ಭಯೋತ್ಪಾದನೆ, ಕೋಮುವಾದ, ಜಾತಿಯತೆ ಮುಕ್ತ ‘ನವ ಭಾರತ’ದ ಕುರಿತು ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನವದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿದ್ದು, 2022ರ ವೇಳೆಗೆ ನವ ಭಾರತದ ನಿರ್ಮಾಣ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ಮೋದಿ ಸುದೀರ್ಘ 56 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಅದರ ಪ್ರಮುಖ ಸಾರಾಂಶ ಹೀಗಿದೆ…

‘ದೇಶವನ್ನು 2022ರ ವೇಳೆಗೆ ನವ ಭಾರತವನ್ನಾಗಿ ಪರಿವರ್ತಿಸಬೇಕಿದೆ. ನವ ಭಾರತವು ಜಾತಿಯತೆ, ಕೋಮುವಾದ, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಮುಕ್ತವಾಗಿರಬೇಕು. ಕಾಶ್ಮೀರದಲ್ಲಿ ಯುವಕರು ಬಂದೂಕು ಹಿಡಿಯುವುದನ್ನು ಬಿಟ್ಟು ಸಮಾಜಮುಖಿಯಾಗಬೇಕು. ಪ್ರೀತಿ ಹಾಗೂ ಸಹಕಾರದಿಂದ ಮಾತ್ರ ಕಾಶ್ಮೀರದ ಸಮಸ್ಯೆ ಪರಿಹಾರವಾಗಲಿದೆ. ಕಾಶ್ಮೀರವು ಮತ್ತೆ ತನ್ನ ಗತವೈಭವಕ್ಕೆ ಮರಳಿ ಸ್ವರ್ಗವಾಗಿ ಪರಿವರ್ತನೆಯಾಗಬೇಕು. ಕಾಶ್ಮೀರದ ಸಮಸ್ಯೆಯನ್ನು ಬೈಗುಳ ಅಥವಾ ಬಂದೂಕಿನ ಗುಂಡಿನಿಂದ ಪರಿಹಾರ ಮಾಡಲು ಸಾಧ್ಯವಿಲ್ಲ. ಕೇವಲ ಪ್ರೀತಿಯ ಅಪ್ಪುಗೆ ಮಾತ್ರ ಈ ಸಮಸ್ಯೆಗೆ ಪರಿಹಾರ ನೀಡಲಿದೆ.

ಭಾರತ ಭಯೋತ್ಪಾದನೆಯನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಯೋತ್ಪಾದನೆಯತ್ತ ಹೆಜ್ಜೆ ಇಟ್ಟಿರುವವರು ಮತ್ತೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಮುಖ್ಯವಾಹಿನಿಗೆ ಬಾರದ ಹೊರತು ನಿಮ್ಮ ಜೀವನದಲ್ಲಿ ಹೊಸ ಚೈತನ್ಯ ಬರಲು ಸಾಧ್ಯವೇ ಇಲ್ಲ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಏಕಾಂಗಿಯಲ್ಲ. ವಿಶ್ವದ ಅನೇಕ ರಾಷ್ಟ್ರಗಳು ಈಗ ಭಾರತದ ಬೆನ್ನಿಗೆ ನಿಂತಿವೆ. ನಾವೆಲ್ಲರೂ ಭಯೋತ್ಪಾದನೆ ನಿರ್ಮೂಲನೆಗಾಗಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದ್ದೇವೆ. ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟಕ್ಕೆ ಬೆಂಬಲ ನೀಡಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ದೇಶದ ರಕ್ಷಣೆಯ ವಿಷಯದಲ್ಲಿ ಭಾರತೀಯ ಸೇನೆ ಎಂದಿಗೂ ತನ್ನ ಹೆಜ್ಜೆಯನ್ನು ಹಿಂದಿಟ್ಟಿಲ್ಲ. ಭಯೋತ್ಪಾದಕರೇ ಆಗಿರಲಿ, ನುಸುಳುಕೋರರೇ ಆಗಿರಲಿ ಅಥವಾ ಎಡಪಂಥಿಯ ತೀವ್ರಗಾಮಿಗಳೇ ಆಗಿರಲಿ ದೇಶಕ್ಕೆ ಅಪಾಯಕಾರಿಯಾಗಿರುವವರನ್ನು ಮೆಟ್ಟಿನಿಲ್ಲುವಲ್ಲಿ ಸೇನೆ ಯಶಸ್ವಿಯಾಗುತ್ತಲೇ ಇದೆ. ಕಳೆದ ವರ್ಷ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಗುರಿ ನಿರ್ದಿಷ್ಟ ದಾಳಿಯ ನಂತರ ಭಾರತದ ಸಾಮರ್ಥ್ಯ ಏನು ಎಂಬುದು ಇಡೀ ವಿಶ್ವಕ್ಕೆ ಗೊತ್ತಾಗಿದೆ.

ನಮ್ಮ ದೇಶದ ಮೂಲ ಮಂತ್ರ ಶಾಂತಿ, ಏಕತೆ ಹಾಗೂ ಸದ್ಭಾವನೆ. ಹೀಗಾಗಿ ಜಾತಿಯತೆ ಹಾಗೂ ಕೋಮುವಾದ ದೇಶದ ಅಭಿವೃದ್ಧಿಗೆ ಸಹಕಾರಿಯಾಗದು. ನಮ್ಮ ಸಮಾಜದಲ್ಲಿ ನಂಬಿಕೆಯ ಹೆಸರಿನಲ್ಲಿ ಗಲಭೆಗಳು ನಡೆಯಬಾರದು. ಆಸ್ಪತ್ರೆಗಳ ಮೇಲಿನ ದಾಳಿ, ಸಾರ್ವಜನಿಕರ ಆಸ್ತಿ ಹಾಗೂ ಪಾರಂಪರಿಕ ಹಾಗೂ ಸಾಂಸ್ಕೃತಿಕ ಸ್ಥಳಗಳನ್ನು ಹಾನಿ ಮಾಡುವುದು ಸರಿಯಲ್ಲ. ಈ ಹಿಂದೆ ಸ್ವಾತಂತ್ರ್ಯಕ್ಕಾಗಿ ‘ಭಾರತ ಬಿಟ್ಟು ತೊಲಗಿ’ ಎನ್ನುತ್ತಿದ್ದ ನಾವು ಇನ್ನು ಮುಂದೆ ಅಭಿವೃದ್ಧಿಗಾಗಿ ‘ನಾವೆಲ್ಲರೂ ಒಂದೇ’ ಎನ್ನಬೇಕು. ದೇಶದ ಪ್ರತಿಯೊಬ್ಬ ಪ್ರಜೆಯು ಪ್ರಗತಿಯ ಹಾದಿಯಲ್ಲಿ ಒಟ್ಟೊಟ್ಟಿಗೆ ಹೆಜ್ಜೆ ಇಡಬೇಕು.

ದೇಶದಲ್ಲಿ ಮುಸಲ್ಮಾನ ಮಹಿಳೆಯರ ಮೇಲಿನ ಅನ್ಯಾಯ ತಡೆಯಲು ಆರಂಭವಾಗಿರುವ ತ್ರಿವಳಿ ತಲಾಕ್ ವಿರುದ್ಧದ ಹೋರಾಟ ಯಶಸ್ವಿಯಾಗುವ ಭರವಸೆ ಇದೆ. ಇನ್ನು ದೇಶದಲ್ಲಿ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿ ನೋಟು ಅಮಾನ್ಯ ನಿರ್ಧಾರ ಕೊಗೊಳ್ಳಲಾಗಿದ್ದು, ಇದರಿಂದ ಭಾರತ ವೇಗವಾಗಿ ಪ್ರಗತಿಯತ್ತ ಸಾಗಲಿದೆ. ದೇಶದಲ್ಲಿನ ತೆರಿಗೆ ಪದ್ಧತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಿಎಸ್ಟಿಯನ್ನು ಜಾರಿಗೆ ತರಲಾಗಿದೆ.

ಹೀಗಾಗಿ ದೇಶವನ್ನು 2022ರ ವೇಳೆಗೆ ನವ ಭಾರತವನ್ನಾಗಿ ಪರಿವರ್ತಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುವ ಸುಸಂದರ್ಭದಲ್ಲಿ ಭಾರತ ಈ ಕನಸನ್ನು ನನಸಾಗಿಸಬೇಕಿದೆ. ಅದಕ್ಕೆ ಇಡೀ ಭಾರತವೇ ಒಟ್ಟಾಗಿ ಪ್ರಯತ್ನಿಸಬೇಕಿದೆ.’

Leave a Reply