ಶೀಘ್ರವೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ ಅಮೆರಿಕದ ಅಪಾಚೆ ಯುದ್ಧ ಹೆಲಿಕಾಪ್ಟರ್

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸದ್ಯಕ್ಕೆ ಆರು ಯುದ್ಧ ಹೆಲಿಕಾಪ್ಟರ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ.

ಮೊದಲ ಹಂತದಲ್ಲಿ ಆರು ಹೆಲಿಕಾಪ್ಟರ್ ಕೊಳ್ಳಲು ನಿರ್ಧರಿಸಲಾಗಿದ್ದು, ಅಮೆರಿಕ ಮೂಲದ ಕಂಪನಿ ಬೋಯಿಂಗ್ ನಿಂದ ₹ 4,168 ಕೋಟಿ ಮೊತ್ತಕ್ಕೆ ಖರೀದಿ ಮಾಡಲಾಗುತ್ತಿದೆ. ಎಎಚ್-64-ಇ ಶ್ರೇಣಿಯ ಆರು ಹೆಲಿಕಾಪ್ಟರ್ ಗಳ ಜತೆಗೆ ಅದರ ಯುದ್ಧ ಸಾಮಾಗ್ರಿ, ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ಬಿಡಿಭಾಗಗಳನ್ನು ಖರೀದಿ ಹಾಗೂ ಅವುಗಳ ತರಬೇತಿಯನ್ನು ನೀಡಲಾಗುವುದು.

2015ರಲ್ಲೇ ಭಾರತವು ಅಮೆರಿಕ ಸರ್ಕಾರದ ಜತೆ 22 ಅಪಾಚೆ ಹೆಲಿಕಾಪ್ಟರ್ ಹಾಗೂ ಭಾರಿ ಗಾತ್ರದ 15 ಚಿನೂಕ್ ಚಾಪರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಈ ಹೆಲಿಕಾಪ್ಟರ್ ಗಳ ಖರೀದಿ ಕೇವಲ ಪ್ರಸ್ತಾವೆಯ ಹಂತದಲ್ಲೇ ಉಳಿದಿತ್ತು. ಇತ್ತೀಚೆಗೆ ನಡೆದ ರಕ್ಷಣಾ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಈ ಹೆಲಿಕಾಪ್ಟರ್ ಖರೀದಿಗೆ ಒಪ್ಪಿಗೆ ನೀಡಿದ್ದಾರೆ.

ಎಎಚ್-64-ಇ ಶ್ರೇಣಿಯ ಹೆಲಿಕಾಪ್ಟರ್ ಗಳು ಬಹುಮುಖಿ ಯುದ್ಧ ವಿಮಾನವಾಗಿದ್ದು, ಅತ್ಯಧುನಿಕ ಯುದ್ಧ ಸಾಮರ್ಥ್ಯಗಳನ್ನು ಹೊಂದಿದೆ. ಅಲ್ಲದೆ ರಾತ್ರಿಯ ವೇಳೆಯೂ ದಾಳಿ ನಡೆಸಲು ಬೇಕಿರುವ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇವುಗಳು ಶೀಘ್ರದಲ್ಲೇ ಭಾರತೀಯ ವಾಯು ಸೇನೆಯನ್ನು ಸೇರಿಕೊಳ್ಳಲಿವೆ.

ಈವರೆಗೂ ಭೂಸೇನೆಯಲ್ಲಿ ದಾಳಿ ಮಾಡಬಹುದಾದಂತೆ ಯುದ್ಧ ಹೆಲಿಕಾಪ್ಟರ್ ಗಳಿಲ್ಲ. ಹೀಗಾಗಿ ಸರ್ಕಾರ ಒಪ್ಪಂದ ಮಾಡಿಕೊಂಡಿರುವ 22 ಹೆಲಿಕಾಪ್ಟರ್ ಪೈಕಿ 11 ಹೆಲಿಕಾಪ್ಟರ್ ಗಳನ್ನು ಭೂ ಸೇನೆಗೆ ನೀಡಬೇಕು ಎಂಬ ಪ್ರಸ್ತಾವವೂ ಇದೆ. ಆದರೆ ಇದಕ್ಕೆ ವಾಯು ಸೇನೆಯಿಂದ ಆಕ್ಷೇಪ ವ್ಯಕ್ತವಾಗಿದೆ.

ಸದ್ಯ ಭಾರತ ಖರೀದಿಸಲು ಮುಂದಾಗಿರುವ ಆರು ಹೆಲಿಕಾಪ್ಟರ್ ಗಳು 2020 ವೇಳೆಗೆ  ಸೇನೆಯನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಇದರಿಂದ ಸೇನೆಯ ಬಲ ಹೆಚ್ಚಲಿದ್ದು, ಗಡಿ ಪ್ರದೇಶಗಳ ಕಾರ್ಯಾಚರಣೆ ವೇಳೆ ಈ ಹೆಲಿಕಾಪ್ಟರ್ ಗಳು ಪರಿಣಾಮಕಾರಿಯಾಗಿ ಬಳಕೆಯಾಗಲಿವೆ. ಅಲ್ಲದೆ 22 ಅಪಾಚೆ ಹೆಲಿಕಾಪ್ಟರ್ ಹಾಗೂ 15 ಚಿನೂಕ್ ಚಾಪರ್ ಗಳನ್ನು ಖರೀದಿಗೆ ಸುಮಾರು ಸುಮಾರು 3 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಖರೀದಿಸಲು ಭಾರತವು ಒಪ್ಪಂದ ಮಾಡಿಕೊಂಡಿದೆ.

ಇನ್ನು ರಕ್ಷಣಾ ಸಮಿತಿ ಸಭೆಯಲ್ಲಿ ಭಾರತೀಯ ನೌಕಾ ಪಡೆಗಾಗಿ ರಷ್ಯಾದಿಂದ ನಿರ್ಮಾಣವಾಗುತ್ತಿರುವ ಎರಡು ಯುದ್ಧ ನೌಕೆಗೆ ಬೇಕಿರುವ ಎರಡು ಗ್ಯಾಸ್ ಟರ್ಬೈನ್ ಇಂಜೀನ್ ಅನ್ನು ಉಕ್ರೇನ್ ನಿಂದ ₹ 490 ಕೋಟಿ ಮೊತ್ತಕ್ಕೆ ಖರೀದಿಸಲು ಒಪ್ಪಿಗೆ ನೀಡಲಾಯಿತು.

Leave a Reply