ಹೈಕಮಾಂಡ್ ತೆಕ್ಕೆಗೆ ಜಾರಿದ ರಾಜ್ಯ ಬಿಜೆಪಿ!

ಹೈಕಮಾಂಡ್ ಸಂಸ್ಕೃತಿ ಎಂಬುದು ಈವರೆಗೂ ಕಾಂಗ್ರೆಸ್ ಸ್ವತ್ತಾಗಿತ್ತು. ಇಲ್ಲಿ ಹೈಕಮಾಂಡ್ ಆಣತಿ ಇಲ್ಲದೆ ಹುಲ್ಲುಕಡ್ಡಿಯೂ ಅಲುಗುವುದಿಲ್ಲ. ಲೋಕಸಭೆ,ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಮುಖ್ಯಮಂತ್ರಿ ಆಯ್ಕೆ, ಸಚಿವ ಸಂಪುಟಕ್ಕೆ ಯಾರು, ಯಾರು ಸೇರ್ಪಡೆ ಆಗಬೇಕು,ಅವರಿಗೆ ಯಾವ ಖಾತೆ ಕೊಡಬೇಕು, ಸಂಪುಟದಿಂದ ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು, ನಿಗಮ-ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳ ಯಾರಾಗಬೇಕು ಎಂಬುದಕ್ಕೂ ಹೈಕಮಾಂಡ್ ತಪಶೀಲು ಬೀಳಲೇಬೇಕು. ಅದೇ ರೀತಿ ಪಕ್ಷದ ಸಾಂಸ್ಥಿಕ ರಚನೆಯಲ್ಲೂ ಹೈಕಮಾಂಡಿನದೇ ಪಾರುಪತ್ಯ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು,ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಕೊನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಗೂ ಹೈಕಮಾಂಡ್ ಅನುಮತಿ ಪಡೆಯಬೇಕು ಅನ್ನುವಷ್ಟರ ಮಟ್ಟಿಗೆ ಆ ಸಂಸ್ಕತಿ ಆಳವಾಗಿ ಬೇರೂರಿದೆ.

ಆದರೆ ಮೊದಲಿಂದಲೂ ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯನ್ನು ಅಣಕಿಸಿಕೊಂಡೇ ಬಂದಿದ್ದ ರಾಜ್ಯಬಿಜೆಪಿ ಇದೀಗ ತನಗೇ ಅರಿವಿಲ್ಲದಂತೆ ಹೈಕಮಾಂಡ್ ತೆಕ್ಕೆಗೆ ಜಾರಿದೆ!

ನಿಜ, ಮೊನ್ನೆ ಮೂರು ದಿನಗಳ ಕರ್ನಾಟಕ ಭೇಟಿ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸತ್ತಂತೆ ಬಿದ್ದಿದ್ದ ಪಕ್ಷದ ನಾಯಕರನ್ನು ಬಡಿದೆಬ್ಬಿಸುವ ಹಂತದಲ್ಲಿ ಕೊಟ್ಟಿರುವ ಖಡಕ್ ಎಚ್ಚರಿಕೆಗಳು, ಚುಚ್ಚಿರುವ ಮಾತಿನ ಈಟಿಗಳು ರಾಜ್ಯ ಬಿಜೆಪಿ ಈವರೆಗೂ ಕಾಪಿಟ್ಟುಕೊಂಡು ಬಂದಿದ್ದ ಪ್ರತ್ಯೇಕ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಹಾಕಿವೆ. ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಿಂದಿಡಿದು ಜಡತ್ವಕ್ಕೆ ಶರಣಾಗಿರುವ ನಾನಾ ಮೋರ್ಚಾಗಳ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಿಸುವುದಾಗಿ ಅಮಿತ್ ಶಾ ಅವರು ನೀಡಿರುವ ಹೇಳಿಕೆ ರಾಜ್ಯ ಬಿಜೆಪಿ ಸದ್ದಿಲ್ಲದೆ ದಿಲ್ಲಿ ವರಿಷ್ಠರ ನೆರಳಿಗೆ ಜಾರಿದೆ ಎಂಬುದರ ದ್ಯೋತಕವಾಗಿದೆ.

ಹೌದು, ಈವರೆಗೂ ರಾಜ್ಯದಲ್ಲಿ ಬಿಜೆಪಿ ವರಿಷ್ಠರ ನೆರಳು ಬೀಳದಂತೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿತ್ತು. ಸಕಾರಾತ್ಮಕವೋ, ನಕಾರಾತ್ಮಕವೋ ಅದೇನೇ ತೀರ್ಮಾನ ಆಗುವುದಿದ್ದರೂ ಎಲ್ಲವೂ ಇಲ್ಲೇ.ಇಲ್ಲಾದ ತೀರ್ಮಾನವನ್ನು ದಿಲ್ಲಿಗೆ ತಿಳಿಸುವುದು ವಾಡಿಕೆಗಷ್ಟೇ ಸೀಮಿತವಾಗಿತ್ತು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎಂಬಂತಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಲಿ, ಪ್ರಧಾನಿ ಅವರಾಗಲಿ ಮೂಗು ತೂರಿಸುತ್ತಿರಲಿಲ್ಲ. ಮೂಗು ತೂರಿಸಲು ಯಡಿಯೂರಪ್ಪನವರೂ ಬಿಡುತ್ತಿರಲಿಲ್ಲ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್, ಶಿಕ್ಷಣ ತಜ್ಞ ಪ್ರಭಾಕರ ಕೋರೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡರು ಅಷ್ಟೇ. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರನ್ನು ಈ ವಿಚಾರದಲ್ಲಿ ಒಂದು ಮಾತು ಕೂಡ ಕೇಳಿರಲಿಲ್ಲ. ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪನವರ ತೀರ್ಮಾನವೇ ಅಂತಿಮ. ಅವರೇ ಹೈಕಮಾಂಡ್. ಅದು ವಿಧಾನಸಭೆ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಇರಬಹುದು, ವಿಧಾನ ಪರಿಷತ್ ಸದಸ್ಯರ ಆಯ್ಕೆ ಇರಬಹುದು, ಸಂಪುಟಕ್ಕೆ ಸಚಿವರ ಸೇರ್ಪಡೆ ಇರಬಹುದು ಅವರು ಕೈಗೊಂಡ ತೀರ್ಮಾನ ನೆಪಮಾತ್ರಕ್ಕೆ ವರಿಷ್ಠರ ಗಮನಕ್ಕೆ ಬರುತ್ತಿತ್ತೇ ಹೊರತು,ಅವರ ಅನುಮತಿಗೆ ಕಾಯುತ್ತಿರಲಿಲ್ಲ. ಅವರನ್ನು ಕೇಳಿ ಖಾರ ಅರೆಯುತ್ತಿರಲಿಲ್ಲ. ಅದು ಅವರ ಜಾಯಮಾನವೂ ಆಗಿರಲಿಲ್ಲ. ಪ್ರಬಲ ಲಿಂಗಾಯತ ಸಮುದಾಯದ ಬಲ, ಅಧೀನ ನಾಯಕರ ಬೆಂಬಲದಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ತೆಕ್ಕೆಗೆ ತೆಗೆದುಕೊಂಡಿದ್ದ ಯಡಿಯೂರಪ್ಪ ಅವರನ್ನು ಕಂಡರೆ ಹೈಕಮಾಂಡಿಗೂ ಒಂದು ರೀತಿಯ ಭೀತಿಯಿತ್ತು. ಆದರೆ ಮೊನ್ನೆ ಮೂರು ದಿನಗಳ ಭೇಟಿ ಸಂದರ್ಭದಲ್ಲಿ ಅಮಿತ್ ಶಾ ಅವರು ರಾಜ್ಯ ನಾಯಕರನ್ನು ಕುಣಿಸಿರುವ ರೀತಿ ನೋಡಿದರೆ ಅದೆಲ್ಲವೂ ಗತವೈಭವವಷ್ಟೇ ಎಂಬುದನ್ನು ನಿರೂಪಿಸಿದೆ.

ಸರಣಿ ಸಭೆಗಳನ್ನು ನಡೆಸಿರುವ ಅಮಿತ್ ಶಾ ಅವರು ಶಾಲೆ ಹೆಡ್‌ಮಾಸ್ಟರ್ ರೀತಿ ರಾಜ್ಯ ನಾಯಕರ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಶ್ರಮವನ್ನು ರಾಜ್ಯ ನಾಯಕರು ತೆಗೆದುಕೊಳ್ಳಬೇಕಿಲ್ಲ. ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ನಾವೇ ನಿರ್ಧರಿಸುತ್ತೇವೆ. ಕೋರ್ ಕಮಿಟಿ ನಾಯಕರು ಸಹ ಯಾರಿಗೂ ಟಿಕೆಟ್ ಆಶ್ವಾಸನೆ ನೀಡುವಂತಿಲ್ಲ. ಗೆಲ್ಲುವ ಅಭ್ಯರ್ಥಿಗಳನ್ನು ನೋಡಿಕೊಂಡು ನಾವೇ ಟೆಕೆಟ್ ನೀಡುತ್ತೇವೆ ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ವಾಸ್ತವವಾಗಿ ರಾಜ್ಯ ನಾಯಕರ ಅಸ್ತಿತ್ವ ಉಳಿದುಕೊಂಡಿದ್ದುದೇ ಟಿಕೆಟ್ ನೀಡಿಕೆ ವಿಚಾರದಲ್ಲಿ. ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗುವ ನಾಯಕ ಆ ಮೂಲಕ ತನ್ನ ನಾಯಕತ್ವವನ್ನೂ ರಕ್ಷಿಸಿಕೊಳ್ಳುತ್ತಾನೆ,ಪೋಷಿಸಿಕೊಳ್ಳುತ್ತಾನೆ. ಯಾರು ಟಿಕೆಟ್ ಕೊಡಿಸು ತ್ತಾರೋ, ಯಾರು ತಮ್ಮನ್ನು ಶಾಸಕರನ್ನಾಗಿ ಮಾಡಿಸುತ್ತಾರೋ, ಮಂತ್ರಿ ಮಾಡಿಸುತ್ತಾರೋ ಅವರ ಹಿಂದೆ ಹೋಗುವುದು, ಬೆಂಬಲ ಕೊಡುವುದು ರಾಜಕೀಯ ನ್ಯಾಯ. ಈಗ ರಾಜ್ಯ ನಾಯಕರಿಗೆ ಆ ಅವಕಾಶವೇ ಇಲ್ಲ. ವರಿಷ್ಠರು ಟಿಕೆಟ್ ನಿರ್ಣಯ ಮಾಡುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ಆಕಾಂಕ್ಷಿಗಳೆಲ್ಲ ಅವರ ಬೆನ್ನಿಗೆ ಇರುತ್ತಾರೆಯೋ ಹೊರತು ಟಿಕೆಟ್ ಕೊಡಿಸೋ ಅಧಿಕಾರವಿಲ್ಲದ ರಾಜ್ಯ ನಾಯಕರ ಹಿಂದೆ ಅಲ್ಲ. ಅಲ್ಲಿಗೆ ಬಾಲಬಡುಕರ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವುದಾಗಲಿ, ಯಜಮಾನಿಕೆ ಮೆರೆಯುವುದಾಗಲಿ ಬಂದ್. ಇಲ್ಲಿ ದಿಲ್ಲಿ ನಾಯಕರೇ ರಾಜ್ಯ ಶಾಸಕರನ್ನು ನೇರ ಹಿಡಿತಕ್ಕೆ ತೆಗೆದುಕೊಳ್ಳುವ ಜಾಣನಡೆಯಿದೆ. ಆಂತರಿಕ ಕಲಹ ನಿರತ ರಾಜ್ಯ ನಾಯಕರ ಅಧಿಕಾರ ಹರಣದ ರಣತಂತ್ರವಿದೆ.

ಅಮಿತ್ ಶಾ ರಾಜ್ಯ ನಾಯಕರಿಗೆ ಬರೀ ಸೂಚನೆಗಳನ್ನು ಮಾತ್ರ ಕೊಟ್ಟಿಲ್ಲ. ಪ್ರಶ್ನೆಗಳನ್ನೂ ಕೇಳಿದ್ದಾರೆ. ಸರಿಯುತ್ತರ ಹೇಳದಿದ್ದವರನ್ನು ಕೋಲು ಹಿಡಿದ ಮೇಷ್ಟ್ರ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷದ ಸಾಂಸ್ಥಿಕ ಪುನಾರಚನೆ ನಂತರ ಯಾವ್ಯಾವ ಮೋರ್ಚಾದ ಪದಾಧಿಕಾರಿಗಳು ರಾಜ್ಯ ಸರಕಾರದ ವಿರುದ್ಧ ಎಷ್ಟೆಷ್ಟು ಪ್ರತಿಭಟನೆಗಳನ್ನು ಆಯೋಜಿಸಿದ್ದಾರೆ, ಅದೆಷ್ಟು ಬಾರಿ ಲಾಠಿ ಚಾರ್ಜ್ ಮಾಡಿಸಿಕೊಂಡಿದ್ದಾರೆ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಕೊಂಡಿದ್ದಾರೆ, ವಾಟರ್ ಜೆಟ್ ಸಿಂಪಡಣೆಗೆ ಒಳಗಾಗಿದ್ದಾರೆ, ಅದೆಷ್ಟು ಬಾರಿ ಅರೆಸ್ಟ್‌ ಆಗಿದ್ದಾರೆ,ನ್ಯಾಯಾಲಯದಲ್ಲಿ ಅದೆಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಆರ್‌ಟಿಐ ಅರ್ಜಿ ಗುಜರಾಯಿಸಿದ್ದಾರೆ ಎಂದೆಲ್ಲ ಕೇಳಿದ್ದಾರೆ. ಬರೀ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುವ ಹಾರಾಡುವುದಷ್ಟೇ ಹೋರಾಟವಲ್ಲ, ಬೀದಿಗಿಳಿದು ಹೋರಾಡಬೇಕು, ಸಾರ್ವಜನಿಕ ಅಭಿಪ್ರಾಯ ರೂಪಿಸಬೇಕು, ಅದನ್ನು ಮಾಡಿದಿದ್ದ ಮೇಲೆ ಪದಾಧಿಕಾರಿಗಳಾಗಿ ಯಾಕಿರಬೇಕು, ನಿಮ್ಮನ್ನು ಬದಲಾವಣೆ ಮಾಡಬಾರದು ಯಾಕೆ ಎಂದು ಕೇಳಿದ್ದಾರೆ. ಬರೀ ಕೇಳಿರುವುದಷ್ಟೇ ಅಲ್ಲ ತಕ್ಷಣಕ್ಕೆ ವರ್ತನೆ ಬದಲಿಸಿಕೊಳ್ಳದಿದ್ದರೆ ಬದಲಾವಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಬೀಸಿರುವ ಚಾಟಿ ನಾಯಕರ ತೊಳ್ಳೆ ನಡುಗಿಸಿದೆ. ಪದಾಧಿಕಾರಿಗಳು ಅಷ್ಟೇ. ತಮ್ಮ ನಡೆ-ನುಡಿ ನೋಡಿ ಅಧಿಕಾರ ನಿರ್ಣಯ ಮಾಡುವ ವರಿಷ್ಠರಿಗೆ ವಿಧೇಯರಾಗಿರುತ್ತಾರೆಯೇ ಹೊರತು, ವರಿಷ್ಠರ ಮಾತಿಗೆ ಗೋಣು ಆಡಿಸುವ ರಾಜ್ಯ ನಾಯಕರಿಗೆ ಅಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವರಿಷ್ಠರ ಮಾತಿಗೆ ಹೆದರಿ ಕರ್ತವ್ಯ, ಜವಾಬ್ದಾರಿ ಮುಖಿಗಳಾಗುತ್ತಾರೆ. ಇಲ್ಲಿರುವುದು ಸಹ ಅಸ್ತಿತ್ವದ ಪ್ರಶ್ನೆಯೇ.

ಅಮಿತ್ ಶಾ ಪಕ್ಷದ ಜಗಳಗಂಟ ನಾಯಕರಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿ ಪಕ್ಷ ಮುಖ್ಯವೇ ಹೊರತು ನಾಯಕರಲ್ಲ, ಅವರ ಪ್ರತಿಷ್ಠೆ ಅಲ್ಲ. ನಿಮ-ನಿಮ್ಮ ಜಗಳಗಳನ್ನು ನಿಮ್ಮ-ನಿಮ್ಮ ಮನೆಗಳಲ್ಲಿ ಕಟ್ಟಿಟ್ಟು ಬನ್ನಿ. ಇಲ್ಲದಿದ್ದರೆ ನಿಮ್ಮನ್ನು ಪಕ್ಕಕ್ಕೆ ಕಟ್ಟಿಡಬೇಕಾಗುತ್ತದೆ. ಪಕ್ಷದ ಒಳಗಾಗಲಿ, ಹೊರಗಾಗಲಿ ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆಗಳನ್ನು ಕೊಡುವಂತಿಲ್ಲ. ಕೊಟ್ಟವರನ್ನು ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಣ ಕದನ ಹಾಗೂ ತೆರೆಮರೆಯಲ್ಲಿ ನಿಂತು ಈರ್ವರ ಜಗಳಕ್ಕೆ ನೀರೆರೆಯುತ್ತಿದ್ದವರನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದಾರೆ. ಅಮಿತ್ ಶಾ ಮಾತು ಅದೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರೆ ಅವರು ಅತ್ತ ದಿಲ್ಲಿಗೆ ಮರಳುತ್ತಿದ್ದಂತೆ ಇತ್ತ ರಾಜ್ಯ ನಾಯಕರು ಕಣ್ಣಿಗೆ ನೀರೆರೆಚಿಕೊಂಡು ಬೀದಿಗೆ ಇಳಿದಿದ್ದಾರೆ. ರಾಜ್ಯ ಸರಕಾರದ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ವಾಲಿ ಮತ್ತು ಸುಗ್ರೀವರಂತೆ ಕಾದಾಡುತ್ತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಇದೀಗ ತಮ್ಮನ್ನು ರಾಮ-ಲಕ್ಷ್ಮ ಣ ಎಂದು ಕರೆದುಕೊಂಡಿದ್ದಾರೆ. ಅಮಿತ್ ಶಾ ಬಿಟ್ಟ ಬಾಣಕ್ಕೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಾಯಕರು ಕಣ್ಣುಜ್ಜಿಕೊಂಡು ಕುಣಿದಾಡುತ್ತಿದ್ದಾರೆ.

ಅಮಿತ್ ಶಾ ಅವರು ಬರುವವರೆಗೂ ಪಕ್ಷದಲ್ಲಿ ಆಂತರಿಕ ಒಗ್ಗಟ್ಟು ಎಂಬುದೇ ಇರಲಿಲ್ಲ. ನಮ್ಮ ಹೋರಾಟದಿಂದ ಮತ್ತೊಬ್ಬ ನಾಯಕನಿಗೆ ಒಳಿತಾಗುತ್ತದೆ ಎಂಬ ವಿಕ್ಷಿಪ್ತ ಚಿಂತನೆಯುಕ್ತ ಆಲಸ್ಯ ಅವರನ್ನು ಆಳುತ್ತಿತ್ತು. ಪಕ್ಷ ಕಟ್ಟಲು ತಮ್ಮ ಕಾಣಿಕೆ ಏನು, ಪಕ್ಷದಲ್ಲಿ ತಾವು ಹೇಗೆ ಉದ್ಧಾರ ಆಗಬೇಕು ಎಂಬುದಕ್ಕಿಂತ ಮಿಗಿಲಾಗಿ ಅನ್ಯರು ಉದ್ಧಾರ ಆಗಿಬಿಡುತ್ತಾರಲ್ಲ ಎಂಬ ಯೋಚನೆಯೇ ಅವರ ಶಕ್ತಿಯನ್ನು ಕುಂದಿಸುತ್ತಿತ್ತು. ಆದರೆ ಈಗ ಚಿಂತನಾ ಲಹರಿಯೇ ಬದಲಾಗಿದೆ.

ಇದಿಷ್ಟೇ ಅಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ‘ಸಂಧಾನ ರಾಜಕಾರಣ’ ಮಾಡುವಂತಿಲ್ಲ. ತಮ್ಮ ವೈಯಕ್ತಿಕ ಅನುಕೂಲಕ್ಕೆ ಅನ್ಯ ಪಕ್ಷಗಳಜತೆ ಒಳರಾಜೀ ಮಾಡಿಕೊಳ್ಳುವಂತಿಲ್ಲ. ಸಂಬಂಧವನ್ನೂ ಇಟ್ಟುಕೊಳ್ಳುವಂತಿಲ್ಲ. ಪಕ್ಷವನ್ನು ಬೆಳೆಸಬೇಕು. ಆ ಮೂಲಕ ನೀವು ಬೆಳೆಯಬೇಕೆ ಹೊರತು ಪಕ್ಷದ ಹಿತಬಲಿಗೊಟ್ಟು ಕುತಂತ್ರ ರಾಜಕಾರಣ ಮಾಡುವಂತಿಲ್ಲ. ನೀವು ಪಕ್ಷದ ನಾಯಕರಾಗಿರಬೇಕು,ಆ ಮೂಲಕ ಜನರ ನಾಯಕರಾಗಬೇಕು. ಅದನ್ನು ಬಿಟ್ಟು ಅಡ್ಡದಾರಿ ಹಿಡಿದರೆ ತಕ್ಕಶಾಸ್ತಿ ಎದುರಿಸಬೇಕಾಗುತ್ತದೆ. ನೀವು ಪಕ್ಷ ಬೆಳೆಸದಿದ್ದರೆ,ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪಕ್ಷದ ಮೂಲಕ ಹೋರಾಡಿ. ಇಲ್ಲಿದಿದ್ದರೆ ಬೇರೆಯವರು ನಿಮ್ಮ ಜಾಗ ತುಂಬುತ್ತಾರೆ ಎಂದು ಅಮಿತ್ ಶಾ ಕೊಟ್ಟಿರುವ ಶಾಕ್‌ಗೆ ಜಡಗಟ್ಟಿ ಹೋಗಿದ್ದ ನಾಯಕರು ಎದ್ದು ಕುಳಿತಿದ್ದಾರೆ.

ಅದು ಯಾವುದೇ ಕ್ಷೇತ್ರವಿರಲಿ, ವ್ಯಕ್ತಿಯ ಬುದ್ಧಿಮತ್ತೆ,ಯುಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆಗಳು ಟಿಸಿಲೊಡೆಯುತ್ತವೆ. ಈಗಾಗಲೇ ಈ ಎಲ್ಲ ಗುಣಗಳೂ ರುಜುವಾತಾಗಿರುವ ವ್ಯಕ್ತಿಯ ಮೇಲಂತೂ ನಿರೀಕ್ಷೆಗಳು ಮತ್ತಷ್ಟು ಬುಗ್ಗೆಯಾಗಿರುತ್ತವೆ. ಅಂತೆಯೇ ರಾಜಕೀಯ ತಂತ್ರಗಾರಿಕೆಯಲ್ಲಿ ‘ಚಾಣಾಕ್ಯ’ ಎಂದೇ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಂಡಾಗ ರಾಜ್ಯ ರಾಜಕೀಯ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಬಿಜೆಪಿ ಪಾಳೆಯದಲ್ಲಿ ನಿರೀಕ್ಷೆಗಳು ಅಕ್ಷರಶಃ ನರ್ತನ ಮಾಡಿದ್ದವು. ಆದರೆ ಅಮಿತ್ ಶಾ ಮೂರು ದಿನಗಳ ಭೇಟಿ ಮುಗಿಸಿ ಮರಳುವಷ್ಟರಲ್ಲಿ ರಾಜ್ಯ ಬಿಜೆಪಿ ನಾಯಕರ ಸೊಂಟ ಮುರಿದು ಹೋಗುವಷ್ಟು ನರ್ತನ ಮಾಡಿಸಿದ್ದಾರೆ.

ನಿಜ, ರಾಷ್ಟ್ರ ರಾಜಕಾರಣದಲ್ಲಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೋಡಿ ಮಾಡಿರುವ ಮೋಡಿ ಕಡಿಮೆಯೇನಲ್ಲ. ಗುಜರಾತ್‌ನಿಂದ ಪ್ರಾರಂಭವಾಗಿ ಮಧ್ಯಪ್ರದೇಶ,ರಾಜಸ್ತಾನ, ಮಹಾರಾಷ್ಟ್ರ, ಮಣಿಪುರ, ಗೋವಾ, ಜಮ್ಮ ಮತ್ತು ಕಾಶ್ಮೀರ, ಉತ್ತರ ಪ್ರದೇಶದಲ್ಲಿ ವಿಸ್ತರಿಸಿ, ದಕ್ಷಿಣ ಭಾರತದಲ್ಲಿ ಸದ್ದಿಲ್ಲದೆ ನೆಲೆಯೂರುತ್ತಿರುವ ಬಿಜೆಪಿಯ ಬೀಳಲುಗಳಲ್ಲಿ ಈ ಜೋಡಿಯ ಪರಿಶ್ರಮದ ನೆರಳಿದೆ. ಸ್ವಾತಂತ್ರ್ಯ ನಂತರ ದೇಶ ರಾಜಕೀಯದಲ್ಲಿ ಪಾರುಪತ್ಯೆ ಮೆರೆದಿದ್ದ ಕಾಂಗ್ರೆಸ್ಸನ್ನು ಬಿಜೆಪಿಯು ಒಂದೊಂದೇ ರಾಜ್ಯದಲ್ಲಿ ಗುಡಿಸಿ ಬಿಸಾಡುತ್ತಿರುವುದರ ಹಿಂದೆ ಇವರಿಬ್ಬರ ನುರಿತ ರಾಜಕೀಯ ತಂತ್ರಗಾರಿಕೆಯ ಮೆರುಗಿದೆ.

ಹಾಗೆಂದು ಭಾರತ ರಾಜಕಾರಣದಲ್ಲಿ ಈ ಹಿಂದೆ ಚಾಣಾಕ್ಷರೇ ಇರಲಿಲ್ಲವೆಂದೇನೂ ಇಲ್ಲ. ನೆಹರೂ,ಇಂದಿರಾಗಾಂಧಿ ನೈಪುಣ್ಯತೆ, ಮೊರಾರ್ಜಿ ದೇಸಾಯಿ,ವಾಜಪೇಯಿ ಅವರಂಥವರ ಸಜ್ಜನಿಕೆ, ಪಿ.ವಿ. ನರಸಿಂಹರಾವ್ ಅವರ ಮೌನ – ಹೀಗೆ ಒಂದೊಂದು ಕಾಲ ಘಟ್ಟದಲ್ಲಿ ಒಬ್ಬೊಬ್ಬರ ಗುಣಲಕ್ಷಣಗಳು ರಾಜಕೀಯ ತಂತ್ರಗಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವು. ಈಗ ಅವೆಲ್ಲಕ್ಕೂ ಮೇರುಸದೃಶ ಮೋದಿ ಮತ್ತು ಅಮಿತ್ ಶಾ ಜೋಡಿಯ ರಾಜಕೀಯ ಕೌಶಲ್ಯ. ರಾಷ್ಟ್ರ ರಾಜಕಾರಣ ಅಷ್ಟೇ ಅಲ್ಲದೆ ನಾನಾ ರಾಜ್ಯಗಳಲ್ಲಿ ಅದು ಸಾಬೀತೂ ಆಗಿದೆ. ಈ ಜೋಡಿ ಪೈಕಿ ತಂತ್ರಗಾರಿಕೆಯಲ್ಲಿ ಅಮಿತ್ ಶಾ ಅವರ ತೂಕ ಗುಲಗಂಜಿ ಗಾತ್ರದಷ್ಟು ಹೆಚ್ಚು ಎಂದೇ ಹೇಳಬೇಕು. ಹೀಗಾಗಿಯೇ ಅವರ ಹೆಸರಿಗೆ ರಾಜಕೀಯ ಚಾಣಾಕ್ಯ ಎಂಬ ಪಟ್ಟ ಅಂಟಿಕೊಂಡಿದೆ. ಇಂಥ ಅಮಿತ್ ಶಾ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ಬರುತ್ತಾರೆ ಎಂಬುದೇ ಕೆಲ ತಿಂಗಳುಗಳ ಮುಂಚೆಯೇ ಕುತೂಹಲ ಕೆರಳಿಸಿತ್ತು. ಬಿಜೆಪಿ ಪಾಳೆಯದಲ್ಲಿ ನಿರೀಕ್ಷೆಗಳನ್ನೂ ಹುಟ್ಟಿಸಿತ್ತು. ಅಮಿತ್ ಶಾ ಕರ್ನಾಟಕಕ್ಕೆ ಬರುತ್ತಾರೆ,ಏನೇನೋ ತಂತ್ರ ಮಾಡುತ್ತಾರೆ, ಇಲ್ಲಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ,ಅಧಿಕಾರದ ಹಾದಿಯಲ್ಲಿ ಬಿಜೆಪಿಯನ್ನು ಹಿಡಿಯುವವರೇ ಇಲ್ಲ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೋ ಬಿಡುತ್ತದೋ ಅದನ್ನು ಹೇಳಲು ಆಗುವುದಿಲ್ಲ. ಅವರ ಭೇಟಿಯ ಫಲಾಫಲಗಳನ್ನು ಒಂದೆರಡು ದಿನಗಳಲ್ಲೇ ಅಳೆದು ತೂಗಿ ನೋಡಲು ಸಾಧ್ಯವಿಲ್ಲ. ಆದರೆ ಅವರ ಭೇಟಿ ಪಕ್ಷದ ನಾಯಕರಿಗೆ ಚಾಟಿ ಬೀಸಿದೆ ಎಂಬುದು ಸುಳ್ಳಲ್ಲ. ಕಟ್ಟಿರುವೆ ಕಚ್ಚಿದವರಂತೆ ಅವರು ಕುಣಿದಾಡುತ್ತಿರುವುದರಲ್ಲೇ ಅದು ಭಾಸವಾಗುತ್ತಿದೆ.

ಲಗೋರಿ: ಕಾಲದ ಜತೆ ಎಲ್ಲವೂ ಕರಗುತ್ತದೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply