ಎನ್ಡಿಎ ತೆಕ್ಕೆಗೆ ಬೀಳಲು ಜೆಡಿಯು ನಿರ್ಧಾರ, ಹೆಚ್ಚಾಯ್ತು ನಿತೀಶ್- ಶರದ್ ಯಾದವ್ ನಡುವಣ ಭಿನ್ನಮತ

ಡಿಜಿಟಲ್ ಕನ್ನಡ ಟೀಮ್:

ಬಿಹಾರದಲ್ಲಿ ಮಹಾಮೈತ್ರಿಯನ್ನು ತೊರೆದು ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನತಾ ದಳ ಯೂನೈಟೆಡ್ (ಜೆಡಿಯು) ಈಗ ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟವನ್ನು ಸೇರಿಕೊಳ್ಳಲು ತೀರ್ಮಾನಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಇತ್ತೀಚೆಗಷ್ಟೇ ಬಿಹಾರದಲ್ಲಿ ಆರ್ ಜೆಡಿ ಹಾಗೂ ಕಾಂಗ್ರೆಸ್ ಜತೆಗಿನ ಮಹಾಮೈತ್ರಿಯಿಂದ ಹೊರ ಬಂದಿದ್ದ ಜೆಡಿಯು, ನಂತರ ಬಿಜೆಪಿಯ ಬೆಂಬಲದೊಂದಿಗೆ ಮತ್ತೆ ಅಧಿಕಾರ ಪಡೆದಿತ್ತು. ಈಗ ಈ ನಿರ್ಧಾರದ ಮೂಲಕ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಎನ್ಡಿಎ ಬಣದಲ್ಲಿ ಗುರುತಿಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ.

ಪಕ್ಷ ಮಹಾಮೈತ್ರಿಯನ್ನು ತೊರೆದು ಬಿಜೆಪಿ ಜತೆ ಕೈಜೋಡಿಸುವ ಪಕ್ಷದ ನಿರ್ಧಾರಕ್ಕೆ ಹಿರಿಯ ನಾಯಕ ಶರದ್ ಯಾದವ್ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ಈಗ ಎನ್ಡಿಎ ಮೈತ್ರಿಕೂಟ ಸೇರುವ ವಿಚಾರವಾಗಿ ಶರದ್ ಯಾದವ್ ಹಾಗೂ ನಿತೀಶ್ ಕುಮಾರ್ ನಡುವಣ ಭಿನ್ನಮತ ಮತ್ತಷ್ಟು ಹೆಚ್ಚಿದೆ. ಪರಿಣಾಮ ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಗೆ ಆಹ್ವಾನ ನೀಡಿದ್ದರೂ ಶರದ್ ಯಾದವ್ ಈ ಸಭೆಯಲ್ಲಿ ಭಾಗವಹಿಸಲಿಲ್ಲ.

ಇತ್ತ ನಿತೀಶ್ ಕುಮಾರ್ ತಮ್ಮ ನಿವಾಸದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದರೆ, ಶರದ್ ಯಾದವ್ ಎಸ್.ಕೆ ಮೆಮೋರಿಯಲ್ ಹಾಲ್ ನಲ್ಲಿ ‘ಜನ್ ಅದಾಲತ್’ ಎಂಬ ಕಾರ್ಯಕ್ರಮದ ಮೂಲಕ ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಇದು ಜೆಡಿಯುನ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ.

ಶರದ್ ಯಾದವ್ ಹಾಗೂ ಅವರ ಬೆಂಬಲಿಗರ ವಿರೋಧದ ನಡುವೆಯೂ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಸೇರಲು ನಿರ್ಧರಿಸಿದರು. ಹೀಗಾಗಿ ಮುಂದಿನ ದಿನಗಳಲ್ಲಿ ಶರದ್ ಯಾದವ್ ಹಾಗೂ ಅವರ ಬೆಂಬಲಿಗರು ಯಾವ ರೀತಿಯ ಹೆಜ್ಜೆ ಇಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

1 COMMENT

Leave a Reply