ವಿಲೀನವಾದವು ಎಐಎಡಿಎಂಕೆ ಬಣಗಳು, ಮುಂದೆ ನಡೆಯಬಹುದಾದ ವಿದ್ಯಮಾನಗಳೇನು?

ಡಿಜಿಟಲ್ ಕನ್ನಡ ಟೀಮ್:

ಎಐಎಡಿಎಂಕೆ ಪಕ್ಷದ ಎರಡೂ ಬಣಗಳು ಇಂದು ಅಧಿಕೃತವಾಗಿ ವಿಲೀನವಾಗಿವೆ. ಇದರಿಂದ ಹಲವು ತಿಂಗಳುಗಳಿಂದ ರಾಷ್ಟ್ರ ಮಟ್ಟದ ಗಮನ ಸೆಳದಿದ್ದ ಎಐಎಡಿಎಂಕೆ ಪಕ್ಷದೊಳಗಿನ ಬಿಕ್ಕಟ್ಟಿಗೆ ತೆರೆ ಬಿದ್ದಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ರಾಜಕೀಯ ವಿದ್ಯಮಾನಗಳಿಗೆ ದಾರಿ ಮಾಡಿಕೊಡುವ ಸೂಚನೆಗಳು ಗೋಚರಿಸಿವೆ.

ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟಿಸುವುದು, ಜಯಲಲಿತಾ ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದು ಸೇರಿದಂತೆ ಅನೇಕ ಷರತ್ತುಗಳನ್ನು ಪನ್ನೀರ್ ಸೆಲ್ವಂ ಬಣ ಪಳನಿಸಾಮಿ ಬಣದ ಮುಂದಿಟ್ಟಿತ್ತು. ಇದಕ್ಕೆ ಮುಖ್ಯಮಂತ್ರಿ ಪಳನಿಸಾಮಿ ಅವರು ಮೊದಲಿಗೆ ಪಕ್ಷದ ಮುಖ್ಯಕಚೇರಿಯಲ್ಲಿ ಶಶಿಕಲಾ ಅವರ ಭಾವಚಿತ್ರವನ್ನು ತೆರವುಗೊಳಿಸಿ ಪಕ್ಷದ ವಿಲೀನಕ್ಕೆ ತಾವು ಸಿದ್ಧ ಎಂಬ ಸಂದೇಶ ರವಾನಿಸಿದರು. ನಂತರ ಜಯಲಲಿತಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ನೇಮಕ ಮಾಡಿದ್ದು ಹಾಗೂ ಪೊಯೇಸ್ ಗಾರ್ಡನ್ ನಲ್ಲಿರುವ ಜಯಲಲಿತಾ ಅವರ ನಿವಾಸ ವೇದ ನಿಲಯಂ ಅನ್ನು ಜಯಲಲಿತಾ ಅವರ ಸ್ಮಾರಕವನ್ನಾಗಿ ಮಾರ್ಪಾಡು ಮಾಡುವ ನಿರ್ಧಾರ ತೆಗೆದುಕೊಂಡರು.

ಈಗ ಪನ್ನೀರ್ ಸೆಲ್ವಂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಅವರ ಬಣದ ಮೂವರು ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಎರಡೂ ಬಣಗಳು ಒಂದಾಗಿವೆ. ಅಲ್ಲದೆ ತಮಿಳುನಾಡಿನ ಸಚಿವ ಸಂಪುಟವನ್ನು ಇಂದೇ ವಿಸ್ತರಿಸುವ ಸಾಧ್ಯತೆಯೂ ಹೆಚ್ಚಾಗಿದ್ದು, 4.30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ.

ಹೀಗೆ ಒಂದೊಂದೇ ಷರತ್ತುಗಳನ್ನು ಒಪ್ಪುತ್ತಾ ಎರಡು ಬಣಗಳು ಹತ್ತಿರವಾಗಿ ಇಂದು ಅಧಿಕೃತವಾಗಿ ವಿಲೀನವಾಗಿವೆ. ಈಗ ಎರಡು ಬಣಗಳು ವಿಲೀನವಾದ ನಂತರ ಎಲ್ಲವೂ ಸರಿ ಹೋಗುವುದೇ? ಕಳೆದ ಎಂಟು ತಿಂಗಳಿನಿಂದ ಗೆದ್ದಲು ಹಿಡಿದಿರುವ ತಮಿಳುನಾಡಿನ ಆಡಳಿತ ಯಂತ್ರ ಮತ್ತೆ ಕಾರ್ಯಾರಂಭವಾಗುವುದೇ? ಮುಂದಿನ ದಿನಗಳಲ್ಲಿ ನಡೆಯಬಹುದಾದ ಬೆಳವಣಿಗೆಗಳೇನು ಎಂಬುದರ ಕುರಿತಾಗಿ ಪ್ರಶ್ನೆಗಳು ಉದ್ಭವಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಗಮನ ಸೆಳೆದಿರುವುದು ಪಕ್ಷದಲ್ಲಿ ಶಶಿಕಲಾ ಅವರ ಭವಿಷ್ಯ ಏನು ಎಂಬುದರ ಕುರಿತು. ಇತ್ತ ಉಭಯ ಬಣಗಳು ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಉಚ್ಛಾಟಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಅತ್ತ ಟಿಟಿವಿ ದಿನಕರನ್ ಪಕ್ಷದ 17 ಶಾಸಕರನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಪ್ರತಿತಂತ್ರ ರೂಪಿಸಿಕೊಂಡು ಸಜ್ಜಾಗಿ ನಿಂತಿದ್ದಾರೆ.

ದಿನಕರನ್ ಅವರ ಈ ನಡೆಯಿಂದ ಎಚ್ಚೆತ್ತ ಉಭಯ ಬಣಗಳ ನಾಯಕರು ಇಂದು ಶಶಿಕಲಾ ಅವರ ಕುರಿತಾಗಿ ಯಾವುದೇ ನಿರ್ಧಾರಕ್ಕೆ ಬಾರದಿರಲು ತೀರ್ಮಾನಿಸಿವೆ. ಈ ಕುರಿತಾದ ನಿರ್ಧಾರವನ್ನು ನಾಳೆ ಅಥವಾ ಈ ವಾರದೊಳಗೆ ಪಕ್ಷದ ಪದಾಧಿಕಾರಿಗಳ ಸಭೆ ಕರೆದು ಅಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಒಂದು ವೇಳೆ ಶಶಿಕಲಾ ಹಾಗೂ ದಿನಕರನ್ ಅವರ ವಿರುದ್ಧ ಪಕ್ಷದ ನಾಯಕರು ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ, ಈ 17 ಶಾಸಕರನ್ನು ಬಂಡಾಯ ಎಬ್ಬಿಸಿ ಸರ್ಕಾರದ ಅಸ್ತಿತ್ವವನ್ನೇ ಅಲ್ಲಾಡಿಸುವುದು ದಿನಕರನ್ ಅವರ ಮಾಸ್ಟರ್ ಪ್ಲಾನ್. ಹೀಗಾಗಿ ಮುಂದಿನ ದಿನಗಳಲ್ಲಿನ ರಾಜಕೀಯ ಬೆಳವಣಿಗೆಗಳು ಕೂತೂಹಲವನ್ನು ಕಾಯ್ದುಕೊಳ್ಳುವಂತೆ ಮಾಡಿದೆ.

ಇನ್ನು ಎರಡು ಬಣಗಳು ಒಂದಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಎಐಎಡಿಎಂಕೆಯು ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟ ಸೇರಿಕೊಳ್ಳುವುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿವೆ. ಈ ಎರಡು ಬಣಗಳ ವಿಲೀನಕ್ಕಾಗಿ ತೆರೆಮರೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಪ್ರಯತ್ನ ದೊಡ್ಡಮಟ್ಟದಲ್ಲಿ. ಹೀಗಾಗಿ ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಎನ್ ಡಿಎ ಮಿತ್ರಕೂಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಇತ್ತೀಚೆಗೆ ಜೆಡಿಯು ಪಕ್ಷವನ್ನು ತನ್ನತ್ತ ಸೆಳೆದುಕೊಂಡು ಬಿಹಾರ ರಾಜ್ಯವನ್ನು ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿ ಎಐಎಡಿಎಂಕೆ ಮೂಲಕ ತಮಿಳುನಾಡಿನ ಮೇಲೆ ನಿಯಂತ್ರಣ ಸಾಧಿಸಿ ದಕ್ಷಿಣ ಭಾರತದಲ್ಲಿ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ.

Leave a Reply