ಮಾಲೆಗಾಂವ್ ಪ್ರಕರಣ: 9 ವರ್ಷಗಳ ನಂತರ ಶ್ರೀಕಾಂತ್ ಪುರೋಹಿತ್ ಗೆ ಸಿಕ್ತು ಜಾಮೀನು, ಯಾರು ಈತ?

ಡಿಜಿಟಲ್ ಕನ್ನಡ ಟೀಮ್:

2008ರ ಮಾಲೆಗಾಂವ್ ಸ್ಫೋಟದಲ್ಲಿ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಾ 9 ವರ್ಷಗಳಿಂದ ಜೈಲಿನಲ್ಲಿದ್ದ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ.

ಇಂದು ಶ್ರೀಕಾಂತ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ‘ಬಾಂಬೆ ಹೈ ಕೋರ್ಟ್ ಆದೇಶವನ್ನು ಪಕ್ಕಕ್ಕಿರಿಸಿ, ಶ್ರೀಕಾಂತ್ ಪುರೋಹಿತ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರ್ಧರಿಸಿದೆ’ ಎಂದು ಆದೇಶ ನೀಡಿದೆ. ಈ ಶ್ರೀಕಾಂತ್ ಪುರೋಹಿತ್ ಯಾರು, ಆತನಿಗೂ ಈ ಪ್ರಕರಣಕ್ಕೂ ಏನು ಸಂಬಂಧ ಎಂದು ನೋಡುವುದಾದರೆ…

ಶ್ರೀಕಾಂತ್ ಪುರೋಹಿತ್ ಮಹಾರಾಷ್ಟ್ರದ ಪುಣೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಬ್ಯಾಂಕ್ ನೌಕರರಾಗಿ ಕೆಲಸ ಮಾಡುತ್ತಿದ್ದರು. ಅಭಿನವ ವಿದ್ಯಾಲಯ ಶಾಲೆ ಹಾಗೂ ಗರ್ವಾರ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿದ ಶ್ರೀಕಾಂತ್, ನಂತರ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಉತ್ತೀರ್ಣರಾಗಿ 1994ರಲ್ಲಿ ಮರಾಠ ಲೈಟ್ ಇನ್ಫ್ಯಾಂಟ್ರಿಗೆ ಸೇರ್ಪಡೆಯಾದರು. 20012ರಿಂದ 2005ರವರೆಗೆ ಜಮ್ಮು ಕಾಶ್ಮೀರದ ಭಯೋತ್ಪಾದನಾ ನಿಗ್ರಹ ಪಡೆಯಲ್ಲಿ ಕಾರ್ಯ ನಿರ್ವಹಿಸಿದರು. ನಂತರ ಆರೋಗ್ಯ ಕಾರಣಗಳಿಂದಾಗಿ ಶ್ರೀಕಾಂತ್ ಸೇನೆಯ ಗುಪ್ತಚರ ವಿಭಾಗಕ್ಕೆ ವರ್ಗಾವಣೆಯಾದರು.

ಈ ಮಾಲೆಗಾಂವ್ ಸ್ಫೋಟದ ಮತ್ತೊಬ್ಬ ಆರೋಪಿ ರಮೇಶ್ ಉಪಾಧ್ಯಾಯ ಅವರೊಂದಿಗೆ ಶ್ರೀಕಾಂತ್ ಸಂಪರ್ಕ ಬೆಳೆಸಿಕೊಂಡಿದ್ದರು. ಉಪಧ್ಯಾಯ ಅವರು ಸ್ಥಾಪಿಸಿದ್ದ ಅಭಿನವ್ ಭಾರತ್ ಎಂಬ ತೀವ್ರ ಬಲಪಂಥೀಯ ಗುಂಪು ಈ ದಾಳಿ ನಡೆಸಿದ್ದು, ಈ ಗುಂಪಿನ ಜತೆ ಶ್ರೀಕಾಂತ್ ಕೈಜೋಡಿಸಿದ್ದರು. ಪ್ರಕರಣದ ವಿಚಾರಣೆ ಸಮಯದಲ್ಲಿ, ದಾಳಿ ನಡೆದ ನಂತರ ಪುರೋಹಿತ್ ಅವರು ಉಪಾಧ್ಯಾಯ ಅವರಿಗೆ ರವಾನಿಸಿದ್ದಾರೆ ಎನ್ನಲಾದ ಕೆಲವು ಸಂದೇಶಗಳನ್ನು ತನಿಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಲ್ಲದೆ ಸೇನೆಯಿಂದ 60 ಕೆಜಿಯಷ್ಟು ಆರ್ ಡಿಎಕ್ಸ್ ಅನ್ನು ಕಳ್ಳತನ ಮಾಡಿ ಮಾಲೆಗಾಂವ್ ಸ್ಫೋಟಕ್ಕೆ ಬಳಸಿಕೊಂಡಿರುವ ಹಾಗೂ ಅಭಿನವ್ ಭಾರತ್ ಸಂಘಟನೆಗೆ ಆರ್ಥಿಕ ನೆರವು ಹಾಗೂ ತರಬೇತಿ ನೀಡುತ್ತಿದ್ದರು ಎಂಬ ಆರೋಪಗಳು ಶ್ರೀಕಾಂತ್ ಅವರ ಮೇಲಿದೆ.

Leave a Reply