ದೇಶದಲ್ಲಿ 81 ಲಕ್ಷ ಆಧಾರ್ ಕಾರ್ಡ್ ರದ್ದು! ನಿಮ್ಮ ಆಧಾರ್ ಸಂಖ್ಯೆ ಪರಿಸ್ಥಿತಿ ಏನು? ಅದನ್ನು ತಿಳಿಯುವುದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಬ್ಯಾಂಕಿಂಗ್ ವ್ಯವಹಾರಗಳಿಂದ ಹಿಡಿದು ಸರ್ಕಾರದ ಸಬ್ಸಿಡಿ ಪಡೆಯುವವರೆಗೂ, ಪ್ಯಾನ್ ಕಾರ್ಡಿನಿಂದ, ಮೊಬೈಲ್ ಸಿಮ್ ಖರೀದಿವರೆಗೂ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಇಂತಹ ಸಂದರ್ಭದಲ್ಲಿ ಈಗ ವಿವಿಧ ಕಾರಣಗಳಿಂದಾಗಿ ಒಟ್ಟು 81 ಲಕ್ಷ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಚಾಲ್ತಿಯಲ್ಲಿದೆಯೇ ಅಥವಾ ರದ್ದಾಗಿದೆಯೇ ಎಂಬುದನ್ನು ಕೂಡಲೇ ಪರೀಕ್ಷಿಸಿಕೊಳ್ಳುವುದು ಸೂಕ್ತ. ನಿಮ್ಮ ಆಧಾರ್ ಚಾಲ್ತಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳುವ ವಿಧಾನ ಹೀಗಿದೆ…

ಯುಐಡಿಎಐ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ವೇರಿಫೈ ಆಧಾರ್ ನಂಬರ್ (ಆಧಾರ್ ಸಂಖ್ಯೆ ಪರಿಶೀಲನೆ) ಎಂಬ ಬಟನ್ ಅನ್ನು ಕ್ಲಿಕ್ ಮಾಡಬೇಕು. ಆಗ ಆಧಾರ್ ಪುಟ ತೆಗೆದುಕೊಳ್ಳಲಿದ್ದು, ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ಸೆಕ್ಯುರಿಟಿ ಕೋಡ್ ಅನ್ನು ಒತ್ತಬೇಕು. ನಿಮ್ಮ ಕಾರ್ಡ್ ಚಾಲ್ತಿಯಲ್ಲಿದ್ದರೆ ನಿಮಗೆ ಆ ಕುರಿತ ಸಂದೇಶ ಬರಲಿದ್ದು, ಅದರಲ್ಲಿ ನಿಮ್ಮ ವಯಸ್ಸು, ರಾಜ್ಯ, ಹಾಗೂ ನೀವು ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಯ ಅಂತಿಮ ಮೂರು ಸಂಖ್ಯೆ ಪ್ರಕಟವಾಗಲಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಆ ಬಗ್ಗೆಯೂ ನಿಮಗೆ ಸಂದೇಶ ಬರಲಿದೆ.

ಈ ಬಗ್ಗೆ ಕಳೆದ ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ಪಿ.ಪಿ ಚೌಧರಿ, ‘ಆಗಸ್ಟ್ 11ರ ವರೆಗೂ ಸುಮಾರು 81 ಲಕ್ಷ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆಧಾರ್ ರೆಗ್ಯುಲೇಷನ್ಸ್ 2016ರ ಪಸೆಕ್ಷನ್ 27 ಮತ್ತು 28ರ ಅನ್ವಯದಲ್ಲಿ ವಿವಿಧ ಕಾರಣಗಳಿಂದಾಗಿ ನಿಷ್ಕ್ರಿಯಗೊಳಿಸಿದ್ದು, ಇದನ್ನು ಆಧಾರ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ನ ನಿಯಮಾನುಸಾರ ಮಾಡಲಾಗಿದೆ’ ಎಂದಿದ್ದಾರೆ.

ಆಧಾರ್ ರೆಗ್ಯುಲೇಷನ್ಸ್ 2016ನ ಸೆಕ್ಷನ್ 27 ಮತ್ತು 28ರ ಪ್ರಕಾರ ಒಂದಕ್ಕಿಂತ ಹೆಚ್ಚು ಆಧಾರ್ ಸಂಖ್ಯೆ ನೀಡಿದ್ದರೆ, ಬೆರಳಚ್ಚಿನ ಮಾಹಿತಿಯಲ್ಲಿ ವ್ಯತ್ಯಾಸ ಹಾಗೂ ಇತರೆ ದಾಖಲೆಗಳಲ್ಲಿ ಹೊಂದಾಣಿಕೆಯಾಗದಿದ್ದರೆ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಅನ್ನು ರದ್ದು ಅಥವಾ ನಿಷ್ಕ್ರಿಯಗೊಳಿಸಬಹುದು. ಅಲ್ಲದೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಧಾರ್ ಕಾರ್ಡ್ ಪಡೆದಿದ್ದರೆ, ಅವರು ಐದು ವರ್ಷ ಪೂರ್ಣಗೊಂಡ ನಂತರ ತಮ್ಮ ಬೆರಳಚ್ಚು ಹಾಗೂ ಇತರೆ ಮಾಹಿತಿಯನ್ನು ಸಲ್ಲಿಸಬೇಕು. ಈ ರೀತಿ ಮಾಡಲು ಎರಡು ವರ್ಷಗಳ ಕಾಲಾವಕಾಶ ಇರುತ್ತದೆ. ಒಂದು ವೇಳೆ ಇದನ್ನು ಮಾಡದಿದ್ದರೂ ಆಧಾರ್ ಕಾರ್ಡ್ ರದ್ದಾಗಲಿದೆ.

ಯುಐಡಿಎಐ ವೆಬ್ ಸೈಟಿಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

Leave a Reply