ನಾನೇಕೆ ಕೆಲಸ ಮಾಡ್ತೇನೆ…?

ರಮಾ ಎಂ. ಎನ್.

ಸಾಮಾನ್ಯವಾಗಿ ಪ್ರಖ್ಯಾತ ಬರಹಗಾರರು “ನಾನೇಕೆ  ಬರೆಯುತ್ತೇನೆ?” ಅಂತ ಒಂದು ಕೃತಿ ಬರೆದಿರ್ತಾರೆ. ಹಾಗೆ “ನಾನೇಕೆ ಕೆಲಸ ಮಾಡ್ತೇನೆ?” ಅನ್ನೋ ವಿಷಯ ನನ್ನನ್ನು ಬಹಳ ದಿನದಿಂದ ಕಾಡ್ತಿತ್ತು. ಇಲ್ಲಿ ‘ನಾನು’ ಎಂದರೆ ಕೇವಲ ನಾನಲ್ಲ… ನನ್ನ ಸುತ್ತ- ಮುತ್ತ ಇರುವ ಹೆಂಗೆಳೆಯರ ಕತೆ ನನ್ನ ಮನದಲ್ಲಿ ಬಹಳ ದಿನದಿಂದ ಹರಳುಗಟ್ಟಿತ್ತು. ಅದಕ್ಕೆ ಒಂದು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ನಾನು ಪ್ರಸಂಗಗಳನ್ನು ಇದಮಿತ್ತಂ ಅಂತ ನಿರೂಪಿಸಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಅಭಿಪ್ರಾಯ ಮಂಡಿಸುವ ಪ್ರಯಾಸ ಮಾಡಿಲ್ಲ.

ಕತೆ ಒಂದು

“ನಾನೇಕೆ ಕೆಲಸಕ್ಕೆ ಬರ್ತೀನೋ ನಂಗೇ  ಗೊತ್ತಿಲ್ಲ. ಹಣದ ಅವಶ್ಯಕತೆ ನಂಗಿಲ್ಲ. ಆದರೆ ನನ್ನ ಮಗಳು ಬೆಳೆದು ದೊಡ್ಡೋಳಾದ ಮೇಲೆ ‘ಮಮ್ಮಿ ನೀನು ಇಷ್ಟು ಕ್ವಾಲಿಫೈಡ್ ಆಗಿ ಕೆಲಸಕ್ಕೆ ಹೋಗದೆ ಮನೇಲಿ ಯಾಕೆ ಉಳಿದೆ?’ ಅಂತ ಒಂದೊಮ್ಮೆ ಕೇಳಿದರೆ” ಅಂತ ನಗ್ತಾಳೆ  ಉಷಾ. ಕೆಲಸದ ವೇಳೆ ಬಿಡುವು ಸಿಕ್ಕಾಗಲೆಲ್ಲ ಆನ್ ಲೈನ್ ಶಾಪಿಂಗ್ ನಲ್ಲಿ ತೊಡಗಿಸಿಕೊಳ್ಳೋ, ಅವಳ ಐದು ವರ್ಷದ ಮಗಳು ಕರೆ ಮಾಡಿ ‘ಗುಡ್ ಟೈಮ್ ಟು ಟಾಕ್’ ಅಂತ ಇವಳದ್ದೇ   ಕಾರ್ಪೊರೇಟ್ ಸ್ಟೈಲ್ ನಲ್ಲೆ  ಕೇಳಿದಾಗ ‘ಎಸ್ ಗೋ ಅಹೆಡ್’ ಅಂತ ಹೇಳೋ, ಖುದ್ದು ತನ್ನ ಜೀವನವನ್ನೇ ಸೀರಿಯಸ್ ಆಗಿ ತೊಗೊಳ್ಳದ,  ಚಂಚಲ ಮನಸ್ಸಿನ ಇವಳು ಕೆಲಸದ ಬಗ್ಗೆ ಇನ್ನು ಎಂಥ ನಿಲುವು ತಾಳಲು ಸಾಧ್ಯ!

ಕತೆ ಎರಡು 

ಐರನ್ನಮ್ಮ-  ಒಂದು ಕಾಲದಲ್ಲಿ ಹಗಲು ರಾತ್ರಿ ಲೆಕ್ಕಿಸದೆ ಐರನ್ ಮಾಡ್ತಿದ್ದಳು. ಮೂರು ಲಕ್ಷದ ಚೀಟಿ ಹಾಕಿ, ಅದನ್ನು ಅವಳ ಪರಿಚಯಸ್ಥರೇ ಲಪಟಾಯಿಸಿ ನುಂಗಿ ಹಾಕಿದಾಗ ಆದ ಆಘಾತದಿಂದ ಮೂಲೆ ಸೇರಿದಳು. ಎರಡನೆಯ ಮದುವೆ ಮಾಡಿಕೊಂಡು ಬೇರೆ ವಸತಿ ಹೂಡಿದ್ದರೂ ಪ್ರತಿದಿನ ಕುಡಿಯಲು ಹಣ ಬೇಡಲು ಬರ್ತಿದ್ದ ಗಂಡ, ಖರ್ಚಿಗೆ ದುಡ್ಡು ಪೀಕುತ್ತಿದ್ದ ಮಕ್ಕಳು ಯಾರು ಅವಳತ್ತ ತಿರುಗಿ ನೋಡಲಿಲ್ಲ. ಐರನ್ನಮ್ಮ ಚೇತರಿಸಿಕೊಂಡು ಎದ್ದಳು. ಈಗ ತನ್ನ ಊಟಕ್ಕೆ, ವಸತಿಗೆ ಎಷ್ಟು ಬೇಕೋ ಅಷ್ಟು ದುಡೀತಾಳೆ. ದಿನಾಲು ಐರನ್ ಬಾಕ್ಸ್ ಗೆ ಇದ್ದಲು ಹಾಕಿ ಕೆಂಡ ಮಾಡಲೇಬೇಕೆಂಬ ಕ್ರಮ ಇಟ್ಟುಕೊಂಡಿಲ್ಲ. ಒಬ್ಬಳಿಗೆ ಎಷ್ಟು ಬೇಕು? ಆರು ತಿಂಗಳಿಗೊಮ್ಮೆ ಮೂರ್ನಾಲ್ಕು ಸಾವಿರ ರೂಪಾಯಿ ಒಟ್ಟು ಮಾಡಿ ಮೊಮ್ಮಕ್ಕಳಿಗೆ  ಹೊಸ ಅಂಗಿ, ಫ್ರಾಕು, ಮಿಠಾಯಿ, ಆಟದ ಸಾಮಾನು ಖರೀದಿಸಿ, ಹಳ್ಳಿಗೆ ಹೋಗಿ ಅವರೊಂದಿಗೆ ನಾಲ್ಕು ದಿನ ಖುಷಿಯಾಗಿ ಕಳೆದು ಬರ್ತಾಳೆ. ಗಂಡ- ಮಕ್ಕಳು ಈಗ ಗದರಿಸಿದರು- ಗೋಗರೆದರೂ ಅವಳ ಬಳಿ ಹಣವಿಲ್ಲ. ಅವಶ್ಯಕತೆಗಿಂತ ಹೆಚ್ಚು ಹಣ ದುಡಿಯಲು ಹೋದಾಗ ಆದ ಒತ್ತಡವನ್ನು ಅವಳು ಮರೆಯಲಾರಳು. ಅಂಗೈ ಅಗಲದ ಮೆಟ್ಟಿಲ ಕೆಳಗಿನ ಮನೆಯಲ್ಲಿ ಐರನ್ ಮಾಡದ ದಿನ ಟಿವಿ ನೋಡ್ಕೊಂಡು ಆರಾಮವಾಗಿರ್ತಾಳೆ.

ಕತೆ ಮೂರು

ಅನಾರೋಗ್ಯದ ನಿಮಿತ್ತ ಅಡುಗೆಯವರನ್ನು ಇಟ್ಟುಕೊಂಡಳು ರೇಖಾ. ಅಡುಗೆಯಾಕೆ ಇವಳು ಕೊಡೊ ಸಂಬಳದಲ್ಲೇ ತನ್ನ ಹಾಗು ಮಗಳ  ಜೀವನ ನಡೀಬೇಕು ಎಂಬಂತೆ  ಬಿಂಬಿಸಿದರು. ಆರು ತಿಂಗಳು ಕಳೆಯಿತು. ರೇಖಾಳಿಗೂ ಸ್ವಲ್ಪ ನಿರಾಳ ಅನ್ನಿಸಿತು. ಒಂದೇ ಉಸುರಿಗೆ ಅಡುಗೆ ಮಾಡಿ ಆಫೀಸಿಗೆ ಹೋಗೋ ಧಾವಂತ ತಪ್ಪಿತು. ಅಷ್ಟರಲ್ಲಿ ಅಹೋರಾತ್ರಿ ಆಕೆ ಕೆಲಸ ಬಿಟ್ಟರು. “ಅರೆ ಮತ್ತೆ ಜೀವನಕ್ಕೆ ಏನು ಮಾಡ್ತಾರೆ?” ರೇಖಾ  ಗೊಂದಲಕ್ಕೆ ಬಿದ್ದಳು. ಆದರೆ ಅದಕ್ಕೂ ಮೀರಿ ಇನ್ನೊಂದು ವಿಚಾರ ಅವಳನ್ನು ಕಾಡತೊಡಗಿತು. ಎಷ್ಟು ಸುಲಭವಾಗಿ ಕೆಲಸ ಬಿಟ್ಟುಬಿಟ್ಟರು! ನಾನೇಕೆ ಹಾಗೆ ಮಾಡಲಾಗುತ್ತಿಲ್ಲ? ಕೆಲಸ ಬಿಡಲು ಮನಸ್ಸಿಲ್ಲವೇ? ಭಯವೆ? ಆತಂಕವಾ? ಒಂದು ಉನ್ನತ ಮಟ್ಟದ ಜೀವನ ಶೈಲಿಗೆ ಹೊಂದಿಕೊಂಡಿರುವ ದೇಹ- ಮನ ಅದಕ್ಕಿಂತ ಕಡಿಮೆಗೆ ಇಳಿಯಲು ಸಹಕರಿಸದೇ? ಮನೆ ಕೆಲಸದವಳ ಮುಂದೆ ತನ್ನ ಅಳಲು ತೋಡಿಕೊಂಡಳು. “ಅಯ್ಯೋ ಹೌದಾಕ್ಕಾ… ಅಡಿಗೇವ್ರು ಇದ್ದಿದ್ರೆ ನಿಮ್ಗೆ ಸಂದಾಗಿರೋದು” ಎಂದು ಪ್ರತಿಕ್ರಿಯಿಸಿದ ಮನೆಗೆಲಸದಾಕೆ ತಾಯಮ್ಮ. “ಈವಕ್ಕಂಗೇನು ಕಮ್ಮಿ ಐತೆ ಅಂತ ಕೆಲ್ಸಕ್ಕೆ ಓಗ್ಬೇಕು. ಅಣ್ಣ ಕೈ ತುಂಬಾ ಸಂಪಾದಿಸ್ತಾರೆ. ಈಗ ಮಗ ಬೇರೆ ದುಡೀತೌನೆ.

ಈವಕ್ಕ ದುಡಿಯೋ ಅರ್ಧ ಸಂಬಳ ಮನ್ಯಾಗೆ ಆಳು- ಕಾಳು, ಆಟೋ ಕ್ಯಾಬು, ಬಟ್ಟೆ-ಬರೆ ಅಂತ ಖರ್ಚಾಗ್ತದೆ. ಮ್ಯಾಕೆ ಖಾಯಿಲೆಗೆ ಔಷದಿ ಖರ್ಚು ಬ್ಯಾರೆ. ಸುಮ್ಕೆ ಮನೇಲಿ ಶಿವಾ ಅಂತ ಇರಾಕಾಗಕಿಲ್ವಾ? ನಮಗಾದ್ರೆ ಗೇಯ್ಕೊಂಡು ತಿನ್ದೇ ವಿಧಿ ಇಲ್ಲ. ಅಂತ ಮನಸ್ಸಿನಲ್ಲೇ ಅಂದ್ಕೊತಾಳೆ.

ಕತೆ ನಾಲ್ಕು

“ಇಂತ ಖಾಯಿಲೆ ಇದೆ ಅಂತ ಗೊತ್ತೆ ಇರಲಿಲ್ಲ. ಅದು ಎಲ್ರನ್ನು ಬಿಟ್ಟು ನಂಗೆ ಆಗ್ಬೇಕಾ?” ಈ ಮಾತು ಮಾನಸಿ ತನಗೆ ತಾನೇ ಅದೆಷ್ಟು ಸಲ ಹೇಳಿಕೊಂಡಿದ್ದಾಳೋ. ಎಲ್ಲವು ಚೆನ್ನಾಗೇ ನಡೀತಿತ್ತು. ಸಿಎ ಪರೀಕ್ಷೆ ಮುಗಿದೊಡನೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ತು.

ಒಂದೆರಡು ವರ್ಷದಲ್ಲೇ ತನ್ನದೇ ಅಪಾರ್ಟ್ ಮೆಂಟ್, ಕಾರು ಎಲ್ಲ ಆಯಿತು. ಅಷ್ಟರಲ್ಲಿ ವಿಕಾಸ್ ಪರಿಚಯ, ಮನೆಯವರ ಒಪ್ಪಿಗೆ ಪಡೆದು ಮದುವೆ. ಎಲ್ಲ ಕನಸಿನಲ್ಲಿ ನಡೆದಂತೆ ನಡೆದುಹೋಯಿತು. ವಿಕಾಸ್ ಈಗಾಗಲೇ ಕೊoಡಿದ್ದ ಲೇಕ್ ವ್ಯೂ ಅಪಾರ್ಟ್ ಮೆಂಟ್ ಅವಳದಕ್ಕಿಂತ ಉತ್ತಮವಾಗಿತ್ತು. ಲಿಫ್ಟ್, ಸೆಕ್ಯೂರಿಟಿ ಎಲ್ಲ ಸೌಕರ್ಯ ಇತ್ತು. ಹೀಗಾಗಿ ಇವಳ ಮನೆ ಬಾಡಿಗೆಗೆ ಕೊಟ್ಟು ವಿಕಾಸ್ ನೊಟ್ಟಿಗೆ ಬಾಳ್ವೆ ಶುರು ಮಾಡಿದಳು. ಸಣ್ಣದಾಗಿ ಕಾಡುತಿದ್ದ ಹೊಟ್ಟೆನೋವು ಮೊದಮೊದಲು ನಿರ್ಲಕ್ಷ ಮಾಡಿದಳು.

ಒಂದು ದಿನ ಇನ್ನೇನು ಸತ್ತೇ ಹೋಗ್ತೀನಿ ಅನ್ನೋ ನೋವು ಬಂದು ಡಾಕ್ಟರರ ಬಳಿ ಹೋಗೋದರಲ್ಲಿ ತಡವಾಗಿತ್ತು. ಅವಳ  ಇಡೀ ಲಿವರ್ ಖಾಯಿಲೆಗೆ ತುತ್ತಾಗಿತ್ತು. ಹೇಗೆ ಏನು ಎಂಬ  ಅಂದಾಜಿಲ್ಲ. ಯಾರಾದರು ನಿಮ್ಮ ದೇಹಕ್ಕೆ ಹೊಂದುವಂತ ಲಿವರ್ ಡೊನೇಟ್ ಮಾಡಿದ್ರೆ, ಶಸ್ತ್ರಚಿಕಿತ್ಸೆ ಮೂಲಕ ಅದನ್ನು  ಅಳವಡಿಸಬಹುದು ಎಂದರು ಡಾಕ್ಟಾರ್. ಹ್ಹಾಂ… ಇಡೀ ಲಿವರ್ ಕೊಡುವ ಅವಶ್ಯಕತೆ ಇಲ್ಲ. ಒಂದು ಭಾಗ ಕೊಟ್ಟರೆ ಸಾಕು. ಕಾಲಕ್ರಮೇಣ ಅದು ದಾನಿ ಹಾಗೂ ಅವಳ  ದೇಹದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆಯುತ್ತೆ  ಎಂಬ ಆಶ್ವಾಸನೆ ಕೊಟ್ಟರು. ಅಬ್ಬಾ ಎಂತ ಅದ್ಭುತ! ವಿಜ್ಞಾನ- ತಂತ್ರಜ್ಞಾನ ಇಷ್ಟು ಮುಂದುವರೆದಿದೆಯಾ? ಆದರೆ ಲಿವರ್ ದಾನ ಮಾಡೋರು ಯಾರು? ನಡುಪ್ರಾಯದ ಅವರ ದೂರದ ಬಳಗದಲ್ಲಿ ಒಬ್ಬಾಕೆ ಮುಂದೆ ಬಂದರು.

ಅಂಗಾಂಗ ಕಸಿಗೆ ಸಂಬಂಧಿಸಿದ ಕಾಯಿದೆಯ ಎಡರು- ತೊಡರು ಎದುರಿಸುವಲ್ಲಿ ಮಾನಸಿ ಕೋಮಾಕ್ಕೆ ಜಾರಿಹೋದಳು. ಏರ್ ಆಂಬುಲೆನ್ಸ್ ನಲ್ಲಿ ಅವಳನ್ನು ಕೇರಳಕ್ಕೆ ವರ್ಗಾಯಿಸಿದ ವಿಕಾಸ ಅಂತೂ ಇಂತೂ ಅವಳನ್ನು ಉಳಿಸಿಕೊಂಡ. ಇಷ್ಟರಲ್ಲಿ ಅವರ ಇನ್ಶೂರೆನ್ಸ್ ಹಣ, ಉಳಿತಾಯ ಎಲ್ಲ ಕರಗಿ ಹೋಯಿತು. ವಿಕಾಸ್ ಅವಳ ಅಪಾರ್ಟ್ ಮೆಂಟ್ ಮಾರಿಬಿಡೋಣ ಅಂತ ಪ್ರಯತ್ನಿಸಿದ. ಆಧುನಿಕ ಸೌಕರ್ಯಗಳಿಲ್ಲದ್ದರಿಂದ ಅದನ್ನು ಕೇಳುವವರೇ ಇಲ್ಲ. ಚಿಕಿತ್ಸೆಯ ಅವಘಡದಲ್ಲಿ ಒಂದು ಕಣ್ಣಿನ ದೃಷ್ಟಿ ಹೋಯಿತು. ಅಡ್ಡ ಪರಿಣಾಮವಾಗಿ ಬಿಪಿ, ಶುಗರ್ ಬಂತು. ಇದೆಲ್ಲದರ ಹೊರತಾಗಿಯೂ ಮಾನಸಿ ನಿಧಾನವಾಗಿ ಚೇತರಿಸಿಕೊಂಡಳು. ಮತ್ತೆ ಕೆಲಸಕ್ಕೆ ಹೋಗಲು ಅಣಿಯಾದಳು. ಜೀವಕ್ಕೆ ಜೀವ ಕೊಟ್ಟು ತನ್ನನ್ನು ಉಳಿಸಿಕೊಂಡ ವಿಕಾಸನಿಗೆ ಹೆಗಲು ಕೊಡಲು ನಿರ್ಧರಿಸಿದಳು.

ಕತೆ ಐದು

ಮುದ್ದಾದ ಅವಳಿ ಮಕ್ಕಳ ತಾಯಿ ಆಶಾ. ಮನೇಲಿ ಕೆಲಸಕ್ಕೆ ಹೋಗಲೇಬೇಕೆಂಬ ಒತ್ತಾಯವಿಲ್ಲ. ಆದರೆ ತುಂಬು ಕುಟುಂಬ. ಅತ್ತೆ- ಮಾವ, ಸರಿಯಾದ ಕೆಲಸವಿಲ್ಲದ ಭಾವನವರು, ಕೆಲಸಕ್ಕೆ ಹೋಗದ ಓರಗಿತ್ತಿ. ಮಕ್ಕಳಿಗೆ ಒಳ್ಳೊಳ್ಳೆ ಉಡುಗೆ- ತೊಡುಗೆ ಹಾಕಬೇಕು, ಇಂಟರ್ ನ್ಯಾಷನಲ್ ಸ್ಕೂಲಿಗೆ ಸೇರಿಸಬೇಕೆಂಬ ಹಂಬಲ ಆಶಾಳಿಗೆ.

“ಅಂಬೇಡ್ಕರ್ ಯಾವ ಶಾಲೇಲಿ ಓದಿದ್ರು? ಈ ವಯಸ್ಸಿಗೆ ಮಕ್ಕಳಿಗೆ ಶೂ ಯಾಕೆ. ನಾವು ಚಪ್ಪಲಿ ಹಾಕಿಕೊಂಡೆ ಬೆಳೆಯಲಿಲ್ಲವಾ” ಹೀಗೆಲ್ಲ ಗಂಡನ ವಾದ. ತಾನೇ ಕೆಲಸ ಮಾಡಿ ಮಕ್ಕಳಿಗೆ ಈ ಎಲ್ಲ ಸೌಕರ್ಯ ನೀಡಲು ಆಶಾ ಮುಂದಾದಳು. ಇದನ್ನು  ಪರೋಕ್ಷವಾಗಿ ವಿರೋಧಿಸಿದ ಮನೆಯವರು ಮಕ್ಕಳ ಆರೈಕೆಗೆ ವಿಶೇಷ ಕಾಳಜಿ ವಹಿಸಲಿಲ್ಲ. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳಲು ಆಯಾ ಬಂದಳು. ಅವಳಿ ಮಕ್ಕಳಲ್ಲಿ ಮಗಳು ಚೂಟಿ. ಮಗ ಸ್ವಲ್ಪ ಆರೋಗ್ಯದಲ್ಲಿ ಹಿಂದು. ಮೃದು ಸ್ವಭಾವ. ಅಂದು ತಿಂಗಳ ಕೊನೆ ದಿನ. ಆಫೀಸಿನಲ್ಲಿ ಕೆಲಸ ಹೆಚ್ಚು. ಮನೆ ತಲುಪೋದು ತಡ ಆಗುತ್ತೆ. ಮಗ ಅವಳ ಮೊಬೈಲಿಗೆ ಕರೆ ಮಾಡಿ ಖುಷಿಯಾಗಿ “ಮಮ್ಮ ನಾನು ಈ ಸಲ ಕ್ಲಾಸಿನಲ್ಲಿ  ಸ್ಟಾರ್ ಆಫ್ ದ ವೀಕ್! ಬರ್ತಾ ಚಾಕೊಲೇಟ್

ತಗೊಂಬಾ. ಮ್ಯಾಮ್ ಹೇಳಿದ್ದಾರೆ. ಕ್ಲಾಸಿನಲ್ಲಿ ಎಲ್ಲರಿಗು ಕೊಡ್ಬೇಕು ಅಂತ. ಇವತ್ತು  ಬೇಗ ಬರ್ತಿಯಾ?  ನಂಗೆ ಮಮ್ಮ ಒಂದಿನ ಬೆಳಕಿರೋವಾಗಲೇ ಬರ್ಬೇಕು. ತುಂಬಾ ಆಟ ಆಡ್ಬೇಕು ಅಂತ ಅನಿಸ್ತಾ ಇದೆ” ಎಂದು ಇನ್ನು ಟೈಮ್ ನೋಡಲು ಬರದ ಪುಟ್ಟ ಪೋರ, ಬೆಳಕು- ಕತ್ತಲೆಯ ಅಂದಾಜಿನಲ್ಲೇ ಹೇಳಿದಾಗ ಆಶಾಳಿಗೆ ಅಪರಾಧಿ ಭಾವ ಕಾಡುತ್ತೆ.

ಜೊತೆಜೊತೆಗೆ ಇಂದು ತನ್ನ ಮಕ್ಕಳ ಬೇಡಿಕೆಗಳು ಸಣ್ಣವು. ಚಾಕೊಲೇಟ್ ಕೊಡಿಸಿದರೆ ತೀರುತ್ತೆ. ಆದರೆ  ಮುಂದೆ? ಅವರ ಆಶಯಗಳನ್ನು ತೀರಿಸಲು ತನ್ನ ಬಳಿ ಹಣ ಬೇಡವೇ ಎಂದು ನಿಡುಸೊಯ್ತಾಳೆ.

ಕತೆ ಆರು

ತನಗೆ ಮದುವೆ ಆಗೋದೇ ಇಲ್ಲ ಅಂತ ಶ್ವೇತ ನಿರ್ಧರಿಸಿಬಿಟ್ಟಿದ್ದಳು. ಮೂರು ಹೆಣ್ಣು ಮಕ್ಕಳ ಪೈಕಿ ಇವಳೇ ಚಿಕ್ಕೊಳು. ವಯಸ್ಸಾದ ತಂದೆ ತಾಯಿ. ಅಂತೂ ಒಳ್ಳೆ ಕಡೆ ಸಂಬಂಧ ಕುದುರಿ ಮದುವೆ ಆಯ್ತು. ವಯಸ್ಸು ಹೆಚ್ಚಾದ್ದರಿಂದ ಮಗು ಆಗೋದು ಕಷ್ಟ ಆಯಿತು. ಮೊದಲಿಂದ ಮಕ್ಕಳೆಂದರೆ ಅವಳಿಗೆ ಹುಚ್ಚು ಪ್ರೀತಿ. ಅಕ್ಕಂದಿರ ಮಕ್ಕಳನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ ತಾಯಿಯವಳು. ಮಗು ಬೇಕೇ ಬೇಕೆಂದು ಅವಳು ಹಠಕ್ಕೆ ಬಿದ್ದು ಕೆಲಸಕ್ಕೆ ದೀರ್ಘ ರಜೆ ಹಾಕಿದಳು. ತೂಕ ಇಳಿಸಿ ಕೊಂಡಳು. ಕಡೆಗೂ ಮುದ್ದಾದ ಹೆಣ್ಣು ಮಗು ಹುಟ್ಟಿತು ಅಷ್ಟರಲ್ಲಿ ತಾಯಿ ತೀರಿಕೊಂಡರು. ತಂದೆಯನ್ನು ತನ್ನ ಮನೇಲೆ ಇಟ್ಟುಕೊಂಡಳು. ಈಗಾಗಲೇ ಮನೆ ತುಂಬಾ ಜನ. ಜಾಗ ಸಾಲದು ಅನ್ನೋಕ್ಕಿಂತ ಹೊಂದಾಣಿಕೆ ಸಾಲದು ಅನ್ನಬಹುದು.

ಮದುವೆಗೆ ಮುಂಚೆ ಕೊಂಡಿದ್ದ ಸೈಟಿನಲ್ಲಿ ಶ್ವೇತಾ ಮನೆ ಕಟ್ಟಿಸಿದಳು. ತನ್ನದೇ ಮನೆಯಾದರೆ ಅಪ್ಪನನ್ನು ಇಟ್ಟುಕೊಳ್ಳಲು ಅಡ್ಡಿಯಿಲ್ಲ ಅಂತ. ಅಷ್ಟರಲ್ಲಿ ಅಪ್ಪನಿಗೆ ಪಾರ್ಶ್ವವಾಯು ಆಯಿತು. ಅವರನ್ನು ನೋಡಿಕೊಳ್ಳಲು ಎರಡು ಪಾಳಿಯಲ್ಲಿ ಮೇಲ್ ನರ್ಸ್. ಖರ್ಚಿನ ಮೇಲೆ ಖರ್ಚು, ಇದರ ಮೇಲೆ ಮನೆ ಸಾಲ. ಆಫೀಸಿನಲ್ಲಿ ವರ್ಕ್ ಫ್ರಮ್ ಹೋಂ ಆಪ್ ಷನ್ ಕೇಳಿದಳು. ಹೇಗೋ ಕೆಲಸ ನಡೆಯುತ್ತಿದೆ. ಇತ್ತೀಚಿಗೆ ಸಂಸ್ಥೆಯಲ್ಲಿ ಅನೇಕ ಬದಲಾವಣೆಗಳು. ಇನ್ನು ಮುಂದೆ ಎಲ್ಲರು ಆಫೀಸಿಗೆ ಬರಲೇಬೇಕು ಎಂಬ ವದಂತಿ. ಪ್ರೀತಿಯಿಂದ ಹಡೆದ ಕೂಸು. ಆ ಕೂಸಿನಷ್ಟೇ ಅಸಹಾಯಕ ಅಪ್ಪ. ತನ್ನ ಸ್ವಾಭಿಮಾನಕ್ಕಾದರೂ ಕೆಲಸಕ್ಕೆ  ಹೋಗಲೇಬೇಕೆಂಬ ಪರಿಸ್ಥಿತಿ. ಇದೆಲ್ಲದರ ಮಧ್ಯೆ ಆಫೀಸಿನಲ್ಲಿ ಎದ್ದಿರುವ ಗುಲ್ಲು. ಇನ್ನೊಂದೆರಡು ವರ್ಷ ಹೀಗೆ ಮನೆಯಿಂದ ಕೆಲಸ ಮಾಡುವಂತಾದರೆ ಅಷ್ಟರಲ್ಲಿ ಮಗಳು ಸ್ಕೂಲಿಗೆ ಹೋಗುತ್ತಾಳೆ. ಅಪ್ಪನು  ಚೇತರಿಸಿಕೊಳ್ಳಬೋದು. ತನ್ನ ಹೊಸ ಮ್ಯಾನೇಜರ್ ವರ್ಕ್ ಫ್ರಮ್ ಹೋಂ ಮಾಡಲು ಅವಕಾಶ ಕೊಡಬಹುದೇ ಎಂಬ ಆಶಾಭಾವ ಶ್ವೇತಳದ್ದು.

ಕತೆ ಏಳು

ಈ ಹೌಸ್ ಕೀಪಿಂಗ್ ಲೇಡೀಸ್ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಅವರ ಪರಿಸ್ಥಿತಿ ಒಂದು ತರಹ ಅರಮನೆಯಲ್ಲಿ, ಅಂತಃಪುರದಲ್ಲಿ ಕೆಲಸ ಮಾಡುತಿದ್ದ ಚೇಟಿಯರ (ಸೇವಕಿಯರ) ಸ್ಥಿತಿ ಇದ್ದಂತೆ. ರಾಣಿಯೋ ಯುವರಾಣಿಯೋ ಆಜ್ಞೆ ಮಾಡಿದರೆ ಅದು ಕೇಳುವಷ್ಟು, ಅದನ್ನು ಗ್ರಹಿಸಿ ಶಿರಸಾವಹಿಸಿ ನೆರವೇರಿಸುವಷ್ಟು ಸಮೀಪದಲ್ಲಿ ಇರಬೇಕು. ಆದರೂ ಅವರಿಗೆ ಕಂಡೂ ಕಾಣದಂತೆ ಇರಬೇಕು. ಇವರಾದರು ಹಾಗೆ. ನೆಲದ ಮೇಲೆಲ್ಲಾ ನೀರು ಚೆಲ್ಲಿ, ಕೂದಲಿನ ರಾಶಿ ಹಾಕಿ, ಟಿಶ್ಯೂ ರೋಲ್ ಗಳನ್ನು ಉಂಡೆ ಮಾಡಿ ಬಿನ್ ಇದ್ದರು ಅದರೊಳಗೆ ಬಿಸಾಡದೆ ಇಡೀ ರೆಸ್ಟ್ ರೂಮ್ ಕಲಸುಮೇಲೋಗರ ಮಾಡಿ ‘ವಿದ್ಯಾವಂತ’ರೆನಿಸಿಕೊಂಡ ಒಂದು ತಂಡ ಜಾಗ ಖಾಲಿ ಮಾಡಿ ಇನ್ನೊಂದು ತಂಡ ಬಂದು ಮುಖ ಕಿವುಚುವ ಮುನ್ನ, ಆ ಸಣ್ಣ ಅಂತರದಲ್ಲಿ, ಯಾವುದೋ ಮಾಯಾ ದಂಡ ಹಿಡಿದವರಂತೆ ಸ್ವಚ್ಛ ಮಾಡಬೇಕು. ಆಗಷ್ಟೇ  ರೆಸ್ಟ್ ರೂಮನ್ನು ಒಂದು ಹಂತಕ್ಕೆ ತಂದು, ತಾನೇಕೆ ಕೆಲಸ ಮಾಡ್ತೇನೆ ಎಂದು ವಿಚಾರ ಮಾಡಲು ವ್ಯವಧಾನವಿರದ ಪಾರ್ವತಮ್ಮ ಮತ್ತೊಂದು ರೆಸ್ಟ್ ರೂಮ್ ಸ್ವಚ್ಛ ಮಾಡಲು ಹೆಜ್ಜೆ ಹಾಕಿದಳು.

ಕತೆ ಎಂಟು

ಬೆಳಗ್ಗೆ ಏಳು ಗಂಟೆಗೆ ಬಗಲಿಗೆ ಒಂದು ವ್ಯಾನಿಟಿ ಬ್ಯಾಗ್ ನೇತುಹಾಕಿಕೊಂಡು ಓಡು ನಡಿಗೆಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಧಾವಿಸುವ ಹೆಂಗೆಳೆಯರ ಗುಂಪು. ಅವರಿಗೆ ಕೆಲಸಕ್ಕೆ ಹೋಗೋದು ಉಸಿರಾಟದಷ್ಟೇ ಅವಶ್ಯಕ, ಅನಿವಾರ್ಯ, ಸ್ವಾಭಾವಿಕ.

ಕೊನೆಯ ಪದರ

‘ಉದ್ಯೋಗಂ ಪುರುಷ ಲಕ್ಷಣಂ’ ಅನ್ನೋದು ಈಗ ಪ್ರಸ್ತುತವಲ್ಲ. ಆದಾಗ್ಯೂ ಪುರುಷ ಕೆಲಸಕ್ಕೆ ಹೋಗ್ತಾನೆ ಅನ್ನೋದಷ್ಟೇ ಪ್ರಮುಖ. ಉಳಿದದ್ದೆಲ್ಲ ಗೌಣ. ಆದರೆ ಹೆಣ್ಣು? ಮೇಲೆ ವ್ಯಾಖ್ಯಾನ ಮಾಡಿದ್ದು ಕೆಲವು ಪ್ರಸಂಗಗಳಷ್ಟೇ. ಇಂತ ಎಷ್ಟೋ ಕೊಂಡಿಗಳಿಗೆ ಸಿಲುಕಿ ಅವಳು ಮನೆಯ ಒಳಗೂ- ಹೊರಗೂ ಕೆಲಸ ಮಾಡ್ತಲೇ ಇದ್ದಾಳೆ.

3 COMMENTS

  1. MADAM . NANEKE BAREYUTTENANDARE>. VIVIDHA RANGAGALALLI KANDU KELARIYADA SANNIVESHA SRISTIYADAGA>>> mana minyuttade>> pennu adeshisuttade>> bareyalu kudruttende<> idakke nanu creativbe activity> creative writing yendu hesrittiruvadu. Vilas Latthe@face book. com

    • KELASALA BAREDAGE ODUGARILLADE NIRASHE YAGUTTE ADARU SAHITY yavagalu ashavadiyagirabekaste> karana sahityave jeevanada pratibimba.
      2. kelasala nanage kopa barutte> yavagendare kannada lekhanagalalli samsrita pasdyagale jastiyagiruvadu. 3. nanna bhavaneyante4 nera bhashantara prsuakavdaru irali anya sbhashja shabdagalu odugarige tadegodegalagi vichara tarangagalannu hattikkkutave yallavE11 ODABEKU. tiliyabeku , abhivyakti golisabekembudu nanna guri. vananegalu.

  2. MODAPA DARI> DIGBANDHANA> VYAPARA VYAVAHARA KADIDUKONDU ARTHIKA SANKASTA NIRMISUVAD. TERADANEDAGI NAMMA SHAKTI SAMRTHYA .. ANTRRASTREEYA TREATY PASKARA BAHUDESHAGALANNU TANNA TEKKEGE SELEYUVADU.. #3. PRADHANI PAYANA 49 DESH pukkate suttilla> desha labhakkagiye irabahudu.4. JAPAN BEM<BALA NEEDIDDAGIDE ANTHAVARA VYAPARA VYAVAHARA HWECHICHISUVADE AGIDE!!

Leave a Reply