ಗುಹಾಮ್ ಮೇಲಿನ ಕ್ಷಿಪಣಿ ಪ್ರಯೋಗ ಯೋಚನೆ ಕೈಬಿಟ್ಟ ಉತ್ತರ ಕೊರಿಯಾ, ಕಿಮ್ ಜೊಂಗ್ ನಿರ್ಧಾರವನ್ನು ಸ್ವಾಗತಿಸಿದ ಡೊನಾಲ್ ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆಯ ನಂತರ ಅವುಗಳನ್ನು ಅಮೆರಿಕದ ಗುಹಾಮ್ ಪ್ರದೇಶದ ಮೇಲೆ ಪ್ರಯೋಗಿಸುವುದಾಗಿ ತಿಳಿಸಿದ್ದ ಉತ್ತರ ಕೊರಿಯಾ, ಈಗ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಉ.ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಅವರ ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚಿಕೊಂಡಿದ್ದು, ‘ಇದೊಂದು ಚಾಣಾಕ್ಷ ನಿರ್ಧಾರ’ ಎಂದು ಬಣ್ಣಿಸಿದ್ದಾರೆ.

ತೀವ್ರ ವಿರೋಧದ ನಡುವೆಯೂ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯ, ಅಮೆರಿಕದ ವಿರುದ್ಧ ತೊಡೆ ತಟ್ಟಿ ನಿಂತಿತು. ಕೇವಲ ಕ್ಷಿಪಣಿ ಪರೀಕ್ಷೆಗೆ ತೃಪ್ತಿಯಾಗದ ಉ.ಕೊರಿಯ, ತನ್ನ ಖಂಡಾಂತರ ಕ್ಷಿಪಣಿಯನ್ನು ಅಮೆರಿಕದ ಗುಹಾಮ್ ಪ್ರದೇಶದ ಮೇಲೆ ಪ್ರಯೋಗಿಸುವುದಾಗಿ ಸವಾಲೆಸೆದಿತ್ತು. ಉತ್ತರ ಕೊರಿಯಾದ ಈ ಉದ್ಧಟತನಕ್ಕೆ ಕೆಂಡಾಮಂಡಲವಾಗಿದ್ದ ಅಮೆರಿಕ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರವನ್ನು ಬಳಸಿ ಉತ್ತರ ಕೊರಿಯಾ ಮೇಲೆ ಒತ್ತಡ ಹೇರಿತು. ಅಷ್ಟೇ ಅಲ್ಲದೆ ತೆರೆಯ ಹಿಂದೆ ಕೊರಿಯಾಗೆ ಬೆಂಬಲ ನೀಡುತ್ತಿದ್ದ ಚೀನಾಗೂ ಅಮೆರಿಕ ನೇರವಾಗಿ ಎಚ್ಚರಿಕೆ ನೀಡಿತ್ತು. ಅಮೆರಿಕದ ಎಚ್ಚರಿಕೆಯ ನಂತರ ಚೀನಾ ಬಹಿರಂಗವಾಗಿ ‘ತಾನು ಉತ್ತರ ಕೊರಿಯಾ ನೆರವಿಗೆ ನಿಲ್ಲುವುದಿಲ್ಲ’ ಎಂದು ಘೋಷಿಸಿತು. ಹೀಗೆ ಎಲ್ಲ ಕಡೆಗಳಿಂದಲೂ ಒತ್ತಡ ಬಂದ ನಂತರ ಕಿಮ್ ಜೊಂಗ್ ಸದ್ಯಕ್ಕೆ ಈ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.

ಕಳೆದ ಮಂಗಳವಾರ ಸ್ವಾತಂತ್ರ್ಯ ದಿನದಂದು ಅಮೆರಿಕದ ಮೇಲೆ ದಾಳಿಯ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇತ್ತು. ಅದೇ ರೀತಿ ಕಿಮ್ ಜೊಂಗ್ ಸದ್ಯಕ್ಕೆ ಗುಹಾಮ್ ಮೇಲಿನ ಕ್ಷಿಪಣಿ ದಾಳಿಯನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದ್ದಾರೆ.

ಕೊರಿಯಾದ ಈ ನಿರ್ಧಾರವನ್ನು ಸ್ವಾಗತಿಸಿದ ಟ್ರಂಪ್ ಈ ಬಗ್ಗೆ ತಮ್ಮ ಟ್ವಿಟರ್ ಮೂಲಕ ಹೇಳಿದಿಷ್ಟು… ‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಅವರು ಅತ್ಯುತ್ತಮ ಹಾಗೂ ಚಾಣಾಕ್ಷ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಒಂದು ವೇಳೆ ಈ ನಿರ್ಧಾರಕ್ಕೆ ವಿರುದ್ಧವಾಗಿ ಹೆಜ್ಜೆ ಇಟ್ಟಿದ್ದರೆ ಅದನ್ನು ಅಮೆರಿಕ ಸಹಿಸುತ್ತಿರಲಿಲ್ಲ. ಜತೆಗೆ ಅದರ ಮುಂದಿನ ಪರಿಣಾಮ ಬೇರೆಯದೇ ಆಗಿರುತ್ತಿತ್ತು.’

ಇನ್ನು ಕಿಮ್ ಅವರ ಈ ನಿರ್ಧಾರದ ಕುರಿತು ಮಾಹಿತಿ ನೀಡಿರುವ ಉತ್ತರ ಕೊರಿಯಾದ ಕೆಸಿಎನ್ಎ ಎಂಬ ಸುದ್ದಿ ಸಂಸ್ಥೆ,  ‘ಕಿಮ್ ಜೊಂಗ್ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ನಿರ್ಧಾರವನ್ನು ಕೈ ಬಿಟ್ಟಿದ್ದು ಇದು ಕೇವಲ ತಾತ್ಕಾಲಿಕ. ಅಮೆರಿಕ ತಾನಾಗಿಯೇ ತಪ್ಪು ಹೆಜ್ಜೆ ಇಡುವರೆಗೂ ಕಾಯುತ್ತಾ, ಆನಂತರ ಅಮೆರಿಕಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ.

Leave a Reply