ವಿದೇಶದಲ್ಲಿ ಟೀಂ ಇಂಡಿಯಾಗೆ ಸಿಕ್ತು ಮೊದಲ ಕ್ಲೀನ್ ಸ್ವೀಪ್ ಜಯ, ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ವರ್ಷದ ಅವಧಿಯಲ್ಲಿ ತವರಿನಲ್ಲಿ ಪಾರುಪತ್ಯ ನಡೆಸಿದ್ದ ಟೀಂ ಇಂಡಿಯಾ, ಈಗ ವಿದೇಶದಲ್ಲೂ ಕ್ಲೀನ್ ಸ್ವೀಪ್ ಜಯದೊಂಜದಿಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 171 ರನ್ ಗಳ ಜಯ ದಾಖಲಿಸಿದ್ದು, ಆ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಪಳ್ಳೆಕೆಲೆಯ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಆತಿಥೇಯರನ್ನು ಎರಡೂವರೆ ದಿನದಲ್ಲೇ ಪರಾಭವಗೊಳಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 487 ರನ್ ದಾಖಲಿಸಿತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಇನಿಂಗ್ಸ್ ನಲ್ಲಿ 135ಕ್ಕೆ ಸರ್ವಪತನ ಕಂಡು ಫಾಲೋಆನ್ ಎದುರಿಸಿತು. ಎರಡನೇ ಇನಿಂಗ್ಸ್ ನಲ್ಲೂ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಭಾರತ 181 ರನ್ ಗಳಿಗೆ ಆಲೌಟ್ ಆಗಿ ಸುಲಭವಾಗಿ ಟೀಂ ಇಂಡಿಯಾ ಮುಂದೆ ಶರಣಾಯಿತು.

ಭಾರತದ ಪರ ಬ್ಯಾಟಿಂಗ್ ನಲ್ಲಿ ಶಿಖರ್ ಧವನ್ (109), ಪಾಂಡ್ಯ (108), ರಾಹುಲ್ (85) ಉತ್ತಮ ಆಟವಾಡಿದರೆ, ಬೌಲಿಂಗ್ ನಲ್ಲಿ ಸಂಘಟಿತ ದಾಳಿ ನಡೆಸಿತು. ಮೊದಲ ಇನಿಂಗ್ಸ್ ನಲ್ಲಿ ಕುಲ್ದೀಪ್ ಯಾದವ್ 4, ಶಮಿ ಮತ್ತು ಅಸ್ವಿನ್ ತಲಾ 2 ಹಾಗೂ ಪಾಂಡ್ಯ 1 ವಿಕೆಟ್ ಪಡೆದರು. ಎರಡನೇ ಇನಿಂಗ್ಸ್ ನಲ್ಲಿ  ಅಶ್ವಿನ್ 4, ಶಮಿ 3, ಉಮೇಶ್ 2 ಹಾಗೂ ಕುಲ್ದೀಪ್ 1 ವಿಕೆಟ್ ಪಡೆದರು.

ಟೆಸ್ಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇವಿಷ್ಟು ಪಂದ್ಯದ ಪ್ರಮುಖ ಹೈಲೈಟ್ಸ್. ಇನ್ನು ಪಂದ್ಯದ ಪ್ರಮುಖ ಅಂಕಿ ಅಂಶಗಳು ಹೀಗಿವೆ…

  • ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಜಯ ಸಾಧಿಸಿದೆ. ಇನ್ನು ತವರಿನ ಅಂಗಳ ಸೇರಿದಂತೆ ಒಟ್ಟು 5ನೇ ಬಾರಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
  • ವಿದೇಶದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಖ್ಯಾತಿ ವಿರಾಟ್ ಕೊಹ್ಲಿ ಪಾಲಾಯಿತು.
  • ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ 26 ಟೆಸ್ಟ್ ಪಂದ್ಯಗಳ ಪೈಕಿ ಟೀಂ ಇಂಡಿಯಾ 20 ರಲ್ಲಿ ಜಯ, 1 ರಲ್ಲಿ ಸೋಲು ಹಾಗೂ 5 ರಲ್ಲಿ ಡ್ರಾ ಫಲಿತಾಂಶ ಕಂಡಿದೆ.
  • ತಮ್ಮ ನಾಯಕತ್ವದ ಆರಂಭಿಕ 29 ಪಂದ್ಯಗಳಲ್ಲಿ ಅತಿ ಹೆಚ್ಚು ಜಯ ಸಾಧಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕರುಗಳಾದ ಸ್ಟೀವ್ ವಾ ಹಾಗೂ ರಿಕಿ ಪಾಂಟಿಂಗ್ ತಲಾ 21 ಪಂದ್ಯಗಳನ್ನು ಗೆದ್ದರೆ, ಕೊಹ್ಲಿ 19 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.
  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎಂಟನೇ ಬಾರಿಗೆ ಪ್ರವಾಸಿ ತಂಡ ಆತಿಥೇಯ ತಂಡದ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಜಯ ಸಾಧಿಸಿದ್ದು, ಈ ಸಾಧನೆ ಮಾಡಿದ ಮೊದಲ ಏಷ್ಯಾ ತಂಡವಾಗಿದೆ.
  • ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡ ತವರಿನ ಅಂಗಳದಲ್ಲಿ ಸತತ ಎರಡು ಬಾರಿ ಇನಿಂಗ್ಸ್ ಸೋಲನುಭವಿಸಿದೆ.
  • ವಿದೇಶಿ ನೆಲದಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಅತಿ ದೊಡ್ಡ ಜಯ ಇದಾಗಿದ್ದು, 10 ವರ್ಷಗಳ ಹಿಂದೆ ಢಾಕಾದಲ್ಲಿ ಬಾಂಗ್ಲಾದೇಶದ ವಿರುದ್ಧ ಇನಿಂಗ್ಸ್ ಹಾಗೂ 239 ರನ್ ಅಂತರದ ಜಯ ದಾಖಲಿಸಿದ್ದು, ಮೊದಲ ಸ್ಥಾನದಲ್ಲಿದೆ.
  • ಭಾರತ ತಂಡ ಶ್ರೀಲಂಕಾ ತಂಡವನ್ನು ಅದರದೇ ನೆಲದಲ್ಲಿ ಸತತ ಐದು ಪಂದ್ಯಗಳಿಂದ ಮಣಿಸಿದೆ. ಆದರೆ ಶ್ರೀಲಂಕಾ ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿಲ್ಲ.

Leave a Reply