ಉತ್ತರದಲ್ಲಿ ನೆರೆಯ ಅಬ್ಬರ, 17 ಜಿಲ್ಲೆ ತತ್ತರ- ಸತ್ತವರ ಸಂಖ್ಯೆ 153

ಡಿಜಿಟಲ್ ಕನ್ನಡ ಟೀಮ್:

ಈಶಾನ್ಯ ಭಾಗದ ರಾಜ್ಯಗಳು ಪ್ರವಾಹದಿಂದ ತತ್ತರಿಸಿದ ನಂತರ ಈಗ ಉತ್ತರ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳು ನೆರೆಯಿಂದ ನಲುಗಿದೆ. ಬಿಹಾರದಲ್ಲೇ ಪ್ರವಾಹದಿಂದ ಸತ್ತವರ ಸಂಖ್ಯೆ 153ಕ್ಕೆ ಏರಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನದಿಗಳು ಅಪಾಯ ಮಟ್ಟವನ್ನು ಮೀರಿವೆ. ಬಿಹಾರದ 17 ಜಿಲ್ಲೆಗಳು, 1688 ಪಂಚಾಯ್ತಿ ಪ್ರದೇಶಗಳು ಈ ಪ್ರವಾಹಕ್ಕೆ ಸಿಲುಕಿದ್ದು, ಸುಮಾರು ಒಂದು ಕೋಟಿ ಜನರು ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ. ಈವರೆಗೂ 1289 ಸಂತ್ರಸ್ತ ಶಿಬಿರಗಳನ್ನು ನಿರ್ಮಿಸಲಾಗಿದ್ದು, 3.92 ಲಕ್ಷ ಜನರಿಗೆ ಆಶ್ರಯ ನೀಡಲಾಗಿದೆ. ಎನ್ ಡಿ ಆರ್ ಎಫ್ ಸಿಬ್ಬಂದಿ ಪ್ರವಾಹ ಪ್ರದೇಶಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾರೆ.

ಪಾಟ್ನಾ, ಗಯಾ, ಭಗಲ್ಪುರ್ ಹಾಗೂ ಪುರ್ನಿಯಾ ಜಿಲ್ಲೆಗಳಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರವಾಹದ ಪರಿಶೀಲನೆ ನಡೆಸಿದ್ದು, ಈ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಎರಡು ರಾಜ್ಯಗಳಿಂದ ಒಟ್ಟು 170ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ.

Leave a Reply