ಗೊರಖಪುರ ಆಸ್ಪತ್ರೆ ದುರಂತದಲ್ಲಿ ಹೀರೋ ಆಗಿದ್ದ ಡಾ.ಕಫೀಲ್ ಖಾನ್ ಈಗ ಆರೋಪಿ ಸ್ಥಾನದಲ್ಲಿ ನಿಂತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಗೊರಖಪುರದ ಬಿಆರ್ ಡಿ ಆಸ್ಪತ್ರೆ ದುರಂತದ ಸಂದರ್ಭದಲ್ಲಿ ಕೆಲವು ಮಕ್ಕಳ ಪ್ರಾಣ ಉಳಿಸಿ ಹಿರೋ ಆಗಿದ್ದ ಡಾ.ಕಫೀಲ್ ಖಾನ್ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆಸ್ಪತ್ರೆಯಲ್ಲಿರುವ ಆಮ್ಲಜನಕವನ್ನು ಅಕ್ರಮವಾಗಿ ತಮ್ಮ ಖಾಸಗಿ ಕ್ಲಿನಿಕ್ ಗಾಗಿ ಬಳಸಿಕೊಳ್ಳುತ್ತಿದ್ದರು ಹಾಗೂ ಆಸ್ಪತ್ರೆಯ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬುದು ಕಫೀಲ್ ಮೇಲೆ ಬಂದಿರುವ ಆರೋಪಗಳು.

ಆಗಸ್ಟ್ 11-12 ರಂದು ಪರಿಸ್ಥಿತಿ ಹದಗೆಟ್ಟು ಮಕ್ಕಳು ಅಪಾಯದಲ್ಲಿ ಸಿಲುಕಿದ್ದಾಗ ಕಫೀಲ್ ಖಾನ್ ತಮ್ಮ ಕ್ಲಿನಿಕ್ ನಿಂದ ಆಕ್ಸಿಜನ್ ತರಿಸಿ ಅಗತ್ಯ ಸಮಯದಲ್ಲಿ ಚಿಕಿತ್ಸೆ ನೀಡಿ ಪ್ರಾಣಾಪಾಯದಲ್ಲಿದ್ದ ಹಲವು ಮಕ್ಕಳನ್ನು ರಕ್ಷಿಸಿದ್ದರು. ಆಗ ಕಫೀಲ್ ಖಾನ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ನಂತರ ಎರಡು ದಿನದಲ್ಲೇ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಜೀವ್ ಮಿಶ್ರಾ ಅವರು ಕಫೀಲ್ ರನ್ನು ಸೇವೆಯಿಂದ ವಜಾ ಮಾಡಿ ಆದೇಶ ನೀಡಿದ್ದರು. ಆಸ್ಪತ್ರೆಯ ಈ ನಿರ್ಧಾರವನ್ನು ವ್ಯಾಪಕವಾಗಿ ಖಂಡಿಸಲಾಗಿತ್ತು.

ಆದರೆ ಈಗ ಆಸ್ಪತ್ರೆಯ ಶಿಶುತಜ್ಞ ವಿಭಾಗದ ನೋಡಲ್ ಅಧಿಕಾರಿ ಕಫೀಲ್ ಅವರು ಕಫೀಲ್ ವಿರುದ್ಧ ಆರೋಪ ಮಾಡಿದ್ದಾರೆ. ‘ಡಾ.ಕಫೀಲ್ ಅವರು ಆಸ್ಪತ್ರೆಯಲ್ಲಿದ್ದ ಆಮ್ಲಜನಕವನ್ನು ತಮ್ಮ ಖಾಸಗಿ ಕ್ಲಿನಿಕ್ ಗೆ ರವಾನಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎಲ್ಲಾ ಜವಾಬ್ದಾರಿಗಳಿಂದ ಅವರನ್ನು ವಜಾಗೊಳಿಸಲಾಗಿದೆ. ಕಫೀಲ್ ಅವರು ಅಕ್ರಮವಾಗಿ ಆಕ್ಸಿಜನ್ ರವಾನಿ ಮಾಡಿದ್ದರಿಂದಲೇ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗಿ ಈ ದುರಂತ ಸಂಭವಿಸಿದೆ’ ಎಂದು ಅಧಿಕಾರಿ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಕಫೀಲ್ ಅರು ಆಸ್ಪತ್ರೆಯ ಸರಬರಾಜು ವಿಭಾಗದ ಸದಸ್ಯರೂ ಆಗಿದ್ದು, ಆಸ್ಪತ್ರೆಗೆ ಅಗತ್ಯವಿರುವ ಚಿಕಿತ್ಸಾ ಲಸಿಕೆ ಹಾಗೂ ಉಪಕರಣಗಳ ಶೇಖರಣೆಯ ಜವಾಬ್ದಾರಿ ಹೊಂದಿದ್ದರು. ಅಲ್ಲದೆ, ಆಗಸ್ಟ್ 9ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಫೀಲ್ ಪರಿಸ್ಥಿತಿಯನ್ನು ಸಿಎಂ ಅವರಿಗೆ ವಿವರಿಸಿದ್ದು, ಈ ವೇಳೆ ಆಮ್ಲಜನಕದ ಕೊರತೆ ಹಾಗೂ ಆಮ್ಲಜನಕ ಪೂರೈಸುತ್ತಿದ್ದ ಕಂಪನಿಗೆ ಆಸ್ಪತ್ರೆ ನೀಡಬೇಕಿದ್ದ ಬಾಕಿಯ ಕುರಿತು ಬಾಯಿ ಬಿಟ್ಟಿರಲಿಲ್ಲ.

ಆಗಸ್ಯ್ 11ರ ರಾತ್ರಿ ಆಸ್ಪತ್ರೆಯಲ್ಲಿ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಡಾ.ಕಫೀಲ್ ಅವರು ತಕ್ಷಣವೇ ತಮ್ಮ ಕ್ಲಿನಿಕ್ ನಿಂದ ಮೂರು ಆಕ್ಸಿಜನ್ ಸಿಲಿಂಡರ್ ಅನ್ನು ಕಳುಹಿಸಿದ್ದರು. ಈ ಸಿಲಿಂಡರ್ ಗಳನ್ನು ಕಫೀಲ್ ಅವರು ಇದೇ ಆಸ್ಪತ್ರೆಯಿಂದಲೇ ತೆಗೆದುಕೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಕಫೀಲ್ ಖಾನ್ ಈ ರೀತಿಯಾಗಿ ತಮ್ಮ ಕ್ಲಿನಿಕ್ ಗೆ ಆಮ್ಲಜನಕ ತೆಗೆದುಕೊಂಡು ಹೋಗುವುದರ ಬಗ್ಗೆ ಆಸ್ಪತ್ರೆ ಮುಖ್ಯಸ್ಥ ರಾಜೀವ್ ಮಿಶ್ರಾ ಅರಿಗೆ ಮಾಹಿತಿ ಇದ್ದರು ಅವರು ಮೌನ ವಹಿಸಿ ಕಫೀಲ್ ಅವರಿಗೆ ಅನುಮತಿ ನೀಡಿದ್ದರು. ಅಷ್ಟೆ ಅಲ್ಲದೆ ಆಕ್ಸಿಜನ್ ಸಿಲಿಂಡರ್ ಪೂರೈಸುವ ಪುಷ್ಪ ಕಂಪನಿಯಿಂದ ಹಾಗೂ ಆಸ್ಪತ್ರೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಈ ಇಬ್ಬರು ಕಮಿಷನ್ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ಕಫೀಲ್, ಆಸ್ಪತ್ರೆಯಲ್ಲಿನ ದುರಂತ ಹಾಗೂ 68 ಮಕ್ಕಳ ಸಾವಿಗೆ ರಾಜೀವ್ ಮಿಶ್ರಾ ಹಾಗೂ ಅವರ ಪತ್ನಿ ಪೂರ್ಣಿಮಾ ಶುಕ್ಲಾ ಅವರೆ ಜವಾಬ್ದಾರಿ ಎಂದಿದ್ದಾರೆ.

Leave a Reply