥಿ ಎಂದು ಹೇಳುವ ಮೂಲಕ ಈ ಎಲ್ಲ ವದಂತಿಗಳಿಗೆ ಹೊದಿಕೆ ಹೊದ್ದಿಸಿದ್ದಾರೆ. ಈಗ ಬಿಜೆಪಿಯ ಉಳಿದ ನಾಯಕರು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಗೆಲುವಿಗೆ ಬಿಸಿಯುಸಿರು ಧಾರೆಯರೆಯಬೇಕಷ್ಟೇ!

ಇನ್ನು ಕಾಂಗ್ರೆಸ್ ವಿಷಯ. ಈಗಾಗಲೇ ಸಿಎಂ ಆಗಿರುವ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಕಳೆದ ನಾಲ್ಕೂವರೇ ವರ್ಷದಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ನಡೆದ ತಂತ್ರ, ಪ್ರತಿತಂತ್ರ, ಕುತಂತ್ರಗಳು ಒಂದೆರಡಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ವಿಧಿಬರಹ ಸರಿಯಿಲ್ಲದೇ ಹೋದದ್ದೇ ಸಿದ್ದರಾಮಯ್ಯನವರ ಅಧಿಕಾರದ ಹಣೆಬರಹವನ್ನು ಮತ್ತಷ್ಟು ಗಟ್ಟಿ ಮಾಡಿತ್ತು. ಜತೆಗೆ ರಾಜ್ಯ ಕಾಂಗ್ರೆಸ್‌ನಲ್ಲೂ ಕಟ್ಟುಮಸ್ತು ಪರ್ಯಾಯ ನಾಯಕರು ಇರಲಿಲ್ಲ. ‘ದಲಿತ ಸಿಎಂ’ ಹೆಸರಲ್ಲಿ ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ’ಬಲಿತ ಸಿಎಂ’ ನೆಪದಲ್ಲಿ ಎಸ್.ಎಂ. ಕೃಷ್ಣ ಅವರಂಥವರ ತೆರೆಮರೆಯ ಪ್ರಯತ್ನಗಳು ಸಿದ್ದರಾಮಯ್ಯನವರ ಅದೃಷ್ಟದಾಟದ ಮುಂದೆ ಸವೆದು ಹೋದವು. ಕೃಷ್ಣ ಅವರಂಥವರು ಪಕ್ಷ ಬಿಟ್ಟು ಹೋದರು. ದೇಶಾದ್ಯಂತ ಗುಡಿಸಿಕೊಂಡು ಹೋಗುತ್ತಿರುವ ಕಾಂಗ್ರೆಸ್ಸಿಗೆ ಪಕ್ಷ ಅಧಿಕಾರದಲ್ಲಿದ್ದು, ಅಷ್ಟೋ-ಇಷ್ಟೋ ಮರ್ಯಾದೆ ಉಳಿಸಿರುವ ಅತಿ ದೊಡ್ಡ ರಾಜ್ಯ ಕರ್ನಾಟಕದಲ್ಲಿ ವಿನಾಕಾರಣ ತೊಂದರೆ ಮೈಮೇಲೆ ಎಳೆದುಕೊಳ್ಳುವುದು ಬೇಕಿರಲಿಲ್ಲ. ಹೀಗಾಗಿ ನಾನಾ ಶೈಲಿಗಳಲ್ಲಿ ಅನೇಕ ನಾಯಕರು ಸಿಎಂ ಗಾದಿಗಾಗಿ ಮಾಡಿದ ಪ್ರಯತ್ನವನ್ನು ಪೋಷಿಸಲು ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ಪ್ರಸ್ತುತ ಅಧಿಕಾರದ ಅವಧಿ ಆಭಾದಿತ.

ಆದರೆ ಮುಂದೇನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣವಿರಲಿಲ್ಲ. ಏಕೆಂದರೆ ಮುಂದಿನ ಚುನಾವಣೆ ಚಿತ್ರಣವನ್ನು ಈಗಿನ ರಾಜಕೀಯ ಸ್ಥಿತಿಗತಿಯ ಕಣ್ಣೋಟದಲ್ಲಿಟ್ಟು ನಿಖರವಾಗಿ ತೂಗಲು ಸಾಧ್ಯವಿಲ್ಲ. ಹೆಚ್ಚೆಂದರೆ ಊಹಿಸಬಹುದು. ಆದರೆ ಈ ಊಹೆ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಪಕ್ಷದವರಿಗೂ ಅವರವರ ಕಣ್ಣಿನ ನೇರಕ್ಕೆ ಊಹೆ ತೆರೆದುಕೊಳ್ಳುತ್ತದೆ. ಹೀಗಾಗಿ ರೇಖೆ ಎಳೆದಂತೆ ಸ್ಪಷ್ಟ ಚಿತ್ರಣ ಅಲಭ್ಯ. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಮುಂದೆ ಗೊತ್ತಿಲ್ಲ. ಒಂದೊಮ್ಮೆ ಅಧಿಕಾರಕ್ಕೆ ಬಂದರೂ ಸಿಎಂ ಗಾದಿಗಾಗಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾಯುತ್ತಿರುವ ಚಾತಕಪಕ್ಷಿಗಳ ಪಟ್ಟಿ ಕಡಿಮೆ ಏನಿಲ್ಲ. ಸಾಲು ಹಚ್ಚಿ ನಿಂತಿದ್ದಾರೆ. ಹಿರಿಯ ಜೀವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಗುವುದು ರಾಜಕೀಯ ಜೀವಮಾನದ ಕೊನೇ ಕನಸು. ಜಿ.ಪರಮೇಶ್ವರ ಕನಸು ಕಾಣಲು ಆರಂಭಿಸಿ ಆಗಲೇ ಐದು ವರ್ಷ ಕಳೆದಿದೆ. ಉಳಿದಿರುವ ಅವಧಿ ಸಾಕಷ್ಟಿದೆ. ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ದಲಿತ ಸಿಎಂ’ ಕನಸಿನ ವಾರಸುದಾರರಿಗೆ ಪೈಪೋಟಿ ನೀಡುವ ಮನಸು. ಇನ್ನು ‘ಫೈರ್ ಬ್ರಾಂಡ್’ ನಾಯಕ, ಇಂಧನ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಕನಸು ಹೊಸದಲ್ಲ. ಐದು ವರ್ಷ ಹಳೆಯ ಕನಸಿಗೆ ಇನ್ನೈದು ವರ್ಷದ ವಿನಾಯಿತಿಯನ್ನು ಅವರೇ ಕೊಟ್ಟುಕೊಂಡಿದ್ದರು. ಕಳೆದ ಅವಧಿಯಲ್ಲಿ ಅವರ ಬಯಕೆ ವಸ್ತುಸ್ಥಿತಿ ಮುಂದೆ ಮಂಡಿಯೂರಿತ್ತು. ಹೀಗಾಗಿ ಪ್ರಯತ್ನ ಹಂತವನ್ನೂ ಮುಟ್ಟಲಿಲ್ಲ. ಆದರೆ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಸಿಎಂ ಬಯಕೆಯನ್ನು ಹತ್ತಿಕ್ಕಬಾರದು ಎಂದುಕೊಂಡಿದ್ದರು. ಅದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷರಾಗಲು ಗಂಭೀರ ಪ್ರಯತ್ನ ನಡೆಸಿದ್ದರು. ಆದರೆ ತಂತ್ರಕ್ಕೆ ಪ್ರತಿತಂತ್ರ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವಣ ರಾಜೀತಂತ್ರದ ಪರಿಣಾಮ ಶಿವಕುಮಾರ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೀಮಿತರಾಗಬೇಕಾಯಿತು. ಈ ಮಧ್ಯೆ, ಅವರು ಮತ್ತವರ ಬೆಂಬಲಿಗರ ಮನೆ, ಕಚೇರಿಗಳ ಮೇಲೆ ನಡೆದಿರುವ ತೆರಿಗೆ ಇಲಾಖೆ ದಾಳಿ ಅವರ ಕನಸಿಗೊಂದು ಕೊಡಲಿ ಪೆಟ್ಟು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಸುವ ಅಹ್ಮದ್ ಪಟೇಲ್ ನಡುವಣ ಪ್ರತಿಷ್ಠೆ ಸಮರದಲ್ಲಿ ಅಸ್ತ್ರವಾಗಿ ಬಳಕೆ ಆದ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಟ್ಟ ಸಂದರ್ಭದಲ್ಲೇ ಐಟಿ ದಾಳಿಗೆ ಒಳಗಾದರು. ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆದ್ದು ಶಿವಕುಮಾರ್‌ಗೆ ಹೀರೋ ಪಟ್ಟ ಪ್ರಾಪ್ತಿಯಾದರೂ ರಾಜಕೀಯ ಒಳಾಟದಲ್ಲಿ ಪೆಟ್ಟು ತಿಂದಿದ್ದಾರೆ. ಕಾಂಗ್ರೆಸ್ಸಿನಲ್ಲಿ ಭವಿಷ್ಯದ ಸಿಎಂ ಕನಸು ಕಾಣುತ್ತಿದ್ದವರಿಗೆ ಶಿವಕುಮಾರ್ ಪೈಪೋಟಿ ತಪ್ಪಿಸಲು ಐಟಿ ದಾಳಿ ನೆಪವಾಗಿ ಸಿಕ್ಕಿದೆ.

ಈ ರೀತಿ ಕಾಂಗ್ರೆಸ್ಸಿಲ್ಲಿ ಒಬ್ಬೊಬ್ಬ ನಾಯಕರದು ಒಂದೊಂದು ಕನಸು. ಅದಕ್ಕೆ ಮೇರುಸದೃಶ ಹಾಗೂ ಮತ್ತೊಂದು ಅವಧಿಗೆ ತಾವೇ ಏಕೆ ಆಗಬಾರದು ಎಂಬ ಸಿದ್ದರಾಮಯ್ಯನವರ ಅಭೀಪ್ಸೆ. ಇದೇ ಕೊನೇ ಚುನಾವಣೆ ಎಂದು ಕಳೆದ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೂ ಇತ್ತೀಚೆನ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆ ನಂತರ ಮತ್ತೊಮ್ಮೆ ಸಿಎಂ ಆಗುವ ಬಯಕೆ ಅವರಲ್ಲಿ ಹೆಮ್ಮರವಾಗಿದೆ. ದಿಗ್ವಿಜಯ್ ಸಿಂಗ್ ಬದಲು ವೇಣುಗೋಪಾಲ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಳ್ಳುವ ಮೊದಲು ಆ ಬಯಕೆಯನ್ನು ಸಿದ್ದರಾಮಯ್ಯನವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಆದರೆ ಗಾದಿ ಆಕಾಂಕ್ಷಿತ ಪಕ್ಷದ ಅನ್ಯ ನಾಯಕರು ಇದನ್ನು ದೂರು ಸ್ವರೂಪದಲ್ಲಿ ಹೈಕಮಾಂಡ್ ಕಿವಿಗೆ ಸುರಿವಿದ್ದರಿಂದ ಮೌನಕ್ಕೆ ಶರಣಾಗಿದ್ದರು. ಆದರೆ ಇದೀಗ ಸಾಕ್ಷಾತ್ ಕಾಂಗ್ರೆಸ್ ಹೈಕಮಾಂಡೇ ಅಂದರೆ ರಾಹುಲ್ ಗಾಂಧಿ ಅವರೇ ಮುಂದಿನ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯಲಿದೆ, ಅವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದರಿಂದ ಉಳಿದ ಆಕಾಂಕ್ಷಿಗಳ ಕನಸೆಲ್ಲ ಕತ್ತಲಲ್ಲೇ ಕರಗಿ ಹೋಗಿದೆ. ಮತ್ತೊಂದು ಅವಧಿಗೆ ಸಿದ್ದರಾಮಯ್ಯನವರ ನಾಯಕತ್ವ ಒಪ್ಪಿಕೊಂಡು ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳಲೇಬೇಕು. ಕಾಂಗ್ರೆಸ್ಸಿನಲ್ಲಿ ಅವರು ಕಾಣಬಹುದಾದ ಏಕಮಾತ್ರ ಕನಸು ಇದೊಂದೇ.

ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಘೋಷಣೆ ಹಿಡಿಸದವರ ಮುಂದೆ ಬೇರೆ ಕನಸುಗಳು, ಆಯ್ಕೆಗಳಿಗೆ ಅವಕಾಶ ಇಲ್ಲವೇ ಇಲ್ಲ ಎಂದೇನೂ ಇಲ್ಲ. ಆದರೆ ಅದಕ್ಕಾಗಿ ಅವರು ಆಯಾ ಪಕ್ಷತ್ಯಾಗ ಮಾಡಬೇಕಷ್ಟೇ. ಆದರೆ ಅಷ್ಟೊಂದು ಧೈರ್ಯ ಯಾರಿಗೂ ಇದ್ದಂತಿಲ್ಲ. ಏಕೆಂದರೆ ಬಾಣಲೆ ಆಚೆಗೆ ಕಾಣುತ್ತಿರುವುದು ಬೆಂಕಿ ಮಾತ್ರವಷ್ಟೇ!

ಲಗೋರಿ: ಬಾವಿಯಲ್ಲಿ ಕಂಡ ಸಾವನ್ನು ಬೋರ್‌ವೆಲ್‌ನಲ್ಲಿ ಅಪ್ಪಿಕೊಳ್ಳುವುದು ಬುದ್ಧಿವಂತಿಕೆ ಅಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply