ದೋಕಲಂ ವಿವಾದ: ಚೀನಾ ಕಂಪನಿಗಳ ನಿಯಂತ್ರಣಕ್ಕೆ ಭಾರತ ಮೂಗುದಾರ ಹೊಸೆಯುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ಅನೇಕ ವಿದ್ಯಮಾನಗಳು ನಡೆಯುತ್ತಿವೆ. ಆಗಾಗ್ಗೆ ಯುದ್ಧದ ಎಚ್ಚರಿಕೆ ನೀಡುತ್ತಿರುವ ಚೀನಾಗೆ ಭಾರತ ಪೆಟ್ಟು ನೀಡಲು ಪ್ರತಿತಂತ್ರ ಎಣೆಯುತ್ತಿದೆ. ಅದುವೇ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ನಾಗಾಲೋಟಕ್ಕೆ ಬ್ರೇಕ್ ಹಾಕುವುದು.

ಹೌದು, ಸದ್ಯದ ಪರಿಸ್ಥಿತಿಯಲ್ಲಿ ಭಾರತ ಚೀನಾ ಮಿಲಿಟರಿ ಬಲಾಬಲವನ್ನು ನೋಡುವುದಾದರೆ, ಎರಡೂ ದೇಶಗಳು ತಮ್ಮದೇ ಆದ ರೀತಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿವೆ. ಆದರೆ ಯುದ್ಧದ ನಂತರದ ಪರಿಣಾಮ ಎರಡೂ ದೇಶಗಳಿಗೂ ದುಬಾರಿಯಾಗಲಿದೆ. ಹೀಗಾಗಿ ಯುದ್ಧ ಮಾಡದೇ ಚೀನಾಗೆ ಬುದ್ಧಿ ಕಲಿಸಬೇಕಾದರೆ ಭಾರತದ ಮುಂದೆ ಇರುವ ಪ್ರಮುಖ ಅಸ್ತ್ರ, ವ್ಯಾಪಾರ ಕ್ಷೇತ್ರದಲ್ಲಿ ಚೀನಾಗೆ ಲಗಾಮು ಹಾಕುವುದು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ತನ್ನ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ.

ಚೀನಾ ಪ್ರಭುತ್ವ ಸಾಧಿಸಿರುವ ಕೆಲವು ಕ್ಷೇತ್ರಗಳಲ್ಲಿ ನಿಯಮಗಳನ್ನು ಬಿಗಿಗೊಳಿಸುವ ಮೂಲಕ ವ್ಯಾಪಾರವಾಗಿ ಚೀನಾವನ್ನು ಕಟ್ಟಿಹಾಕಿ, ಚೀನಾವನ್ನು ದಾರಿಗೆ ಬರುವಂತೆ ಮಾಡುವುದು ಸರ್ಕಾರದ ಮುಂದಿರುವ ಪ್ರಮುಖ ಆಯ್ಕೆ. ಹೀಗಾಗಿ ಇಂಧನ, ಟೆಲಿಕಾಂ ಹಾಗೂ ವಿದ್ಯುತ್ ಉಪಕರಣ ಸರಬರಾಜಿನಂತಹ ಕ್ಷೇತ್ರಗಳಲ್ಲಿ ಚೀನಾ ಕಂಪನಿಗಳನ್ನು ನಿಯಂತ್ರಿಸಲು ಸರ್ಕಾರ ಕಾನೂನಿನ ಹಗ್ಗ ಹೊಸೆಯುತ್ತಿದೆ. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ…

ಎಲೆಕ್ಟ್ರಾನಿಕ್ಸ್ ಕ್ಷೇತ್ರ…

ಸದ್ಯ ಭಾರತದ ವಿದ್ಯುತ್ ಕೇಂದ್ರಗಳು ಹಾಗೂ ಸ್ಮಾರ್ಟ್ ಗ್ರಿಡ್ ಕೇಂದ್ರಗಳ ಮೇಲೆ ಸೈಬರ್ ದಾಳಿಯಾಗದಂತೆ ನೋಡಿಕೊಳ್ಳಲು ಕೇಂದ್ರ ವಿದ್ಯುತ್ ಪ್ರಾಧಿಕಾರ ಒಂದು ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ. ಈ ಮೂಲಕ ಚೀನಾ ಕಂಪನಿಗಳು ಭಾರತೀಯ ಕಂಪನಿಗಳ ಜತೆಗೆ ಸ್ಪರ್ಧಿಸಲು ಕಠಿಣವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇತ್ತೀಚೆಗೆ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯೆಲ್ ಅವರು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಪ್ರಕಾರ, ಮುಂದಿನ ದಿನಗಳಲ್ಲಿ ಯಾವುದೇ ಗುತ್ತಿಗೆಯನ್ನು ವಿದೇಶಿ ಕಂಪನಿಗೆ ನೀಡಬೇಕಾದರೆ, ಆಗ ಪರಸ್ಪರ ವಿನಿಮಯ ತತ್ವವನ್ನು ಅಳವಡಿಸಲಾಗುವುದು. ಇದರಿಂದ ವಿದೇಶಿ ಕಂಪನಿಗಳು ಅದರಲ್ಲೂ ಚೀನಾ ಕಂಪನಿಗಳು ಭಾರತದ ಕಂಪನಿಗಳ ಜತೆ ಸ್ಪರ್ಧೆಗಿಳಿಯುವುದು ಕಠಿಣವಾಗಲಿದೆ.

ಮತ್ತೊಂದೆಡೆ ‘ನಮ್ಮ ದೇಶದ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವ ರಾಷ್ಟ್ರಗಳಿಂದ ರಕ್ಷಣೆ ಮಾಡಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ರೂಪಿಸಲು ಸರ್ಕಾರ ಚರ್ಚೆ ನಡೆಸುತ್ತಿದೆ. ಇದು ಯಾವುದೋ ಒಂದು ದೇಶವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆದರೆ ಭಾರತದಲ್ಲಿನ ವ್ಯವಸ್ಥೆಗೆ ಮಾರಕವಾಗಲು ಚಿಂತನೆ ನಡೆಸುವವರಿಗೆ ಹಿನ್ನಡೆಯಾಗುವುದು ಖಚಿತ’ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರದ ಮುಖ್ಯಸ್ಥ ಆರ್.ಕೆ ವರ್ಮಾ ತಿಳಿಸಿರುವುದು ಕಾನೂನಿನಲ್ಲಿ ಕೆಲವು ಬದಲಾವಣೆ ತರುವ ಸೂಚನೆ ನೀಡಿದೆ.

ಇನ್ನು ಮೂಲಗಳ ಮಾಹಿತಿ ಪ್ರಕಾರ, ಕಂಪನಿಯೊಂದು ಈ ಕ್ಷೇತ್ರಕ್ಕೆ ಸಂಬಂಧಿಸಿದ ಗುತ್ತಿಗೆಯನ್ನು ಪಡೆಯಬೇಕಾದರೆ ಅದು ಕನಿಷ್ಠ ಪಕ್ಷ 10 ವರ್ಷಗಳಿಂದ ಭಾರತದಲ್ಲಿ ಅಸ್ತಿತ್ವ ಹೊಂದಿರಬೇಕು, ಆ ಕಂಪನಿಯ ಉನ್ನತ ಹುದ್ದೆಯಲ್ಲಿ ಭಾರತೀಯನನ್ನು ಕೂರಿಸಿರಬೇಕು, ಅಲ್ಲದೆ ಆ ಕಂಪನಿಯ ಸಿಬ್ಬಂದಿ ವರ್ಗದಲ್ಲಿ ಭಾರತೀಯರು ಇರಬೇಕು ಎಂಬ ನಿಯಮ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾದ ನಿರ್ಧಾರ ಬಂದಿಲ್ಲ.

ಮುಂದಿನ ದಿನಗಳಲ್ಲಿ ಯಾವುದೇ ಟ್ರಾನ್ಸ್ ಮಿಷನ್ ವ್ಯವಸ್ಥೆಯನ್ನು ಅಳವಡಿಸಬೇಕಾದರೂ ಅದು ಮಾಲ್ ವೇರ್ ಮುಕ್ತವಾಗಿದೆಯೇ ಎಂಬ ಪರೀಕ್ಷೆಗೆ ಒಳಪಡಿಸಬೇಕು. ಈ ಎಲ್ಲ ನಿಯಮಾವಳಿಗಳನ್ನು ರೂಪಿಸಿದ್ದೇ ಆದಲ್ಲಿ, ಇಷ್ಟು ದಿನಗಳ ಕಾಲ ಭಾರತೀಯ ವಿದ್ಯುತ್ ಇಂಧನ ಕ್ಷೇತ್ರದಲ್ಲಿ ಸ್ವಚ್ಛಂದವಾಗಿ ಲಾಭ ಮಾಡಿಕೊಳ್ಳುತ್ತಿದ್ದ ಚೀನಾ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ.

‘ಪವರ್ ಟ್ರಾನ್ಸ್ ಮಿಷನ್ ಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದರಿಂದ ಭಾರತೀಯ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ಇಷ್ಟು ದಿನಗಳ ಕಾಲ ಚೀನಾ ಹಾಗೂ ಇತರೆ ವಿದೇಶಿ ಕಂಪನಿಗಳು ಹೊಂದಿದ್ದ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗುವುದು’ ಎಂದು ಭಾರತೀಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದಕರ ಸಂಸ್ಥೆಯ ಪ್ರಧಾನ ನಿರ್ದೇಶಕ ಸುನೀಲ್ ಮಿಶ್ರಾ ತಿಳಿಸಿದ್ದಾರೆ.

ಇನ್ನು ಇಂಧನ ಕ್ಷೇತ್ರಕ್ಕೆ ಬರುವ ಚೀನಾ ಉತ್ಪನ್ನಗಳ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷಿಸಲು ಭದ್ರತಾ ಸಂಸ್ಥೆಗಳನ್ನು ನೇಮಿಸಲಾಗಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.

ಟೆಲಿಕಾಂ ಕ್ಷೇತ್ರ…

ಭಾರತ ಸರ್ಕಾರ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆ ಒದಗಿಸುವಂತೆ ಎಲ್ಲಾ ಮೊಬೈಲ್ ಕಂಪನಿಗಳಿಗೆ ಸೂಚನೆ ನೀಡಿದೆ. ಅದರಲ್ಲೂ ಚೀನಾ ಮೂಲದ ಉತ್ಪನ್ನಗಳು ಹಾಗೂ ಸ್ಮಾರ್ಟ್ ಫೋನ್ ಗಳಲ್ಲಿ ಉನ್ನತ ಮಟ್ಟದ ಭದ್ರತೆ ನೀಡುವಂತೆ ನಿಯಮ ಜಾರಿಗೆ ತರುತ್ತಿದೆ.

ಕಳೆದ ವಾರ ಮಾಹಿತಿ ತಂತ್ರಜ್ಞಾನ ಸಚಿವಾಲಯವು 21 ಸ್ಮಾರ್ಟ್ ಫೋನ್ ಕಂಪನಿಗಳಿಗೆ ತಮ್ಮ ಉತ್ಪನ್ನಗಳಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ಕೇಳಿದ್ದು, ಅವುಗಳನ್ನು ಉನ್ನತ ದರ್ಜೆಗೆ ಏರಿಸಲು ಸೂಚನೆ ನೀಡಿದೆ. ಈ 21 ಕಂಪನಿಗಳ ಪೈಕಿ ಬಹುತೇಕ ಕಂಪನಿಗಳು ಚೀನಾ ಮೂಲದ್ದಾಗಿವೆ. ಅಷ್ಟೇ ಅಲ್ಲದೆ ಈ ಕಂಪನಿಗಳು ತಮ್ಮ ದೇಶದಲ್ಲಿ ಮಾರಾಟ ಮಾಡುವ ಉತ್ಪನ್ನಗಳಲ್ಲಿನ ಭದ್ರತಾ ವ್ಯವಸ್ಥೆ, ಸುರಕ್ಷತೆಯ ಮಟ್ಟ, ಮಾರ್ಗಸೂಚಿ ಹಾಗೂ ಗುಣಮಟ್ಟದ ಕುರಿತು ಮಾಹಿತಿಯನ್ನು ಕೇಳಿದ್ದು, ಅದೇ ಗುಣಮಟ್ಟ ಹಾಗೂ ಭದ್ರತಾ ವ್ಯವಸ್ಥೆಯನ್ನು ಇಲ್ಲಿ ಮಾರಾಟವಾಗುವ ಮೊಬೈಲ್ ಗಳಿಗೂ ನೀಡಬೇಕು ಎಂಬ ಷರತ್ತು ವಿಧಿಸಲು ಮುಂದಾಗಿದೆ.

ಚೀನಾ ಮೂಲದ ಪ್ರಮುಖ ಸ್ಮಾರ್ಟ್ ಫೋನ್ ಕಂಪನಿಗಳ ಪೈಕಿ ಕ್ಸಿಯೋಮಿ, ಲೆನೊವೊ, ಒಪ್ಪೊ, ವಿವೊ ಹಾಗೂ ಜಿಯೋನಿ ಕಂಪನಿಗಳು ಮುಂಚೂಣಿಯಲ್ಲಿದ್ದು, 10 ಬಿಲಿಯನ್ ಡಾಲರ್ ಮೊತ್ತದ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅರ್ಧದಷ್ಟು ಹಿಡಿತ ಸಾಧಿಸಿವೆ. ಈ ಕಂಪನಿಗಳ ಜತೆಗೆ ಆಪಲ್, ಸ್ಯಾಮ್ಸಂಗ್ ಹಾಗೂ ಭಾರತದ ಮೈಕ್ರೋಮ್ಯಾಕ್ಸ್ ಗೂ ಸಹ ತಮ್ಮ ಉತ್ಪನ್ನಗಳ ಗುಣಮಟ್ಟ ಹಾಗೂ ಅವುಗಳಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವಂತೆ ಆಗಸ್ಟ್ 12ರಂದು ಸಚಿವಾಲಯ ಪತ್ರ ಬರೆದಿದೆ.

ಹೀಗೆ ಚೀನಾ ಕಂಪನಿಗಳು ಪ್ರಾಬಲ್ಯ ಸಾಧಿಸಿರುವ ಕ್ಷೇತ್ರಗಳಲ್ಲಿ ಕಾನೂನಿನ ಮೂಲಕ ಕಡಿವಾಣ ಹಾಕಿ ಚೀನಾಕ್ಕೆ ಪಾಠ ಕಲಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ.

Leave a Reply