ತಂತ್ರಜ್ಞಾನ ಉತ್ಪನ್ನಗಳ ಆಮದು ಕುರಿತು ಕೇಂದ್ರದಿಂದ ಪರಿಶೀಲನೆ, ಚೀನಾ ಮೇಲಿನ ಅವಲಂಬನೆಯಿಂದ ಸರ್ಕಾರಕ್ಕೆ ಮೂಡಿರುವ ಆತಂಕವೇನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅಳವಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ಈ ತಂತ್ರಜ್ಞಾನ ಉಪಕರಣಗಳ ಪೂರೈಕೆಗೆ ಹೆಚ್ಚಾಗಿ ಅವಲಂಬಿತವಾಗಿರುವುದು ಚೀನಾ ಉತ್ಪನ್ನಗಳ ಮೇಲೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಚೀನಾದಿಂದ ಭಾರಿ ಪ್ರಮಾಣದ ತಂತ್ರಜ್ಞಾನ ಉಪಕರಣಗಳು ಭಾರತಕ್ಕೆ ಆಮದು ಆಗುತ್ತಿದ್ದು, ಇವುಗಳಿಂದ ಮುಂದಿನ ದಿನಗಳಲ್ಲಿ ಭಾರತಕ್ಕೆ ಅಪಾಯ ಹೆಚ್ಚಾಗುವ ಬಗ್ಗೆ ಸರ್ಕಾರಕ್ಕೆ ಆತಂಕ ಮೂಡಿದೆ. ಹೀಗಾಗಿ ಚೀನಾ ಉತ್ಪನ್ನಗಳ ಮೇಲಿನ ಅವಲಂಬನೆ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.

ಕೇವಲ ಚೀನಾ ಉತ್ಪನ್ನಗಳ ಆಮದು ಪ್ರಮಾಣವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಭದ್ರತೆ ಹಾಗೂ ಮಾಹಿತಿ ಸೋರಿಕೆಯ ಸಾಧ್ಯತೆಗಳನ್ನು ತಡೆಯುವ ದೃಷ್ಟಿಯಿಂದ ಸರ್ಕಾರ ಈ ಪರಿಶೀಲನೆಗೆ ನಿರ್ಧರಿಸಿದೆ.

ದೋಕಲಂ ಗಡಿ ವಿಚಾರವಾಗಿ ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಿರುವ ಬೆನ್ನಲ್ಲೇ ಈ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ವಾರವಷ್ಟೇ ಕೇಂದ್ರ ವಾಣಿಜ್ಯ ಸಚಿವಾಲಯ ಚೀನಾದ 93 ಉತ್ಪನ್ನಗಳ ಮೇಲೆ ಅತಿಯಾದ ಆಮದು ನಿರ್ಬಂಧ ಹೇರಿ ದಂಡ ವಿಧಿಸಿದ್ದನ್ನು ಚೀನಾ ಖಂಡಿಸಿತ್ತು. ಅಲ್ಲದೆ ಭಾರತದ ನಿರ್ಧಾರವನ್ನು ‘ವ್ಯಾಪಾರ ಸಮರ’ ಎಂದು ಬಣ್ಣಿಸಿತ್ತು. ಈ ಬಗ್ಗೆ ಡಿಜಿಟಲ್ ಕನ್ನಡ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಈಗ ಚೀನಾದ ತಂತ್ರಜ್ಞಾನ ಉತ್ಪನ್ನಗಳ ಆಮದು ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಭಾರತ ತಂತ್ರಜ್ಞಾನ ಉತ್ಪನ್ನಗಳ ವಿಷಯವಾಗಿ ಚೀನಾ ಮೇಲೆ ಎಷ್ಟು ಅವಲಂಬಿತವಾಗಿದೆ ಎಂದರೆ ದೇಶದ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಸುಮಾರು 22 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಉತ್ಪನ್ನಗಳು ಚೀನಾದ್ದಾಗಿವೆ. ಈ ಆಘಾತಕಾರಿ ಅಂಶವನ್ನು ಕೈಗಾರಿಕ ಮಂಡಳಿಯ ವರದಿ ಬಹಿರಂಗಗೊಳಿಸಿದ್ದು, ಇದನ್ನು ಕೇಂದ್ರ ಸರ್ಕಾರ ಎಚ್ಚರಿಕೆ ಗಂಟೆಯಾಗಿ ಪರಿಗಣಿಸಿದೆ. ಚೀನಾ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಲಂಬನೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿನ ವೈಯಕ್ತಿಕ, ವ್ಯವಹಾರಿಕ ಹಾಗೂ ಸರ್ಕಾರಿ ಸಂಸ್ಥೆಗಳ ಪ್ರಮುಖ ಮಾಹಿತಿಗಳು ಸೋರಿಕೆಯಾಗುವ ಆತಂಕ ಹುಟ್ಟುಕೊಂಡಿದೆ.

ಭಾರತದ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚೀನಾ ಉತ್ಪನ್ನಗಳ ಪ್ರಭಾವದ ಕುರಿತು ಚರ್ಚೆ ನಡೆಸಲು ಇತ್ತೀಚೆಗೆ ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಉನ್ನತ ಮಟ್ಟದ ಸಭೆ ಕರೆದಿದ್ದರು. ಈ ಸಭೆಯಲ್ಲಿ ಚೀನಾದ ತಂತ್ರಜ್ಞಾನ ಉತ್ಪನ್ನಗಳ ವಿಷಯದಲ್ಲಿ ಭಾರತದ ದೌರ್ಬಲ್ಯದ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಾರತ ತಂತ್ರಜ್ಞಾನ ಉತ್ಪನ್ನಗಳ ಮೇಲೆ ಎಷ್ಟು ಅವಲಂಬಿತವಾಗಿದೆ ಹಾಗೂ ಅದರಿಂದ ಎದುರಾಗುವ ಸಮಸ್ಯೆ ಕುರಿತ ಪ್ರಮುಖ ಅಂಶಗಳು ಹೀಗಿವೆ…

  • ದೇಶದ ಐಟಿ ಕ್ಷೇತ್ರದಲ್ಲಿ ಸುಮಾರು 22 ಬಿಲಿಯನ್ ಡಾಲರ್ ಮೊತ್ತದಷ್ಟು ಚೀನಾ ಉತ್ಪನ್ನಗಳು ಆಕ್ರಮಿಸಿಕೊಂಡಿದ್ದು, ಆ ಮೂಲಕ ಭಾರತದ ಐಟಿ ಕ್ಷೇತ್ರಕ್ಕೆ ಚೀನಾ ಉತ್ಪನ್ನಗಳೇ ಬೆನ್ನೆಲುಬು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
  • ಮೊಬೈಲ್ ಫೋನ್ ಗಳು, ವೈದ್ಯಕೀಯ ಉಪಕರಣಗಳು, ದೂರ ಸಂಪರ್ಕ ಸಾಧನಗಳಲ್ಲಿ ಚೀನಾ ಉತ್ಪನ್ನಗಳೇ ಪಾರುಪತ್ಯ ನಡೆಸುತ್ತಿವೆ.
  • ಭಾರತದ ಇ- ಮಾರುಕಟ್ಟೆಯಲ್ಲೂ ಚೀನಾ ಉತ್ಪನ್ನಗಳೇ ಪ್ರಭುತ್ವ ಸಾಧಿಸಿವೆ.
  • ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಚೀನಾ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವುದರಿಂದ, ದೇಶದ ವಿವಿಧ ಕ್ಷೇತ್ರಗಳ ಪ್ರಮುಖ ಡಾಟಾಗಳು ಚೀನಾದ ಸರ್ವರ್ ಗೆ ಸೇರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕಾನೂನು ಬಾಹೀರವಾಗಿ ಮಾಹಿತಿ ಸೋರಿಕೆಯಾಗು ಆತಂಕ ಮೂಡಿದೆ.
  • ಇವೆಲ್ಲವುದರ ಜತೆಗೆ ಐಟಿ ಕ್ಷೇತ್ರದಲ್ಲಿ ಚೀನಾ ಉತ್ಪನ್ನಗಳ ಮೇಲಿನ ಅವಲಂಬನೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಚೀನಾ ನಡುವಣ ಟ್ರೇಡ್ ಡೆಫಿಸಿಟ್ ಪ್ರಮಾಣ 52 ಬಿಲಿಯನ್ ಅಮೆರಿಕನ್ ಡಾಲರ್ ಗೆ ಮುಟ್ಟಿದೆ.

Leave a Reply