26/11 ನಂತಹ ದಾಳಿ ಮರುಕಳಿಸದಂತೆ ಸರ್ಕಾರದ ಮುನ್ನೆಚ್ಚರಿಕೆ, ಕರಾವಳಿ ಗಡಿ ರಕ್ಷಣೆಗೆ ಕೇಂದ್ರ ಬಿಡುಗಡೆ ಮಾಡಿದ ಹಣ ಎಷ್ಟು?

ಡಿಜಿಟಲ್ ಕನ್ನಡ ಟೀಮ್:

2008ರ ನವೆಂಬರ್ ತಿಂಗಳಲ್ಲಿ ಸಮುದ್ರ ಮಾರ್ಗವಾಗಿ ಮುಂಬೈಗೆ ನುಸುಳಿದ ಉಗ್ರರು ನಡೆಸಿದ ನರಮೇಧ ಈಗಲೂ ಭಾರತೀಯರ ಮನಸ್ಸಿನಿಂದ ಮಾಸಿಲ್ಲ. ಉಗ್ರರು ಮತ್ತೆ ಈ ರೀತಿಯಾಗಿ ಸಮುದ್ರ ಮಾರ್ಗವಾಗಿ ದೇಶವನ್ನು ನುಸುಳದಂತೆ ತಡೆಯಲು ಈಗ ಕೇಂದ್ರ ಸರ್ಕಾರ ಕರಾವಳಿ ಗಡಿಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಕರಾವಳಿ ಭದ್ರತಾ ಪಡೆಯ ಬಲ ಹೆಚ್ಚಿಸಲು ₹ 32 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ.

ಭಾರತೀಯ ರಕ್ಷಣಾ ವಿಭಾಗದಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯ ನಂತರ ಬರುವುದು ಕರಾವಳಿ ಭದ್ರತಾ ಪಡೆ. ಸದ್ಯದ ಪರಿಸ್ಥಿತಿಯಲ್ಲಿ ಇತರೆ ಪಡೆಗಳಿಗಿಂತ ಕರಾವಳಿ ಭದ್ರತಾ ಪಡೆ ಸಣ್ಣ ಪ್ರಮಾಣದಲ್ಲಿದೆ. 2008ರ ಮುಂಬೈ ದಾಳಿಯ ನಂತರ ಈ ಪಡೆಯ ಮಹತ್ವ ಹೆಚ್ಚಾಗಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಪಡೆಯನ್ನು ಸದೃಢಗೊಳಿಸಿ ಕರಾವಳಿ ಗಡಿ ಭಾಗವನ್ನು ಸುರಕ್ಷಿತವಾಗಿರುವಂತೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಮೂಲಗಳ ಪ್ರಕಾರ ಇದೇ ತಿಂಗಳು ಆರಂಭದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಾವಳಿ ಭದ್ರತಾ ಪಡೆಯನ್ನು ಇತರೆ ಪಡೆಗಳಂತೆ ಬಲ ಪಡಿಸಲು ನಿರ್ಧರಿಸಲಾಗಿದೆ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ಈ ಪಡೆಗೆ ಅಗತ್ಯವಿರುವ ಸಮುದ್ರ ಗಸ್ತು ಹಡಗು, ಅತ್ಯಾಧುನಿಕ ಬೋಟ್ ಗಳು, ಹೆಲಿಕಾಪ್ಟರ್ ಗಳು, ಸಣ್ಣ ಪ್ರಮಾಣದ ವಿಮಾನ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಭಾರತ ಒಟ್ಟು 7,516 ಕಿ.ಮೀ ಉದ್ದದಷ್ಟು ಕರಾವಳಿ ತೀರ ಹೊಂದಿದ್ದು, 1382 ಕಿ.ಮೀ ಉದ್ದದಷ್ಟು ಐಲ್ಯಾಂಡ್ ಗಳಿವೆ. ಆದರೆ ಈ ಕರಾವಳಿಯ ಗಡಿ ಕಾಯಲು ಕೇವಲ 130 ರಕ್ಷಣಾ ತುಕಡಿಗಳಿದ್ದು, 60 ಹಡಗು, 18 ಹೊವರ್ ಕ್ರಾಫ್ಟ್, 52 ಸಣ್ಣ ಪ್ರಮಾಣದ ಬೋಟ್, ಸಮುದ್ರದ ಕಾವಲಿಗೆ 39 ಡ್ರೋನ್ ಮಾದರಿಯ ವಿಮಾನ, 19 ಚೇತಕ್ ಕಾಪ್ಟರ್ ಗಳು ಹಾಗೂ ನಾಲ್ಕು ಹಗುರವಾದ ಧ್ರುವ್ ಹೆಲಿಕಾಪ್ಟರ್ ಗಳನ್ನು ಮಾತ್ರ ಇವೆ. ಇದರ ಜತೆಗೆ ಐಲ್ಯಾಂಡ್ ಪ್ರದೇಶಗಳ ಭದ್ರತೆ, ಸಮುದ್ರದ ಸಂಪತ್ತು ರಕ್ಷಣೆ, ಸಮುದ್ರದಲ್ಲಿನ ಪರಿಸರ, ಕಳ್ಳಸಾಗಾಣಿಕೆ ನಿಯಂತ್ರಣ, ತೈಲ ಸೋರಿಕೆ ಹಾಗೂ ಮಾಲಿನ್ಯ ನಿಯಂತ್ರಣದ ಜವಾಬ್ದಾರಿಯೂ ಈ ಪಡೆಯ ಮೇಲಿದೆ.

ಈ ಹಿನ್ನೆಲೆಯಲ್ಲಿ ಕರಾವಳಿಯ ಭದ್ರತಾ ಪಡೆ ಬಲ ಪಡಿಸಲು ಒಟ್ಟು 175 ಹಡಗುಗಳು, 110 ವಿಮಾನಗಳನ್ನು 2022ರ ವೇಳೆಗೆ ನಿಯೋಜಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ₹ 5 ಸಾವಿರ ಕೋಟಿಗೆ 30 ಹೆಲಿಕಾಪ್ಟರ್ ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಸ್ವದೇಶಿ ನಿರ್ಮಿತ 16 ಧ್ರುವ್ ಹೆಲಿಕಾಪ್ಟರ್ ಗಳ ತಯಾರಿಕೆಗೆ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ ನಿರ್ದೇಶನ ನೀಡಲಾಗಿದೆ. ಇನ್ನು 30 ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಎರಡು ಯಂತ್ರದ ಇಸಿ 725 ಚಾಪರ್ ಗಳ ಖರೀದಿಗೆ ಅನುಮತಿ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

Leave a Reply