ಹಿಜ್ಬುಲ್ ಮುಜಾಹಿದ್ದೀನ್ ಜಾಗತಿಕ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ, ಭಾರತಕ್ಕೆ ಸಿಕ್ತು ಜಯ, ಈ ನಿರ್ಧಾರದ ಮಹತ್ವ ಏನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ವರ್ಷಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಆ ಮೂಲಕ ಕಾಶ್ಮೀರದಲ್ಲಿನ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.

ಇತ್ತೀಚೆಗಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲ್ಲಾವುದ್ದೀನ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆಯ ಪಟ್ಟಿಗೆ ಸೇರಿಸಿರುವುದು ಗಮನ ಸೆಳೆದಿದೆ.

ಈ ನಿರ್ಧಾರದಿಂದ ಭಾರತ ಮೇಲುಗೈ ಸಾಧಿಸಿದ್ದು ಹೇಗೆ? ಈ ನಿರ್ಧಾರದಿಂದ ಆಗುವ ಪರಿಣಾಮ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ಹೀಗಿವೆ… ಅಮೆರಿಕ ಹಿಜ್ಬಲ್ ಮುಜಾಹಿದ್ದೀನ್ ಸಂಘಟನೆಯನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿರುವುದರಿಂದ, ಈ ಸಂಘಟನೆಯ ಸದಸ್ಯರನ್ನು ಹಾಗೂ ಅದರ ಜತೆ ಸಂಪರ್ಕ ಹೊಂದಿದ್ದವರಿಗೆ ಅಮೆರಿಕದಲ್ಲಿ ನಿಷೇಧ ಹೇರಲಾಗುವುದು. ಜತೆಗೆ ಅಮೆರಿಕದಲ್ಲಿ ಈ ಸಂಘಟನೆಗೆ ಸೇರಿದ್ದ ಹಣ ಹಾಗೂ ಆಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಈ ಹಿಂದೆ ಪಾಕಿಸ್ತಾನ ನೆಲದಲ್ಲಿ ಹುಟ್ಟಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಲಷ್ಕರ್ ಇ ತೊಯ್ಬಾ ಹಾಗೂ ಜೈಷ್ ಇ ಮೊಹಮದ್ ಸಂಘಟನೆಗಳ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಂಡಿತ್ತಾದರೂ ಕಾಶ್ಮೀರದ ಉಗ್ರ ಸಂಘಟನೆಯ ವಿಚಾರದಲ್ಲಿ ಬಿಗಿ ನಿಲುವು ತಾಳಲು ಹಿಂದೇಟು ಹಾಕುತ್ತಿತ್ತು. ಆದರೆ ಈಗ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ವಿರುದ್ಧ ಅಮೆರಿಕ ಕಠಿಣ ನಿಲುವು ತಾಳಿರುವುದು ಭಾರತ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಭಾರತ ಹಾಗೂ ಅಮೆರಿಕ ತಾಂತ್ರಿಕ ಸ್ನೇಹ ಸಂಬಂಧವನ್ನು ಆರಂಭಿಸಿದ್ದು, ಈ ನಿರ್ಧಾರ ಈ ಸ್ನೇಹ ಸಂಬಂಧದ ಫಲ ಎಂದು ಪರಿಗಣಿಸಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಲಷ್ಕರ್, ಜೈಶ್ ಇ ಮೊಹಮದ್ ಹಾಗೂ ಅಲ್ ಖೈದಾ ಸಂಘಟನೆಯ ಭಾಗವಾಗಿ ಹೊಸದಾಗಿ ಹುಟ್ಟುಕೊಂಡಿರುವ ಅನ್ಸಾರ್ ಘಜ್ವತ್ ಉಲ್ ಹಿಂದ್ ಸಂಘಟನೆಗಳ ಪೈಪೋಟಿಯ ನಡುವೆಯೂ ಹಿಜ್ಬುಲ್ ಮುಜಾಹಿದ್ದೀನ್ ಜಮ್ಮು ಕಾಶ್ಮೀರದಲ್ಲಿ ತನ್ನ ಪ್ರಭುತ್ವವನ್ನು ಹೆಚ್ಚಿಸಿಕೊಳ್ಳುತ್ತಿತ್ತು.

ಕಳೆದ ವರ್ಷವಷ್ಟೇ ಸಂಗಟನೆಯ ಪ್ರಮುಖ ಕಮಾಂಡರ್ ಕಮಾಂಡರ್ ಬುಹ್ರಾನ್ ವಾನಿಯನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಕಳೆದ ಒಂದು ವಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಶ್ಮೀರದ ಉಗ್ರ ಸಂಘಟನೆಗಳು ಹಾಗೂ ಪ್ರತ್ಯೇಕವಾದಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದವರ ವಿರುದ್ಧ ವಿಚಾರಣೆ ಆರಂಭಿಸಿದೆ. ಇದೇ ಸಮಯದಲ್ಲಿ ಅಮೆರಿಕದ ಈ ನಿರ್ಧಾರ ತೆಗೆದುಕೊಂಡಿರುವುದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸೊಂಟ ಮುರಿದಂತಾಗಿದೆ.

Leave a Reply