ಮಾರುವೇಷದಲ್ಲಿ ಮಹಿಳೆಯರ ಸುರಕ್ಷತೆಯ ಪರಿಶೀಲನೆ ನಡೆಸಿದ ಕಿರಣ್ ಬೇಡಿ, ಪುದುಚೆರಿಯ ಪರಿಸ್ಥಿತಿ ಕುರಿತು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದೆಲ್ಲೆಡೆ ಮಹಿಳೆಯ ಸುರಕ್ಷತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪುದುಚೆರಿಯ ರಾಜ್ಯಪಾಲರಾದ ಕಿರಣ್ ಬೇಡಿ ತಮ್ಮ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಯಾವ ರೀತಿ ಇದೆ ಎಂಬುದನ್ನು ಪರಿಶೀಲಿಸಲು ಸ್ವತಃ ತಾವೇ ಮಾರುವೇಷದಲ್ಲಿ ಹೋಗಿದ್ದಾರೆ.

ತಮ್ಮ ಈ ಪರಿಶೀಲನೆ ಬಗ್ಗೆ ಕಿರಣ್ ಬೇಡಿ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾತ್ರಿಯ ವೇಳೆ ಪುದುಚೆರಿಯಲ್ಲಿ ಮಹಿಳೆಯರ ಸ್ಥಿತಿ ಹೇಗಿರುತ್ತದೆ. ಈ ರಾಜ್ಯದಲ್ಲಿ ಅವರು ಎಷ್ಟು ಸುರಕ್ಷಿತ ಎಂಬುದನ್ನು ಪರಿಶೀಲನೆ ನಡೆಸಲು ಕಿರಣ್ ಬೇಡಿ ಅವರು ತಮ್ಮ ಗುರುತು ಮರೆಮಾಚಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡಿದ್ದಾರೆ. ಹೀಗೆ ರಾತ್ರಿ ವೇಳೆ ಗಸ್ತು ತಿರುಗಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಪ್ ಮೂಲಕ ಸಂದೇಶ ರವಾನಿಸಿದ ಕಿರಣ್ ಬೇಡಿ ‘ರಾತ್ರಿ ವೇಳೆಯು ಪುದುಚೆರಿಯಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆ’ ಎಂಬ ಸಂದೇಶ ರವಾನಿಸಿದರು.

ನಂತರ ತಮ್ಮ ಟ್ವಿಟರ್ ನಲ್ಲಿ ಕಿರಣ್ ಬೇಡಿ ಅವರು ‘ಪುದುಚೆರಿಯು ಮಹಿಳೆಯರಿಗೆ ತಕ್ಕಮಟ್ಟಿಗೆ ಸುರಕ್ಷಿತ ಪ್ರದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುರಕ್ಷತಾ ಮಟ್ಟವನ್ನು ಹೆಚ್ಚಿಸಲಾಗುವುದು. ಈ ಕುರಿತಾಗಿ ಜನರು ಪಿಸಿಆರ್ ಅಥವಾ 100ಕ್ಕೆ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು.’ ಎಂದಿದ್ದಾರೆ.

ಕಿರಣ್ ಬೇಡಿ ಅವರ ಈ ಕಾರ್ಯಕ್ಕೆ ಅನೇಕರು ಟ್ವಿಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ವ್ಯಕ್ತಿಯೊಬ್ಬ ನೀವು ಹೆಲ್ಮೆಟ್ ಧರಿಸುವುದನ್ನು ಮರೆತಿದ್ದೇಕೆ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿರಣ್ ಬೇಡಿ, ‘ನಾವು ಉದ್ದೇಶ ಪೂರ್ವಕವಾಗಿಯೇ ಹೆಲ್ಮೆಟ್ ಧರಿಸದಿರಲು ನಿರ್ಧರಿಸಿದೆವು. ಮಹಿಳೆಯರು ರಾತ್ರಿ ವೇಳೆ ಸ್ಕೂಟಿ ಚಲಾಯಿಸುವುದನ್ನು ನೋಡಿ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ನಾವು ಹೆಲ್ಮೆಟ್ ಧರಿಸಲಿಲ್ಲ’ ಎಂದು ಉತ್ತರಿಸಿದ್ದಾರೆ.

Leave a Reply