ದೋಕಲಂ ವಿವಾದ: ಭಾರತ ಪರವಾಗಿ ನಿಂತು ಚೀನಾ ವಿರುದ್ಧ ಗುಡುಗಿದ ಜಪಾನ್, ಇದರ ಹಿಂದಿರುವ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ತಿಕ್ಕಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಭಾರತದ ಪರವಾಗಿ ನಿಂತಿರುವ ಜಪಾನ್, ಚೀನಾ ವಿರುದ್ಧ ಟೀಕೆ ಮಾಡಿದೆ. ‘ದೋಕಲಂ ಗಡಿಯಲ್ಲಿ ಯಥಾಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಭಾರತ ತನ್ನ ಸೇನೆ ನಿಯೋಜಿಸಿದ್ದು, ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಜಪಾನ್, ಭಾರತದ ಪರ ಧ್ವನಿ ಎತ್ತಿದೆ.

ಚೀನಾದ ಆಂತರಿಕ ಭಾಗವಾಗಿರುವ ದೋಕಲಂ ಗಡಿಯಲ್ಲಿ ಭಾರತೀಯ ಸೇನೆ ಅಕ್ರಮವಾಗಿ ನಿಯೋಜನೆಗೊಂಡಿದ್ದು, ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಚೀನಾ ಕೇವಲ ಎಚ್ಚರಿಕೆ ನೀಡುತ್ತಿದೆ. ಭಾರತದ ಈ ನಡೆಗೆ ಪ್ರತಿಯಾಗಿ ಚೀನಾ ಲಡಾಕಿನಲ್ಲಿರುವ ವಿವಾದಿತ ಪ್ರದೇಶದಲ್ಲಿ ತನ್ನ ಕ್ಯಾತೆ ಆರಂಭಿಸಿದೆ. ಆದರೆ ಚೀನಾದ ಈ ಪ್ರಯತ್ನಗಳಿಗೆ ಭಾರತ ತಲೆಕೆಡಿಸಿಕೊಳ್ಳದೆ, ದೋಕಲಂ ಪ್ರದೇಶದಲ್ಲಿ ತನ್ನ ಸೇನೆಯ ನಿಯೋಜನೆ ಮುಂದುವರಿಸಿದೆ. ಇದರಿಂದಾಗಿ ಚೀನಾ ಮುಖಭಂಗ ಅನುಭವಿಸುವಂತಾಗಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಜಪಾನ್ ತನ್ನ ನಿಲುವನ್ನು ಪ್ರಕಟಿಸಿದ್ದು, ಈ ವಿಚಾರದಲ್ಲಿ ಭಾರತದ ನಡೆಯನ್ನು ಸಮರ್ಥಿಸಿಕೊಂಡಿದೆ. ಈ ಬಗ್ಗೆ ಜಪಾನ್ ರಾಯಭಾರಿ ಅಧಿಕಾರಿ ಕೆಂಜಿ ಹಿರಮಟ್ಟು ಹೇಳಿರುವುದಿಷ್ಟು…

‘ದೋಕಲಂ ಗಡಿ ವಿಚಾರವಾಗಿ ಕಳೆದ ಎರಡು ತಿಂಗಳಿನಿಂದ ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ನಾವು ಎಚ್ಚರಿಕೆಯಿಂದಲೇ ಗಮನಹರಿಸುತ್ತಿದ್ದೇವೆ. ಈ ಪ್ರದೇಶದಲ್ಲಿ ಚೀನಾದ ರಸ್ತೆ ನಿರ್ಮಾಣ ನಿರ್ಧಾರವನ್ನು ವಿರೋಧಿಸಿ ಈ ಭಾಗದಲ್ಲಿ ಯಥಾಸ್ಥಿತಿ ಕಾಪಾಡುವುದು ಹಾಗೂ ಶಾಂತಿ ಸ್ಥಾಪಿಸುವ ಉದ್ದೇಶದೊಂದಿಗೆ ಭಾರತ ತನ್ನ ಸೇನೆ ನಿಯೋಜಿಸಿದೆ. ಹೀಗಾಗಿ ಭಾರತೀಯ ಸೇನೆಯ ನಡೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.

ಒಂದು ವೇಳೆ ಚೀನಾ ವಿವಾದಿತ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸಬೇಕಾದರೆ, ಅದಕ್ಕೆ ಸಂಬಂಧ ಪಟ್ಟವರ ಜತೆ ಶಾಂತಿಯುತವಾಗಿ ಮಾತುಕತೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಆದರೆ ಚೀನಾ ಈ ವಿಚಾರದಲ್ಲಿ ಬಲವಂತವಾಗಿ ತನ್ನ ನಿರ್ಧಾರವನ್ನು ಬೇರೆಯವರ ಮೇಲೆ ಹೇರುತ್ತಿದೆ. ಗಡಿ ವಿಚಾರವಾಗಿ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳಿಗೆ ತಕ್ಕಂತೆ ಚೀನಾ ನಡೆದುಕೊಳ್ಳಬೇಕು.

ಈ ಪ್ರದೇಶ ಭಾರತ, ಚೀನಾ ಹಾಗೂ ಭೂತಾನ್ ಗಡಿ ಭಾಗದಲ್ಲಿದೆ. ಭೂತಾನ್ ಜತೆಗೆ ಭಾರತ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಪ್ರದೇಶಕ್ಕೆ ಪ್ರವೇಶಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಭಾರತದ ಈ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ.’

ಭಾರತ ಹಾಗೂ ಚೀನಾ ನಡುವಣ ಈ ಗಡಿ ವಿವಾದ ದಿನೇ ದಿನೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಹಿಂದೆ ಅಮೆರಿಕ, ಉಭಯ ದೇಶಗಳು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಸಲಹೆ ನೀಡಿತ್ತು. ಈಗ ಜಪಾನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಪ್ರಕಟಿಸಿದೆ.

ಜಪಾನ್ ಈ ವಿಚಾರದಲ್ಲಿ ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿಕೊಳ್ಳದೇ ನೇರವಾಗಿ ಭಾರತದ ಪರವಾಗಿ ಬ್ಯಾಟಿಂಗ್ ಮಾಡಿದೆ. ಜಪಾನ್ ಹೀಗೆ ಭಾರತದ ಪರವಾಗಿ ನಿಲ್ಲಲು ಕಾರಣ ಏನು ಎಂಬುದನ್ನು ನೋಡುವುದಾದರೆ…

ಈಗಾಗಲೇ ಸಮುದ್ರ ಪ್ರದೇಶದ ವಿಚಾರವಾಗಿ ಚೀನಾದ ದರ್ಪದಿಂದ ಜಪಾನ್ ಬೇಸತ್ತಿದೆ. ಹೀಗಾಗಿ ಈ ವಿಷಯದಲ್ಲಿ ಭಾರತಕ್ಕೆ ಬೆಂಬಲ ನೀಡುವ ಮೂಲಕ ಚೀನಾ ವಿರುದ್ಧ ತೊಡೆ ತಟ್ಟುವ ಪ್ರಯತ್ನ ಮಾಡುತ್ತಿದೆ. ದೋಕಲಂ ಗಡಿ ವಿವಾದ ಭಾರತ ಹಾಗೂ ಚೀನಾ ನಡುವಣ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿರುವುದರ ಜತೆಗೆ, ಏಷ್ಯಾದ ಪ್ರಾದೇಶಿಕ ಪ್ರಾಬಲ್ಯದ ಸೂಚಕವಾಗಿಯೂ ಬಿಂಬಿತವಾಗಿದೆ. ಹೀಗಾಗಿ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಜಪಾನ್, ಭಾರತದ ಬೆನ್ನಿಗೆ ನಿಂತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಜಪಾನ್ ನಡುವಣ ಸ್ನೇಹ ಹೆಚ್ಚುತ್ತಿರುವುದು ಜಪಾನ್ ಭಾರತದ ಬೆಂಬಲಕ್ಕೆ ನಿಲ್ಲಲು ಪ್ರಮುಖ ಕಾರಣ.

Leave a Reply