ಪಂಚತಾರಾ ಹೊಟೇಲ್ ವ್ಯಾಮೋಹ ಬಿಡಿ ಎಂದ ಮೋದಿ, ಸಚಿವರಿಗೆ ಪ್ರಧಾನಿ ಕೊಟ್ಟ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್:

‘ಇನ್ನು ಮುಂದೆ ಸಚಿವ ಸಂಪುಟ ಸದಸ್ಯರು ತಮ್ಮ ಸಚಿವಾಲಯದ ಕೆಲಸ ಹಾಗೂ ಇತರೆ ಕರ್ತವ್ಯ ನಿರತ ಸಂದರ್ಭದ ವೇಳೆ ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೇ ಹೊರತು ಐಶಾರಾಮಿ, ಪಂಚತಾರಾ ಹೊಟೇಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಾರದು. ಇನ್ನು ಸರ್ಕಾರಿ ವಾಹನಗಳನ್ನು ಸಚಿವರು ಹಾಗೂ ಅವರ ಕುಟುಂಬ ಸದಸ್ಯರು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ…’ ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವರಿಗೆ ನೀಡಿರುವ ಸೂಚನೆ.

ಹೌದು, ಕಳೆದ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೋದಿ ಅವರು ಈ ವಿಷಯದ ಕುರಿತಾಗಿ ತಮ್ಮ ಸಹೋದ್ಯೋಗಿಗಳಿಗೆ ಈ ಎಚ್ಚರಿಕೆ ರವಾನಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಚಿವ ಸಂಪುಟ ಸಭೆ ಮುಕ್ತಾಯವಾದ ಕೆಲವೇ ಹೊತ್ತಿನಲ್ಲಿ ಮೋದಿ ತಮ್ಮ ಸಚಿವರಿಗೆ ಒಂದು ಸೂಚನಾ ಪತ್ರವನ್ನು ನೀಡಿದರು.

ಆ ಪತ್ರದಲ್ಲಿ, ‘ಇತ್ತೀಚಿಗೆ ಕೆಲವು ಸಚಿವರುಗಳು ಕರ್ತವ್ಯದ ವೇಲೆ ಪಂಚತಾರಾ ಹೊಟೇಲ್ ಗಳಲ್ಲಿ ತಂಗುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಸಚಿವರುಗಳು ಕರ್ತವ್ಯ ನಿರತ ಸಮಯದಲ್ಲಿ ಸರ್ಕಾರದಿಂದ ನೀಡಲಾಗಿರುವ ಸೌಲಭ್ಯಗಳನ್ನೇ ಬಳಸಬೇಕು.

ಇನ್ನು ಕೆಲವು ಸಚಿವರುಗಳು ತಮ್ಮ ಸಚಿವಾಲಯದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸೇವೆಗೆಂದು ನೀಡಲಾಗಿರುವ ವಾಹನಗಳನ್ನು ತಮ್ಮ ಖಾಸಗಿ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ಬಂದಿದೆ. ಕೇವಲ ಸಚಿವರುಗಳು ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರು ಈ ವಾಹನಗಳನ್ನು ಬಳಸುತ್ತಿದ್ದಾರೆ. ಇನ್ನುಮುಂದೆ ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಉತ್ತಮ’ ಎಂದು ಸೂಚನೆ ನೀಡಲಾಯಿತು ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭ್ರಷ್ಟಾಚಾರದ ವಿರುದ್ಧ ತಮ್ಮ ಸರ್ಕಾರ ಹೋರಾಟ ನಡೆಸುತ್ತಿದೆ ಎಂದು ಪದೇ ಪದೇ ಸಾರುತ್ತಿರುವ ಪ್ರಧಾನಿ ಮೋದಿ, ತಮ್ಮ ಸಚಿವ ಸದಸ್ಯರಿಂದ ಯಾವುದೇ ಸಣ್ಣ ಪುಟ್ಟದ ತಪ್ಪುಗಳಾಗದಂತೆ ನೋಡಿಕೊಳ್ಳಲು ಈ ರೀತಿಯಾದ ಎಚ್ಚರಿಕೆ ನೀಡುತ್ತಿದ್ದಾರೆ. ಭ್ರಷ್ಟಾಚಾರದ ವಿರೋಧದ ಅಲೆಯಲ್ಲೇ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸರ್ಕಾರ ಭ್ರಷ್ಟಾಚಾರ ಕಳಂಕ ಮುಕ್ತವಾಗಿರುವಂತೆ ಜಾಗರೂಕತೆ ವಹಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

Leave a Reply